ತುಂಗಭದ್ರಾ ಡ್ಯಾಂ ಅಮೃತ ಮಹೋತ್ಸವ
ರಾಜ್ಯ-ನೆರೆ ರಾಜ್ಯಗಳಿಗೆ ತುಂಗಭದ್ರಾ ಜೀವನಾಡಿ •ಜಲಾಶಯ ನೀರು ಬಿಡಲು ತಜ್ಞರ ಸಲಹೆ ಅವಶ್ಯ
Team Udayavani, Apr 26, 2019, 12:41 PM IST
ಬಳ್ಳಾರಿ: ತುಂಗಭದ್ರಾ ರೈತ ಸಂಘದ ವತಿಯಿಂದ ಆಯೋಜಿಸಿದ್ದ ತುಂಗಭದ್ರಾ ಜಲಾಶಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಲಾಶಯದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು
ಬಳ್ಳಾರಿ: ಅಂತಾರಾಜ್ಯ ಜಿಲ್ಲೆಯ ಜೀವನಾಡಿಯಾಗಿತುವ ತುಂಗಭದ್ರಾ ಜಲಾಶಯದ ಅಮೃತ ಮಹೋತ್ಸವ ಆಚರಣೆ ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ, ರಾಜ್ಯ ಮಟ್ಟದಲ್ಲಿ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿಡಿಎ ಸಭಾಂಗಣದಲ್ಲಿ ಗುರುವಾರ ತುಂಗಭದ್ರಾ ರೈತ ಸಂಘದ ವತಿಯಿಂದ ಆಯೋಜಿಸಿದ್ದ ತುಂಗಭದ್ರಾ ಜಲಾಶಯದ ಅಮೃಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಾಶಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ತಾಯಿಯಂತೆ ಜಲಾಶಯ ಪ್ರೀತಿಸಬೇಕು. ದೇವರ ಕೋಣೆಯಲ್ಲಿ ತುಂಗಭದ್ರಾ ಜಲಾಶಯ ಭಾವಚಿತ್ರವಿಟ್ಟು ಪೂಜೆ ಮಾಡಬೇಕು. ಹಲವರ ಹೋರಾಟ, ಶ್ರಮ, ಜೀವದಾನದಿಂದ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 75 ವರ್ಷಗಳೇ ಕಳೆದಿವೆ. ಅಮೃತ ಮಹೋತ್ಸವ ಕೇವಲ ನಾಲ್ಕು ಗೋಡೆ ಮಧ್ಯೆ ನಡೆಯದೇ, ರಾಜ್ಯಮಟ್ಟದಲ್ಲಿ ಆಚರಿಸಬೇಕಿದೆ. ಇದಕ್ಕೆ ಬೇಕಿರುವ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ರೈತರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೂಳು ತೆರವುಗೊಳಿಸುವಂತೆ ಹಾಗೂ ರೈತರಿಗೆ ಎದುರಾಗುತ್ತಿರುವ ನೀರಿನ ಸಮಸ್ಯೆ ನಿವಾರಿಸುವಂತೆ ರೈತರು ಅನೇಕ ಹೋರಾಟ ಮಾಡುತ್ತಿದ್ದಾರೆ. ಜಲಾಶಯ ರಕ್ಷಣೆ ಹಾಗೂ ಹೂಳಿನ ಹೋರಾಟ ನಿರಂತರವಾಗಿ ನಡೆಯುವುದರಿಂದ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದರು.
ನಮ್ಮದು ರೈತ ಕುಟುಂಬ: ಜಿಲ್ಲಾಧಿಕಾರಿ ಆಗಿರುವ ನಾನು ರೈತ ಕುಟುಂಬದಿಂದ ಬಂದಿದ್ದೇನೆ. ರೈತ ಹೋರಾಟಗಾರನ ಮೊಮ್ಮಗ ನಾನು. ನನ್ನ ತಂದೆ ನಿವೃತ್ತಿ ಹೊಂದಿದ ಮೇಲೆ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ರೈತ ಸ್ವಾಭಿಮಾನಿ, ನಿಷ್ಠಾವಂತ, ದೇಶ ರಕ್ಷಕ. ರೈತನ ಜೀವನ ಕಷ್ಟಕರವಾಗಿರುತ್ತದೆ. ಜೀವನದಲ್ಲಿ ಯಾವುದೇ ಸಮಸ್ಯೆ, ಕಷ್ಟ ಬಂದರೂ ಎದುರಿಸುವಂತ ಜೀವಿಯಾಗಿದ್ದಾನೆ. ರೈತ ದೇಶದ ಜೀವ ಇದ್ದಂತೆ. ಅವನಿಲ್ಲವೆಂದರೆ ಎಲ್ಲವೂ ಶೂನ್ಯ. ರೈತರನ್ನು ಹೃದಯದಿಂದ ಆಶಿಸಬೇಕು ಎಂದು ಹೇಳಿದರು.
ಉಪನ್ಯಾಸಕ ಡಾ| ಎಚ್. ಮಹಾಬಲೇಶ್ವರ ಮಾತನಾಡಿ, ಜಲಾಶಯ ನಿರ್ಮಾಣಕ್ಕಾಗಿ ನೂರಾರು ಹಳ್ಳಿಗಳ ಸಾವಿರಾರು ಎಕರೆ ಭೂಮಿ, ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಜಲಾಶಯ ನಿರ್ಮಾಣದಲ್ಲಿ ಹಲವರು ಅನೇಕ ಕಾರಣಕ್ಕೆ ಜೀವದಾನ ಮಾಡಿದ್ದಾರೆ. ನೀರಾವರಿ, ಕೈಗಾರಿಕೆ, ಕುಡಿಯುವ ನೀರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದೆ. ತುಂಗಭದ್ರಾ ಜಲಾಶಯ ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿದೆ. ಜಲಾಶಯದಲ್ಲಿ ಸಂಗ್ರಹವಾದ ನೀರು ರಾಜ್ಯಕ್ಕೆ ಶೇ. 65ರಷ್ಟು ಸಲ್ಲಬೇಕಿದೆ. ಉಳಿದ ಶೇ.35ರಷ್ಟು ನೆರೆ ರಾಜ್ಯಗಳ ಪಾಲಾಗಿದೆ. ಜಲಾಶಯದಲ್ಲಿ ಹೆಚ್ಚಿನ ನೀರನ್ನು ಕೆರೆ ಕಟ್ಟೆಗಳನ್ನು ತುಂಬಿಸಿ ನೀರಿನ ಸಮಸ್ಯೆ ಪರಿಹರಿಸಬೇಕು. ರೈತರ ಜೀವನಾಡಿಯನ್ನು ಎಲ್ಲರೂ ಸಂರಕ್ಷಿಸಬೇಕು ಎಂದು ಹೇಳಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾತನಾಡಿ, ತುಂಗಭದ್ರಾ ಜಲಾಶಯ ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ ಜೀವನಾಡಿಯಾಗಿದೆ. ಜಲಾಶಯದಲ್ಲಿ ಸುಮಾರು 33 ಟಿಎಂಸಿ ಅಡಿ ಹೂಳು ತುಂಬಿದೆ. ಇದನ್ನು ತೆರವುಗೊಳಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಇದರಿಂದ ಸಾವಿರಾರು ರೈತರ ಜಮೀನುಗಳಿಗೆ ನೀರು ದೊರಕಲಿದೆ. ಜಲಾಶಯದಿಂದ ನೀರು ಬಿಡುವ ವಿಚಾರದಲ್ಲಿ ತಜ್ಞರಿಂದ ಸಲಹೆ-ಸೂಚನೆ ಪಡೆಯುವ ಅಗತ್ಯವಿದೆ ಎಂದರು.
ಕೊಟ್ಟೂರುಸ್ವಾಮಿ ಮಠದ ಡಾ| ಸಂಗನಬಸವ ಸ್ವಾಮೀಜಿ ಉದ್ಘಾಟಿಸಿದರು. ತುಂಗಭದ್ರಾ ಜಲಾಶಯದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಾದ ವಿ.ಪಿ. ಉದ್ದಿಹಾಳ, ಕೆ. ಗೋವಿಂದಲು, ಕೆ. ಚನ್ನಪ್ಪ, ವಿ. ವೀರಶಯ್ಯ, ಜಿ. ಚನ್ನಬಸಪ್ಪ, ರಾಮರಾವು ಅವರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು. ಹಗರಿಬೊಮ್ಮನಹಳ್ಳಿಯ ಶ್ರೀ ನಂದಿಪುರ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.
ಸರ್| ವಿಶ್ವೇಶ್ವರಯ್ಯರಿಂದ ದೋಷ ಪರಿಹಾರ
1860ರಿಂದ ತುಂಗಭದ್ರಾ ಜಲಾಶಯದ ನಿರ್ಮಾಣದ ಯೋಜನೆ ರೂಪಿಸಿದ್ದು, 1933ರಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಆಗ ಸುಮಾರು 12 ವರ್ಷಗಳ ಕಾಲ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ನಂತರ 1945ರಲ್ಲಿ ಜಲಾಶಯ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು. ನಿರ್ಮಾಣ ಹಂತದಲ್ಲಿ ತಾಂತ್ರಿಕ ದೋಷದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದನ್ನು ಕಂಡು ಸ್ಥಳಕ್ಕೆ ಎಂಜಿನಿಯರ್ ಸರ್| ಎಂ. ವಿಶ್ವೇಶ್ವರಯ್ಯ ಅವರನ್ನು ಕರೆಸಲಾಗಿತ್ತು. ಅವರು ದೋಷವನ್ನು ಪರಿಹರಿಸಿದರು. ನಂತರ 1953ರಲ್ಲಿ ಜಲಾಶಯ ಕಾಮಗಾರಿ ಸಂಪೂರ್ಣ ಮುಗಿದು ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಸೇರಿದಂತೆ ಆಂಧ್ರದ ವಿವಿಧ ಜಿಲ್ಲೆಗಳ ಜನತೆಯ ಬಳಕೆಗೆ ಸಮರ್ಪಿಸಲಾಯಿತು.
•ಡಾ| ಎಚ್. ಮಹಾಬಲೇಶ್ವರ, ಉಪನ್ಯಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.