ಭಾವ ಜಗತ್ತಿನೊಳಗೊಂದು ಸುಖಕರ ಪಯಣ
ಚಿತ್ರ ವಿಮರ್ಶೆ
Team Udayavani, Apr 27, 2019, 5:00 AM IST
“ಡ್ರೈವರ್ ಎಲ್ಲಿ ಸರ್..?
– ನೆಗೆದು ಬಿಧ್ದೋದ !
ಮತ್ತೆ , ಕಾರ್ ಯಾರ್ ಓಡಿಸ್ತಾರೆ ಸರ್?
– ಸನ್ನಿಲಿಯೋನ್ ಓಡಿಸ್ತಾರೆ…!!
ಈ ರೀತಿಯ ಫನ್ನೀ ಮಾತುಗಳು ಇಲ್ಲಿ ಲೆಕ್ಕವಿಲ್ಲ. ಇದಿಷ್ಟು ಸಾಕು, ಇದು ಜಗ್ಗೇಶ್ ಶೈಲಿಯ ಚಿತ್ರ ಅಂತ ಸಾಬೀತಾಗೋಕೆ. ಹಾಗಂತ, ಇದು ಜಗ್ಗೇಶ್ ಶೈಲಿಯ ಮಾತಿನ ಸಿನಿಮಾ ಅಂದುಕೊಳ್ಳುವಂತಿಲ್ಲ. ಇಲ್ಲಿ ಬದುಕಿನ ಮೌಲ್ಯವಿದೆ. ಸಂಬಂಧಗಳ ಆಳವಾದ ಅರ್ಥವಿದೆ. ವಾಸ್ತವತೆಯ ವಾಸನೆ ಇದೆ. ನೋವು-ನಲಿವುಗಳ ಮಿಶ್ರಣವಿದೆ.
ಸಿಹಿ-ಕಹಿಯ ನೂರಾರು ನೆನಪುಗಳ ಗುತ್ಛವಿದೆ. ನಗು, ಅಳು, ಭಾವುಕತೆ ಈ ಎಲ್ಲವೂ ಆ ಪ್ರೀಮಿಯರ್ ಪದ್ಮಿನಿ ಕಾರಲ್ಲಿದೆ! ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಆಪ್ತವೆನಿಸುವ, ಎದೆಭಾರವಾಗಿಸುವ ಮತ್ತು ಸೂಕ್ಷ್ಮಗ್ರಹಿಕೆಯ ಒಂದು ಕೌಟುಂಬಿಕ ಚಿತ್ರ. ಜಗ್ಗೇಶ್ ಅವರ ಚಿತ್ರಗಳು ಹೀಗೇ ಇರುತ್ತವೆ, ಹೀಗೇ ಇರಬೇಕು ಅಂದುಕೊಳ್ಳುವ ಮಂದಿಗೆ, “ಪದ್ಮಿನಿ’ ಬೇರೆಯದ್ದೇ ಚಿತ್ರಣವನ್ನು ಕಟ್ಟಿಕೊಡುತ್ತದೆ.
ನಗುವಲ್ಲೂ ಅಳುವಿದೆ, ಅಸಹಾಯಕತೆಯ ನೋವೂ ತುಂಬಿದೆ. ಬದುಕಿನ ಅರ್ಥ ಏನೆಂಬುದರ ಜೊತೆಗೆ ಸಂಬಂಧಗಳು ಹೇಗೆಲ್ಲಾ ಬೆಸೆದುಕೊಳ್ಳುತ್ತವೆ ಎಂಬುದನ್ನು ಮನಮುಟ್ಟುವ ರೀತಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕ. ಇದು ಒಂದೇ ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ. ಮಕ್ಕಳು ಮತ್ತು ಪೋಷಕರು ಒಟ್ಟಿಗೆ ಕುಳಿತು ನೋಡುವಂತಹ ಯಾವುದೇ ಮುಜುಗರ ಪಡದಂತಹ ಚಿತ್ರ ಎಂಬುದಕ್ಕೆ ಚಿತ್ರದೊಳಗಿನ ಸಾರ ಸಾಕ್ಷಿ.
ಮೊದಲರ್ಧ ಮಜವಾಗಿಯೇ ಸಾಗುವ ಚಿತ್ರದಲ್ಲಿ ನ್ಯೂನ್ಯತೆಗಳನ್ನು ಹುಡುಕುವುದು ಕಷ್ಟ. ದ್ವಿತಿಯಾರ್ಧ ನೋಡುಗರನ್ನು ಗಂಭೀರತೆಗೆ ದೂಡುವುದರ ಜೊತೆಗೆ ವ್ಯಕ್ತಿ, ವ್ಯಕ್ತಿತ್ವ, ಬೇರ್ಪಡುವ ಮತ್ತು ಬೆಸೆದುಕೊಳ್ಳುವ ಸಂಬಂಧಗಳ ತೊಳಲಾಟದ ಚಿತ್ರಣ ಒಮ್ಮೊಮ್ಮೆ ಕಣ್ಣುಗಳನ್ನು ಒದ್ದೆಯಾಗಿಸುವ ಮೂಲಕ ಕೆಲ ಪಾತ್ರಗಳ ನೋವು, ಅಸಹಾಯಕತೆ ಮರುಕ ಹುಟ್ಟಿಸುತ್ತದೆ.
ಇಡೀ ಚಿತ್ರ ವ್ಯಕ್ತಿಯ ಬದುಕಲ್ಲಿ ಬರುವ ನೂರಾರು ತಿರುವುಗಳು ಹೇಗೆಲ್ಲಾ ಬದಲಾವಣೆಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತಲೇ, ಬದುಕು ಅಂದುಕೊಂಡಷ್ಟು ಸುಲಭವಲ್ಲ. ಇಷ್ಟಪಟ್ಟಿದ್ದು ಸಿಗುವುದೂ ಇಲ್ಲ ಎಂಬುದನ್ನು ಸಾರುತ್ತದೆ. ಇಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕಂತಹ ಬಿಗಿಯಾದ ಚಿತ್ರಕಥೆಯೂ ಇದೆ.
ಪ್ರಸ್ತುತ ದಿನಗಳಲ್ಲಿ ನಡೆಯುವಂತಹ ಘಟನೆಗಳನ್ನಿಲ್ಲಿ ನೆನಪಿಸಿದರೂ, ಒಂದು ವಿಶೇಷ ಸಂದೇಶ ಇಡೀ ಚಿತ್ರದ ಹೈಲೈಟ್. ಆ ಹೈಲೈಟ್ ಏನೆಂಬ ಕುತೂಹಲವಿದ್ದರೆ, ಯಾರ ಅಪ್ಪಣೆಯೂ ಇಲ್ಲದೆ “ಪ್ರೀಮಿಯರ್ ಪದ್ಮಿನಿ’ ನೋಡಿಬರಬಹುದು. ಹೊಂದಾಣಿಕೆ ಬದುಕು ಸಾಧ್ಯವೇ ಇಲ್ಲ ಅಂದಾಗ, ಮನುಷ್ಯನ ವ್ಯಕ್ತಿತ್ವ ಹೇಗೆಲ್ಲಾ ಬದಲಾಗುತ್ತದೆ ಎಂಬುದಕ್ಕೆ ಈ ಚಿತ್ರ ಕಣ್ಣೆದುರಿಗಿನ ಉದಾಹರಣೆ.
ಚಿಕ್ಕ ವಿಷಯವನ್ನು ದೊಡ್ಡದು ಮಾಡಿಕೊಂಡು ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುವ ಕಾಲಘಟ್ಟದಲ್ಲಿ, ಬದುಕಲ್ಲಿ ದೊಡ್ಡ ತಪ್ಪು ಆಗಿದ್ದರೂ, ಚೆನ್ನಾಗಿ ಬದುಕಿ ಬಾಳಬೇಕು ಎಂಬ ಆಶಯದ ಅಂಶಗಳು ಚಿತ್ರದ ಜೀವಾಳ. ಅಲ್ಲಲ್ಲಿ ಚಿತ್ರದ ವೇಗ ಕಡಿಮೆಯಾಯ್ತು ಅಂದುಕೊಳ್ಳುವಂತೆಯೇ, ಅಲ್ಲೊಂದು ಹಾಡು ಇಣುಕಿ ಹಾಕಿ, ನೋಡುಗರ ತಾಳ್ಮೆಯನ್ನು ಸಮಾಧಾನಿಸುತ್ತದೆ.
ಫ್ರೆಶ್ ಎನಿಸುವ ದೃಶ್ಯಾವಳಿಗಳು ಸಣ್ಣಪುಟ್ಟ ಎಡವಟ್ಟುಗಳನ್ನು ಇಲ್ಲಿ ಮುಚ್ಚಿ ಹಾಕುತ್ತವೆ. ಇದು ಸಂಬಂಧಗಳ ನಡುವಿನ ಕಥೆ ಹೊಂದಿದೆ. ವಿನಾಯಕ ಮತ್ತು ಶ್ರುತಿ ದಂಪತಿ ನಡುವೆ ಹೊಂದಾಣಿಕೆ ಸಮಸ್ಯೆ. ಅದು ವಿಚ್ಛೇದನವರೆಗೂ ಹೋಗುತ್ತದೆ. ವಿನಾಯಕ ಒಬ್ಬ ಅಸಹಾಯಕ. ಶ್ರುತಿ ಅದಾಗಲೇ ವಿವಾಹ ಆಗಿ, ಒಬ್ಬ ಮಗಳನ್ನೂ ಹೊಂದಿರುವ ಉದ್ಯಮಿಯೊಬ್ಬರನ್ನು ಮದುವೆ ಆಗಲು ನಿರ್ಧರಿಸಿದ್ದಾಳೆ.
ಇತ್ತ ವಿನಾಯಕ ದಂಪತಿಗೊಬ್ಬ ವಯಸ್ಸಿಗೆ ಬಂದ ಮಗನೂ ಇದ್ದಾನೆ. ಚಿಕ್ಕಂದಿನಿಂದಲೂ ಹೆತ್ತವರ ಪ್ರೀತಿ ಕಾಣದ ಅವನಿಗೆ ಅಪ್ಪ, ಅಮ್ಮ ಅಂದರೆ ಕೋಪ. ಅತ್ತ ವಿನಾಯಕನ ಪತ್ನಿ ವರಿಸಲು ಸಿದ್ಧವಾಗಿರುವ ಉದ್ಯಮಿ ಪುತ್ರಿ ಜೊತೆ ವಿನಾಯಕನ ಪುತ್ರನ ಗೆಳೆತನ ಶುರುವಾಗುತ್ತೆ. ಅಲ್ಲಿಂದ ಚಿತ್ರ ಇನ್ನೊಂದು ತಿರುವು ಪಡೆದುಕೊಳ್ಳುತ್ತೆ.
ಇಲ್ಲಿ ಕಾರು ಮಾಲೀಕ ಮತ್ತು ಚಾಲಕನ ನಡುವಿನ ಬಾಂಧವ್ಯದ ಹೂರಣವೂ ಇದೆ. ಒಂದು ಚಿತ್ರದಲ್ಲಿ ಮೂರು ಕಥೆಗಳು ಒಂದೇ ಟ್ರ್ಯಾಕ್‌ನಲ್ಲಿ ಸಾಗಿದರೂ, ಆ ಮೂರು ಕಥೆಗಳಿಗೂ ಕ್ಲೈಮ್ಯಾಕ್ಸ್‌ನಲ್ಲಿ ಲಿಂಕ್ ಕಲ್ಪಿಸಲಾಗಿದೆ. ಸಾಕಷ್ಟು ಭಾವಸಾರ ಹೊಂದಿರುವ “ಪದ್ಮಿನಿ’ಯಲ್ಲಿ ನೂರೆಂಟು ನೋವು ನಲಿವುಗಳದ್ದೇ ಚಿತ್ರಣ.
ಜಗ್ಗೇಶ್ ಅವರಿಲ್ಲಿ ತಮ್ಮ ನವರಸದ ಪಾಕವನ್ನೆಲ್ಲಾ ಉಣಬಡಿಸಿದ್ದಾರೆ. ನಗಿಸುತ್ತಾರೆ, ಅಳಿಸುತ್ತಾರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಒಬ್ಬ ಒಳ್ಳೆಯ ಗಂಡನಾಗಿ, ಕಾಳಜಿಯ ತಂದೆಯಾಗಿ, ಕಾರು ಮಾಲೀಕರಾಗಿ ಇಷ್ಟವಾಗುತ್ತಾರೆ. ಮಧುಬಾಲ ಪಾತ್ರದಲ್ಲಿ ಗಮನಸೆಳೆದರೆ, ಸುಧಾರಾಣಿ, ರಮೇಶ್ ಇಂದಿರಾ ಅವರು ಅಷ್ಟೇ ಇಷ್ಟವಾಗುತ್ತಾರೆ.
ಇನ್ನುಳಿದಂತೆ ಪ್ರಮೋದ್ ಚಾಲಕನಾಗಿ ಕೆಲವೆಡೆ ಭಾವುಕತೆ ಹೆಚ್ಚಿಸುತ್ತಾರೆ, ಹಿತಾ, ವಿವೇಕ್ ಸಿಂಹ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದವರಂತೆ ನಟನೆಯಲಿ ಸೈ ಎನಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೂಂದು ಪ್ಲಸ್. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಪದ್ಮಿನಿ ಕಾರಿನ ಮೈಲೇಜ್ ಹೆಚ್ಚಿಸಿದೆ.
ಚಿತ್ರ: ಪ್ರೀಮಿಯರ್ ಪದ್ಮಿನಿ
ನಿರ್ಮಾಣ: ಶ್ರುತಿ ನಾಯ್ಡು
ನಿರ್ದೇಶನ: ರಮೇಶ್ ಇಂದಿರಾ
ತಾರಾಗಣ: ಜಗ್ಗೇಶ್, ಮಧುಬಾಲ, ಸುಧಾರಾಣಿ, ಪ್ರಮೋದ್, ಹಿತಾ, ವಿವೇಕ್ ಸಿಂಹ, ದತ್ತಣ್ಣ, ರಮೇಶ್ ಇಂದಿರಾ ಇತರರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.