Team Udayavani, Apr 16, 2019, 3:29 PM IST
ದಾವಣಗೆರೆ: ಪ್ರತಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮುನ್ನಲೆಗೆ ಬರುವ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ನೀರಿನ ಸಮಸ್ಯೆ…, ಪುಲ್ವಾಮಾ ದಾಳಿ…, ಬಾಲಾಕೋಟ್ ಏರ್ ಸ್ಟ್ರೈಕ್…, ಮೋದಿ ಮತ್ತೂಮ್ಮೆ ಪ್ರಧಾನಿ ಆಗಬೇಕು….
ಇವು ದಾವಣಗೆರೆ ಲೋಕಸಭಾ ಕ್ಷೇತ್ರದ ಅತಿ ದೊಡ್ಡ ಮತಕ್ಷೇತ್ರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಹು ಚರ್ಚೆಯಲ್ಲಿರುವ ವಿಷಯಗಳು.
ದಾವಣಗೆರೆ ಮಹಾನಗರ ಪಾಲಿಕೆಯ 18ನೇ ವಾರ್ಡ್‌ನಿಂದ 41ನೇ ವಾರ್ಡ್(23 ರಿಂದ 27 ಹೊರತುಪಡಿಸಿ) ಹಾಗೂ
ಕಕ್ಕರಗೊಳ್ಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಗ್ರಾಮಗಳನ್ನು ಹೊಂದಿರುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಒಂದರ್ಥದಲ್ಲಿ ಶಿಕ್ಷಣ ಕಾಶಿ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಸಾಕಷ್ಟು ಅಭಿವೃದ್ಧಿ ಕಂಡಿರುವ ಬಡಾವಣೆ, ಜನ ಹೇಳುವಂತೆ ಹೊಸ ದಾವಣಗೆರೆಯ ಬಹುತೇಕ ಪ್ರದೇಶ ಹೊಂದಿರುವ ಉತ್ತರ ಕ್ಷೇತ್ರದಲ್ಲಿ ಪುಲ್ವಾಮಾ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಬಾಲಾಕೋಟ್ ದಾಳಿ ಕುರಿತ ಚರ್ಚೆ ನಡೆಯುತ್ತಿದೆ.
ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಬಡಾವಣೆಯಂತಹ ಅಭಿವೃದ್ಧಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕೇನು ಕೊರತೆ ಇಲ್ಲ. ಹಾಗಾಗಿ ಇಲ್ಲಿ ಕುಡಿಯುವ ನೀರು, ಬೀದಿ ದೀಪ, ಚರಂಡಿ, ಒಳ ಚರಂಡಿ… ಮುಂತಾದ ಸೌಲಭ್ಯಗಳ ಚರ್ಚೆ ಅಷ್ಟಾಗಿ ಇಲ್ಲ.
ಬೇಕಿದೆ ಮನೆ: ಬುದ್ಧ ಬಸವ ನಗರ, ರವೀಂದ್ರನಾಥ್ ನಗರ, ಇಂಡಸ್ಟ್ರಿಯಲ್ ಏರಿಯಾದಂತಹ ಪ್ರದೇಶದಲ್ಲಿ ನಿವೇಶನ ಮತ್ತು ಮನೆ ಸೌಲಭ್ಯ ಬಹುತೇಕರ ಬಹು ಮುಖ್ಯ ಬೇಡಿಕೆ . ಹಿಂದೊಮ್ಮೆ 15 ಸಾವಿರದಷ್ಟು ಆಶ್ರಯ ಮನೆಗಳ ನಿರ್ಮಾಣದ ಮೂಲಕ ರಾಜ್ಯದ ಗಮನ ಸೆಳೆದಿದ್ದ ಈ ಭಾಗದಲ್ಲಿ ಈಗ ಆಶ್ರಯ ಮನೆಗಳ ನಿರ್ಮಾಣ ಬಹುತೇಕ ಇಲ್ಲವೇ ಇಲ್ಲ ಎನ್ನುವಂತಿದೆ. ಬೆಲೆ ಏರಿಕೆಯಂತಹ ದಿನಗಳಲ್ಲಿ ಬಾಡಿಗೆ ಕಟ್ಟಿಕೊಂಡು, ಕೆಲಸಕ್ಕಾಗಿ 6-7 ಕಿಲೋ ಮೀಟರ್ ದೂರ ಪ್ರತಿ ನಿತ್ಯ ಓಡಾಟ, ಮಕ್ಕಳಿಗೆ ಎಜ್ಯುಕೇಷನ್, ಆರೋಗ್ಯ ನೋಡಿಕೊಳ್ಳುವ ಜೊತೆಗೆ ಜೀವನ ನಡೆಸುವುದು ಕಷ್ಟ. ಹಾಗಾಗಿ ಆಶ್ರಯ ಯೋಜನೆಯಡಿ ಮನೆ ಒದಗಿಸಬೇಕು ಎಂಬುದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಹುತೇಕರ ಒಕ್ಕೊರಲಿನ ಒತ್ತಾಯ.
ಕೈಗಾರಿಕೆಗಳಿಲ್ಲ: ಹಿಂದೊಮ್ಮೆ ಮ್ಯಾಂಚೆಸ್ಟರ್… ಎಂಬ ಖ್ಯಾತಿಯ ದಾವಣಗೆರೆಯಲ್ಲಿ ಈಗ ಕೈಗಾರಿಕೆಗಳೇ ಇಲ್ಲ.
ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವಂತಹ ಪ್ರಯತ್ನ ನಡೆದಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದಷ್ಟು
ಉದ್ಯೋಗ ಅವಕಾಶ ಒದಗಿಸುವಂತಹ ಸಾಫ್ಟವೇರ್ ಪಾರ್ಕ್ ನಿವೇಶನ ಸಮಸ್ಯೆಯಿಂದ ಪ್ರಾರಂಭವಾಗಿಲ್ಲ. ಉದ್ಯೋಗ ಅವಕಾಶದ ವಾತಾವರಣ ನಿರ್ಮಾಣ ಮಾಡಬೇಕು ಎಂದು ವಿದ್ಯುತ್ ಗುತ್ತಿಗೆದಾರ ಸಂತೋಷ್ ದೊಡ್ಮನಿ ಒತ್ತಾಯಿಸುತ್ತಾರೆ.
ನಾಲೆಯಲ್ಲಿ ನೀರು ಹರೀತಿಲ್ಲ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ಕರಗೊಳ್ಳ ಜಿಲ್ಲಾ ಪಂಚಾಯತ್‌ನ ಅನೇಕ ಗ್ರಾಮಗಳಿಗೆ ಭದ್ರಾ ನಾಲಾ ನೀರೇ ಮೂಲ ಆಧಾರ. ಸಮರ್ಪಕ ಪ್ರಮಾಣದಲ್ಲಿ ಭದ್ರೆ ಹರಿದರೆ ಮಾತ್ರವೇ ಈ ಭಾಗದ ಸಾವಿರಾರು ಕುಟುಂಬಗಳ ಜೀವನ ಸುಭದ್ರ ಎನ್ನುವ ವಾತಾವರಣ ಇದೆ. ಆದರೆ, ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ಹರಿಸಲಾಗುತ್ತಿಲ್ಲ ಎಂಬ ಅಚ್ಚುಕಟ್ಟುದಾರರ ಬೇಗುದಿಗೆ ಈವರೆಗೆ ಪರಿಹಾರ ದೊರೆತಿಲ್ಲ.
ಈ ಸಮಸ್ಯೆಗೆ ಪರಿಹಾರ ದೊರೆಯವ ಲಕ್ಷಣಗಳು ಬಹುತೇಕ ಕಡಿಮೆ. ಕಾರಣ ಭದ್ರಾ ನಾಲಾ ಮೇಲ್ಭಾಗದಲ್ಲಿನ ಅಕ್ರಮ ಪಂಪ್ ಸೆಟ್‌ಗಳು. ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬುದು ನಗ್ನಸತ್ಯ. ಹಾಗಾಗಿ ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆ ಎಂಬುದು ರೈತರನ್ನು ಒಂದಷ್ಟು ಸಮಾಧಾನ ಪಡಿಸುವಂತಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರವಾಗಿ ನಡೆಯುವುದಿಲ್ಲ ಎಂಬುದು ರೈತರ ಅಳಲು.
ದಾವಣಗೆರೆ ಮತ್ತು ಹರಿಹರ ತಾಲೂಕಿನ ಕೆಲ ಗ್ರಾಮಗಳ ಹೊಲ-ಗದ್ದೆಯಲ್ಲಿ ಭದ್ರಾ ನಾಲಾ ನೀರು ಸಮರ್ಪಕ ಪ್ರಮಾಣದಲ್ಲಿ ಹರಿದ ಒಂದರೆಡು ಉದಾಹರಣೆ ಬಿಟ್ಟರೆ ಬಹುತೇಕ ಹಂಗಾಮಿನಲ್ಲಿ ನೀರು ಹರಿಯುವುದೇ ಇಲ್ಲ. ನೀರು ಹರಿಸಬೇಕು ಒಂದು ಒತ್ತಾಯಿಸಿ ಕಳೆದ ವಾರದಲ್ಲಿ ವಿವಿಧ ಗ್ರಾಮಗಳ ರೈತರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಈ ವಿಷಯ ಭಾರೀ ಚರ್ಚೆಗೆ ವೇದಿಕೆ ಆಗುತ್ತದೆ. ಈ ಚುನಾವಣೆಯಲ್ಲೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ವೈಫಲ್ಯ ಆಗಿದೆ… ಎಂಬ ಚರ್ಚೆ ಕಾವೇರುತ್ತಿದೆ.
ಇನ್ನು ಲೋಕಸಭಾ ಚುನಾವಣಾ ಪ್ರಚಾರ ನೋಡುವುದಾದರೆ ಈವರೆಗೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಪ್ರಚಾರ ಕಂಡು ಬಂದಿಲ್ಲ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸದೇ ಇರುವುದರಿಂದ ಅಂತಹ ಜಿದ್ದಾಜಿದ್ದಿ ಇಲ್ಲ ಎಂಬ ಕಾರಣಕ್ಕಾಗಿ ಪ್ರಚಾರ ಬಿರುಸು ಪಡೆದುಕೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಕಿಂಗ್ ಫಲಿತಾಂಶ ನೀಡಿರುವ ಉತ್ತರ ಕ್ಷೇತ್ರದಲ್ಲಿ ಕಮಲ ಪಾಳೆಯ ಮನೆ ಮನೆ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್-ಜೆಡಿಎಸ್‌ನವರು ಸಹ
ಪ್ರಚಾರ ನಡೆಸುತ್ತಿದ್ದಾರೆ.