ವಿಶ್ವಕಪ್‌ಗೆ ಟೀಮ್ ಇಂಡಿಯಾ: ಕಾರ್ತಿಕ್ ದ್ವಿತೀಯ ಕೀಪರ್; ಪಂತ್ ಬಾಹರ್
Team Udayavani, Apr 16, 2019, 11:15 AM IST
ಮುಂಬಯಿ: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತದ 15 ಸದಸ್ಯರ ತಂಡ ಸೋಮವಾರ ಅಂತಿಮಗೊಂಡಿದೆ. 15ನೇ ಸ್ಥಾನದ ಕೌತುಕವಷ್ಟೇ ಅಚ್ಚರಿಯ ಆಯ್ಕೆಗೆ ಕಾರಣವಾಗಿದೆ. ದ್ವಿತೀಯ ಕೀಪರ್ ಆಯ್ಕೆಗೆ ಆದ್ಯತೆ ನೀಡಿದ ಆಯ್ಕೆ ಸಮಿತಿ ಯುವ ಆಟಗಾರ ರಿಷಬ್ ಪಂತ್ ಅವರನ್ನು ಕಡೆಗಣಿಸಿ ಇವರಿಗಿಂತ ಹೆಚ್ಚು ಅನುಭವವುಳ್ಳ ದಿನೇಶ್ ಕಾರ್ತಿಕ್ ಅವರಿಗೆ ಮಣೆ ಹಾಕಿದೆ.
ರಿಷಬ್ ಪಂತ್ ಜತೆಗೆ ಕಡೆಗಣಿಸಲ್ಪಟ್ಟ ಮತ್ತೂಬ್ಬ ಆಟಗಾರ ಅಂಬಾಟಿ ರಾಯುಡು. ಮಧ್ಯಮ ಕ್ರಮಾಂಕದಲ್ಲಿ ಅಷ್ಟೇನೂ ಯಶಸ್ಸು ಕಾಣದ ರಾಯುಡು, ಐಪಿಎಲ್‌ನಲ್ಲೂ ಮಿಂಚಲು ವಿಫಲರಾಗಿದ್ದರು. ಉಳಿದಂತೆ ಭಾರತ ತಂಡದಲ್ಲಿ ಅಚ್ಚರಿಗಳೇನೂ ಗೋಚರಿಸಿಲ್ಲ. ಹೊಸ ಮುಖಗಳಿಗೆ ಆದ್ಯತೆ ನೀಡಿಲ್ಲ. ಬಹುತೇಕ ಎಲ್ಲರೂ ನಿರೀಕ್ಷಿಸಿದ್ದ ಆಟಗಾರರೇ ಸ್ಥಾನ ಸಂಪಾದಿಸಿದ್ದಾರೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ರೋಹಿತ್ ಶರ್ಮ ಉಪನಾಯಕರಾಗಿದ್ದಾರೆ.
ರಾಹುಲ್; ಏಕೈಕ ಕನ್ನಡಿಗ
ವಿಶ್ವಕಪ್ ತಂಡದಲ್ಲಿರುವ ಏಕೈಕ ಕನ್ನಡಿಗನೆಂದರೆ ಕೆ.ಎಲ್. ರಾಹುಲ್. ಮಂಗಳೂರು ಮೂಲದ ರಾಹುಲ್ ಹೊರತುಪಡಿಸಿದರೆ ಆಯ್ಕೆ ರೇಸ್‌ನಲ್ಲಿ ಕರ್ನಾಟಕದ ಯಾವ ಆಟಗಾರರೂ ಇರಲಿಲ್ಲ. ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯದೇ ಹೋಗುತ್ತಿದ್ದ ರಾಹುಲ್ ಅವರನ್ನು ತೃತೀಯ ಆರಂಭಿಕನನ್ನಾಗಿ ಆರಿಸಲಾಗಿದೆ. ಹೀಗಾಗಿ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇಲ್ಲ. ರೋಹಿತ್ ಶರ್ಮ-ಶಿಖರ್ ಧವನ್ ಸ್ಪೆಷಲಿಸ್ಟ್ ಓಪನರ್‌ಗಳಾಗಿದ್ದಾರೆ.
ಕಾರ್ತಿಕ್ ಕೀಪಿಂಗ್ ಕೌಶಲ
ದ್ವಿತೀಯ ವಿಕೆಟ್ ಕೀಪರ್‌ಗೆ ಆದ್ಯತೆ ನೀಡಿದ ಆಯ್ಕೆ ಸಮಿತಿ ದಿನೇಶ್ ಕಾರ್ತಿಕ್ ಅವರ ಅನುಭವಕ್ಕೆ ಹಾಗೂ ಅವರ ಕೀಪಿಂಗ್ ಕೌಶಲಕ್ಕೆ ಆದ್ಯತೆ ನೀಡಿತು. ಹೀಗಾಗಿ ಭಾರೀ ನಿರೀಕ್ಷೆಯಲ್ಲಿದ್ದ ರಿಷಬ್ ಪಂತ್ ನಿರಾಸೆ ಅನುಭವಿಸಬೇಕಾಯಿತು. ಸ್ಪಿನ್ ಎಸೆತಗಳ ಕೀಪಿಂಗ್‌ನಲ್ಲಿ ನಿಷ್ಣಾತರಾಗಿಲ್ಲ ಎಂಬುದು ಕೂಡ ಪಂತ್ ಆಯ್ಕೆಗೆ ಹಿನ್ನಡೆಯಾಗಿ ಪರಿಣಮಿಸಿತು.
“ಎರಡನೇ ಕೀಪರ್‌ನ ಆಯ್ಕೆಗೆ ಸಂಬಂಧಿಸಿದಂತೆ ನಾವು ಸುದೀರ್ಘ ಚರ್ಚೆ ನಡೆಸಿದೆವು. ಕಾರ್ತಿಕ್, ಪಂತ್… ಇವರಲ್ಲಿ ಯಾರೇ ಆಯ್ಕೆಯಾದರೂ ಅವರು ಧೋನಿ ಗಾಯಾಳಾದರಷ್ಟೇ ಆಡುವ ಬಳಗದಲ್ಲಿ ಅವಕಾಶ ಪಡೆಯುತ್ತಾರೆ. ಪ್ರಮುಖ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಕೂಡ ಬಹಳ ಮುಖ್ಯ. ಈ ಕಾರಣಕ್ಕಾಗಿ ನಾವು ಕಾರ್ತಿಕ್ ಅವರನ್ನು ಆರಿಸಿದೆವು’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಹೇಳಿದರು.
ಅಂಬಾಟಿ ರಾಯುಡು ಅವರನ್ನು ಕೈಬಿಟ್ಟಿದ್ದಕ್ಕೆ ಕಾರಣ ನೀಡಿದ ಪ್ರಸಾದ್, “2017ರ ಚಾಂಪಿಯನ್ಸ್ ಟ್ರೋಫಿ ಕೂಟದ ಬಳಿಕ ನಾವು ಮಧ್ಯಮ ಕ್ರಮಾಂಕದಲ್ಲಿ ಬಹಳಷ್ಟು ಮಂದಿಯನ್ನು ಆಡಿಸಿ ನೋಡಿದೆವು. ಇವರಲ್ಲಿ ರಾಯುಡು ಕೂಡ ಸೇರಿದ್ದಾರೆ. ಇವರಿಗೆ ಸಾಕಷ್ಟು ಅವಕಾಶಗಳನ್ನೂ ನೀಡಲಾಗಿದೆ. ಆದರೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಹಂತದಲ್ಲಿ ವಿಜಯ್ ಶಂಕರ್ ಭರವಸೆ ಮೂಡಿಸಿದರು. ಅವರನ್ನು 4ನೇ ಕ್ರಮಾಂಕಕ್ಕೆ ಮೀಸಲಿಡುವ ಯೋಜನೆ ಇದೆ. ಇಲ್ಲಿ ಕಾರ್ತಿಕ್, ಜಾಧವ್ ಕೂಡ ಇದ್ದಾರೆ. ರಾಯುಡು-ಶಂಕರ್ ಆಯ್ಕೆ ವಿಷಯದಲ್ಲಿ ಶಂಕರ್ ಅವರೇ ಮೇಲುಗೈ ಸಾಧಿಸಿದರು’ ಎಂದರು.
4ನೇ ಪೇಸ್ ಸ್ಪೆಷಲಿಸ್ಟ್ ಇಲ್ಲ
ದ್ವಿತೀಯ ಕೀಪರ್‌ಗೆ ಆದ್ಯತೆ ನೀಡಿದ್ದರಿಂದ ಹೆಚ್ಚುವರಿ ಪೇಸ್ ಬೌಲರ್‌ನ ಆಯ್ಕೆಯನ್ನು ಕೈಬಿಡಲಾಯಿತು. ಇಲ್ಲಿ ಮೂವರು ಸ್ಪೆಷಲಿಸ್ಟ್ ಮತ್ತು ಓರ್ವ ಆಲ್‌ರೌಂಡರ್ ಇದ್ದಾರೆ. ಇವರೆಂದರೆ ಶಮಿ, ಭುವನೇಶ್ವರ್, ಬುಮ್ರಾ ಮತ್ತು ಪಾಂಡ್ಯ. ವಿಜಯ್ ಶಂಕರ್ ಕೂಡ ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲರು.
ತಂಡದ ಸ್ಪಿನ್ ವಿಭಾಗದ ಸ್ಪೆಷಲಿಸ್ಟ್‌ಗಳೆಂದರೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್. ತೃತೀಯ ಸ್ಪಿನ್ನರ್ ಆಗಿ ರವೀಂದ್ರ ಜಡೇಜ ಅವರನ್ನು ಆರಿಸಲಾಗಿದೆ. ಜಡೇಜ ಆಲ್‌ರೌಂಡರ್ ಕೂಡ ಆಗಿರುವುದು ಪ್ಲಸ್ ಪಾಯಿಂಟ್.
ತಂಡದೊಂದಿಗೆ ಕೆಲವು ನೆಟ್ ಬೌಲರ್‌ಗಳನ್ನೂ ಇಂಗ್ಲೆಂಡಿಗೆ ಕಳುಹಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ. ಇವರನ್ನು ಮತ್ತೆ ಹೆಸರಿಸಲಾಗುವುದು ಎಂದರು. ಮೇ 30ರಿಂದ ವಿಶ್ವಕಪ್ ಆರಂಭವಾಗಲಿದ್ದು, ಭಾರತ ಜೂ. 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ.
ವಿಶ್ವಕಪ್ ಮತ್ತು ಕನ್ನಡಿಗರು
ವಿಶ್ವಕಪ್‌ನಲ್ಲಿ ಹಾದುಹೋದ ಕನ್ನಡಿಗರ ಸಂಖ್ಯೆ ದೊಡ್ಡದು. ಬೃಜೇಶ್ ಪಟೇಲ್, ಜಿ.ಆರ್. ವಿಶ್ವನಾಥ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೆಂಕಟೇಶ ಪ್ರಸಾದ್, ಸ್ಟುವರ್ಟ್ ಬಿನ್ನಿ… ಹೀಗೆ ಪಟ್ಟಿ ಬೆಳೆಯುತ್ತದೆ.
ಭಾರತದ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಕರ್ನಾಟಕದವರ ಕೊಡುಗೆ ದೊಡ್ಡದು. ಅಂದಿನ ಜಿಂಬಾಬ್ವೆ ಎದುರಿನ ಲೀಗ್ ಪಂದ್ಯದಲ್ಲಿ ತೀವ್ರ ಕುಸಿತಕ್ಕೊಳಗಾದ ಭಾರತವನ್ನು ಮೇಲೆತ್ತಲು ಕಪ್ತಾನ ಕಪಿಲ್‌ದೇವ್‌ಗೆ ನೆರವಾದವರೇ ಕಿರ್ಮಾನಿ. ಹಾಗೆಯೇ ಇದೇ ಕೂಟದಲ್ಲಿ ರೋಜರ್ ಬಿನ್ನಿ ಸರ್ವಾಧಿಕ ವಿಕೆಟ್ ಉರುಳಿಸಿ ದಾಖಲೆಯನ್ನೂ ಸ್ಥಾಪಿಸಿದ್ದರು.
ಭಾರತ 2011ರಲ್ಲಿ 2ನೇ ಸಲ ವಿಶ್ವಕಪ್ ಎತ್ತುವಾಗ ಕರ್ನಾಟಕದ ಯಾವುದೇ ಆಟಗಾರರಿಲ್ಲದಿದ್ದುದೊಂದು ಕೊರತೆಯೇ ಆಗಿದೆ. ಈ ಬಾರಿ ಕೆ.ಎಲ್. ರಾಹುಲ್ ವಿಶ್ವಕಪ್ ತಂಡದ ಏಕೈಕ ಕನ್ನಡಿಗ. ಇವರಿಗೆ ಕೆಲವು ಪಂದ್ಯಗಳಲ್ಲಾದರೂ ಆಡುವ ಅವಕಾಶ ಸಿಗಬೇಕಾದುದು ನ್ಯಾಯೋಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.