ಮೋಸ ಮಾಡುವುದರಲ್ಲಿ ಪಿಎಚ್‌ಡಿ

ಕಾಂಗ್ರೆಸ್‌ ಪ್ರಣಾಳಿಕೆಯಿಂದ ನಕ್ಸಲರಿಗೂ ಸ್ಫೂರ್ತಿ

Team Udayavani, Apr 17, 2019, 6:00 AM IST

r-22

ಸಂಭಾಲ್ಪುರದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಚುನಾವಣಾ ಸಂಕಲ್ಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಕೊರ್ಬಾ/ಸಂಭಾಲ್ಪುರ: ನಕ್ಸಲೀಯರಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮೋಸ ಮಾಡುವುದರಲ್ಲಿ ಅವರು ಪಿಎಚ್‌.ಡಿ. ಪಡೆದಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಲೇವಡಿ ಮಾಡಿದ ಅವರು, ಬಿಜೆಪಿ ಶಾಸಕ ಭೀಮ ಮಾಂಡವಿ ಮತ್ತು ಇತರ ನಾಲ್ವರು ಭದ್ರತಾ ಸಿಬಂದಿ ನಕ್ಸಲರಿಂದಾಗಿ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ಕೊರ್ಬಾ, ಭಾತಾಪುರಗಳಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್‌ನ ಉದ್ದೇಶ ಮತ್ತು ನೀತಿಗಳು ಯಾವತ್ತೂ ಪ್ರಾಮಾಣಿಕತೆಯಿಂದ ಕೂಡಿಯೇ ಇರಲಿಲ್ಲ ಎಂದಿದ್ದಾರೆ. ನಕ್ಸಲೀಯರನ್ನು ಕಾಂಗ್ರೆಸಿಗರು ಕ್ರಾಂತಿಕಾರಿಗಳು ಎಂದು ಬಣ್ಣಿಸುತ್ತಿದ್ದಾರೆ. ಛತ್ತೀಸ್‌ಗಢದಲ್ಲಿ ಮತ್ತೆ ಅವರು ತಲೆಯೆತ್ತುವಂತಾಗಲು ಕಾಂಗ್ರೆಸ್‌ನ ಪ್ರೋತ್ಸಾಹವೇ ಕಾರಣ ಎಂದು ಟೀಕಿಸಿದ್ದಾರೆ.

“ಒಂದೆಡೆ, ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಜತೆಗೆ ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳ ಬೆಳವಣಿಗೆಗಾಗಿ ದುಡಿಯುತ್ತಿದ್ದೇವೆ. ಇದೇ ವೇಳೆ ಛತ್ತೀಸ್‌ಗಢವನ್ನು ಮತ್ತೆ ಹಿಂಸೆಯತ್ತ ತಳ್ಳಲು ಪ್ರಯತ್ನ ನಡೆಯುತ್ತಿದೆ. ಇದೆಂಥಾ ರಾಜಕೀಯ?’ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಿಂದ ನಕ್ಸಲೀಯರೂ ಉತ್ಸಾಹಗೊಂಡಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನು ತೆಗೆದು ಹಾಕುವ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಅದು ಅಂಥ ಕೃತ್ಯವೆಸಗುವವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾ ಗುತ್ತದೆ ಎಂದರು. ಒಡಿಶಾದ ಸಂಭಾಲ್ಪುರದಲ್ಲಿ ಮಾತನಾ ಡಿದ ಪ್ರಧಾನಿ ರೈತರಿಗೆ, ಮೀನುಗಾರ ಸಮುದಾಯ ಸೇರಿದಂತೆ ಹಲವು ಅರ್ಹರಿಗೆ ಕೇಂದ್ರ ಸರಕಾರದಿಂದ ನೇರವಾಗಿ ಸಹಾಯಧನ ಸಿಗುವಂತೆ ಮಾಡಲಾಗಿದೆ ಎಂದಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಜನರಿಗೆ ಸಿಗುತ್ತಿತ್ತು ಎಂದಿದ್ದಾರೆ.

ಜನರ ಭಾವನೆಗೆ ಕಾಂಗ್ರೆಸ್‌ ಗೌರವ
ಕಾಂಗ್ರೆಸ್‌ ಜನರ ಭಾವನೆ, ನಂಬುಗೆಗಳಿಗೆ ಬೆಲೆ ನೀಡುತ್ತದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಕೇರಳದ ಪತ್ತನಂತಿಟ್ಟ ಮತ್ತು ಕೊಲ್ಲಂ ಜಿಲ್ಲೆಯ ಪತನಪುರಂಗಳಲ್ಲಿ ಪ್ರಚಾರ ನಡೆಸಿದ ಅವರು, ಶಾಂತಿಯುತವಾಗಿ ಮತ್ತು ಅಹಿಂಸಾತ್ಮಕವಾಗಿ ಜನರು ತಮ್ಮ ಭಾವನೆ, ನಂಬುಗೆಗಳನ್ನು ವ್ಯಕ್ತಪಡಿಸುವ ವಾತಾವರಣ ಭಾರತದಲ್ಲಿ ನಿರ್ಮಾಣವಾಗಬೇಕು. ಇದು ಕಾಂಗ್ರೆಸ್‌ ಆಶಯ. ಅದನ್ನು ತಡೆಯುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಶಬರಿಮಲೆ ವಿಚಾರ ಪ್ರಸ್ತಾವಿಸಿ ಮಾತನಾಡಿದ್ದಾರೆ. ಕೊಲ್ಲಂ ಜಿಲ್ಲೆಯ ಪತನಪುರಂನಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ದೇಶ ನಿರಂತರವಾಗಿ ದಾಳಿಗೆ ಒಳಗಾಗಿದೆ. ದೇಶ ಜನರಿಂದ ಆಳ್ವಿಕೆಗೆ ಒಳ ಪಡಬೇಕೇ ಹೊರತು, ಒಂದು ಸಿದ್ಧಾಂತ ಅಥವಾ ವ್ಯಕ್ತಿಯಿಂದ ಅಲ್ಲ. ಪ್ರಧಾನಿಯವರು ಕಾಂಗ್ರೆಸ್‌ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೆಂದರೆ ಕಾಂಗ್ರೆಸ್‌ ಅನ್ನುವ ಐಡಿಯವನ್ನೇ ಅಳಿಸುವರೇ? ಅದಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ’ ಎಂದಿದ್ದಾರೆ. ವಯನಾಡ್‌ನಿಂದ ಸ್ಪರ್ಧೆ ಬಗ್ಗೆ ಮಾತನಾಡಿದ ರಾಹುಲ್‌ “ದೇಶದಲ್ಲಿ ಪ್ರತಿಯೊಂದು ಧ್ವನಿಯೂ ಪ್ರಾಮುಖ್ಯ ಪಡೆದಿದೆ ಎನ್ನುವುದನ್ನು ಸೂಚಿಸಲು ಸ್ಪರ್ಧಿಸಿದ್ದೇನೆ’ ಎಂದು ಹೇಳಿದ್ದಾರೆ.

ರಾಹುಲ್‌ ಟೀಕೆಗೆ ಆಕ್ಷೇಪ
ಎಲ್ಲ ಕಳ್ಳರ ಹೆಸರು ಮೋದಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಮಾಡಿದ್ದಾರೆ. ರಾಜಕೀಯ ಪಕ್ಷವೊಂದರ ಪ್ರಮುಖ ನಾಯಕನಿಗೆ ಇಂಥ ಮಾತುಗಳು ಶೋಭೆಯಲ್ಲ ಎಂದಿದ್ದಾರೆ. ಛತ್ತೀಸ್‌ಗಢದಲ್ಲಿರುವ ಶಾಹು ಸಮುದಾಯವನ್ನು ಗುಜರಾತ್‌ನಲ್ಲಿ ಮೋದಿಗಳು ಎನ್ನುತ್ತಾರೆ. ಹಾಗಿದ್ದರೆ ಅವರೆಲ್ಲ ಕಳ್ಳರೇ ಎಂದು ಪ್ರಶ್ನಿಸಿದ್ದಾರೆ ಪ್ರಧಾನಿ. ಕರ್ನಾಟಕದ ಕೋಲಾರದಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಿದ ಸಂದರ್ಭದಲ್ಲಿ “ನೀರವ್‌ ಮೋದಿ, ಲಲಿತ್‌ ಮೋದಿ ಹೀಗೆ ಕಳ್ಳರ ಹೆಸರುಗಳಲ್ಲಿ ಮೋದಿ ಹೆಸರು ಹೇಗೆ ಸೇರಿಕೊಂಡಿತು’ ಎಂದು ಪ್ರಶ್ನೆ ಮಾಡಿದ್ದರು.

ರಾಜನಾಥ್‌ ಸಿಂಗ್‌ ನಾಮಪತ್ರ
ಲಕ್ನೋ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರಾದ ಮಹೇಂದ್ರ ನಾಥ್‌ ಪಾಂಡೆ, ದಿನೇಶ್‌ ಮೌರ್ಯ ಸೇರಿದಂತೆ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಅವರು ಅದ್ದೂರಿ ರೋಡ್‌ ಶೋ ನಡೆಸಿದ್ದಾರೆ. ಹಜರತ್‌ಗಂಜ್‌ನಲ್ಲಿರುವ ದಕ್ಷಿಣಾಮುಖೀ ಹನುಮಾನ್‌ ದೇಗುಲ ದಲ್ಲಿ, ಹನುಮಾನ್‌ ಸೇತು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರು ರೋಡ್‌ ಶೋ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿರುವ ತಮಗೆ ಮೋದಿ ಪರ ಅಲೆಯೇ ಕಂಡು ಬಂದಿದೆ ಎಂದು ಹೇಳಿದ್ದಾರೆ. 5 ಒಂಟೆಗಳು ರೋಡ್‌ ಶೋನ ಭಾಗವಾಗಿದ್ದದ್ದು ಗಮನಾರ್ಹವಾಗಿತ್ತು.

ಭೇಟಿ ಮಾಡಿದ್ದಕ್ಕೆ ಶ್ಲಾಘನೆ
ದೇಗುಲದಲ್ಲಿ ತುಲಾಭಾರ ಸೇವೆಯಲ್ಲಿ ಭಾಗಿಯಾಗಿದ್ದಾಗ ತಕ್ಕಡಿ ಕುಸಿದು ಗಾಯಗೊಂಡಿದ್ದ ಕಾಂಗ್ರೆಸ್‌ ನಾಯಕ ಹಾಗೂ ತಿರುವನಂತಪುರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಂಗಳವಾರ ಭೇಟಿ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕುಶಲೋಪರಿ ವಿಚಾರಿಸಿದರು. ಈ ಬಗ್ಗೆ ಟ್ವೀಟ್‌ ಮಾಡಿದ ಶಶಿ ತರೂರ್‌, “ಕೇಂದ್ರ ರಕ್ಷಣಾ ಸಚಿವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು ಹೃದಯ ತುಂಬಿ ಬಂತು. ಪ್ರಚಾರದ ಬಿರುಸಿನಲ್ಲಿಯೂ ಅವರು ಆಗಮಿಸಿದ್ದರು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಾನವೀಯತೆ ಎನ್ನುವುದು ಅಪರೂಪದ ಗುಣ. ಅವರ ಕ್ರಮ ಮತ್ತೂಬ್ಬರಿಗೆ ಮಾದರಿ’ ಎಂದು ಬರೆದುಕೊಂಡಿದ್ದಾರೆ. ತಿರುವನಂತ ಪುರ ಕ್ಷೇತ್ರದ ಸಿಪಿಐ ಅಭ್ಯರ್ಥಿ ಸಿ. ದಿವಾಕರನ್‌ ಕೂಡ ಆಸ್ಪತ್ರೆಗೆ ಭೇಟಿ ನೀಡಿ ತರೂರ್‌ ಆರೋಗ್ಯ ವಿಚಾರಿಸಿದ್ದಾರೆ.

2ನೇ ಹಂತಕ್ಕೆ ಪ್ರಚಾರ ಅಂತ್ಯ
ಕರ್ನಾಟಕವೂ ಸೇರಿದಂತೆ ದೇಶದ 12 ರಾಜ್ಯಗಳಲ್ಲಿರುವ 96 ಕ್ಷೇತ್ರ ಗಳಿಗೆ ಎ.18ರಂದು ಮತದಾನ ನಡೆಯಲಿದೆ. ಅದಕ್ಕಾಗಿ ಬಹಿರಂಗ ಪ್ರಚಾರ ಮಂಗಳವಾರ ಮುಕ್ತಾಯವಾಗಿದೆ. ತಮಿಳುನಾಡಿನಲ್ಲಿ 38, ಕರ್ನಾಟಕದಲ್ಲಿ 14, ಮಹಾರಾಷ್ಟ್ರದಲ್ಲಿ 10, ಉ.ಪ್ರ.8, ಅಸ್ಸಾಂ, ಬಿಹಾರ, ಒಡಿಶಾಗಳಲ್ಲಿ ತಲಾ 5, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಲ ಗಳಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರದಲ್ಲಿ 2, ಮಣಿಪುರ, ತ್ರಿಪುರಾ, ಪುದುಶೆರಿಗಳಲ್ಲಿ ತಲಾ 1 ಸ್ಥಾನಗಳಲ್ಲಿ ಮತದಾನ ನಡೆಯಲಿದೆ.

ಅಧಿಸೂಚನೆ: ಮೇ 12ರಂದು ನಡೆಯಲಿರುವ 6ನೇ ಹಂತದ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ. ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೊಸದಿಲ್ಲಿಯ ಎಲ್ಲ ಏಳು ಕ್ಷೇತ್ರಗಳಲ್ಲೂ ಈ ಹಂತದಲ್ಲಿ ಮತದಾನ ನಡೆಯಲಿದೆ. ಬಿಹಾರ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲದ ಕೆಲವು ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. 24ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 26ಕ್ಕೆ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.

ಮುಸ್ಲಿಂ ಮತ ಮಾತು: ಈಗ ಸಚಿವ ಸಿಧು ಸರದಿ
ಬಿಜೆಪಿಗೆ ಮತ ಹಾಕಬೇಡಿ ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಕ್ಕಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಭಾಷಣ, ಪ್ರಚಾರ ಮಾಡದಂತೆ ಚುನಾವಣಾ ಆಯೋಗ ನಿಷೇಧ ಹೇರಿತ್ತು. ಬಿಹಾರದ ಕತಿಹಾರ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ ಪಂಜಾಬ್‌ ಸಚಿವ ನವ್‌ಜೋತ್‌ ಸಿಂಗ್‌ ಸಿಧು, ಅದೇ ಮಾದರಿಯಲ್ಲಿ ಮಾತನಾಡಿದ್ದಾರೆ. “ಕೆಲವು ಮಂದಿ ಮುಸ್ಲಿಂ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಒವೈಸಿ ಅಂಥವರನ್ನು ಮುಂದಿಡುತ್ತಿ ದ್ದಾರೆ. ನೀವೆಲ್ಲರೂ ಒಂದಾಗಿ ಮತ ಹಾಕಿದರೆ, ಮೋದಿಯನ್ನು ಸೋಲಿಸಬಹುದು’ ಎಂದು ಹೇಳಿದ್ದಾರೆ. ಈ ಬಗ್ಗೆ ಆಯೋಗ ವರದಿ ಕೇಳಿದೆ. ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ವಾದ ನಡೆದಿದೆ.

ಬಾಂಗ್ಲಾ ನಟನ ವೀಸಾ ರದ್ದು
ಪಶ್ಚಿಮ ಬಂಗಾಲದ ರಾಯ್‌ಗಂಜ್‌ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ಕನ್ಹಯ್ಯಲಾಲ್‌ ಅಗರ್ವಾಲ್‌ ಪರವಾಗಿ ಬಾಂಗ್ಲಾದೇಶದ ನಟ ಫ‌ದೌìಸ್‌ ಅಹ್ಮದ್‌ ಪ್ರಚಾರ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ವಿದೇಶಿ ಪ್ರಾಂತೀಯ ನೋಂದಣಿ ಅಧಿಕಾರಿ (ಎಫ್ಆರ್‌ಆರ್‌ಒ)ಯಿಂದ ವಿಸ್ತೃತ ವರದಿ ಪಡೆದುಕೊಂಡ ಕೇಂದ್ರ ಸರಕಾರ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿದೆ. ರಾಯ್‌ಗಂಜ್‌ನಲ್ಲಿ ನಡೆದ ರ್ಯಾಲಿಗಳಲ್ಲಿ ಕೆಲವು ಭಾರತೀಯ ನಟರ ಜತೆಗೆ ಕಾಣಿಸಿಕೊಂಡಿದ್ದ ಅಹ್ಮದ್‌, ಕನ್ಹಯ್ಯಲಾಲ್‌ ಪರವಾಗಿ ಭಾರತ-ಬಾಂಗ್ಲಾದೇಶದ ಗಡಿಭಾಗದಲ್ಲಿರುವ ಹೇಮಟಾಬಾದ್‌ ಮತ್ತು ಕರಂಡಿ ಪ್ರಾಂತ್ಯಗಳಲ್ಲಿ ಮತ ಯಾಚಿಸಿದ್ದರು. ನಟ ಅಹ್ಮದ್‌ ಭಾರತಕ್ಕೆ ಬ್ಯುನಿನೆಸ್‌ ವೀಸಾ ಅಡಿಯಲ್ಲಿ ಭೇಟಿ ನೀಡಿದ್ದರು.

ಗೆಲ್ಲೋದು ಕಷ್ಟವೆಂದ ಅಭ್ಯರ್ಥಿ
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಗೆಲ್ಲೋದು ಕಷ್ಟ. ಆದರೂ ಉತ್ತಮ ಮಾರ್ಜಿನ್‌ನಿಂದ ಗೆಲ್ಲುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಕನ್ವರ್‌ ಸರ್ವೇಶ್‌ ಕುಮಾರ್‌ ಹೇಳಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಇಮ್ರಾನ್‌ ಪ್ರತಾಪ್‌ಗ್ಢಿ ಕಣದಲ್ಲಿದ್ದಾರೆ. ಇನ್ನೊಂದೆಡೆ ಮೈತ್ರಿಯ ಅಭ್ಯರ್ಥಿಯಾಗಿ ಎಸ್‌.ಟಿ. ಹಸನ್‌ ಇದ್ದಾರೆ. ಈ ಕ್ಷೇತ್ರದಲ್ಲಿನ 19 ಲಕ್ಷ ಮತಗಳ ಪೈಕಿ ಮುಸ್ಲಿಮರು ಶೇ. 47ರಷ್ಟಿದ್ದು, ಈ ಪೈಕಿ ಬಹುತೇಕ ಮತಗಳನ್ನು ಮೈತ್ರಿ ಅಭ್ಯರ್ಥಿ ಸೆಳೆಯುವ ಸಾಧ್ಯತೆಯಿದೆ.

ಕಪ್ಪು ಪೆಟ್ಟಿಗೆ: ಚುನಾವಣಾ ಆಯೋಗಕ್ಕೆ ದೂರು
ಪ್ರಧಾನಿ ಮೋದಿ ಕರ್ನಾಟಕದ ಚಿತ್ರದುರ್ಗದಲ್ಲಿ ರ್ಯಾಲಿಗೆ ಆಗಮಿಸಿದಾಗ ಅವರ ಕಾಪ್ಟರ್‌ನಿಂದ ವಾಹನಕ್ಕೆ ಕಪ್ಪು ಪೆಟ್ಟಿಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್‌ ಹೊಸದಿಲ್ಲಿಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಆನಂದ ಶರ್ಮಾ, ಈ ರಹಸ್ಯ ಬಾಕ್ಸ್‌ನಲ್ಲಿ ಏನಿದೆ ಎಂಬುದನ್ನು ಚುನಾವಣಾ ಆಯೋಗ ನೋಡಬೇಕು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಬೆಂಗಾವ ಲಾಗಿ ಇನ್ನೂ ಮೂರು ಕಾಪ್ಟರುಗಳು ಆಗಮಿಸಿದ್ದವು. ಇವು ಲ್ಯಾಂಡ್‌ ಆದ ಅನಂತರ ಕಪ್ಪು ಟ್ರಂಕ್‌ ಒಂದನ್ನು ತೆಗೆದುಕೊಂಡು ಖಾಸಗಿ ಕಾರಿನಲ್ಲಿ ಸಾಗಿಸಲಾಗಿದೆ. ಇದು ಎಸ್‌ಪಿಜಿ ಭಾಗವಾಗಿರಲಿಲ್ಲ ಎಂದಿದ್ದಾರೆ.

ರಾಹುಲ್‌ ವಿರುದ್ಧ ದೂರು: ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಆಯೋಗಕ್ಕೆ ದೂರು ನೀಡಿದೆ. ಅವರಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಮತ್ತು ಪ್ರಚಾರದಿಂದ ನಿಷೇಧ ಹೇರಬೇಕು ಎಂದು ಒತ್ತಾಯಿಸಿದೆ.

ರಾಜನಾಥ್‌ ವಿರುದ್ಧ ಶತ್ರುಘ್ನ ಸಿನ್ಹಾ ಪತ್ನಿ
ಲಕ್ನೋ ಲೋಕಸಭಾ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್‌ ಸಿಂಗ್‌ ವಿರುದ್ಧ ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಕಣಕ್ಕೆ ಇಳಿಯಲಿದ್ದಾರೆ. ಅದಕ್ಕೆ ಪೂರಕ ವಾಗಿ ಅವರು ಮಂಗಳವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ- ಆರ್‌ಎಲ್‌ಡಿ ಮೈತ್ರಿಕೂಟದ ಸ್ಥಾನ ಹೊಂದಾ  ಣಿಕೆ ಪ್ರಕಾರ ಎಸ್‌ಪಿ ಲಕ್ನೋ ಕ್ಷೇತ್ರವನ್ನು ಪಡೆದುಕೊಂಡಿದೆ. ಅವರ ಉಮೇದುವಾರಿಕೆಗೆ ಕಾಂಗ್ರೆಸ್‌ ಕೂಡ ಬೆಂಬಲ ನೀಡಲಿದೆ. ಉತ್ತರ ಪ್ರದೇಶ ರಾಜಧಾನಿ ಕ್ಷೇತ್ರದಲ್ಲಿ 4 ಲಕ್ಷ ಕಾಯಸ್ಥ, 1.3 ಲಕ್ಷ ಸಿಂಧಿ, 3.5 ಲಕ್ಷ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಪೂನಂ ಸಿನ್ಹಾ ಸಿಂಧಿ ಸಮುದಾಯಕ್ಕೆ ಸೇರಿದ್ದರೆ, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಶತ್ರುಘ್ನ ಸಿನ್ಹಾ ಕಾಯಸ್ಥ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಪ್ರಧಾನಿ ವಿರುದ್ಧ ಸ್ಪರ್ಧೆ
ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಮುನಿಸಿಕೊಂಡಿ ರುವ ಸುಹೆಲ್‌ದೇವ್‌ ಭಾರತೀಯ ಸಮಾಜ್‌ ಪಾರ್ಟಿ (ಎಸ್‌ಬಿಎಸ್‌ಪಿ) ನಾಯಕ ಓಂ ಪ್ರಕಾಶ್‌ ರಾಜ್‌ಭರ್‌ ಅವರು ಲಕ್ನೋದಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ವಾರಾಣಸಿ  ಯಲ್ಲಿ ಸಿದ್ಧಾರ್ಥ್ ರಾಜ್‌ಭರ್‌, ಲಕ್ನೋದಿಂದ ಬಬ್ಬನ್‌ ರಾಜ್‌ಭರ್‌ ಸ್ಪರ್ಧೆ ಮಾಡಲಿದ್ದಾರೆ ಎಂದು ಓಂ ಪ್ರಕಾಶ್‌ ರಾಜ್‌ಭರ್‌ ಮಂಗಳವಾರ ಪ್ರಕಟಿಸಿದ್ದಾರೆ.

ದೀದಿ ಬಯೋಪಿಕ್‌ಗೂ ಬಂತು ಆಕ್ಷೇಪ
ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಸಿನೆಮಾ “ಪಿಎಂ ನರೇಂದ್ರ ಮೋದಿ’ ವಿವಾದಕ್ಕೀಡಾದ ಬೆನ್ನಲ್ಲೇ ಈಗ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿಯವರ ಜೀವನಾಧಾರಿತ ಚಿತ್ರವೆಂದು ಹೇಳಲಾದ “ಭಗಿನಿ: ಬೆಂಗಾಲ್‌ ಟಿಗ್ರೆಸ್‌’ ಸಿನೆಮಾ ವಿವಾದ ಕ್ಕೊಳಗಾಗಿದೆ. ಈಗಾಗಲೇ ಈ ಚಿತ್ರ ಟ್ರೈಲರ್‌ ಬಿಡುಗಡೆಯಾಗಿದ್ದು, ಇದರ ವಿರುದ್ಧ ಸಿಪಿಎಂ ನಾಯಕರು ಚುನಾವಣಾ ಆಯೋಗಕ್ಕೆ ದೂರಿತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರನ್ನು ಭೇಟಿ ಮಾಡಿದ ಸಿಪಿಎಂ ನಾಯಕರ ನಿಯೋಗವೊಂದು, ಚಿತ್ರವು ಮತದಾರರ ಮೇಲೆ ಪರಿಣಾಮ ಬೀರುವುದರಿಂದ ಚಿತ್ರದ ಬಿಡುಗಡೆ ಹಾಗೂ ಟ್ರೈಲರ್‌ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿತು. ಇದೇ ವೇಳೆ, ಎ. 11ರಂದು ಪಶ್ಚಿಮ ಬಂಗಾಲದಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನದಲ್ಲಿ ಅನೇಕ ಲೋಪಗಳನ್ನು ನಿಯೋಗ ಆಯುಕ್ತರ ಗಮನಕ್ಕೆ ತಂದಿತಲ್ಲದೆ, ತಿಪುರಾದ 464 ಮತಗಟ್ಟೆಗಳಲ್ಲಿ ಮತದಾನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಆ ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಅವಕಾಶ ನೀಡಬೇಕೆಂದು ಕೋರಿತು.

2.5 ಅಡಿ ಉದ್ದದ ಮೀಸೆಯ ಅಭ್ಯರ್ಥಿ!
ಗುಜರಾತ್‌ನ ಸಬರಕಂತಾ ಜಿಲ್ಲೆಯಲ್ಲಿ ಈ ಬಾರಿ 20 ಅಭ್ಯರ್ಥಿಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆಯುತ್ತಿರುವುದು ಮಗನ್‌ಲಾಲ್‌ ಸೋಲಂಕಿ. ಕ್ಷೇತ್ರದಲ್ಲಿ ಹೋದಲ್ಲೆಲ್ಲ ಅವರದ್ದೇ ಹವಾ. ಇದ್ದರೆ ಮಗನ್‌ಲಾಲ್‌ ಸೋಲಂಕಿ ಥರಾ ಇರಬೇಕು ಎಂದೇ ಜನರು ಮಾತನಾಡಿಕೊಳ್ಳುತ್ತಾರೆ. ಅಂದಹಾಗೆ ಇವರು ಜನಪ್ರಿಯರಾಗಿರುವುದು ಮೀಸೆಯಿಂದ! ಇವರ ಮೀಸೆ ಬರೋಬ್ಬರಿ 2.5 ಅಡಿ ಉದ್ದವಿದೆ. ಪ್ರಚಾರಕ್ಕೆ ಹೋದಲ್ಲೆಲ್ಲ ತಮ್ಮ ಮೀಸೆಯನ್ನೇ ತಿರುವಿ, ನನ್ನ ಮೀಸೆಗೇ ಓಟು ಹಾಕಿ ಎನ್ನುವ ರೀತಿ ಮತ ಕೇಳುತ್ತಾರೆ. ಇವರು ಸ್ವತಂತ್ರ ಅಭ್ಯರ್ಥಿಯಾಗಿದ್ದು, ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು. ಸೇನೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ್ದಕ್ಕೆ ಮಗನ್‌ಲಾಲ್‌ ಆರು ಪದಕಗಳನ್ನೂ ಪಡೆದಿದ್ದಾರೆ.

ನಾಯಕರ ವಿರುದ್ಧ ಆಯೋಗದ ಕ್ರಮಕ್ಕೆ ಸುಪ್ರೀಂಕೋರ್ಟ್‌ ತೃಪ್ತಿ
ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ದ್ವೇಷಪೂರಿತ ಭಾಷಣ ಮಾಡಿದ ವಿವಿಧ ಪಕ್ಷಗಳ ನಾಯಕರ ವಿರುದ್ಧ ಚುನಾವಣಾ ಆಯೋಗ ಕೈಗೊಂಡ ಕ್ರಮಕ್ಕೆ ಸುಪ್ರೀಂಕೋರ್ಟ್‌ ಸಂತೃಪ್ತಿ ವ್ಯಕ್ತಪಡಿಸಿದೆ. ಸೋಮವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಬಿಎಸ್‌ಪಿ ಮುಖ್ಯಸ್ಥೆ ಮಾಯಾ ವತಿ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಎಸ್‌ಪಿ ಮುಖಂಡ ಆಜಂ ಖಾನ್‌ ವಿರುದ್ಧ ರಡರಿಂದ ಮೂರು ದಿನಗಳವರೆಗೆ ಭಾಷಣೆ ಮಾಡದಂತೆ ನಿಷೇಧ ಹೇರಿತ್ತು. ಇದೇ ವೇಳೆ, 48 ಗಂಟೆ ಪ್ರಚಾರ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಬಿಎಸ್‌ಪಿ ನಾಯಕಿ ಮಾಯಾವತಿ ಸಲ್ಲಿಸಿದ್ದ ಅರ್ಜಿಯನ್ನು ಸಮ್ಮತಿಸಲು ಕೋರ್ಟ್‌ ನಿರಾಕರಿಸಿತು. ಅಷ್ಟೇ ಅಲ್ಲ, ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳದ ಬಗ್ಗೆ ಚುನಾವಣಾ ಆಯೋಗವನ್ನು ಸೋಮವಾರವಷ್ಟೇ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಈ ಬಗ್ಗೆ ವರದಿ ನೀಡಿದ ಆಯೋಗ, ನಿಷೇಧ ಹೇರಿರುವ ವಿವರಗಳನ್ನು ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ, ನೀವು ಕ್ರಮ ಕೈಗೊಂಡಿದ್ದೀರಿ ಎಂದರೆ ನಿಮ್ಮ ಬಳಿ ಅಧಿಕಾರ ಇದೆ, ಹಾಗೂ ಆ ಅಧಿಕಾರದ ಬಗ್ಗೆ ನಿಮಗೆ ಈಗ ಅರಿವಾಗಿದೆ ಎಂದರ್ಥ ಎಂದಿದೆ.

ಜಮ್ಮು ಮತ್ತು ಕಾಶ್ಮೀರವನ್ನು ದೇಶದಿಂದ ವಿಭಜಿಸುವ ಶಕ್ತಿಗಳಿಗೆ ಪ್ರಧಾನಿ ಮೋದಿ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಒಂದು ವೇಳೆ ಬಹುಮತ ಬಾರದೇ ಇದ್ದರೆ ಸರಕಾರ ರಚಿಸಲು ಬಿಜೆಪಿ ಪಿಡಿಪಿ. ಎಸ್‌ಸಿ, ಎನ್‌ಸಿಪಿ ನೆರವು ಕೇಳಬಾರದು.
ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

ಮತ್ತೂಮ್ಮೆ ನೋಟು ಅಮಾನ್ಯ ಬೇಕೋ ಬೇಡವೋ ಎಂದು ತೀರ್ಮಾ ನಿಸಲು ಈಗ ಸಾಧ್ಯವಿಲ್ಲ. ಸಮಯವೇ ಅದನ್ನು ನಿರ್ಧರಿಸಲಿದೆ. ಕಪ್ಪು ಹಣ ತಡೆ ಯಲು ಸರಕಾರ ಬದ್ಧವಾಗಿದೆ. ಅದಕ್ಕಾಗಿ ರಾಜಕೀಯವಾಗಿ ಬೆಲೆ ತೆರಲೂ ಸಿದ್ಧ.
ಸುರೇಶ್‌ ಪ್ರಭು, ಕೇಂದ್ರ ಸಚಿವ

ಇವಿಎಂ ಮೇಲೆ ಜಸ್ವಂತ್‌ ಸಿಂಗ್‌ ಎಂಬ ಹೆಸರು ಮತ್ತು ಕಮಲದ ಚಿಹ್ನೆ ಕಾಣುತ್ತದೆ. ಅದಕ್ಕೆ ನಿಮ್ಮ ಓಟು ಹಾಕಿ. ಈ ಬಾರಿ ಮೋದಿಜಿ ಮತಗಟ್ಟೆಗಳಲ್ಲಿ ಕೆಮರಾ ಅಳವಡಿಸಿದ್ದಾರೆ. ನೀವು ಬಿಜೆಪಿಗೆ ಓಟು ಹಾಕದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ರಮೇಶ್‌ ಕಟಾರ, ಬಿಜೆಪಿ ನಾಯಕ

ಚುನಾವಣೆ ವೇಳೆ ಕಪ್ಪು, ನೀಲಿ, ಕೆಂಪು ಯಾವುದೇ ಬಣ್ಣದ ಪಟ್ಟಿಗೆಗಳ ಮೇಲೆ ಸಾರ್ವಜನಿಕರು ಕಣ್ಣಿಡಿ. ಖಾಕಿ ಚಡ್ಡಿ ಧರಿಸುತ್ತಿದ್ದವರು ಈಗ ಶಾಪಿಂಗ್‌ ಮಾಲ್‌ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ, ಪ.ಬಂ. ಸಿಎಂ

ಕೇರಳ ಸರಕಾರ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯ ಉಲ್ಲಂ ಸಿದೆ. ಡಿವೈಎಫ್ಐ ಕಾರ್ಯಕರ್ತರನ್ನು ಪೊಲೀಸರ ಸ್ಥಾನದಲ್ಲಿ ಅಕ್ರಮವಾಗಿ ನೇಮಿಸಲಾಗಿತ್ತು. 30 ಸಾವಿರ ಅಯ್ಯಪ್ಪ ಭಕ್ತರ ವಿರುದ್ಧ ಕೇಸು ದಾಖಲಿಸಲಾಗಿದೆ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.