ಲೈಫ್ ಈಸ್ ಬ್ಯೂಟಿಫುಲ್
ಕ್ಷಣಕ್ಷಣದ ಸವಾಲು ಗೆಲ್ಲುವ ಸಬಿತಾ
Team Udayavani, Apr 23, 2019, 6:00 AM IST
ಅಯ್ಯೋ, ಬಿಸಿಲು ಎನ್ನುವ ಈ ಹೊತ್ತಿನಲ್ಲಿ, ಹೃದಯವನ್ನು ತಂಪುಮಾಡುವ ಸುದ್ದಿಗಳು ಎಲ್ಲೆಲ್ಲಿಂದಲೋ ಹರಿದುಬರುತ್ತವೆ. ತೀರಾ ಇತ್ತೀಚೆಗೆ ತಮ್ಮದೇ ವಿಶಿಷ್ಟ ಹೆಜ್ಜೆಯಿಂದ, ಅಪರೂಪದ ಸಾಧನೆಯಿಂದ ಈ ನಾಡನ್ನು ತಂಪೆರೆದ, ಮೂವರು ಸಾಧಕರು ಇಲ್ಲಿ ನಿಮ್ಮ ಮುಂದಿದ್ದಾರೆ. ನಮ್ಮೊಳಗಿನ ಕರ್ತವ್ಯಪ್ರಜ್ಞೆಯನ್ನು ಬಡಿದೆಬ್ಬಿಸುವ ಕುಸುಮಾ, ಗುರಿಯನ್ನೇ ಓವರ್‌ಟೇಕ್ ಮಾಡಿದ ಗಿರೀಶನ ಛಲ, ಬದುಕನ್ನು ಟಾಪ್‌ಗೇರ್‌ನಲ್ಲಿ ಓಡಿಸೋದು ಹೇಗೆಂದು ತೋರಿಸಿಕೊಟ್ಟ ಕೊಟ್ಟೂರಿನ ಹುಡುಗಿ ಕುಸುಮಾ… ನಾಡಿಗೆ ಸ್ಫೂರ್ತಿ ತುಂಬಿದ ಇವರೆಲ್ಲರ “ಜೋಶ್’ ಅನ್ನು ಹಿಡಿದಿಡುವ ಪ್ರಯತ್ನವನ್ನು ಈ ಪುಟ ಮಾಡಿದೆ…
ಕೈ ಮೇಲಿನ ರೇಖೆಗಳು ಮನುಷ್ಯನ ಅದೃಷ್ಟವನ್ನು ಹೇಳುತ್ತವೆ ಅಂತಾದರೆ, ಕೈಗಳೇ ಇಲ್ಲದವರಿಗೆ ಭವಿಷ್ಯವೇ ಇಲ್ಲವಾ?… ಆ ಪ್ರಶ್ನೆಗೆ ಉತ್ತರವಾಗಿ ನಮ್ಮೆದುರಿಗೆ ಇದ್ದಾರೆ ಸಬಿತಾ ಮೋನಿಸ್. ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸ್ಟೂಡೆಂಟ್ ವೆಲ್‌ಫೇರ್ ಆಫೀಸರ್ ಆಗಿರುವ ಇವರು, ಮತ ಚಲಾಯಿಸುವಾಗ, ಕಾಲ್ಬೆರಳಿಗೆ ಶಾಯಿ ಹಚ್ಚಿಸಿಕೊಂಡು, ಎಲ್ಲರಿಗೂ ಮಾದರಿಯಾದರು. ಕಾಲಿನಿಂದಲೇ ಚಕಚಕನೆ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಎರಡೂ ಕೈಗಳಿಲ್ಲದಿದ್ದರೂ, ಸ್ವತಂತ್ರವಾಗಿ ಜೀವನ ರೂಪಿಸಿಕೊಂಡಿರುವ ಈ ಯುವತಿಯ ಬದುಕಿನ ಯಶೋಗಾಥೆ ಈಗ ನಿಮ್ಮೆದುರಿದೆ…
ಆ ಫೋಟೋ ಜಿಗಿಯದ ವಾಟ್ಸಾಪ್ ಗ್ರೂಪುಗಳೇ ಇಲ್ಲ. ಅಷ್ಟರ ಮಟ್ಟಿಗೆ ಅಲೆ ಸೃಷ್ಟಿಸಿದ ಆ ಚಿತ್ರ ನಿಮ್ಮ ಸ್ಮಾರ್ಟ್‌ಫೋನೊಳಗೂ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಯಾರ್ಯಾರು ಮತ ಚಲಾಯಿಸದೇ, ಟೂರ್‌ಗೆ ಹೋಗಿದ್ರೋ, ಮನೆಯಲ್ಲಿಯೇ ಕುಳಿತು ಟಿವಿ ನೋಡ್ತಿದ್ರೋ, ಇನ್ನೆಲ್ಲೋ ಸಿನಿಮಾ- ಮಾಲ್ ಅಂತ ಸುತ್ತಾಡ್ತಿದ್ರೋ, ಅವರೆಲ್ಲರಿಗೂ ಆ ಫೋಟೋ ಅರೆಕ್ಷಣ ಬೆವರಿಳಿಸಿಬಿಟ್ಟಿದೆ. “ಛೇ ನಾವೆಂಥ ಕೆಲ್ಸ ಮಾಡಿºಟ್ವಿ’ ಅನ್ನೋ ಪಶ್ಚಾತ್ತಾಪದ ಒಂದು ಗೆರೆ ಅವರ ಮೊಗದಲ್ಲಿ ಹಾದು ಹೋಗಿರಲೂಬಹುದು…
ಬೆಳ್ತಂಗಡಿ ಶಾಲೆಯ ಒಂದು ಮತಕಟ್ಟೆ. ಎರಡೂ ಕೈಗಳಿಲ್ಲದ ಯುವತಿಯೊಬ್ಬಳು, ಮತ ಚಲಾಯಿಸಲು ಬಂದಾಗ, ಆಕೆ ಶಾಯಿ ಹಚ್ಚಿಸಿಕೊಳ್ಳಲು ಮುಂದೆ ಮಾಡಿದ್ದು, ತನ್ನ ಬಲಗಾಲನ್ನು. ಕೇವಲ ಈ ಬಾರಿಯ ಚುನಾವಣೆ ಅಷ್ಟೇ ಅಲ್ಲ, ಯಾವತ್ತೂ ಅವರು ವೋಟಿಂಗ್ ತಪ್ಪಿಸಿದವರೇ ಅಲ್ಲ. ಅವರು ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಸಬಿತಾ ಮೋನಿಸ್…. ಮತಗಟ್ಟೆಯ ಅಧಿಕಾರಿಗಳಿಂದ ಕಾ- ಪ್ರಿಯಾಂಕರಳಿಗೆ ಇಂಕು ಹಾಕಿಸಿಕೊಂಡು, ಎಲ್ಲರಂತೆ ಫೋಟೊಗೆ ಪೋಸ್ ನೀಡಿದ್ದಾರೆ. ಮತದಾನದ ವಿಷಯದಲ್ಲಷ್ಟೇ ಅಲ್ಲ, ಸಬಿತಾ ಅವರು ಬದುಕುತ್ತಿರುವ ರೀತಿಯೇ ಈ ಸಮಾಜಕ್ಕೆ ಪ್ರೇರಣೆ.
ಸಬಿತಾ ಬದುಕೇ ಒಂದು ಸಾಹಸ
ಕೈ ಬೆರಳಿಗೆ ಒಂದು ಚಿಕ್ಕ ಗಾಯವಾದರೇ ಅದೆಷ್ಟೋ ಕೆಲಸಗಳು ಕುಂಟುತ್ತವೆ. ಇನ್ನು ಕೈ ಮುರಿದುಕೊಂಡುಬಿಟ್ಟರಂತೂ ಒಂದೆರಡು ತಿಂಗಳು ಏನೂ ಮಾಡಲಾಗದು. ಅಂದಮೇಲೆ, ಎರಡೂ ಕೈಗಳಿಲ್ಲದ ಸಬಿತಾರಿಗೆ ಎದುರಾಗುವ ಸವಾಲುಗಳ ಬಗ್ಗೆ ಯೋಚಿಸಿ. ಮೈ ಜುಮ್ಮೆನ್ನುವುದಿಲ್ಲವೆ? ಆದರೂ, ಅದನ್ನೊಂದು ವೈಕಲ್ಯ ಅಂತ ಅವರು ಪರಿಗಣಿಸಿಯೇ ಇಲ್ಲ. “ಅಯ್ಯೋ ಅದರಲ್ಲೇನಿದೆ? ನಾನೂ ಎಲ್ಲರಂತೆಯೇ ಇದ್ದೇನಲ್ಲ?’ ಅಂತ ನಗುತ್ತಾರೆ.
ಸಣ್ಣ ವಯಸ್ಸಿನಿಂದಲೇ ಕಾಲಿನಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿರುವ ಸಬಿತಾ, ದಿನನಿತ್ಯದ ಬಹುತೇಕ ಕೆಲಸಗಳನ್ನು ಯಾರ ಸಹಾಯವಿಲ್ಲದೆ ಮಾಡಬಲ್ಲರು. ಬರೆಯುವುದು, ಮೊಬೈಲ್ ಬಳಸುವುದು, ಸ್ಪೂನ್ ಹಿಡಿದು ಊಟ ಮಾಡುವುದು ಹೀಗೆ… ಇನ್ನೂ ಕೆಲವು ಕೆಲಸಗಳಿಗೆ ಅಮ್ಮನ, ಕಾಲೇಜಿನಲ್ಲಿ ಸಹೋದ್ಯೋಗಿಗಳ ನೆರವು ಪಡೆಯುತ್ತಾರೆ.
ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ “ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ’ಯಾಗಿರುವ ಸಬಿತಾ, ಸಾವಿರಾರು ಮಕ್ಕಳ ಯೋಗಕ್ಷೇಮ ವಿಚಾರಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳಿಂದ ತಪ್ಪು ನಡೆದಾಗ, ಬುದ್ಧಿ ಹೇಳಿ ಸರಿದಾರಿಗೆ ತರುತ್ತಾರೆ. ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೊರಗೆ ಹೋಗುವಾಗ ಅವರ ಬಳಿಯಿಂದ ಪರ್ಮಿಶನ್ ಪಡೆಯಬೇಕು. ಆಗ ಅವರ ರೆಕಾರ್ಡ್‌ಗೆ ಕಾಲಿನಲ್ಲಿಯೇ ಚಕಚಕನೆ ಸಹಿ ಹಾಕಿ ಕೊಡುತ್ತಾರೆ. ತಮ್ಮ ಬದುಕಿನ ಬಗ್ಗೆ ಎಂದಿಗೂ ಕೊರಗದ ಸಬಿತಾರ ಮುಖದಲ್ಲಿ ಯಾವತ್ತಿಗೂ ಮಂದಹಾಸ ಮನೆ ಮಾಡಿರುತ್ತದೆ. ಮೊದಲು ಬೆಳ್ತಂಗಡಿಯಿಂದ ಮೂಡಬಿದಿರೆಗೆ ಖಾಸಗಿ ಬಸ್‌ನಲ್ಲಿ ಓಡಾಡುತ್ತಿದ್ದ ಅವರು ಈಗ ಕಾಲೇಜು ಬಸ್‌ನಲ್ಲಿ ಬಂದು, ಹೋಗುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯನ ದಿನಚರಿಗೂ, ಅವರ ದಿನಚರಿಗೂ ಯಾವ ವ್ಯತ್ಯಾಸವೂ ಕಾಣಸಿಗದು. ಅಷ್ಟರಮಟ್ಟಿಗೆ ಅವರು ನ್ಯೂನತೆಗಳನ್ನು ಮೀರಿ, ಫುಲ್ ಆ್ಯಕ್ಟಿವ್.
ಡಿಗ್ರಿ ಮೇಲೆ ಡಿಗ್ರಿ
ಸಬಿತಾರ ಓದಿನ ದಿನವೂ ಅಷ್ಟೇ ಚಾಲೆಂಜಿಂಗ್. ಗರ್ಡಾಡಿ ಎಂಬ ಪುಟ್ಟ ಊರಿನ ಸರ್ಕಾರಿ ಶಾಲೆಗೆ ಸೇರಿದ ಅವರು, ಕಾಲ್ಬೆರಳುಗಳ ನಡುವೆ ಬಳಪ ಹಿಡಿದು ಬರೆಯಲು ಕಲಿತರು. ಸ್ವಲ್ಪ ಕಷ್ಟ ಅನ್ನಿಸಿದರೂ, ಹತಾಶರಾಗಲಿಲ್ಲ. ಮುಂದೆ ಪಡಂಗಡಿಯ ಸರ್ಕಾರಿ ಪ್ರೌಢಶಾಲೆ, ವೇಣೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿ, ಆಳ್ವಾಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಸಾಕಪ್ಪಾ ಒಂದು ಡಿಗ್ರಿ ಅಂತ ಸುಮ್ಮನಾಗದೆ, ಎಂಎಸ್‌ಡಬ್ಲ್ಯು ಓದಿದರು. ಆಮೇಲೆ ತಾನು ಓದಿದ ಕಾಲೇಜಿನಲ್ಲಿಯೇ ಕೆಲಸಕ್ಕೂ ಸೇರಿಕೊಂಡರು. ಇಷ್ಟಾದರೂ ಅವರ ಓದುವ ಆಸಕ್ತಿ ಕಡಿಮೆಯಾಗಲಿಲ್ಲ. ದೂರಶಿಕ್ಷಣದ ಮೂಲಕ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ., ಮಾನವ ಸಂಪನ್ಮೂಲ ವಿಷಯದಲ್ಲಿ ಡಿಪ್ಲೋಮಾ ಪದವಿ ಪಡೆದರು.
ವೈಕಲ್ಯ ಮನಸ್ಸಿಗಲ್ಲ…
“ಪರೀಕ್ಷೆ ಬರೆಯುವಾಗ ಕೆಲವೊಮ್ಮೆ ಬೇರೆಯವರಿಗಿಂತ ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತಿದ್ದೆ ಅನ್ನೋದನ್ನು ಬಿಟ್ಟರೆ, ಬೇರೆ ಎಲ್ಲಾ ವಿಷಯದಲ್ಲೂ ನಾನು ಸಾಮಾನ್ಯ ವಿದ್ಯಾರ್ಥಿಯಂತೆಯೇ ಇದ್ದೆ’ ಅಂತ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು. “ವೈಕಲ್ಯ ನನ್ನ ದೇಹಕ್ಕೇ ಹೊರತು, ಮನಸ್ಸಿಗಲ್ಲ. ಕೈಗಳಿಲ್ಲ ಅನ್ನೋ ಕೊರತೆ ಯಾವತ್ತೂ ನನ್ನನ್ನು ಬಾಧಿಸಲು ಬಿಟ್ಟೇ ಇಲ್ಲ. ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಸಂಸ್ಥೆಯ ಅಧ್ಯಕ್ಷರ ಸತತ ಪ್ರೋತ್ಸಾಹದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯ್ತು’ ಅಂತಾರೆ ಸಬಿತಾ.
ನನ್ನ ಫೋಟೊ ಬಹಳ ಕಡೆ ಶೇರ್ ಆಗ್ತಿದೆ. ನಾನೇನೋ ದೊಡ್ಡ ಸಾಧನೆ ಮಾಡಿದ್ದೇನೆ ಅಂತ ಜನ ಅಂದುಕೊಳ್ತಿದ್ದಾರೆ. ಆದರೆ, ನಂಗೇನೋ ಹಾಗೆ ಅನ್ನಿಸಲಿಲ್ಲ. ಯಾಕಂದ್ರೆ, ಮತ ಚಲಾಯಿಸೋದು ನಮ್ಮ ಆದ್ಯ ಕರ್ತವ್ಯ. ನಾನು ಅದನ್ನು ನಿರ್ವಹಿಸಿದ್ದೇನೆ ಅಷ್ಟೆ. ರಾಜಕಾರಣಿಗಳು ಕರ್ತವ್ಯ ಮಾಡದಿದ್ದಾಗ ಅವರನ್ನು ದೂರುತ್ತೇವೆ. ಹಾಗಿದ್ದಮೇಲೆ ಪ್ರಜೆಗಳೂ ಕರ್ತವ್ಯಭ್ರಷ್ಟರಾಗಬಾರದು ತಾನೇ?
-ಸಬಿತಾ ಮೋನಿಸ್
-ಪ್ರಿಯಾಂಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.