ಕೆದ್ದಳಿಕೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಹಸುರು ಕ್ರಾಂತಿ
ಅರ್ಧ ಎಕ್ರೆ ಜಮೀನಿನಲ್ಲಿ ಕೈತೋಟ
Team Udayavani, Apr 25, 2019, 5:50 AM IST
ಶಾಲೆಯ ಕೈತೋಟದಲ್ಲಿ ಬೆಳೆದ ಸೌತೆಕಾಯಿಯೊಂದಿಗೆ ಶಿಕ್ಷಕರು, ವಿದ್ಯಾರ್ಥಿಗಳು.
ಪುಂಜಾಲಕಟ್ಟೆ: ಪರಿಸರ ಸಂರಕ್ಷಣೆ ಜತೆಗೆ ಹಸುರುವನ ನಿರ್ಮಾಣ, ಮಕ್ಕಳಿಗೆ ಕೃಷಿ ಬಗ್ಗೆ ಆಸ್ಥೆ, ಸ್ವಾವಲಂಬನೆ, ಶ್ರಮದ ಗೌರವ ಇವು ಗಳನ್ನು ತಿಳಿಸಿಕೊಡುವಲ್ಲಿ ಗ್ರಾಮೀಣ ಪ್ರದೇಶದ ಶಾಲೆಯೊಂದು ಕೈ ತೋಟದ ಮೂಲಕ ಯಶಸ್ವಿಯಾಗಿದೆ. ಬಂಟ್ವಾಳ ತಾ|ನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿ.ಪ್ರಾ. ಶಾಲೆ ಈ ಸಾಧನೆ ಮಾಡಿದೆ. ಶಾಲೆಯ ಸುತ್ತಮುತ್ತ ಬೆಳೆಯಲಾಗಿರುವ ಹೂತೋಟ, ತರಕಾರಿ ತೋಟ , ಹಣ್ಣಿನ ತೋಟ, ಕಂಗು,ಬಾಳೆ, ತೆಂಗಿನ ನೋಟ ಎಂತವರನ್ನೂ ಬೆರಗುಗೊಳಿಸುತ್ತದೆ.
ಇಲ್ಲಿ ಮುಖ್ಯ ಶಿಕ್ಷಕರಾಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರ ಪ್ರಯತ್ನದಿಂದ ಕೆದ್ದಳಿಕೆ ಶಾಲೆ ಹಲವು ವಿನೂತನ ಪ್ರಯೋಗಗಳಿಗೆ ಹೆಸರಾಗಿದೆ. ಶಿಕ್ಷಕರ ಪ್ರೋತ್ಸಾಹ, ಶ್ರಮ, ಊರಿನವರ ಸಹಕಾರ, ಮಕ್ಕಳ ಉತ್ಸಾಹದಿಂದ ಬೆಳೆದು ನಿಂತ ಹಚ್ಚ ಹಸುರಾದ ಸುಂದರ ಕೈ ತೋಟ ಶಿಕ್ಷಣಾಭಿ ಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.
ಶಾಲೆಯ ಒಟ್ಟು ಒಂದೂವರೆ ಎಕ್ರೆ ಜಮೀನಿನಲ್ಲಿ ಸುಮಾರು ಅರ್ಧ ಎಕ್ರೆಯಷ್ಟು ಜಮೀನನ್ನು ತರಕಾರಿ ತೋಟ, ಹಣ್ಣಿನ ತೋಟಕ್ಕೆ ಮೀಸಲಿಟ್ಟಿರುವುದು ಇಲ್ಲಿನ ವಿಶೇಷ. ಊರಿನವರ ಸಹಕಾರದೊಂದಿಗೆ ಶಿಕ್ಷಕರು, ಪುಟಾಣಿ ಮಕ್ಕಳು ಸೇರಿಕೊಂಡು ತೊಂಡೆಕಾಯಿ, ಬಸಳೆ, ಸೋರೆಕಾಯಿ, ಹರಿವೆ ಸೊಪ್ಪು, ಸುವರ್ಣಗೆಡ್ಡೆ, ಪಪ್ಪಾಯಿ, ಬದನೆ ಗಿಡ, ಅಲಸಂಡೆ ಬೆಳೆಯಲಾಗುತ್ತಿದೆ. ವಾರಕ್ಕೆ ಒಂದೆರಡು ಬಾರಿ ಅಲಸಂಡೆ ಕೀಳಲಾಗುತ್ತಿದೆ. ಸುಮಾರು 30 ಕೆ.ಜಿ.ಯಷ್ಟು ಅಲಸಂಡೆ ಲಭ್ಯವಾಗುತ್ತಿದ್ದು, ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ಸಾಂಬಾರಿಗೆ ಅಲಸಂಡೆಯನ್ನು ಬಳಸಲಾಗುತ್ತಿದೆ. ಇನ್ನೊಂದು ಚಪ್ಪರದಲ್ಲಿ ಬೆಳೆದಿರುವ ಬಸಳೆಯನ್ನು ಕೂಡಾ ವಾರಕ್ಕೊಮ್ಮೆ ಕತ್ತರಿಸಿ ಸಂಬಾರು ಮಾಡಲಾಗುತ್ತದೆ. ಹೀಗೆ ವಾರವಿಡೀ ಸಾವಯವ ತರಕಾರಿಯ ಊಟ ಸವಿಯುವ ಭಾಗ್ಯ ಇಲ್ಲಿನ ಮಕ್ಕಳಿಗೆ.
ಹಣ್ಣಿನ ತೋಟ
ಅಪರೂಪದ ಅಂಜೂರ, ಲಕ್ಷ್ಮಣ ಫಲ, ರಂಬುಟನ್ ಸಹಿತ 28 ಜಾತಿಗಳ 150 ಗಿಡಗಳನ್ನು ಶಾಲೆಯ ಸುತ್ತಮುತ್ತ ವ್ಯವಸ್ಥಿತವಾಗಿ ನೆಡಲಾಗಿದೆ. 2014-15ನೇ ಸಾಲಿನಲ್ಲಿ ವಿಶೇಷ ಯೋಜನೆ¿å ನಿರ್ಮಿಸಲಾಗಿರುವ ಹಣ್ಣುಗಳ ತೋಟ ಮಕ್ಕಳಲ್ಲಿ ಹಸಿಸುು ಪ್ರೀತಿ, ಗಿಡಗಳ ಪಾಲನೆ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಹಣ್ಣುಗಳ ತೋಟದ ಪರಿಕಲ್ಪನೆಯ ಮಗುವಿಗೊಂದು ಗಿಡ-ಮನೆಗೊಂದು ಮರ ಶೀರ್ಷಿಕೆಯಂತೆ ಶಾಲೆಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಲಾಗಿದ್ದು, ಅದೀಗ ಫಲಕೊಡುವ ಹಂತಕ್ಕೆ ಬೆಳೆಯುತ್ತಿದೆ.
ಸಮುದಾಯದ ಸಹಭಾಗಿತ್ವ
ಶಾಲೆಯ ಚಟುವಟಿಕೆಗಳಲ್ಲಿ ಹೆತ್ತವರನ್ನೂ ಸೇರಿಸಿಕೊಳ್ಳುವ ಸಮುದಾಯಾಭಿವೃದ್ಧಿಯ ವಿಶೇಷ ಕಲ್ಪನೆಯಂತೆ ಈ ಶಾಲೆಯ ಪ್ರತಿ ಆಗುಹೋಗುಗಳಲ್ಲಿ ಮಕ್ಕಳ ಹೆತ್ತವರು, ಗ್ರಾಮಸ್ಥರ ಭಾಗವಹಿಸುವಿಕೆ ಇದೆ. ಮಗುವಿನ ಹೆಸರಿನಲ್ಲಿರುವ ಗಿಡವನ್ನು ಹೆತ್ತವರು-ಮಗು ಸೇರಿ ಗುಂಡಿ ತೋಡಿ, ಮನೆಯಿಂದ ತಂದ ಗೊಬ್ಬರ ಹಾಕಿ ನೆಟ್ಟಿದ್ದಾರೆ. ಮಾತ್ರವಲ್ಲದೆ ಶ್ರೀ ಧ.ಗ್ರಾ. ಯೋಜನೆಯ ಸದಸ್ಯರೂ ಮಕ್ಕಳ ಹೆತ್ತವರ ಜತೆಗೆ ತೋಟ ರಚನೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ನೆಟ್ಟಿರುವ ಪ್ರತಿ ಹಣ್ಣಿನ ಗಿಡಗಳಿಗೆ ಮಕ್ಕಳ, ಗಿಡಗಳ ಹೆಸರಿನ ನಾಮಫಲಕ ಅಳವಡಿಸಲಾಗಿದೆ.
ಇಲ್ಲಿನ ಮುಖ್ಯ ಶಿಕ್ಷಕಿ ಉಮಾ ಡಿ. ಗೌಡ ಮತ್ತು ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯು ಹಣ್ಣಿನ ತೋಟದ ನಿರ್ಮಾಣದ ಹಿಂದಿರುವ ಶಕ್ತಿಗಳು. ಶಾಲೆ ಆರಂಭಕ್ಕೆ ಮೊದಲು ಮತ್ತು ರಜಾದಿನಗಳಲ್ಲೂ ಶಿಕ್ಷಕರು ಬಂದು ತೋಟದ ಪೋಷಣೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ಮಕ್ಕಳ ಹೆತ್ತವರು ಗಿಡ ನೆಡುವಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ತಮ್ಮ ಮಕ್ಕಳ ಹೆಸರಿನಲ್ಲಿ ನೆಡಲಾದ ಗಿಡಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರದಾಸ್ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರವಿದೆ.
ಯಾವ್ಯಾವ ಹಣ್ಣು?
ಅಂಜೂರ, ಮುಸುಂಬಿ, ಕಿತ್ತಳೆ, ಮೇಣ ರಹಿತ ಹಲಸು, ಲಕ್ಷ್ಮಣ ಫಲ, ಸೀಬೆ, ಸೀತಾಫಲ, ದಾಳಿಂಬೆ, ಚಿಕ್ಕು, ಜಾಯಿಕಾಯಿ, ರಂಬುಟನ್, ಲಿಂಬೆ, ಚೆರಿ, ಲಿಚಿ, ಮಾವು, ಬುಗರಿ, ಜಂಬು ನೆರಳೆ, ಅನಾನಸು, ಪಪ್ಪಾಯಿ, ಸಹಿತ 28 ಬಗೆ.
ಯಾವ್ಯಾವ ತರಕಾರಿ
ಅಲಸಂಡೆ, ತೊಂಡೆಕಾಯಿ, ಅರಿವೆ, ಬಸಳೆ, ಬದನೆ, ಸೋರೆಕಾಯಿ, ಸುವರ್ಣಗೆಡ್ಡೆ
ಶಾಲೆಯ ಸಾಧನೆಯ ಹೆಜ್ಜೆಗಳು
ಸ್ವತ್ಛತೆಗಾಗಿ ಜಿಲ್ಲಾ ಪ್ರಶಸ್ತಿ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳು, ಮೆಟ್ರಿಕ್ ಮೇಳ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದ ನಲಿಕಲಿ ಉತ್ಸವ, ಸಿರಿದೊಂಪ ಚಪ್ಪರದ ಆಕರ್ಷಣೆ, ಹಚ್ಚ ಹಸುರಿನ ವರ್ಣ ವೈವಿಧ್ಯದ ಟೋಪೊಗ್ರಾಫಿ, ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ರಾಜ್ಯಮಟ್ಟದಲ್ಲಿ ಗಮನ ಸೆಳೆದ ಮಕ್ಕಳ ದಿಬ್ಬಣ, ಶಾಲೆಗಾಗಿ ಹೊರೆಕಾಣಿಕೆ ಮೆರವಣಿಗೆ, ಮಕ್ಕಳ ಸಾಹಿತ್ಯ ಸಮ್ಮೇಳನ, ಮುಖ್ಯ ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸ್ವತ್ಛತೆಗೆ ಪ್ರಶಸ್ತಿ, ಮಕ್ಕಳ ಜಾಗೃತಿ ನಾಟಕ ಮೊದಲಾದವುಗಳು ಕೆದ್ದಳಿಕೆ ಶಾಲೆಯ ಸಾಧನೆಯ ಹಾದಿಯಲ್ಲಿನ ಕೆಲವು ಹೆಜ್ಜೆಗಳು.
ಸರ್ವರ ಸಹಕಾರದಿಂದ ಕೈತೋಟ
ಶಾಲಾ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಯೋಗದಿಂದ ಶಾಲಾ ಕೈತೋಟ ಬೆಳೆಸಲಾಗಿದೆ. ವಿದ್ಯಾರ್ಥಿಗಳ ಹಾಗೂ ಊರವರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಕೈತೋಟ ಅರಳಿ ನಿಂತಿದೆ. ಶಿಕ್ಷಕರ ಕಾಳಜಿ, ಕೈತೋಟ ನಿರ್ವಹಣೆಯಿಂದಾಗಿ ಸುಂದರ ವಾತಾವರಣ ನಿರ್ಮಾಣವಾಗಿದೆ.
– ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
ಸಾವಯವ ಗೊಬ್ಬರ ಬಳಕೆ
ಶಾಲಾ ಕೈತೋಟದಿಂದ ಶಾಲೆಯ ಸೌಂದರ್ಯ ಹೆಚ್ಚಿದೆ. ವಿದ್ಯಾರ್ಥಿಗಳೂ ಕೃಷಿಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ತರಕಾರಿ ಕೃಷಿಗೆ ಸಾವಯವ ಗೊಬ್ಬರ ಬಳಸುವುದರಿಂದ ಆರೋಗ್ಯದ ನಿಟ್ಟಿನಲ್ಲೂ ಉತ್ತಮವಾಗಿದೆ. ಶಾಲಾ ಬಿಸಿಯೂಟಕ್ಕೆ ನಮ್ಮಲ್ಲಿ ಬೆಳೆದ ತರಕಾರಿಯನ್ನೇ ಉಪಯೋಗಿಸಲಾಗುತ್ತಿದೆ.
– ಉಮಾ ಡಿ. ಗೌಡ, ಶಾಲಾ ಮುಖ್ಯ ಶಿಕ್ಷಕಿ (ಪ್ರಭಾರ)
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.