ಕಾಸು ಕೊಡೋರಿಗಲ್ಲ, ಕೆಲ್ಸ ಮಾಡೋರಿಗೆ ವೋಟು
Team Udayavani, Apr 15, 2019, 11:14 AM IST
ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಯಾರು ಗೆಲ್ಲಬಹುದು, ಯರ್ಯಾರು ಸೋಲಬಹುದು, ಎಷ್ಟು ಮಂದಿ ಡಿಪಾಜಿಟ್ ಕಳೆದು ಕೊಳ್ಳಬಹುದು ಎಂಬ ವಿಷಯವಾಗಿ ಚರ್ಚೆಗಳು ಆರಂಭವಾಗಿವೆ. ಒಬ್ಬ ಅಭ್ಯರ್ಥಿ 70ಲಕ್ಷ ರೂ.ಗಳನ್ನಷ್ಟೇ ಚುನಾವಣಾ ವೆಚ್ಚವೆಂದು ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ಕಾನೂನು ಮಾಡಿದೆ. “ಆಯೋಗ ಹೇಳಿದಂತೆ ಕೇಳುತ್ತೇವೆ ‘ ಎಂದು ಎಲ್ಲ ಅಭ್ಯರ್ಥಿಗಳೂ ಹೇಳಿದ್ದೂ ಆಗಿದೆ. ಆದರೆ, ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಂಡರೆ, ಒಬ್ಬ ಅಭ್ಯರ್ಥಿ ಕಡಿಮೆ ಎಂದರೂ 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಯೇ ಈ ಚುನಾವಣೆ ಎದುರಿಸುತ್ತಿದ್ದಾರೆ.
ಅಷ್ಟೇ ಅಲ್ಲ; ಹೇಗಾದರೂ ಸರಿ, ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಹಪಹಪಿ ಎಲ್ಲ ಅಭ್ಯರ್ಥಿಗಳಿಗೂ ಬಂದುಬಿಟ್ಟಿದೆ. ವೋಟ್‌ಗಳೇನೋ ಇವೆ. ಆದರೆ, ವೋಟ್ ಹಾಕುವ ಜನರು, ನೌಕರಿ ಮಾಡುವ ನೆಪದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾರೆ. ವೋಟ್ ಹಾಕುವ ಒಂದೇ ಕಾರಣದಿಂದ ಸಾವಿರ ರುಪಾಯಿಗಳನ್ನು ಖರ್ಚು ಮಾಡಿಕೊಂಡು ಊರಿಗೆ ಹೋಗಿ ಬರಲು ಹಲವರಿಗೆ ಮನಸ್ಸು ಬರುವುದಿಲ್ಲ. ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳಿಗೆ, ಅವರು ಬಲಗೈ ಆಗಿರುವ ಏಜೆಂಟರುಗಳಿಗೆ ಈ ವಿಚಾರವೂ ಗೊತ್ತಿದೆ. ಏನೇ ಆದರೂ, ವೋಟ್ ಪಡೆಯಲೇಬೇಕು ಎಂಬ ಆಸೆಯಿಂದ ಅವರು ಏನು ಮಾಡಿದ್ದಾರೆ ಗೊತ್ತೆ? ಬೇರೆ ಊರಲ್ಲಿರುವ ಮತದಾರರಿಗೆ ಬಸ್/ರೈಲು ಪ್ರಯಾಣದ ಟಿಕೆಟ್ ದರ ನೀಡಿ, ಅವರನ್ನು ಊರಿಗೆ ಕರೆಸಿಕೊಳ್ಳುತ್ತಿದ್ದಾರೆ.
ಹೀಗೆ, ಬಸ್/ರೈಲ್ ಟಿಕೆಟ್ ಒದಗಿಸಲೆಂದೇ ಎಲ್ಲ ಅಭ್ಯರ್ಥಿಗಳೂ ಖರ್ಚು ಮಾಡುತ್ತಿರುವ ಒಟ್ಟು ಮೊತ್ತ 20 ಲಕ್ಷದ ಗಡಿ ದಾಟುತ್ತದೆ ಎಂಬುದು, ಈ ಹಿಂದೆ ಶಿವಮೊಗ್ಗದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವೊಂದರ ಏಜೆಂಟ್ ಆಗಿ ದುಡಿದವರ ಸ್ಪಷ್ಟ ಮಾತು. ದುರಂತವೆಂದರೆ, ನಮಗೋಸ್ಕರ ನೀವ್ಯಾಕೆ ಟಿಕೆಟ್ ತೆಗೆದು ಕೊಂಡುತ್ತೀರಿ? ಬಸ್ ಪ್ರಯಾಣದ ಹಣ ಪಡೆದು ವೋಟು ಹಾಕುವಂಥ ದುರ್ಗತಿ ನಮಗೆ ಬಂದಿಲ್ಲ ಎಂದು ಹೆಚ್ಚಿನ ಜನರು ಹೇಳುತ್ತಿಲ್ಲ. ಬದಲಿಗೆ, ಹೋಗಿ ಬರಲಿಕ್ಕೆ ಅವರೇ ದುಡ್ಡು ಕೊಟ್ಟಿದ್ದಾರೆ. ರಜೆನೂ ಸಿಗುತ್ತದೆ. ಹೋಗಿ ಬಂದ್ರಾಯ್ತು. ಇಷ್ಟಕ್ಕೂ ಅವರು ಕೊಡ್ತಾ ಇರುವ ದುಡ್ಡಾದ್ರೂ ಯಾರದು? ಅದು ನಾವೆಲ್ಲ ಕಟಾ ಇರುವ ಟ್ಯಾಕ್ಸ್ ಹಣ ತಾನೆ? ನಮ್ಮ ದುಡ್ಡು ನಮಗೆ ಸಿಕ್ತಾ ಇದೆ ಅಷ್ಟೇ’ ಅನ್ನುತ್ತಿದ್ದಾರೆ.
ಕ್ಷೇತ್ರದ ಅಭಿವೃದ್ದಿಯ ಮೂಲಕ ಮತದಾರರ ಋಣ ತೀರಿಸಬೇಕು ಎಂದು ಯೋಚಿಸುವ ನಾಯಕರು, ಹೀಗೆ ದೊರೆಯುವ ಅನುದಾನದಿಂದ ಒಂದು ಫ್ಯಾಕ್ಟರಿ ಆರಂಭಿಸುವ, ನೂರು ಮಂದಿಗೆ ಶಾಶ್ವತ ನೌಕರಿ ಒದಗಿಸುವ ಪ್ರಯತ್ನ ಮಾಡಬಹುದು. ತಮ್ಮ ಕ್ಷೇತ್ರದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯನ್ನೋ, ಸಿಮೆಂಟ್ ತಯಾರಿಕಾ ಘಟಕವನ್ನೋ ಆರಂಭಿಸಬಹುದು. ಸ್ಥಳೀಯರಿಗೆ ಮಾತ್ರ ಉದ್ಯೋಗ ಎಂದೂ ಘೋಷಿಬಹುದು. ಹೀಗೆ ಮಾಡಿದರೆ, ಮೊದಲಿಗೆ ಉದ್ಯೋಗದ ನೆಪದಲ್ಲಿ ಜನ ವಲಸೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಯಾವುದೇ ತಾಲೂಕು/ಜಿಲ್ಲಾ ಕೇಂದ್ರದಲ್ಲಿ ಒಂದು ದೊಡ್ಡ ಫ್ಯಾಕ್ಟರಿಯಿದ್ದರೆ, ಅದೊಂದೇ ಕಾರಣದಿಂದ, ಅದಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ಮತ್ತೂಂದೆರಡು ಸಣ್ಣ ಪ್ರಮಾಣದ ಫ್ಯಾಕ್ಟರಿಗಳೂ ಆರಂಭವಾಗುತ್ತವೆ. ಫ್ಯಾಕ್ಟರಿಯ ಕಾರಣಕ್ಕೆ ಸಾರಿಗೆ ವ್ಯವಸ್ಥೆಯೂ, ಹೆಚ್ಚು ಜನ ಬರುವರೆಂಬ ನೆಪದಲ್ಲಿ ಗೃಹನಿರ್ಮಾಣ ಕೆಲಸವೂ ಶುರುವಾಗುತ್ತದೆ. ಪರಿಣಾಮ, ಶಾಸಕ/ ಸಂಸದನಾಗಿ ಆಯ್ಕೆಯಾಗುವ ಒಬ್ಬ, ಗೆದ್ದು ಎರಡು ವರ್ಷದ ನಂತರವೇ ಫ್ಯಾಕ್ಟರಿ ನಿರ್ಮಾಣಕ್ಕೆ ಅಡಿಪಾಯ ಹಾಕಿಸಿದರೂ, ನಂತರದ ಐದಾರು ವರ್ಷ, ಕಡಿಮೆ ಅಂದರೂ, ಸಾವಿರ ಮಂದಿಗೆ ನೌಕರಿ ಸಿಕ್ಕಿಬಿಡುತ್ತದೆ.
ವಿಪರ್ಯಾಸ ಗೊತ್ತೆ? ಇಂಥದೊಂದು “ಸತ್ಕಾರ್ಯ’ ಮಾಡುವ ಯೋಚನೆ ಯಾವ ಸಂಸದ/ಶಾಸಕರಿಗೂ ಬರುವುದಿಲ್ಲ. ಚುನಾವಣಾ ಫಲಿತಾಂಶ ಬಂದ ತಕ್ಷಣವೇ ಆತ “ಬ್ಯುಸಿ’ ಆಗುತ್ತಾನೆ. ಯಾವುದಾದರೂ ಯೋಚನೆಯ ಬಗ್ಗೆ ಪ್ರಶ್ನಿಸಿದರೆ “ಅದನ್ನು ಪಕ್ಷದ ಮೀಟಿಂಗ್‌ನಲ್ಲಿ ಪ್ರಸ್ತಾಪಿಸುವೆ’ ಅನ್ನುತ್ತಾನೆ. ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ, ಅನುದಾನದ ಮೊತ್ತ ಸಾಲುವುದಿಲ್ಲ, ಫ್ಯಾಕ್ಟರಿ ಆರಂಭಿಸಲು ಈ ಜಾಗ ಚೆನ್ನಾಗಿಲ್ಲ, ಇಂಥ ಉದ್ಯಮ ಆರಂಭಿಸಲು ಕೋರ್ಟ್ ಒಪ್ಪುವುದಿಲ್ಲ, ಮೂಲಭೂತ ಸೌಲಭ್ಯಗಳೇ ಇಲ್ಲ ಎಂದೆಲ್ಲ ಕಾರಣಗಳನ್ನು ಹೇಳುತ್ತಾ ಹೋಗುತ್ತಾನೆ. ಈ ನಡುವೆಯೇ ದಿನಗಳು ಉರುಳುತ್ತಾ ಹೋಗುತ್ತವೆ. ಅನುದಾನ ಬಿಡುಗಡೆಯಾಗುತ್ತದೆ. ಎಲ್ಲ ಅನುದಾನವೂ ಖರ್ಚಾಗಿದೆ ಎಂದು “ಲೆಕ್ಕ ಹೇಳುವ’ ಕಾಗದ ಪತ್ರಗಳು ರೆಡಿಯಾಗುತ್ತವೆ. ಕೆಲಸ ಮಾಡಬೇಕು, ಹೊಸದೊಂದು ಉದ್ಯಮ ಆರಂಭಿಸಬೇಕು ಎಂಬ ಆಸೆಯೇನೋ ಇತ್ತು. ಆದರೆ, ಯಾರಿಂದಲೂ ಬೆಂಬಲ ಸಿಗಲಿಲ್ಲ ಎಂಬ ಘೋಷಣೆಯೊಂದಿಗೆ, ಮತ್ತೂಂದು ಚುನಾವಣೆ ಎದುರಿಸಲು ಅಭ್ಯರ್ಥಿ ಸಿದ್ಧನಾಗುತ್ತಾನೆ !
ಈಗ ನಮ್ಮ ಕಣ್ಣೆದುರು ಮತ ಕೇಳುತ್ತಾ ನಿಂತಿರುವವರಲ್ಲಿ ಹೆಚ್ಚಿನವರು ಇಂಥವರೇ ಇದ್ದಾರೆ ಸ್ವಾಮೀ, ನಮಗೆ ಕಾಸು ಕೊಡುವವರು ಬೇಡ, ಕೆಲಸ ಮಾಡುವವರು ಬೇಕು ಎಂದು, ಅವರಿಗೆ ನಿಷ್ಠುರವಾಗಿ ಹೇಳುವ ಹೆಚ್ಚಿನ ದನಿ ಮತದಾರನದ್ದಾಗಲಿ. ಗೊತ್ತಾಯ್ತಲ್ಲ. ಕಾಸು ಕೊಡಲು ಬಂದವನನ್ನು ಪಕ್ಕಕ್ಕೆ ಸರಿಸಿ, ಕೆಲಸ ಮಾಡುವವನಿಗೆ ಮತ ಹಾಕಿ.
ನಮ್ಮ ದುಡ್ಡಲ್ವಾ? ಕೊಡ್ಲಿ ಬಿಡಿ…
ಒಂದು ಮನೆಯಲ್ಲಿ ಐದು ವೋಟ್ ಇದ್ದರೆ, ತಲಾ ವೋಟಿಗೆ ಇಂತಿಷ್ಟು ಎಂದು ಹಣ ಕೊಡುವುದು ಹಲವು ಕಡೆಗಳಲ್ಲಿ ಈಗಲೂ “ಸಂಪ್ರದಾಯದಂತೆ’ ಉಳಿದುಕೊಂಡೇ ಬಂದಿದೆ. ಅಂಥ ಹಳ್ಳಿಗಳ ಜನರ ಮುಂದೆ ನಿಂತು-“ನೀವು ವೋಟು ಮಾರಿಕೊಳ್ಳಬೇಡಿ, ಯಾರಿಂದಲೂ ಹಣ ಪಡೆಯಬೇಡಿ’ ಅಂದರೆ- ಅಯ್ಯೋ, ಅವರೇನು ಅಪ್ಪನ ಮನೆಯಿಂದ ತಂದು ದುಡ್ಡು ಕೊಡ್ತಾರಾ? ನಮ್ಮ ಟ್ಯಾಕ್ಸ್ ಹಣವೆಲ್ಲ ಎಂಎಲ್‌ಎ, ಎಂಪಿಗಳ ಬಳಿ, ಅವರು ಪಕ್ಷಗಳಲ್ಲಿ ಉಳಿದಿದೆ ಅಲ್ವಾ? ಅದನ್ನೇ ಕೊಡ್ತಾ ಇದ್ದಾರೆ. ಆ ದುಡ್ಡು ಈಸ್ಕೋಂಡ್ರೆ ಏನೂ ತಪ್ಪಿಲ್ಲ ಬಿಡಿ’ ಅನ್ನುತ್ತಿದ್ದಾರೆ.
ಮತದಾರರ ಮಾತುಗಳನ್ನು ಪಕ್ಕಕ್ಕಿಟ್ಟು ಒಮ್ಮೆ ಯೋಚಿಸೋಣ: ಒಂದು ವಿಧಾನಸಭೆ ಅಥವಾ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಇವತ್ತು ಕೋಟ್ಯಧಿಪತಿಯೇ. ಅವರಿಗೆ ವೋಟುಗಳನ್ನು ಖರೀದಿಸುವ ಶಕ್ತಿಯಷ್ಟೇ ಅಲ್ಲ; ಇಡೀ ಜಿಲ್ಲೆಯನ್ನೂ ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಶಕ್ತಿ ಕೂಡ ಇರುತ್ತದೆ. ಒಂದು ಅವಧಿಗೆ ಶಾಸಕ/ ಸಂಸದ ಎಂದು ಆಯ್ಕೆಯಾದರೆ, ಪ್ರತಿ ವರ್ಷವೂ ಇಂತಿಷ್ಟು ಲಕ್ಷ ಎಂಬ ಲೆಕ್ಕದಲ್ಲಿ ಅನುದಾನದ ಹಣ ಸಿಕ್ಕೇ ಸಿಗುತ್ತದೆ.
ರಮೇಶ್ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.