ರಾಗಿ ದೋಸೆ, ಹುಚ್ಚೆಳ್ ಚಟ್ನಿ ಮಹದೇಶ್ವರ ಹೋಟೆಲ್ ಸ್ಪೆಷಲ್
Team Udayavani, Apr 15, 2019, 11:06 AM IST
ಚಾಮರಾಜನಗರ ಜಿಲ್ಲೆಯ ತಾಲೂಕು ಯಳಂದೂರು, 10 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ. ಇಲ್ಲಿ ಪುರಾತನ ಭೂವರಹಾ ಸ್ವಾಮಿ ದೇಗುಲ, ಗೌರೇಶ್ವರ ಸ್ವಾಮಿ ದೇವಸ್ಥಾನ, ಬಳೆ ಮಂಟಪ ಇದೆ. ದಿವಾನ್ ಪೂರ್ಣಯ್ಯ ಅವರಿಗೆ, ಮೈಸೂರು ಒಡೆಯರ್ ಯಳಂದೂರನ್ನು ಜಹಗೀರ್ ಆಗಿ ಕೊಟ್ಟಿದ್ದರು. ಅವರ ಮೊಮ್ಮಗ ಕಟ್ಟಿಸಿರುವ ಜಹಗೀರ್‌ದಾರ್ ಬಂಗಲೆ, ಈಗ ವಸ್ತು ಸಂಗ್ರಹಾಲಯವಾಗಿದೆ. ಇಂತಹ ಐತಿಹ್ಯವುಳ್ಳ ಪಟ್ಟಣದಲ್ಲಿ ಸುಸಜ್ಜಿತ ಹೋಟೆಲ್‌ಗಳು ಕಡಿಮೆಯೇ. ಯಳಂದೂರು ತಾಲೂಕಿಗೆ ಸೇರಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೂ ಒಂದು ಸುಸಜ್ಜಿತ ಹೋಟೆಲ್ ಇರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಶ್ರೀಕಾಂತ್‌ಸ್ವಾಮಿ ಇತ್ತೀಚೆಗೆ ಮಹದೇಶ್ವರ್ ಹೋಟೆಲ್ ಪ್ರಾರಂಭಿಸಿದ್ದಾರೆ. ಹೋಟೆಲ್ ಹೊಸದಾದ್ರೂ ಮಾಲೀಕರು ಈ ಊರಿಗೆ ಹಳಬರು.
ಶ್ರೀಕಾಂತ್‌ಸ್ವಾಮಿ ಹುಟ್ಟಿ ಬೆಳದಿದ್ದೆಲ್ಲ ಯಳಂದೂರಿನಲ್ಲೇ. ಇವರ ತಾತ 70 ವರ್ಷಗಳ ಹಿಂದೆ ಇದೇ ಊರಲ್ಲಿ ಶೆಡ್ ಕಟ್ಟಿಕೊಂಡು ಪುಟ್ಟದಾಗಿ ಹೋಟೆಲ್ ಆರಂಭಿಸಿದ್ದರು. ನಂತರ ಇವರ ಪುತ್ರ ಶಿವರುದ್ರಪ್ಪ ಮತ್ತು ಶಿವಮ್ಮ ಮುನ್ಸಿಪಾಲಿಟಿ ಜಾಗದಲ್ಲೇ ಪುಟ್ಟದಾಗಿ ಗುಡಿಸಲು ಕಟ್ಟಿಕೊಂಡು ಹೋಟೆಲ್ ನಡೆಸುತ್ತಿದ್ದರು. ಇವರಿಗೆ 9 ಜನ ಮಕ್ಕಳು, ಇದರಲ್ಲಿ ಶ್ರೀಕಾಂತ್‌ಸ್ವಾಮಿ ಒಬ್ಬರು. ಮನೆಯಲ್ಲಿ ಬಡತನ, ಮಕ್ಕಳು ಜಾಸ್ತಿ ಇದ್ದ ಕಾರಣ ಶಾಲೆಗೆ ಕಳುಹಿಸಲಿಲ್ಲ.
ಹೀಗಾಗಿ ತಮ್ಮದೇ ಹೋಟೆಲ್‌ನಲ್ಲೇ ಕೆಲಸ ಮಾಡಿಕೊಂಡಿದ್ದ ಶ್ರೀ ಕಾಂತ್‌ಸ್ವಾಮಿ, ತಂದೆ ತೀರಿಕೊಂಡ ನಂತರ ಯಳಂದೂರಿನಲ್ಲೇ ಹೋಟೆಲ್ ಮುಂದುವರಿಸಿಕೊಂಡು ಬಂದಿದ್ದರು. ಆದರೆ, ಹೋಟೆಲ್ ಇದ್ದ ಜಾಗದ ಮಾಲಿಕ ಹೊಸ ಬಿಲ್ಡಿಂಗ್ ಕಟ್ಟಲು ಪ್ರಾರಂಭಿಸಿದ್ದರಿಂದ ಹೋಟೆಲ್ ನಡೆಸಲು ಜಾಗವಿಲ್ಲದೆ, 25 ವರ್ಷಗಳ ಹಿಂದೆ ಸಂತೇಮರಹಳ್ಳಿಗೆ ಹೋಗಿ ಅಲ್ಲಿ ಹೊಸದಾಗಿ ಹೋಟೆಲ್ ಅನ್ನು ಪ್ರಾರಂಭಿಸಿದ್ದರು. ಹುಟ್ಟೂರಾದ ಯಳಂದೂರಿನಲ್ಲಿ ಹೋಟೆಲ್ ಪ್ರಾರಂಭಿಸುವಂತೆ ಸ್ನೇಹಿತರು, ಕೆಲ ರಾಜಕಾರಣಿಗಳು ಹೇಳಿದ್ದರಿಂದ ಪತ್ನಿ ಪೂರ್ಣಿಮಾ ಅವರ ಸಹಕಾರದೊಂದಿಗೆ ಮಹದೇಶ್ವರ ಹೋಟೆಲ್ ಆರಂಭಿಸಿದ್ದಾರೆ. ಸಂತೇಮರಹಳ್ಳಿಯಲ್ಲಿನ ಹೋಟೆಲ್ ಅನ್ನು ಮಗ ಮನು ನೋಡಿಕೊಳ್ಳುತ್ತಿದ್ದಾರೆ.
ಸಂತೇಮರಹಳ್ಳಿ ಹೋಟೆಲ್ ತಿಂಡಿ, ಊಟ: ಬೆಳಗ್ಗೆ ತಿಂಡಿಗೆ ನಾಲ್ಕು ಇಡ್ಲಿ ಒಂದು ವಡೆ (40 ರೂ.), ಪುಳಿಯೋಗರೆ, ರೈಸ್, ಮೊಸರನ್ನ, ಅನ್ನ ಸಾಂಬಾರ್, ಬಿಸಿಬೆಳೆ ಬಾತ್, ವೆಜಿಟೆಬಲ್ ಬಾತ್, ಟೊಮೆಟೋ ಬಾತ್, ಚಿತ್ರಾನ್ನ, ಚಪಾತಿ, ಈರುಳ್ಳಿ ದೋಸೆ, ಮಸಾಲೆ ದೋಸೆ, ಸೆಟ್‌ದೋಸೆ. ದರ 25 ರೂ., ವಡೆ ತೆಗೆದುಕೊಂಡ್ರೆ 30 ರೂ., ಊಟಕ್ಕೆ ಅನ್ನ ಸಾಂಬಾರ್, ಇದರ ಜೊತೆಗೆ ತಿಳಿಸಾರು, ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ ಇಷ್ಟಕ್ಕೆ 25 ರೂ..
ಯಳಂದೂರು ಹೋಟೆಲ್:
ಎರಡು ಇಡ್ಲಿ ಒಂದು ಉದ್ದಿನ ವಡೆ, ಸಾಂಬರ್ 25 ರೂ., ಉಳಿದಂತೆ ಸಂತೇಮರಹಳ್ಳಿಯಲ್ಲಿ ಹೋಟೆಲ್‌ನಂತೆ ಎಲ್ಲಾ ತಿಂಡಿ ಇಲ್ಲೂ ಸಿಗುತ್ತೆ. ಆದ್ರೆ, ಊಟಕ್ಕೆ ಚಪಾತಿ, ಮುದ್ದೆ ಸಿಗುತ್ತದೆ. ಚಪಾತಿ ಊಟಕ್ಕೆ ಸಾಗು, ಅನ್ನ, ರಸಂ, ಸಂಬಾರ್, ಖೀರು, ಮಜ್ಜಿಗೆ, ಉಪ್ಪಿನಕಾಯಿ, ಹಪ್ಪಳ, ಪಲ್ಯಕ್ಕೆ ದರ 40 ರೂ., ಇನ್ನು ಮುದ್ದೆ ಊಟ ತೆಗೆದುಕೊಂಡರೆ ಪ್ರತ್ಯೇಕವಾಗಿ ಉಪ್ಸಾರು ಕೊಡ್ತಾರೆ. ಇಲ್ಲಿನ ವಿಶೇಷ ತಿಂಡಿ ರಾಗಿ ದೋಸೆ, ಹುಚ್ಚೆಳ್ ಚಟ್ನಿ ಸಿಗುತ್ತದೆ.
ಹೋಟೆಲ್ ಸಮಯ:
ಬೆಳಗ್ಗೆ 8.30ಗೆ ಪ್ರಾರಂಭ, ಸಂಜೆ 5.30ರವರೆಗೆ. ಬುಧವಾರ ರಜೆ (ಸಂತೇಮರಹಳ್ಳಿ ಹೋಟೆಲ್). ಬೆಳಗ್ಗೆ 8.30ಗೆ ರಾತ್ರಿ 10.30ವರೆಗೆ, ಭಾನುವಾರ ರಜೆ(ಯಳಂದೂರು ಹೋಟೆಲ್).
ಹೋಟೆಲ್ ವಿಳಾಸ:
-ನಂದಿನಿ ಹಾಲಿನ ಡೇರಿ ಪಕ್ಕ, ಮೈಸೂರು ರಸ್ತೆ, ಸಂತೇಮರಹಳ್ಳಿ ಗ್ರಾಮ.
-ಕೆನರಾ ಬ್ಯಾಂಕ್ ಪಕ್ಕ, ಚಾಮರಾಜನಗರ ರಸ್ತೆ, ಯಳಂದೂರು ಪಟ್ಟಣ.
ಭೋಗೇಶ್ ಆರ್.ಮೇಲುಕುಂಟೆ /ಫೈರೋಜ್ ಖಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.