ಕರಾವಳಿಯಲ್ಲಿ ಮೋದಿ ಅಲೆ ಇಲ್ಲ; ಬದಲಾವಣೆಯ ಬಿರುಗಾಳಿಯಿದೆ: ಖಾದರ್
Team Udayavani, Apr 15, 2019, 6:30 AM IST
ಮಂಗಳೂರು: ಲೋಕಸಭಾ ಚುನಾವಣೆಗೆ ಅಂತಿಮ ಹಂತದ ಪ್ರಚಾರ ಕಾರ್ಯ ನಡೆಯುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ. ಎರಡೂ ಪಕ್ಷಗಳು ಕೊನೆಯ ಹಂತದ ಮತ ಬೇಟೆಯಲ್ಲಿ ಮಗ್ನವಾಗಿವೆ. ಈ ಮಧ್ಯೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ. ಖಾದರ್ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯು ಒಂದು ಅಗ್ನಿ ಪರೀಕ್ಷೆಯಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ದೊಡ್ಡ ಹೊಣೆಯೂ ಇದೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ “ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
– 28 ವರ್ಷಗಳಿಂದ ಕಾಂಗ್ರೆಸ್‌ನಿಂದ ಕೈ ತಪ್ಪಿರುವ ದ.ಕ. ಲೋಕಸಭಾ ಕ್ಷೇತ್ರ ಈ ಬಾರಿ ಕೈವಶ ಮಾಡಲು ನಿಮ್ಮ ಪ್ರಯತ್ನಗಳೇನು?
ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಚಾರ ಕಾರ್ಯ ಬಹಳಷ್ಟು ಬಿರುಸಿನಿಂದ ನಡೆಯುತ್ತಿದೆ. ಅಂತಿಮ ಹಂತದ ಪ್ರಚಾರ ಸದ್ಯ ಪ್ರಗತಿಯಲ್ಲಿದೆ. ಜಿಲ್ಲೆಯ ಮೂಲೆ ಮೂಲೆಯಲ್ಲಿ ಮತದಾರನ ಮನೆಗೆ ಭೇಟಿ ನೀಡಿ ಕೇಂದ್ರ ಸರಕಾರ ಈ ಹಿಂದೆ ನೀಡಿದ ಭರವಸೆ ಮತ್ತು ಅದನ್ನು ಈಡೇರಿಸದಿರುವ ಅಂಶಗಳ ಬಗ್ಗೆ ಉಲ್ಲೇಖೀಸುತ್ತ, ದ.ಕ ಜಿಲ್ಲೆಯಲ್ಲಿ ಅಭಿವೃದ್ಧಿಯೇ ಮರೀಚೆಕೆ ಆಗಿರುವ ಸಂಗತಿಗಳನ್ನು ಜನರ ಮುಂದಿಡಲಾಗುತ್ತಿದೆ. ಹೀಗಾಗಿ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಈ ಬಾರಿ ನಿಶ್ಚಿತವಾಗಿ ಬದಲಾವಣೆ ನಡೆಯಲಿದೆ ಎಂಬ ವಿಶ್ವಾಸ ಸ್ಪಷ್ಟವಾಗುತ್ತಿದೆ.
– ಕಾಂಗ್ರೆಸ್ ಹೊಸ ಮುಖಕ್ಕೆ ಟಿಕೆಟ್ ನೀಡಿದ ಕಾರಣದಿಂದ ಸ್ಪರ್ಧೆ ಕಠಿನವಾಗುತ್ತಿದೆ ಎಂಬ ಅಭಿಪ್ರಾಯವೂ ಇದೆ. ಇದು ನಿಜವೇ?
ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಪಕ್ಷದ ಹೈಕಮಾಂಡ್, ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಅಭಿಪ್ರಾಯ ಪಡೆದು ಎಲ್ಲರ ಒಪ್ಪಿಗೆಯೊಂದಿಗೆ ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್‌ನ ಎಲ್ಲ ನಾಯಕರು-ಕಾರ್ಯಕರ್ತರು ಯಾವುದೇ ಭಿನ್ನ ಅಭಿಪ್ರಾಯಗಳು ಇಲ್ಲದೆ ಒಮ್ಮತದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮುಖ್ಯವಾಗಿ ದ.ಕ. ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆಯ ಹೊಸಗಾಳಿ ಬೀಸುವುದರಿಂದ ಮಿಥುನ್ ಗೆಲುವು ಅತ್ಯಂತ ಸುಲಭ.
– ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ಪ್ರಚಾರದ ಅಬ್ಬರ ಈ ಬಾರಿ ಕಾಣುತ್ತಿಲ್ಲ; ಜತೆಗೆ ಯಾವುದೇ ರಾಷ್ಟ್ರ ನಾಯಕರೂ ಬಂದಿಲ್ಲ?
ಹಾಗೇನಿಲ್ಲ; ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳು ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪವಾಗುತ್ತಿರುವ ಕಾರಣದಿಂದ ವಿಧಾನಸಭಾ ಮಾದರಿಯ ಪ್ರಚಾರ ಇಲ್ಲಿಗೆ ಅನ್ವಯವಾಗುವುದಿಲ್ಲ. ಆದರೆ, ಮತದಾರನ ಮನೆ ಬಾಗಿಲಿಗೆ ನಮ್ಮ ವಿಚಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿದೆ. ದೇಶವ್ಯಾಪಿ ಚುನಾವಣೆ ನಡೆಯುವ ಕಾರಣದಿಂದ ಎಲ್ಲ ನಾಯಕರು ಇಲ್ಲಿಗೆ ಬರುವುದು ಕಷ್ಟವಾಗಿದೆ. ಆದರೂ ಮತದಾನಕ್ಕೂ ಮುನ್ನ ರಾಷ್ಟ್ರ-ರಾಜ್ಯ ನಾಯಕರು ಮತ್ತೂಮ್ಮೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
– ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುವ ಮೂಲಕ ಜಿಲ್ಲೆಯಲ್ಲಿ ಮೋದಿ ಪರವಾದ ಅಲೆಯಿದೆ ಎಂದು ಬಿಜೆಪಿ ಹೇಳುತ್ತಿದೆ. ಇದು ನಿಮ್ಮ ಗೆಲುವಿಗೆ ಹಿನ್ನಡೆಯೇ?
ನೋಡಿ, ಕರಾವಳಿಯಲ್ಲಿ ಯಾವ ಅಲೆಯೂ ಇಲ್ಲ. ಮೋದಿ ಅಲೆ ಇಲ್ಲವೇ ಇಲ್ಲ. ಇಲ್ಲಿ ಈಗಿರುವುದು ಬದಲಾವಣೆ ಎಂಬ ಬಿರುಗಾಳಿ ಮಾತ್ರ. 28 ವರ್ಷಗಳಿಂದ ಕಾಂಗ್ರೆಸ್ ಸಂಸದರಿರದೆ ಅಭಿವೃದ್ಧಿ ಶೂನ್ಯವಾಗಿರುವ ಜಿಲ್ಲೆಯಲ್ಲಿ ಅಭೂತಪೂರ್ವ ಅಭಿವೃದ್ಧಿಯ ನಿರೀಕ್ಷೆಯೊಂದಿಗೆ ಮತದಾರರು ಹೊಸ ಉತ್ಸಾಹದಲ್ಲಿ ಕಾಂಗ್ರೆಸ್ ಪರವಾಗಿದ್ದಾರೆ. ಮೋದಿ ಏನು ಎಂಬುದು ಜನತೆಗೆ ಗೊತ್ತಾಗಿದೆ. ಈಗ ಎಲ್ಲರೂ ವಿದ್ಯಾವಂತರು, ವಿಚಾರವಂತರು.
ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಯೋಚಿಸುವ ಶಕ್ತಿ ಎಲ್ಲರಿಗೂ ಇದೆ. ಭಾವನಾತ್ಮಕ ವಿಚಾರಗಳಿಗೆ ಮಾರುಹೋಗುವ ಬದಲು ಆತ್ಮಾವಲೋಕನ ಮಾಡತೊಡಗಿದ್ದಾರೆ. ಅದು ನಮಗೆ ಶ್ರೀರಕ್ಷೆಯಾಗಲಿದೆ. ಪ್ರಧಾನಿ ಹುದ್ದೆಗೆ ನಡೆಯುವ ಚುನಾವಣೆ ಇದಲ್ಲ. ಇದು ಸ್ಥಳೀಯ ಸಂಸದರ ಆಯ್ಕೆಗೆ ನಡೆಯುವ ಚುನಾವಣೆ. ಹೀಗಾಗಿ ಯಾರು ನಮ್ಮ ಸಂಸದರು ಆಗಬೇಕು ಎಂಬುದರ ತೀರ್ಮಾನವಾಗುವ ಚುನಾವಣೆಯೇ ಹೊರತು ಯಾರು ನಮ್ಮ ಪ್ರಧಾನಿ ಆಗಬೇಕು ಎಂಬ ನಿರ್ಧಾರದ ಚುನಾವಣೆಯಲ್ಲ.
– ರಾಜ್ಯದ ಇತರ ಕ್ಷೇತ್ರಗಳ ಪೈಕಿ ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರ ಎಸ್‌ಡಿಪಿಐ ಸ್ಪರ್ಧೆಯಲ್ಲಿದೆ. ಇದು ಮುಸ್ಲಿಂ ಮತ ವಿಭಜನೆಗೆ ಕಾರಣವಾಗಬಹುದೇ?
ನೋಡಿ, ಮತೀಯ ಭಾವನೆಗಳನ್ನು ಕೆರಳಿಸುವ ಮೂಲಕ ಧರ್ಮಗಳ ನಡುವೆ ವಿಭಜನೆ ನೀತಿ ಅನುಸರಿಸುವವರನ್ನು ನಾನು ಖಂಡಿಸುತ್ತಲೇ ಬಂದಿದ್ದೇನೆ. ಎಸ್‌ಡಿಪಿಐ ಯಾಕೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದೆ ಮತ್ತು ಇದರ ಲಾಭ ಯಾರಿಗೆ ಆಗಲಿದೆ ಎಂಬುದರ ಬಗ್ಗೆ ಮತದಾರರು ಆತ್ಮಾವಲೋಕನ ಮಾಡಲಿದ್ದಾರೆ. ಎಸ್‌ಡಿಪಿಐ ಅಂತೂ ಈ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ. ಇನ್ನು ಅವರು ಯಾರನ್ನು ಗೆಲ್ಲಿಸಲು ಅಥವಾ ಯಾರನ್ನು ಸೋಲಿಸಲು ಸ್ಪರ್ಧಿಸಿತು ಎಂಬುದನ್ನು ಜನತೆ ಅರ್ಥ ಮಾಡಲಿದ್ದಾರೆ.
– ಹಾಗಾದರೆ, ಬಿಜೆಪಿಯು ದ.ಕ. ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲವೇ?
ಕಾಂಗ್ರೆಸ್ ಆಡಳಿತದಲ್ಲಿ ಆದಂತಹ ಹಲವು ಯೋಜನೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದು ಮತ್ತು ಪ್ರತಿಷ್ಠಿತ ಯೋಜನೆಯನ್ನು ಖಾಸಗೀಕರಣ ಮಾಡಿದ್ದು ಮಾತ್ರ ಬಿಜೆಪಿ ಸಾಧನೆ. ಎನ್‌ಎಂಪಿಟಿಯ ಒಂದು ಭಾಗವನ್ನು ಖಾಸಗಿಗೆ ನೀಡಲಾಗಿದೆ. ಮಂಗಳೂರು ಅಂ.ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ನೀಡಲಾಗಿದೆ. ರೈಲ್ವೇ ನಿಲ್ದಾಣ ಅಭಿವೃದ್ಧಿ ಬಗ್ಗೆ ಘೋಷಣೆ ಆಗುತ್ತಿದೆಯೇ ವಿನಾ ಯಾವುದೇ ಅಭಿವೃದ್ಧಿ ಆಗಲೇ ಇಲ್ಲ. ಕನಿಷ್ಠ, ಬಿಎಸ್‌ಎನ್‌ಎಲ್‌ನಿಂದ ಹೆಚ್ಚುವರಿಯಾಗಿ ಒಂದೇ ಒಂದು ಟವರ್ ಆರಂಭಿಸಲು ಕೂಡ ಬಿಜೆಪಿಗೆ ಸಾಧ್ಯವಾಗಿಲ್ಲ. ಕರಾವಳಿ ಅಭಿವೃದ್ಧಿಯ ಜೀವನಾಡಿಯಾಗಿರುವ ಮಡಿಕೇರಿ-ಚಾರ್ಮಾಡಿ- ಆಗುಂಬೆ ಸೇರಿದಂತೆ ಯಾವುದೇ ರಸ್ತೆಯೂ ಸರಿಯಿಲ್ಲ. ಪಂಪ್‌ವೆಲ್, ತೊಕ್ಕೊಟ್ಟುಫ್ಲೆ$çಓವರ್ ಮುಗಿಸದೆ, ಹೆದ್ದಾರಿ ಕಾಮಗಾರಿ ಅರ್ಧ ಮಾಡಿಟ್ಟು, ಟೋಲ್ ಮೂಲಕ ಜನರ ಕಿಸೆಗೆ ಕನ್ನ ಹಾಕಲಾಗಿದೆ. ಕರಾವಳಿಯಲ್ಲಿ ಹುಟ್ಟಿಬೆಳೆದ ಪ್ರತಿಷ್ಠಿತ ವಿಜಯ ಬ್ಯಾಂಕ್ ವಿಲೀನಕ್ಕೆ ಮುಖ್ಯಕಾರಣವಾಗಿರುವ ಬಿಜೆಪಿ, ಈ ವಿಚಾರದಲ್ಲಿ ಸಂಸದರು ಮೌನವಾಗಿಯೇ ಬೆಂಬಲ ನೀಡಿರುವುದು ಬಿಜೆಪಿ ಕರಾವಳಿಗೆ ನೀಡಿದ ಕೊಡುಗೆ.
– ಸಂಸದ ನಳಿನ್ ಕುಮಾರ್ ಕಟೀಲು ಅವರು ದ.ಕ. ಜಿಲ್ಲೆಗೆ 16,500 ಕೋ.ರೂ. ಅನುದಾನ ತಂದಿರುವ ಬಗ್ಗೆ ಉಲ್ಲೇಖೀಸಿದ್ದಾರೆ. ಹಾಗಾದರೆ ಅದು ಅಭಿವೃದ್ಧಿ ಸಂಕೇತವಲ್ಲವೇ ?
ಸಂಸದ ನಳಿನ್ ಅವರು 10 ವರ್ಷದಲ್ಲಿ ದ.ಕ. ಜಿಲ್ಲೆಯಲ್ಲಿ ಮಾಡಿರುವ ಒಂದೇ ಒಂದು ಮಹತ್ವದ ಯೋಜನೆಯನ್ನು ಅವರು ತೋರಿಸಿಕೊಡಲಿ. ಕೇವಲ ಸರ್ವೆ ಹಂತದಲ್ಲಿರುವ ಯೋಜನೆ ಬಗ್ಗೆ ಮಾತನಾಡುತ್ತಾರೆಯೇ ಹೊರತು ಅವರ ಕಾಲದಲ್ಲಿ ಯಾವುದೇ ಮಹತ್ವದ ಯೋಜನೆಯ ಕೆಲಸ ಇನ್ನೂ ಕೂಡ ಆರಂಭವಾಗಿಲ್ಲ. 16,500 ಕೋ.ರೂ. ತಂದಿದ್ದೇನೆ ಎಂದು ಕೇವಲ ಬಾಯಿ ಮಾತಿನಲ್ಲಿ, ಘೋಷಣೆಯಲ್ಲಿ ಇದ್ದರೆ ಆಗದು. ಜನರಿಗೆ ಆ ಯೋಜನೆಯಿಂದ ಫಲ ಸಿಗಬೇಕು. ಪ್ರಯೋಜನ ಆಗಬೇಕು. ಆದರೆ, ಇಷ್ಟು ಸಾವಿರ ಕೋಟಿಯಿಂದ ಒಂದೇ ಒಂದು ಜನರಿಗೆ ಲಾಭವಾಗಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಲಿ. 28 ವರ್ಷಗಳಿಂದ ಮಹತ್ವದ ಯೋಜನೆಗಳನ್ನು ಕಾಣದೆ ದ.ಕ. ಜಿಲ್ಲೆ
ಸಂಪೂರ್ಣ ಹಿಂದೆ ಬಿದ್ದಿದೆ. ಉಳಿದ ಜಿಲ್ಲೆಗಳು ಅಭಿವೃದ್ಧಿಯ ನಾಗಾಲೋಟದಲ್ಲಿವೆ. ಇದನ್ನು ಮತದಾರರು ಅತ್ಮಾವಲೋಕನ ಮಾಡಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.