ಮತದಾನ ಬಹಿಷ್ಕಾರ ಕರೆ: ಕಲ್ಮಕಾರಿಗೆ ತಹಶೀಲ್ದಾರ್ ಭೇಟಿ
Team Udayavani, Apr 14, 2019, 6:00 AM IST
ಕಲ್ಮಕಾರು ಭಾಗದಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾದವರ ಜತೆಗೆ ಸುಳ್ಯ ತಹಶೀಲ್ದಾರ್ ಮಾತುಕತೆ ನಡೆಸಿದರು.
ಸುಬ್ರಹ್ಮಣ್ಯ: ಸೇತುವೆ ಸಹಿತ ಮೂಲ ಸೌಕರ್ಯ ಈಡೇರಿಸುವಲ್ಲಿ ಅವಗಣನೆ ತೋರಿರುವುದರ ವಿರುದ್ಧ ಅಸಮಾಧಾನಗೊಂಡು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಸುಳ್ಯ ತಾಲೂಕಿನ ಕಲ್ಮಕಾರು ಭಾಗಕ್ಕೆ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಶುಕ್ರವಾರ ಭೇಟಿ ನೀಡಿ ನಿವಾಸಿಗಳ ಜತೆ ಮಾತುಕತೆ ನಡೆಸಿದರು.
ಭೇಟಿ ವೇಳೆ ಸ್ಥಳಿಯ ನಿವಾಸಿಗಳು ಮೂಲಸೌಕರ್ಯ ಸಮಸ್ಯೆಗಳಿಗೆ ಸಂಬಂಧಿಸಿ ಮಾಹಿತಿ ನೀಡಿದರು. ಶೆಟ್ಟಿಕಟ್ಟ ಸೇತುವೆ ನಿರ್ಮಾಣವಾಗಿಲ್ಲದ ಹಿನ್ನೆಲೆಯಲ್ಲಿ ಆಗುತ್ತಿ ರುವ ಅನನುಕೂಲತೆ ಬಗ್ಗೆ ವಿವರಿಸಿದರು. ಎರಡು ವರ್ಷಗಳ ಹಿಂದೆ ಶೆಟ್ಟಿಕಟ್ಟ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿ ಸಂಬಂಧಿಸಿದ ದಾಖಲೆ ಪ್ರತಿಗಳನ್ನು ತೋರಿಸಿದರು.
ದೊಡ್ಡ ಮೊತ್ತದ ಅನುದಾನ ಬೇಕು
ಉತ್ತರಿಸಿದ ತಹಶೀಲ್ದಾರ್, ಇಲ್ಲಿ ಸೇತುವೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿದೆ. ತ್ವರಿತವಾಗಿ ಅಸಾಧ್ಯ ಎಂದರು. ಸ್ಥಳದಿಂದಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡಕೊಂಡರು. ಸಮಸ್ಯೆಗೆ ಶೀಘ್ರದಲ್ಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ಲಿಖೀತ ರೂಪದ ಭರವಸೆ ಬೇಕೆಂದು ಪಟ್ಟುಹಿಡಿದಾಗ ಪ್ರತಿಕ್ರಿಯಿ ಸಿದ ತಹಶೀಲ್ದಾರ್, ಮೂಲಸೌಕರ್ಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಚುನಾವಣೆ ಘೋಷಣೆ ಯಾದ ಬಳಿಕ 70ಕ್ಕೂ ಅಧಿಕ ಕಡೆಗಳಲ್ಲಿ ಮೂಲ ಸೌಕರ್ಯ ನೀಡುವಲ್ಲಿ ಕ್ರಮ ತೆಗೆದುಕೊಂಡಿದ್ದೇನೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮೆಂಟಕಜೆ ಸೇತುವೆ ಪೂರ್ಣಗೊಳಿಸಲು ಕ್ರಮ
ಮೆಂಟಕಜೆ ಬಳಿ ಅಪೂರ್ಣಗೊಂಡ ಸೇತುವೆಯ ಅವ್ಯವಸ್ಥೆ ಕುರಿತು ಸ್ಥಳೀಯರು ತಹಶೀಲ್ದಾರ್ ಗಮನಕ್ಕೆ ತಂದರು.
ಏಕೆ ಬಹಿಷ್ಕಾರ ಬೆದರಿಕೆ?
ಸುಮಾರು 40 ಕುಟುಂಬಗಳು ಕಲ್ಮಕಾರಿನಲ್ಲಿ ವಾಸಿಸುತ್ತಿವೆ. ಶೆಟ್ಟಿಕಟ್ಟದಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಾಣವಾಗದೆ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಗ್ರಾ.ಪಂ. ರಸ್ತೆಗಳ ಅಭಿವೃದ್ಧಿಯೂ ಆಗಿಲ್ಲ. 35 ವರ್ಷದಿಂದ ಸಂಸದರು, ಶಾಸಕರು ಹಾಗೂ ಸರಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಆಕ್ರೋಶಗೊಂಡು ಕುಟುಂಬಗಳು ಈ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಾಮೂಹಿಕ ನಿರ್ಧಾರಕ್ಕೆ ಮುಂದಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.