ಕಲಬುರಗಿ ಉತ್ತರದತ್ತ ಎಲ್ಲರ ಚಿತ್ತ
•ಕೈ ಮತಬ್ಯಾಂಕ್ ಮುಂದುವರಿಯುವುದೇ?•ಈ ಕ್ಷೇತ್ರದ ಮತಗಳೇ ಲೋಕಸಭೆಯಲ್ಲಿ ನಿರ್ಣಾಯಕ
Team Udayavani, Apr 27, 2019, 9:59 AM IST
ಕಲಬುರಗಿ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 27 ಸಾವಿರಕ್ಕೂ ಹೆಚ್ಚು ಮತಗಳು ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಟ್ಟಿದ್ದರಿಂದ ಪ್ರಸ್ತುತ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದಲೇ ಹೆಚ್ಚಿನ ಮತಗಳನ್ನು ನಿರೀಕ್ಷಿಸಿದ್ದರಿಂದ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರವೇ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿದೆ.
ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಈಗಿನ ಚುನಾವಣೆಯಲ್ಲಿ ಎಷ್ಟು ಲೀಡ್ ಕಾಂಗ್ರೆಸ್ ಬರುತ್ತದೆ? ಇಲ್ಲವೇ ಕೆಲವು ಆಂತರಿಕ ಗೊಂದಲಗಳಿಂದಾಗಿ ಹೆಚ್ಚಿನ ಲೀಡ್ ಕಡಿಮೆಯಾಗುತ್ತದೆಯೇ ಎನ್ನುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಕಲಬುರಗಿ ಉತ್ತರದತ್ತ ಎನ್ನುವಂತಾಗಿದೆ.
ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಈಗ ಅವರ ಪತ್ನಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸಾಧ್ಯವಾದ ಮಟ್ಟಿಗೆ ಕೆಲಸ ಮಾಡಿದ್ದಾರಾದರೂ ಈ ಹಿಂದಿನಂತೆ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತದೆಯೇ ಎನ್ನುವುದೇ ಕಾಂಗ್ರೆಸ್ ಪಕ್ಷದ ಮುಂದಿರುವ ಆತಂಕದ ಪ್ರಶ್ನೆಯಾಗಿದೆ.
ಕಲಬುರಗಿ ಉತ್ತರ ಕ್ಷೇತ್ರದಲ್ಲಿ 2009ರಲ್ಲಿ ಶೇ. 41.11ರಷ್ಟು, 2014ರಲ್ಲಿ ಶೇ. 52.06, ಪ್ರಸ್ತುತ 56.89ರಷ್ಟು ಮತದಾನವಾಗಿದೆ. ಕಳೆದ ಸಲಕ್ಕಿಂತ ಈ ಸಲ ಶೇ. 4ರಷ್ಟು ಮತದಾನ ಹೆಚ್ಚಳವಾಗಿರುವುದು ಯಾರಿಗೆ ಅನುಕೂಲ ಎನ್ನುವ ವ್ಯಾಪಕ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ. ಮುಸ್ಲಿಂರು ವಾಸಿಸುವ ಪ್ರದೇಶದಲ್ಲಿ ಮತದಾನ ಕಡಿಮೆಯಾಗಿದೆ. ಆದರೆ ಹಿಂದೂಗಳ ಪ್ರದೇಶದಲ್ಲೇ ಹೆಚ್ಚಿನ ಮತದಾನವಾಗಿದೆ ಎಂದು ಒಂದು ನಿಟ್ಟಿನಲ್ಲಿ ಹೇಳಿದರೆ, ಮುಸ್ಲಿಂ ಪ್ರದೇಶದಲ್ಲೇ ಕಳೆದ ಸಲಕ್ಕಿಂತ ಹೆಚ್ಚಿಗೆ ಮತದಾನವಾಗಿದೆ ಎಂದು ಮಗದೊಂದು ನಿಟ್ಟಿನಲ್ಲಿ ಹೇಳಲಾಗುತ್ತಿದೆ. ಒಟ್ಟಾರೆ ಈ ಎಲ್ಲ ಅಂಶಗಳನ್ನು ಉಲ್ಲೇಖೀಸಿ ಮತಗಳ ಲೀಡ್ ಬಗ್ಗೆ ಚರ್ಚೆ ನಡೆದಿದೆ.
ಕಾಂಗ್ರೆಸ್ ಪಕ್ಷ ಕಳೆದ ಸಲಕ್ಕಿಂತ ಈಗ ಕಡಿಮೆ ಎಂದರೆ ಕನಿಷ್ಠ 20ರಿಂದ 25 ಸಾವಿರ ಲೀಡ್ ಬರಬಹುದೆಂಬ ನಿರೀಕ್ಷೆ ಹೊಂದಿದೆ. ಆದರೆ ಬಿಜೆಪಿ ಇಷ್ಟೊಂದು ಪ್ರಮಾಣದಲ್ಲಿ ಲೀಡ್ ಬರಲು ಸಾಧ್ಯವಿಲ್ಲ. ಸಮನಾಗಿ ಮತಗಳು ಬೀಳುತ್ತವೆ. ಕಾಂಗ್ರೆಸ್‌ಗೆ 5 ಇಲ್ಲವೇ 10 ಸಾವಿರಕ್ಕಿಂತ ಹೆಚ್ಚಿಗೆ ಲೀಡ್ ಬರೋದಿಲ್ಲ ಎಂಬುದಾಗಿ ಬಿಜೆಪಿ ದೃಢ ವಿಶ್ವಾಸ ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್‌ಗೆ 2004ರಲ್ಲಿ 8792 ಮತಗಳು ಲೀಡ್ ಬಂದಿದ್ದರೆ 2009ರಲ್ಲಿ 27503 ಮತಗಳು ಬಿಜೆಪಿಗಿಂತ ಲೀಡ್ ಬಂದಿದ್ದವು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈ ಸಲ ತೆರೆಮರೆಯಲ್ಲಿ ಎದ್ದ ಅಸಮಾಧಾನ ಹಾಗೂ ಯುವ ಮುಖಂಡ ಚಂದು ಪಾಟೀಲ ಹಾಗೂ ಇತರರು ಸಂಘಟನಾತ್ಮವಾಗಿ ಮಾಡಿದ ಕೆಲಸ ಎಲ್ಲ ನಿರೀಕ್ಷೆಯನ್ನು ತಲೆಕೆಳಗಾಗಿ ಮಾಡಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಮತ ವಿಭಜನೆಯೇ ಎಲ್ಲವನ್ನು ನಿರ್ಧರಿಸುತ್ತದೆ. ಈ ಎಲ್ಲ ಕುತೂಹಲಗಳಿಗೆ ಮೇ 23ರಂದು ಉತ್ತರ ಸಿಗಲಿದೆ.
ಚಂದು ಪಾಟೀಲ ನೇತೃತ್ವದಲ್ಲಿ ಸಂಘಟನೆ
ಕಲಬುರಗಿ ಉತ್ತರದಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಯುವ ನಾಯಕ ಚಂದು ಪಾಟೀಲ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ಸಂಘಟಿಸಲಾಗಿದೆ. ಈ ಕ್ಷೇತ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 27 ಸಾವಿರ ಲೀಡ್ ಬಂದಿತ್ತು. ಆದರೆ ಈ ಸಲ ಐದು ಸಾವಿರ ಮೇಲೆ ದಾಟುವುದಿಲ್ಲ. ಬಿಜೆಪಿ-ಕಾಂಗ್ರೆಸ್ ಪಕ್ಷದವರ ಬೋಗಸ್ ಮತದಾನವನ್ನು ಸಾಧ್ಯವಾದ ಮಟ್ಟಿಗೆ ತಡೆಯಲಾಗಿದೆ. ಆದರೂ ಸ್ವಲ್ಪ ಗೂಂಡಾಗರ್ದಿ ನಡೆಸಿದ್ದಾರೆ. ಆದರೆ ಮತದಾರರು ಮಾತ್ರ ತಾಳ್ಮೆಯಿಂದ ಅವಲೋಕಿಸಿ ಸ್ವಯಂಪ್ರೇರಿತವಾಗಿ ನಿರೀಕ್ಷೆ ಮೀರಿ ಮತದಾನ ಮಾಡಿದ್ದಾರೆ. ಕಳೆದ ಸಲಕ್ಕಿಂತ 17 ಸಾವಿರ ಮತದಾನ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಯುವಕ ಮತದಾರರು ಹೆಚ್ಚಿಗೆ ಆಗಿದ್ದಾರೆ. ಹೀಗಾಗಿ ಇವರ ಮತ ಬಿಜೆಪಿಗೆ ಬರುವ ಬಗ್ಗೆ ವಿಶ್ವಾಸ ಹೊಂದಲಾಗಿದೆ.
•ಚನ್ನವೀರ ಲಿಂಗನವಾಡಿ,
ಅಧ್ಯಕ್ಷರು, ಕಲಬುರಗಿ ಉತ್ತರ ಬಿಜೆಪಿ ಮಂಡಲ
ಜೆಡಿಎಸ್ ವತಿಯಿಂದ ಕೆಲಸ ಮಾಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಇಬ್ಬರೂ ಕೂಡಿಕೊಂಡು ಮತದಾರರ ಬಳಿ ತೆರಳಿದ್ದೇವೆ. ಅದಲ್ಲದೇ ಪಕ್ಷದ ಕಚೇರಿಯಲ್ಲಿಯೇ ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಾಗಿದೆ. ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಕಳೆದ ಸಲದ ಜೆಡಿಎಸ್ ಮತಗಳು ಕಾಂಗ್ರೆಸ್‌ಗೆ ಬರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಒಟ್ಟಾರೆ ಸಮ್ಮಿಶ್ರ ಸರ್ಕಾರದ ಧರ್ಮ ಪಾಲನೆ ಮಾಡಲಾಗಿದೆ.
•ಪ್ರಕಾಶ ಖಡಕೆ,
ಅಧ್ಯಕ್ಷರು, ಜೆಡಿಎಸ್ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ
•ಸೈಯದ್ ಅಹ್ಮದ,
ಕಲಬುರಗಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
•ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.