ಮೊದಲ ಹಂತದ ನಂತರ ರಿಲ್ಯಾಕ್ಸ್
Team Udayavani, Apr 20, 2019, 3:00 AM IST
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಕಾಂಗ್ರೆಸ್‌ನ ಕೆಲವು ನಾಯಕರು ಚುನಾವಣೆ ಜಂಜಾಟದಿಂದ ವಿಶ್ರಾಂತಿ ಪಡೆದು ಕುಟುಂಬದೊಂದಿಗೆ ಕಾಲ ಕಳೆದರು. ಕೆಲವರು ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಮನೆಯಲ್ಲಿ ಕಾಲ ಕಳೆದರು, ಮತದಾನದ ನಂತರ ಕ್ಷೇತ್ರದ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಕ್ಕಳೊಂದಿಗೆ ಸಮಯ ಕಳೆದರು.
ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ, ಎಂ. ವೀರಪ್ಪ ಮೊಯಿಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ಬೆಂ.ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಜವಾಬ್ದಾರಿ ವಹಿಸಿದ್ದರಿಂದ ಉತ್ತರ ಕರ್ನಾಟಕ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ, ಇಲ್ಲಿಯವರೆಗೂ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದೆ. ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಜನರ ಮೇಲೆ ತುಂಬು ವಿಶ್ವಾಸವಿದೆ. ಕುಟುಂಬಕ್ಕಿಂತ ಕ್ಷೇತ್ರದ ಜನತೆ ಮುಖ್ಯ ಎಂದು ಹೇಳಿದ್ದಾರೆ.
ಕೃಷ್ಣ ಬೈರೇಗೌಡರ ಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ಮಾತನಾಡಿ, ಮೊದಲಿನಿಂದಲೂ ಅವರಿಗೆ ಜನರ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಕಾರ್ಯಕರ್ತರ ಜತೆ ಇದ್ದಾರೆ. ಉತ್ತಮ ಫಲಿತಾಂಶದ ಭರವಸೆ ಇದೆ ಎಂದರು.
ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, “ಇಪ್ಪತ್ತು ದಿನಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ಚುನಾವಣೆ ಮುಗಿದಿರುವುದರಿಂದ ಫಲಿತಾಂಶಕ್ಕಾಗಿ ಕಾಯಬೇಕಿದೆ. ಈ ಬಾರಿ ಮತದಾರರು ನನ್ನ ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ.
ಐಟಿ ರೇಡ್ ಮೂಲಕ ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ದರು. ಆದರೂ ವಿಚಲಿತನಾಗದೇ ಕೆಲಸ ಮಾಡಿದ್ದೇನೆ. ಇಂದು ಮಕ್ಕಳ ಜತೆ ಸಮಯ ಕಳೆದಿದ್ದು, ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದರು.
ರಿಲ್ಯಾಕ್ಸ್ ಮೂಡ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು: ಕೆಲ ವಾರಗಳಿಂದ ಸಭೆ, ಸಮಾರಂಭ, ಬಹಿರಂಗ ಸಭೆ, ಸಂವಾದ, ಸಾರ್ವಜನಿಕರ ಭೇಟಿ, ರೋಡ್ ಶೋ, ಪ್ರಚಾರ ಭಾಷಣದಲ್ಲೇ ನಿರತರಾಗಿದ್ದ ಬೆಂಗಳೂರಿನ ಮೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಶುಕ್ರವಾರ ಕೆಲಹೊತ್ತು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.
ಭರ್ಜರಿ ಪ್ರಚಾರ ಭರಾಟೆಯಿಂದ ದಣಿದಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಮೊಮ್ಮಕ್ಕಳೊಂದಿಗೆ ಕಾಲ ಕಳೆದರು. ಬಳಿಕ ಪಕ್ಷದ ಪ್ರಮುಖ ಕಾರ್ಯಕರ್ತರು, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದವರೊಂದಿಗೆ ಸಭೆ ನಡೆಸಿ ಮತದಾನ ಪ್ರಮಾಣ, ಪಕ್ಷದ ಕಾರ್ಯ ಸಾಧನೆ, ಇತರೆ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಎಲ್ಲರೊಂದಿಗೆ ಸಹ ಭೋಜನ ನಡೆಸಿ ಮತ್ತೆ ಮನೆಗೆ ಹಿಂತಿರುಗಿದ ಸದಾನಂದಗೌಡ ವಿಶ್ರಾಂತಿ ಪಡೆದರು.
ಬೆಂಗಳೂರು ಕೇಂದ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಬೆಳಗ್ಗೆ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ತಮ್ಮ ಕಚೇರಿಯಲ್ಲೇ ಕ್ಷೇತ್ರದ ಬಿಜೆಪಿ ಪ್ರಮುಖ ಕಾರ್ಯಕರ್ತರು, ನಾನಾ ವಿಭಾಗಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮತದಾನ ಪ್ರಮಾಣ, ಬಿಜೆಪಿ ಮತ ಗಳಿಗೆ ನಿರೀಕ್ಷೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಿದರು.
ಬಳಿಕ ಕಾರ್ಯಕರ್ತರೊಂದಿಗೆ ಭೋಜನ ಕೂಟ ನಡೆಸಿ ಬೀಳೊYಟ್ಟರು. ಬಳಿಕ ರಾಯಚೂರಿನತ್ತ ಪ್ರಯಾಣ ಬೆಳೆಸಿದ ಪಿ.ಸಿ.ಮೋಹನ್ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಆನಂತರ ರಾಯಚೂರಿನಲ್ಲಿ ಪಕ್ಷದ ಪರ ಪ್ರಚಾರದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬೆಳಗ್ಗೆ ಮನೆಗೆ ಆಗಮಿಸಿದ ಕಾರ್ಯಕರ್ತರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ವಿಧಾನಸಭಾ ಕ್ಷೇತ್ರವಾರು ಮತದಾನ ಪ್ರಮಾಣ, ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿರುವುದು, ಒಟ್ಟಾರೆ ಮತದಾನ ಪ್ರಮಾಣ ಇತರೆ ವಿಚಾರಗಳ ಬಗ್ಗೆ ಚರ್ಚಿಸಿದರು.
ಕ್ಷೇತ್ರದ ಮತದಾರರ ಪಟ್ಟಿಯಿಂದ ಮತದಾರರ ಹೆಸರು ನಾಪತ್ತೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಬಗ್ಗೆಯೂ ಮಾತುಕತೆ ನಡೆಸಿದರು. ಬಳಿಕ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದು ವಿಶ್ರಾಂತಿ ಪಡೆದರು ಎಂದು ಆಪ್ತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.