ಕಡಲ ತಡಿಯಲ್ಲೂ ಮಂಡ್ಯದ್ದೇ ಮಾತುಕತೆ
ಸಮಾರಂಭಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ವಿಶ್ಲೇಷಣೆ
Team Udayavani, Apr 17, 2019, 6:00 AM IST
ಮರವಂತೆಯ ನಯನ ಮನೋಹರವಾದ ಕಡಲ ಕಿನಾರೆ.
ಕುಂದಾಪುರ: ಒಂದೆಡೆ ಹೆದ್ದಾರಿಯುದ್ದಕ್ಕೂ ವಿಶಾಲವಾಗಿ ಹರಡಿಕೊಂಡಿರುವ ಕಡಲ ತಡಿ, ಮತ್ತೂಂದೆಡೆ ಪಶ್ಚಿಮ ಘಟ್ಟಗಳ ಪ್ರದೇಶಗಳೆರಡರ ಮಧ್ಯೆ ಬರುವುದೇ ಬೈಂದೂರು ವಿಧಾನಸಭಾ ಕ್ಷೇತ್ರ. ಶಿವಮೊಗ್ಗ ಲೋಕಸಭಾ ಕ್ಷೇತ್ರದೊಂದಿಗೆ ಸೇರಿರುವ ಉಡುಪಿ ಜಿಲ್ಲೆಯ ಏಕೈಕ ಕ್ಷೇತ್ರವಾದ ಬೈಂದೂರಿನಲ್ಲಿ ಇಲ್ಲಿನ ಚುನಾವಣ ಕಣಕ್ಕಿಂತ ಮಂಡ್ಯದಲ್ಲೇ ನಾಗಬಹುದು ಎನ್ನುವ ಬಿಸಿ – ಬಿಸಿ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿವೆ. ಬೈಂದೂರು ಕ್ಷೇತ್ರದಲ್ಲಿರುವ ಪ್ರತಿ ಊರುಗಳಲ್ಲೂ, ಅಂಗಡಿ, ಹೊಟೇಲ್, ಮದುವೆ ಹಾಲ್‌ಗಳು, ಸಭೆ – ಸಮಾರಂಭ, ಬಸ್ ನಿಲ್ದಾಣಗಳು, ಮೀನುಗಾರಿಕೆ ಬಂದರು ಗಳಲ್ಲಿಯೂ ಲೋಕಸಭಾ ಚುನಾವಣೆಯ ಚರ್ಚೆ ಭರ್ಜರಿಯಾಗಿ ನಡೆಯುತ್ತಿದೆ.
ಮದುವೆಯಲ್ಲಿ ಮೋದಿ ಮಾತು…
ನಾಗೂರಿನಲ್ಲಿ ಬುಧವಾರ ನಡೆದ ಮದುವೆ ಸಮಾರಂಭದಲ್ಲಿ ಮಂಡ್ಯ ರಾಜಕೀಯ ಪ್ರತಿಫಲಿಸುತ್ತಿತ್ತು. ಮಂಗಳವಾರವಷ್ಟೇ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಪರವಾಗಿ ಆಡಿದ ಮಾತುಗಳು, ಇವರು ಮಂಡ್ಯದವರೇ ಎಂದು ಬೆಂಬಲಿಸಿದ ನಡೆಯ ಕುರಿತೇ ಮದುವೆ ಹಾಲ್‌ನಲ್ಲಿ ಊಟ ಮಾಡುವಾಗ 6-7 ಮಂದಿಯ ಗುಂಪೊಂದರ ಚರ್ಚೆ ಕೇಳಿಬಂತು. ಇದರಿಂದ ಸುಮಲತಾ ಅಂಬರೀಷ್‌ಗೆ ಲಾಭವಾಗಲಿದೆ ಎನ್ನುವುದು ಅಲ್ಲಿದ್ದವರ ಪೈಕಿ ಇಬ್ಬರ ಅಭಿಪ್ರಾಯವಾದರೆ, ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಲ್ಲಿ ಇಂತಹ ಮಾತುಗಳು ಅಷ್ಟೇನು ಪ್ರಭಾವ ಬೀರುವುದಿಲ್ಲ ಎನ್ನುವುದು ಮತ್ತೂಬ್ಬರ ಮಾತು.
ಜೋಶ್ ಇಲ್ಲ
“ಎಂಥಾ ಓಟು ಮಾರ್ರೆ, ನಮ್ಮೂರಲ್ಲಿ ಇನ್ನೂ ಚುನಾವಣೆ ಜೋಶ್ ಶುರುವಾಗಿಲ್ಲ. ಮಂಡ್ಯದಲ್ಲಿ ಮಾತ್ರ ವೋಟು ನಡೆಯುತ್ತಿದೆ ಅಂತಾ ಕಾಣು ತ್ತದೆ’ ಎಂಬುದು ಗುಲ್ವಾಡಿಯ ಅಂಗಡಿಗೆ ಖರೀದಿ ಗೆಂದು ಬಂದ ನಿವಾಸಿಯೊಬ್ಬರ ಅನಿಸಿಕೆ.
ಉಡುಪಿಯಲ್ಲೇ ಇದ್ದಿದ್ದರೆ…
ಚುನಾವಣೆಗೆ ನಿಂತ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಮ್ಮ ಊರಿನವರಲ್ಲ. ಈಗಲೂ ಪ್ರಚಾರಕ್ಕೂ ಬರುತ್ತಿಲ್ಲ. ಗೆದ್ದ ಮೇಲೆ ಅಂತೂ ಈ ಕಡೆ ತಲೆ ಹಾಕುವುದಿಲ್ಲ. ನಮ್ಮ ಬೈಂದೂರು ಕ್ಷೇತ್ರವನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿಸಿ ತುಂಬಾ ಕಷ್ಟವಾಯಿತು. ಅದಕ್ಕಿಂತ ಉಡುಪಿ ಕ್ಷೇತ್ರದಲ್ಲೇ ಇದ್ದಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಕರ್ಕುಂಜೆ ಗ್ರಾಮದ ನೇರಳಕಟ್ಟೆ ಯಲ್ಲಿ ಸೇರಿದ್ದ ನಾಲ್ಕೈದು ರಿಕ್ಷಾ ಚಾಲಕರ ಅಭಿಪ್ರಾಯವಾಗಿತ್ತು.
ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರುವಿನ ಮಹಿಳೆಯೊಬ್ಬರನ್ನು ಈ ಬಾರಿ ಚುನಾವಣೆ ಹೇಗೆ ಎಂದು ಕೇಳಿದರೆ, “ಅಯ್ಯೋ ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವೋಟಿನ ಸಮಯದಲ್ಲಿ ನಮ್ಮ ಮನೆ – ಮನೆಗೆ ಬರುತ್ತಾರೆ. ನಾವು ಇಟ್ಟ ಬೇಡಿಕೆಗಳನ್ನು ಅಂಗೀಕರಿಸುತ್ತಾರೆ. ಆದರೆ ಗೆದ್ದ ಮೇಲೆ ಇಲ್ಲಿಗೆ ಬರುವುದೂ ಇಲ್ಲ. ನಾವು ಅವರಲ್ಲಿಗೆ ಹೋದರೂ ಕ್ಯಾರೇ ಅನ್ನುವುದಿಲ್ಲ. ನಮ್ಮ ಊರಿನ ಕುಡಿಯುವ ನೀರಿನ ಸಮಸ್ಯೆಗೆ ಇಷ್ಟು ವರ್ಷವಾದರೂ ಪರಿಹಾರ ಸಿಕ್ಕಿಲ್ಲ’ ಎಂದು ಅಳಲು ತೋಡಿಕೊಂಡರು.
ವಂಡ್ಸೆಯ ಹೊಟೇಲ್‌ವೊಂದ ರಲ್ಲಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲ್ಲಬಹುದಾ ಅಥವಾ ನಿಖೀಲ್ ಗೆಲ್ಲಬಹುದಾ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ನಿಖೀಲ್ ಕುಮಾರಸ್ವಾಮಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಜನರ ಬಾಯಲ್ಲೂ ವೈರಲ್ ಆಗಿದ್ದ “ನಿಖೀಲ್ ಎಲ್ಲಿದ್ದಿಯಪ್ಪ’ ಎನ್ನುವ ಡೈಲಾಗ್ ತ್ರಾಸಿಯ ಹೊಟೇಲ್ ಒಂದರಲ್ಲಿ ಊಟದ ವೇಳೆ ಕೇಳಿ ಬಂತು.
ಮತ ನಮ್ಮ ಹಕ್ಕು
“ನಮ್ಮೂರಿಗೆ 10 ವರ್ಷಗಳಿಂದ ಯಾವ ಸಂಸದ, ಶಾಸಕರೂ ಬಂದಿಲ್ಲ. ಹಿಂದೆ ಉಡುಪಿ ಕ್ಷೇತ್ರ ದಲ್ಲಿದ್ದಾಗಲಾದರೂ ಆಗೊಮ್ಮೆ- ಈಗೊಮ್ಮೆ ಬರುತ್ತಿದ್ದರು. ಈಗ ಇಲ್ಲಿಗೆ ಯಾರೂ ಬರುವುದಿಲ್ಲ. ಆದರೂ ವೋಟು ಮಾತ್ರ ಹಾಕುವುದು ನಮ್ಮ ಕರ್ತವ್ಯ. ಅದನ್ನು ಬಿಡೋಕಾಗುತ್ತಾ’ ಎನ್ನುವುದು ಇಲ್ಲಿನ ಒಬ್ಬ ವಯೋವೃದ್ಧರ ಮಾತು.
ಎಲ್ಲರೂ ಒಂದೇ…
ಸಿದ್ದಾಪುರ ಸಮೀಪದ ಆಜ್ರಿಯ ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರ ಬಳಿ ಚುನಾವಣೆ ಕುರಿತು ಮಾತಿಗಿಳಿದಾಗ, “ಅಯ್ಯೋ ಯಾರು ಬಂದರೆ ನಮ ಗೇನು? ಎಲ್ಲರೂ ಒಂದೇ. ಯಾರೂ ನಮ ಗೇನೂ ಮಾಡಿಲ್ಲ. ನಮ್ಮಲ್ಲಿ ಮೊದಲಿನಷ್ಟು ಎಲೆಕ್ಷನ್ ಬಿರುಸು ಕಾಣುತ್ತಿಲ್ಲ. ಶುರು ವಾಗಬೇಕಷ್ಟೇ’ ಎಂದರು.
“ನಮ್ಮ ಬದಿ ಇನ್ನೂ ಪ್ರಚಾರದ ಭರಾಟೆಯೇ ಶುರು ವಾಗಿಲ್ಲ. 4-5 ದಿನಗಳಲ್ಲಿ ಆರಂಭವಾಗ ಬಹುದು’ ಎನ್ನುವುದು ಅಂಪಾರಿನ ವ್ಯಾಪಾರಿಯೊಬ್ಬರ ಮಾತು. ಗಂಗೊಳ್ಳಿಯ ಮೀನುಗಾರಿಕೆ ಬಂದರಿನಲ್ಲಿ ಮೀನು ಇಳಿಸುವುದರಲ್ಲಿ ನಿರತರಾಗಿದ್ದ ಮೀನುಗಾರರಲ್ಲಿ ಚುನಾವಣೆ ಬಗ್ಗೆ ಮಾತನಾಡಿಸಿದೆವು. “ನಮ್ಮಲ್ಲಿ ತಣ್ಣಗಿದೆ. ಇನ್ನೂ ಚುನಾವಣ ಅಬ್ಬರ ಶುರುವಾಗಿಲ್ಲ. ಎ.23ಕ್ಕೆ ಮತದಾನ ಆಗಿರುವುದರಿಂದ ಕ್ಷೇತ್ರ ಬಿಸಿಯಾಗುವುದು ಸ್ವಲ್ಪ ತಡವಾಗಬಹುದು. ನಮಗೆ ಬೇರೆ ಕಡೆಯದ್ದೆಲ್ಲ ಯಾಕೆ? ನಮ್ಮ ಕ್ಷೇತ್ರದ್ದೊಂದು ನಾವು ನೋಡಿಕೊಳ್ಳುವ. ಮಾಧ್ಯಮಗಳಲ್ಲಿ ಮಂಡ್ಯ ಸಹಿತ ಇತರ ಕ್ಷೇತ್ರಗಳ ಕಚ್ಚಾಟ – ಕಿತ್ತಾಟ ನೋಡಿ ನೋಡಿ ಸಾಕಾಗಿದೆ ಎಂದರು ಕೆಲಸದ ನಡುವೆಯೇ ಒಬ್ಬರು.
ಬಗೆಹರಿಯದ ಸಮಸ್ಯೆ
ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ, ಇಲ್ಲಿ ಸಾಕಷ್ಟು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದಾದ ಪ್ರದೇಶಗಳಿದ್ದರೂ ಅವುಗಳ ಅಭಿವೃದ್ಧಿಗೆ ನಿರೀಕ್ಷಿತ ವೇಗ ಸಿಕ್ಕಿಲ್ಲ ಎನ್ನುವ ಬೇಡಿಕೆ ಪಟ್ಟಿಗಳನ್ನು ಬೈಂದೂರು, ಸಿದ್ದಾಪುರ, ಶಿರೂರು, ಕೊಲ್ಲೂರು, ಮರವಂತೆ, ತಲ್ಲೂರು, ಹೆಮ್ಮಾಡಿ ಭಾಗದ ಜನರು ಮುಂದಿಡುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.