ಮತ್ಸ್ಯತೀರ್ಥ ಹೊಳೆ: ನೀರಿನ ಹರಿವು ಇಳಿಕೆ
ಬಿಸಿಯೇರುತ್ತಿದೆ ನೀರು; ದೇವರ ಮೀನುಗಳಿಗೆ ಆಹಾರ ನಿಷೇಧ
Team Udayavani, Apr 24, 2019, 6:00 AM IST
ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಹರಿವು ಇಳಿಮುಖಗೊಂಡ ಹಿನ್ನೆಲೆಯಲ್ಲಿ ಈಗ ದೇವರ (ಮಹಷೀರ್) ಮೀನುಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ದೇಗುಲದ ಪಕ್ಕದ ಮತ್ಸ್ಯತೀರ್ಥ ಹೊಳೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವರ ಮೀನುಗಳಿವೆ. ಪ್ರತಿ ವರ್ಷ ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮೀನುಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಈ ಬಾರಿಯೂ ಮೀನುಗಳಿಗೆ ಸಾಕಾಷ್ಟು ನೀರಿನ ಲಭ್ಯತೆ ಇಲ್ಲದೆ ಆತಂಕ ಎದುರಾಗಿದೆ.
ಚರ್ಮ ರೋಗ ವಾಸಿ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಅತೀ ಪುರಾತನವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾಕಾಷ್ಟು ಐತಿಹ್ಯಗಳಿವೆ. ಇಲ್ಲಿ ಪಾಂಡವರ ಕಾಲದ ಕೀರತಾರ್ಜುನ ಯುದ್ಧ ನಡೆದದ್ದು ಇಲ್ಲೆ. ಅಲ್ಲದೆ ವಿಷ್ಣುವು ಮತ್ಸ್ಯ ರೂಪ ತಾಳಿದ ಸ್ಥಳ ಈ ಮತ್ಸ್ಯ ತಟಾಕವಾಗಿದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಈ ಕಾರಣದಿಂದ ಇಲ್ಲಿ ಸಾವಿರಾರು ದೇವರ ಮೀನುಗಳಿವೆ. ಚರ್ಮ ರೋಗಕ್ಕೆ ಸಂಬಂಧಪಟ್ಟ ರೋಗಗಳಿಗೆ ಇಲ್ಲಿ ಮೀನುಗಳಿಗೆ ಅಕ್ಕಿ ಹಾಕುತ್ತೇವೆ ಎಂದು ಹೇಳಿಕೊಂಡು ಅಕ್ಕಿ ತೆಗೆದಿಟ್ಟು ಹಾಕಿದರೆ ಚರ್ಮ ರೋಗ ವಾಸಿಯಾಗುತ್ತದೆ ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಮೀನುಗಳಿಗೆ ಆಹಾರವಾಗಿ ಸಾಕಷ್ಟು ಅಕ್ಕಿಗಳು ಬರುತ್ತವೆ. ಜಾತ್ರೆಯ ಸಮಯದಲ್ಲಿ ಮೀನುಗಳಿಗೆ ಹರಕೆ ಅಕ್ಕಿಗಳು ಹೆಚ್ಚಿಗೆ ಬರುತ್ತವೆ.
ಆಹಾರ ನಿಷೇಧದ ನಾಮಫಲಕ
ಮತ್ಸ್ಯ ತಟಾಕದ ಪಕ್ಕದ ಹೊಳೆಯಲ್ಲಿ ನೀರು ಕಡಿಮೆ ಇರುವ ಕಾರಣ ದೇವರ ಮತ್ಸ್ಯಗಳಿಗೆ ಆಹಾರ ಹಾಕಬಾರದು. ಆಹಾರವನ್ನು ಡ್ರಮ್‌ನಲ್ಲಿ ಹಾಕಿ ಸಹಕರಿಸಿ ಎಂದು ಮೀನಿನ ಗುಂಡಿ ಬಳಿ ನಾಮ ಫಲಕ ಅಳವಡಿಸಲಾಗಿದೆ. ಭಕ್ತಾದಿಗಳು ಮೀನುಗಳಿಗೆ ಆಹಾರ ಹಾಕುವಂತಿಲ್ಲ.
ಪೈಪ್ ಮೂಲಕ ಹೊಳಗೆ ನೀರು
ಸುಮಾರು ಎರಡೂವರೆ ಕಿ.ಮೀ. ದೂರದ ಗುಡ್ಡದಿಂದ ಪೈಪ್ ಮೂಲಕ ನೀರು ತಂದು ಹೊಳೆಗೆ ಬಿಡುವ ಯೋಜನೆ ಕೆಲ ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಳಿಗೆ ಸ್ವಲ್ಪ ಮಟ್ಟಿನ ನೀರಿನ ಕೊರತೆ ನೀಗುತ್ತದೆ. ಪೈಪ್‌ನಲ್ಲಿ ದೂರದಿಂದ ನೀರು ಬಂದು ಬೀಳುತ್ತಿದ್ದರೂ, ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನೀರು ಬಿಸಿಯಾಗುತ್ತಿದೆ.
ಚಿಮ್ಮುವ ನೀರು
ದೂರದ ಗುಡ್ಡದಿಂದ ಬರುವ ನೀರನ್ನು ಪೈಪ್‌ಗ್ಳ ಮೂಲಕ ತೂತು ಮಾಡಿ ನೀರು ಚಿಮ್ಮಿಸಲಾಗುತ್ತಿದೆ. ಈ ಚಿಮ್ಮುವ ನೀರಿನ ಬಳಿ ಬಂದು ಮೀನುಗಳು ಅತ್ತಿತ್ತ ಓಡಾಡುವುದನ್ನು ಗಮನಿಸಬಹುದಾಗಿದೆ.
ಆಹಾರ ನಿಷೇಧಿಸಲಾಗಿದೆ
ಮತ್ಸ್ಯ ತೀರ್ಥ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಮತ್ಸ್ಯ ತಟಾದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಭಕ್ತಾದಿಗಳು ತರುವ ಆಹಾರವನ್ನು ಅಲ್ಲಿರುವ ಡ್ರಮ್‌ಗೆ ಹಾಕಿ ತೆರಳಬಹುದು. ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಬಳಿಕ ದೇಗುಲದ ವತಿಯಿಂದ ಮೀನುಗಳಿಗೆ ಆಹಾರ ಹಾಕಲಾಗುವುದು. ಇದು ದೇವರ ಮೀನುಗಳಿಗೆ ಸಲ್ಲುತ್ತದೆ.
– ಆನಂದ ಕಲ್ಲಗದ್ದೆ ದೇಗುಲದ ವ್ಯವಸ್ಥಾಪಕರು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.