ಗ್ರಂಥಾಲಯಗಳಿಗೆ ಅನುದಾನದ ಕೊರತೆ
Team Udayavani, Apr 24, 2019, 3:53 AM IST
ಬೆಂಗಳೂರು: ಸರ್ಕಾರವು ಸಾರ್ವಜನಿಕ ಗ್ರಂಥಾಲಯಗಳನ್ನು ಕಡೆಗಣಿಸುತ್ತಿದ್ದು, ಗ್ರಂಥಾಲಯಗಳು ಅನುದಾನ ಕೊರತೆ ಎದುರಿಸುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಬೇಸರ ವ್ಯಕ್ತಪಡಿಸಿದರು.
ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ “ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆಯಲ್ಲಿ ಮಾತನಾಡಿ, ಓದುಗರಿಗೆ ಸಾರ್ವಜನಿಕ ಗ್ರಂಥಾಲಯಗಳ ಅವಶ್ಯಕತೆ ಹೆಚ್ಚಿದೆ. ಆದರೆ, ಇಂದು ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಕೊಡುತ್ತಿರುವ ಅನುದಾನ ತೀರ ಕಡಿಮೆ.
ಅಲ್ಲದೇ ಅನುದಾನವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಹೀಗಾಗಿ, ಗ್ರಂಥಾಲಯ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಇದನ್ನು ಅರ್ಥಮಾಡಿಕೊಂಡು ಸಾರ್ವಜನಿಕ ಗ್ರಂಥಾಲಯಗಳತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಾಕ್ಷರತೆಯ ಭಾರತ ನಿರ್ಮಿಸುವಲ್ಲಿ ಗ್ರಂಥಾಲಯಗಳ ಕೊಡುಗೆ ಅಪಾರ. ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳಲ್ಲಿ 3.5 ಕೋಟಿ ಪುಸ್ತಕಗಳಿವೆ. 18 ಲಕ್ಷಕ್ಕೂ ಹೆಚ್ಚು ಸದಸ್ವತ್ವ ಪಡೆದಿದ್ದಾರೆ. ಪ್ರತಿದಿನ ಸುಮಾರು 90 ಲಕ್ಷ ಮಂದಿ ಗ್ರಂಥಾಲಯಗಳಿಗೆ ಭೇಟಿ ನೀಡುತ್ತಾರೆ.
ಇದರ ಜತೆಗೆ ಡಿಜಿಟಲ್ ಲೈಬ್ರರಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ. ಸದ್ಯದಲ್ಲೇ ಡಿಜಿಟಲ್ ಲೈಬ್ರರಿಯ ಪ್ರಯೋಜನ ಓದುಗರು ಪಡೆಯಲಿದ್ದಾರೆ. ಈ ಡಿಜಿಟಲ್ ವ್ಯವಸ್ಥೆಯನ್ನು ಗ್ರಾಮೀಣ, ತಾಲೂಕು ಮಟ್ಟದಲ್ಲೂ ತೆಗೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ. ಇನ್ನು ಕೃತಿಚೌರ್ಯವು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಮಾತನಾಡಿ, ಯುವಜನತೆ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಕ್ಕೆ ಮೊರೆ ಹೋಗಿ, ಅದರಲ್ಲಿನ ತಪ್ಪುವ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಪುಸ್ತಕದತ್ತ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳು ಡಿಜಿಟಲೀಕರಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣುರ, ಸಾಹಿತಿ ಶೂದ್ರ ಶ್ರೀನಿವಾಸ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಟಿ.ಮಲ್ಲೇಶಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.