![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 23, 2019, 5:00 AM IST
ನೀನು ಕಾಡುವುದಿಲ್ಲ, ನಾನು ಬೇಡುವುದಿಲ್ಲ. ಆದರೂ ಅಂತರಂಗದ ಒಳ ಮನೆಯ ಬಾಗಿಲು ತೆರೆದಿಟ್ಟು ಕಾಯುವುದ ಮರೆಯುವುದಿಲ್ಲ. ನಮ್ಮಿಬ್ಬರ ಭೇಟಿ ಆಕಸ್ಮಿಕ. ಆದರೆ ಅದು ಕೊಟ್ಟ ಅನುಭೂತಿಯನ್ನು ಮಾತಿನಲ್ಲಿ ವಿವರಿಸಲಾಗದು.
ಓ ನೆನಪೇ…
ಬರೀ ಬೂದಿಯಷ್ಟೇ ಉಳಿಯುತ್ತದೇನೋ ಅನ್ನುವಷ್ಟು ರಣರಣ ಬಿಸಿಲಿನಲ್ಲಿ , ನಿರ್ಜನ ಕ್ಯಾನ್ವಾಸಿನ ಮೇಲೆ ನಿಶ್ಶಬ್ದದ ಬಣ್ಣದಲ್ಲಿ ಅದ್ದಿ ಬರೆದ, ನಿರ್ಮಾನುಷ ಚಿತ್ರದಂತೆ ಕಾಣುತ್ತಿದ್ದ ಹೆಸರೇ ಗೊತ್ತಿಲ್ಲದ ಆ ಊರಿನಲ್ಲಿ , ತುಸು ನಿಟ್ಟುಸಿರು ಬಿಡುವಂತೆ ಮಾಡಿದ್ದು, ಹಸಿರು ಮೈತುಂಬಿಕೊಂಡು ನೆರಳಿನ ಶಾಮಿಯಾನ ಹಾಕಿಕೊಂಡ ಆ ಒಬ್ಬಂಟಿ ಹೊಂಗೆ ಮರ. ಅದರ ಟಿಸಿಲೊಂದನ್ನು ಆಸರೆಯಾಗಿ ಹಿಡಿದುಕೊಂಡು, ಎತ್ತ ಹೋಗಲೂ ದಿಕ್ಕು ತೋಚದಂತೆ ನಿಂತ ಘಳಿಗೆಯಲ್ಲಿ, ಧೂಳೆಬ್ಬಿಸುತ್ತಾ ಬಂತು ಲಟಾರಿ ಬಸ್ಸು. ಸದ್ಯ, ಇಲ್ಲಿಂದ ಪಾರಾದೆ ಅಂದುಕೊಳ್ಳುತಿರುವಾಗಲೇ , ಶುಭ್ರ ಬಿಳಿ ಪಲ್ಲುವನ್ನು ತಲೆ- ಮುಖಕ್ಕೆ ಸುತ್ತಿಕೊಂಡು, ಬರೀ ಕಣ್ಣಷ್ಟೇ ಕಾಣುವ ಚಂದದ ಭಯೋತ್ಪಾದಕಿಯಂತೆ ನೀನು ಇಳಿದು ಬಂದೆ.
ಬಿಸಿಲಿನ ಝಳದಲ್ಲಿ ತಣ್ಣನೆಯ ಹಿಮರಾಶಿಯೊಂದು ನನ್ನ ಪಕ್ಕವೇ ನಡೆದುಹೋದಂತಾಯ್ತು. ಕಣ್ಣು ಕಣ್ಣುಗಳ ಅರೆಕ್ಷಣದ ಭೇಟಿಯಷ್ಟೇ. ಅದು ಅಲ್ಲಿಗೆ ಮುಗಿದುಹೋಗಬೇಕಿತ್ತು . ಉಹುಃ… ಆ ಬಿರುಬಿಸಿಲ ಮಧ್ಯಾಹ್ನ ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇದೆ. ಅಗಾಧ ಕಡಲ ನಡುವೆ ಉಳಿದ ಪುಣಾಣಿ ದ್ವೀಪದಂತೆ ನೀನು ಎಷ್ಟೊಂದು ಚಂದದ ನೆನಪು. ಜೀವಮಾನದಲ್ಲಿ ಮತ್ತೂಮ್ಮೆ ನಿನ್ನನ್ನು ಭೇಟಿಯಾಗಲಾರನೆಂದು ಗೊತ್ತು. ಆದರೂ ಮನಸು ಮಾಯಾವಿ. ಕೈಗೆ ಸಿಗದ ಸಾವಿರಾರು ಮೈಲಿಯಾಚೆ ಇರುವ ನಕ್ಷತ್ರಕ್ಕೇ ಕೈ ಚಾಚುತ್ತದೆ. ಪುಣಾಣಿ ಕೊಳದಲ್ಲಿ ಅದು ಸೆರೆಯಾಗಿದ್ದಕ್ಕೆ ಬೆರಗಾಗಿ. ತಣ್ಣನೆಯ ನೀರನ್ನು ಬೆರಳ ತುದಿಯಿಂದ ಸ್ಪರ್ಶಿಸಿ, ಅಲೆಯ ಉಂಗುರವೆಬ್ಬಿಸಿ ಈಜುವ ನಕ್ಷತ್ರ ನೋಡಿ ಖುಷಿ ಪಡುತ್ತದೆ. ಬದುಕು ಇಂಥವೇ ಸಣ್ಣ ಸಣ್ಣ ಸಂಭ್ರಮಗಳ ಮೊತ್ತವೇ ಅಲ್ಲವಾ?
ನೀನು ಕಾಡುವುದಿಲ್ಲ, ನಾನು ಬೇಡುವುದಿಲ್ಲ. ಆದರೂ ಅಂತರಂಗದ ಒಳ ಮನೆಯ ಬಾಗಿಲು ತೆರೆದಿಟ್ಟು ಕಾಯುವುದ ಮರೆಯುವುದಿಲ್ಲ. ಉರಿ ಬಿಸಿಲ ಉಂಡ ನೆಲಕ್ಕೆ ಯಾವತ್ತಿದ್ದರೂ ಮಳೆ ಬಿದ್ದೇ ಬೀಳುತ್ತದೆ. ಆ ಘಮ ನಿಜಕ್ಕೂ ದೈವಿಕ.
ನಮ್ಮಿಬ್ಬರ ಭೇಟಿ ಆಕಸ್ಮಿಕ. ಆದರೆ ಅದು ಕೊಟ್ಟ ಅನುಭೂತಿಯನ್ನು ಮಾತಿನಲ್ಲಿ ವಿವರಿಸಲಾಗದು.
ಬೇಸಿಗೆಯ ಮಧ್ಯಾಹ್ನದ ಉರಿಬಿಸಿಲನ್ನು ಎಲ್ಲರೂ ಶಪಿಸುತ್ತಾರೆ. ಆದರೆ ನನ್ನೊಳಗೆ ಆ ಬಿಸಿಲ ಮೇಲೆ ಮಗಿಯದ ಪ್ರೀತಿಯಿದೆ. ಹೊಂಗೆಯ ನೆರಳಲ್ಲಿ ಒಲವ ಅನುಭೂತಿಯಿದೆ. ಧೂಳೆಬ್ಬಿಸುತ್ತಾ ಸಾಗುವ ಬಸ್ಸು ಮನದಲ್ಲಿ ಚಂದದ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಬಿಳಿಯ ಪಲ್ಲುವಿನ ಮೇಲೆ ತೀರದ ಅನುರಾಗವಿದೆ. ನಿಶ್ಶಬ್ದವೇ ಮೈವೆತ್ತ ಅನಾಮಿಕ ಊರುಗಳ ನಿರ್ಜನ ಮಧ್ಯಾಹ್ನಗಳು ವಿನಾಕಾರಣ ಇಷ್ಟವಾಗುತ್ತವೆ.
ಯಾವತ್ತಾದರೂ ಮತ್ತೆ ನೀ ಎದುರಾಗಿ ಬರುತ್ತೀಯೆಂಬ ದೂರದ ಆಸೆಯೊಂದು ಸದಾ ನನ್ನನ್ನು ಕೈ ಹಿಡಿದು ನಡೆಸುತ್ತಿದೆ. ಇಂಥ ಚಂದದ ಆಸೆಯ ಕೈ ಹಿಡಿದು ನಡೆಯುವುದರಲ್ಲಿ ಅದಮ್ಯ ಖುಷಿಯಿದೆ. ಮನದೊಳಗೆ ನಿನಗೊಂದು ಚಂದದ ಹೆಸರಿಟ್ಟುಕೊಂಡಿದ್ದೇನೆ… ಇನಿ ….
ಒಬ್ಬಂಟಿ ಅನ್ನಿಸಿದಾಗೆಲ್ಲಾ ಮನದೊಳಗೆ ಪಿಸುಗುಟ್ಟುಕೊಳ್ಳುತ್ತೇನೆ. ನೀ ಎದುರಿಗೆ ಬಂದಂತಾಗುತ್ತದೆ. ಮಾತಿಲ್ಲ, ಕತೆಯಿಲ್ಲ ಬರೀ ರೋಮಾಂಚನವೆಂದರೆ ಇದೇ ಏನೇ ಹುಡುಗಿ?
ನನ್ನ ಬದುಕಿನ ಒಂದು ಪುಟದಲ್ಲಿ ಮೂಡಿದ , ನಿನ್ನ ಹೆಜ್ಜೆಯ ಗುರುತಿನ ಗೆಜ್ಜೆಯ ಸದ್ದು ಸದಾ ನನ್ನ ಮನಸ್ಸನ್ನು ತುಂಬುತ್ತಲೇ ಇದೆ. ಯಾವ ಚೌಕಟ್ಟಿಗೂ ಸಿಕ್ಕದ ಚಿತ್ರವಾಗಿಹೋದೆ ನೀನು. ನಾನು ಕನ್ನಡಿ ನೀನೇ ಬಿಂಬ. ಕನ್ನಡಿ ನಿನ್ನದಾಗಲಿಲ್ಲ, ಬಿಂಬ ನನ್ನದಾಗಿ ಉಳಿಯಲಿಲ್ಲ.
ನೆನಪುಗಳಲ್ಲೇ ಭೇಟಿಯಾಗುತ್ತಿರೋಣ. ಕನಸುಗಳಿಗೆ ಹೊಸ ಬಣ್ಣ ತುಂಬೋಣ. ಬದುಕು ರಂಗಾಗಲಿ.
ಜೀವ ಮುಳ್ಳೂರು
You seem to have an Ad Blocker on.
To continue reading, please turn it off or whitelist Udayavani.