ಬೆಗುಸರೈನಲ್ಲಿ ಕಠಿಣ ಹೋರಾಟ
Team Udayavani, Apr 24, 2019, 6:00 AM IST
ಬಿಹಾರದ ಬೆಗುಸರೈ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆ ಹಿಂದಿನಂತೆ ಇಲ್ಲ. ಅಭ್ಯರ್ಥಿಗಳು ಬದಲಾಗಿದ್ದಾರೆ. ನವಾಡಾ ಕ್ಷೇತ್ರದ ಸಂಸದರಾಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಸಕ್ತ ಸಾಲಿನಲ್ಲಿ ಈ ಕ್ಷೇತ್ರದಿಂದ ಕಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಇಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಡುವೆ ಸ್ಥಾನ ಹಂಚಿಕೆಯಲ್ಲಿನ ಲೆಕ್ಕಾಚಾರದಿಂದಾಗಿ ಅವರು, ದರ್ಭಾಂಗಾಕ್ಕೆ ಬಂದಿದ್ದಾರೆ.
ಈ ಕ್ಷೇತ್ರದಲ್ಲಿನ ಮತ್ತೂಬ್ಬ ಪ್ರಬಲ ಹುರಿಯಾಳು ಎಂದರೆ ನವದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸಿಪಿಐ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡುವ ಇರಾದೆ ಹೊಂದಿದ್ದಾರೆ. ಕಾಂಗ್ರೆಸ್-ಆರ್‌ಜೆಡಿ-ಸಿಪಿಐ ಸೇರಿದ ಮೈತ್ರಿಕೂಟ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದು ವಿಫಲವಾಗಿ ಈಗ ಅಲ್ಲಿ ಆರ್‌ಜೆಡಿಯೂ ಸ್ಪರ್ಧೆ ಮಾಡುವಂತಾಗಿದೆ. ಕಳೆದ ಬಾರಿ ದ್ವಿತೀಯ ಸ್ಥಾನಿಯಾಗಿದ್ದ ತನ್ವೀರ್ ಹಸನ್ 2019ರ ಚುನಾವಣೆಯಲ್ಲಿ ಸಾಮರ್ಥ್ಯ ಒರೆಗೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಬೆಗುಸರೈ ಕನ್ಹ ಯ್ನಾ ಕುಮಾರ್ ಅವರ ತವರು ಜಿಲ್ಲೆ. ಈ ಪ್ರಾಂತ್ಯದಲ್ಲಿ ಕನ್ಹಯ್ನಾ ಬೆಂಬಲಿಗರ ಸಂಖ್ಯೆಯೂ ಅಧಿಕವಿದೆ. ಗಿರಿರಾಜ್‌ರ ಪ್ರವೇಶದ ನಂತರ ಈ ಯುದ್ಧ ಎಡಪಂಥ ವರ್ಸಸ್ ಬಲಪಂಥ ಎಂದು ಬದಲಾದ ಕಾರಣದಿಂದಾಗಿ, ಕಣವಂತೂ ಕಾವೇರಿದೆ. ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ-ವಾಕ್ಸಮರವೂ ಕೂಡ. ಗಿರಿರಾಜ್ ಸಿಂಗ್ ಬೆಗುಸರೈನಿಂದ ಸ್ಪರ್ಧಿಸಲು ಅಸಮಾಧಾನ ವ್ಯಕ್ತಪಡಿಸಿದ್ದ ವೇಳೆಯಲ್ಲೇ ಕನ್ಹಯ್ನಾ ಕುಮಾರ್, “ಹೋಂವರ್ಕ್ ಮಾಡದೇ ಶಾಲೆಗೆ ಹೋಗಲು ಹೆದರುವ ಮಗುವಿನಂತಿದೆ ಗಿರಿರಾಜ್ ಸಿಂಗ್ ಅವರ ವರ್ತನೆ’ ಎಂದು ಕಾಲೆಳೆದಿದ್ದರು.
ಹೇಳಿ ಕೇಳಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಲಪಂಥೀಯ ವಿಚಾರಧಾರೆಯ ಬಗ್ಗೆ ಪ್ರಬಲವಾಗಿ ವಾದಿಸುವುದಿದ್ದರೆ, ಕನ್ಹಯ್ಯ ಎಡಪಂಥೀಯ ವಿಚಾರಗಳ ಬಗ್ಗೆ ನಿರರ್ಗಳವಾಗಿ ವಾದಿಸುವ ಸಾಮರ್ಥ್ಯ ಉಳ್ಳವರು. ಹೀಗಾಗಿ, ಇಲ್ಲಿ ಎರಡು ವಿಚಾರಧಾರೆಗಳ ನಡುವಿನ ಹೋರಾಟ ಮತ್ತು ಬಿಹಾರದಲ್ಲಿ ಎಡಪಕ್ಷಗಳ ಪ್ರಭಾವ ವೃದ್ಧಿಸುವಲ್ಲಿ ಈ ಚುನಾವಣೆ ನೆರವಾಗಲಿದೆಯೇ ಎನ್ನುವ ವಿಚಾರವೂ ಇದೆ.
ಸದ್ಯ ಈ ಕ್ಷೇತ್ರದ ಸಂಸದರಾಗಿರುವ ಭೋಲಾ ಸಿಂಗ್ ಅವರಿಗೆ 2014ರ ಚುನಾವಣೆಯಲ್ಲಿ ಜಯ ಸುಲಭದಲ್ಲಿ ದಕ್ಕಿರಲಿಲ್ಲ. ಕೇವಲ 58 ಸಾವಿರ ಮತಗಳ ಅಂತರವಷ್ಟೇ. ಇಲ್ಲಿ ಕನ್ಹಯ್ಯ ಸೋತರೆ ಎಡಪಕ್ಷಗಳಿಗೆ ಮಾತ್ರ ಹಿನ್ನಡೆಯಲ್ಲ ಲಾಲೂ ಪ್ರಸಾದ್ ಯಾದವ್‌ರ ರಾಜಕೀಯ ಕುಶಾಗ್ರಮತಿಯೂ ಪ್ರಶ್ನೆಗೆ ಒಳಪಡಲಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಮತ್ತೂಮ್ಮೆ ಸ್ಥಾನ ಪಡೆಯುವುದಕ್ಕೆ ಅರ್ಹತೆ ಬರಬಹುದು. ಬಿಜೆಪಿ ಅಭ್ಯರ್ಥಿ ಸೋತು, ಕನ್ಹಯ್ಯ ಅಥವಾ ಆರ್‌ಜೆಡಿ ಅಭ್ಯರ್ಥಿ ತನ್ವೀರ್ ಅಹ್ಮದ್ ಗೆದ್ದರೆ ಆರ್‌ಜೆಡಿಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ನಾಯಕತ್ವ ವ್ಯೂಹ ರಚನೆ ಮಾಡುವಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಬಿಜೆಪಿ ಅಭ್ಯರ್ಥಿಗೆ ಜೆಡಿಯು ಬೆಂಬಲವೂ ಇದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಗಿರಿರಾಜ್ ಸಿಂಗ್ ಪರ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಅದೊಂದು ಧನಾತ್ಮಕ ಅಂಶವಾಗಲಿದೆ. ಬೆಗುಸರೈ ಕ್ಷೇತ್ರ ವ್ಯಾಪ್ತಿಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿಲ್ಲ.
ಜಾತಿ ಲೆಕ್ಕಾಚಾರ: ಜಾತಿ ಲೆಕ್ಕಾಚಾರ ನೋಡಿದಾಗ ಕನ್ಹಯ್ಯ, ಗಿರಿರಾಜ್ ಸಿಂಗ್ ಇಬ್ಬರೂ ಭೂಮಿಹಾರ್ ಸಮುದಾಯಕ್ಕೆ ಸೇರಿದವರು. ಆರ್‌ಜೆಡಿ ಅಭ್ಯರ್ಥಿ ಮಸ್ಲಿಂ. ಭೂಮಿಹಾರ್ ಸಮುದಾಯದವರ ಸಂಖ್ಯೆ 4.5 ಲಕ್ಷ, ಮುಸ್ಲಿಂ ಸಮುದಾಯ 2.5 ಲಕ್ಷ, ಯಾದವ ಸಮುದಾಯ 80 ಸಾವಿರ, ಅತ್ಯಂತ ಹಿಂದುಳಿದ ವರ್ಗ (ಇಬಿಸಿ)ದವರ ಸಂಖ್ಯೆ 1 ಲಕ್ಷವಿದೆ. ಹೀಗಾಗಿ ಯಾರೇ ಅಭ್ಯರ್ಥಿಯಾಗಲಿ ಎಲ್ಲರ ಹಿತ ಕಾಪಾಡಲು ಬದ್ಧನಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.