ವಿದ್ಯಾರ್ಥಿಗಳಿಲ್ಲದೆ ಸ್ಥಳಾಂತರ; ಇತರ ಉದ್ದೇಶಕ್ಕೂ ಬಳಕೆ ಇಲ್ಲ
ಪಾಳುಬಿದ್ದಿದೆ ಬಂಗಾಡಿಯ ಹಾಸ್ಟೆಲ್ ಕಟ್ಟಡ
Team Udayavani, Apr 28, 2019, 6:00 AM IST
ಬಂಗಾಡಿಯಲ್ಲಿ ಹಾಸ್ಟೆಲ್ ಕಾರ್ಯಾಚರಿಸುತ್ತಿದ್ದ ಕಟ್ಟಡ.
ಬೆಳ್ತಂಗಡಿ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳೂ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ಸರಕಾರ ವಿವಿಧ ರೀತಿಗಳಲ್ಲಿ ಅನುದಾನಗಳನ್ನು ನೀಡುತ್ತದೆ. ಹಳ್ಳಿಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅದೇ ಉದ್ದೇಶದಿಂದ ನಿರ್ಮಾಣಗೊಂಡ ಹಾಸ್ಟೆಲೊಂದು ಇದೀಗ ಪಾಳುಬಿದ್ದಿದೆ !
ಬೆಳ್ತಂಗಡಿ ತಾ|ನ ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಬಂಗಾಡಿಯಲ್ಲಿ 1980ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣಗೊಂಡಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಅದು ಬೇರೆಡೆಗೆ ಸ್ಥಳಾಂತರಗೊಂಡ ಪರಿಣಾಮ ಪ್ರಸ್ತುತ ಅದು ಅನಾಥವಾಗಿದೆ.
ಇಪ್ಪತ್ತಕ್ಕೂ ಕಡಿಮೆ ಇತ್ತು !
ತೀರಾ ಗ್ರಾಮೀಣ ಪ್ರದೇಶ ಬಂಗಾಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣಗೊಂಡ ಪರಿಣಾಮ ಅರಣ್ಯದಂಚಿನ ಪ್ರದೇಶಗಳಾದ ದಿಡುಪೆ, ಬೊಳ್ಳಾಜೆ, ಅರ್ಬಿ, ಪೆರ್ನಡ್ಕ ಮೊದಲಾದ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. 50 ವಿದ್ಯಾರ್ಥಿಗಳ ಸಾಮರ್ಥ್ಯದ ನಿಲಯದಲ್ಲಿ ವರ್ಷ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಗೊಂಡ ಬಳಿಕ ಸ್ಥಳಾಂತರಗೊಳ್ಳುವ ಸಂದರ್ಭ ವಿದ್ಯಾರ್ಥಿಗಳ ಸಂಖ್ಯೆ 20ಕ್ಕೂ ಕಡಿಮೆ ಇತ್ತು.
ಸುಸಜ್ಜಿತ ಸ್ಥಿತಿಯಲ್ಲಿದೆ
ಬಂಗಾಡಿಯಲ್ಲಿ ವಿದ್ಯಾರ್ಥಿ ನಿಲಯ ಮುಚ್ಚಿ 6 ವರ್ಷಗಳೇ ಕಳೆದರೂ ಕಟ್ಟಡ ಹಾಗೂ ಇನ್ನಿತರ ಸೌಲಭ್ಯ ಗಳು ಸುಸಜ್ಜಿತ ಸ್ಥಿತಿಯಲ್ಲಿವೆ. ಸಣ್ಣ ಪುಟ್ಟ ದುರಸ್ತಿ ಮಾಡಿದರೆ ಇತರ ಉದ್ದೇಶಗಳಿಗೂ ಬಳಸಬಹುದಾಗಿದೆ. ನೀರಿನ ಟ್ಯಾಂಕ್, ಶೌಚಾಲಯ, ಆಟೋಟದ ಸೌಲಭ್ಯಗಳು ಉತ್ತಮವಾಗಿವೆ. ಹಾಸ್ಟೆಲ್ ಮುಚ್ಚಿದರೂ ವಿದ್ಯುತ್, ನೀರಿನ ಸೌಕರ್ಯ ಇನ್ನೂ ಕಡಿತಗೊಂಡಿಲ್ಲ.
ಸುಸಜ್ಜಿತ ಕಟ್ಟಡವನ್ನು ಹಾಗೇ ಬಿಟ್ಟರೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಲಿದ್ದು, ಹೀಗಾಗಿ ಅದನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಜತೆಗೆ ಅಲ್ಲಿ ಪಕ್ಕದಲ್ಲಿ ಸ. ಪ್ರೌಢಶಾಲೆಯೂ ಇರುವುದರಿಂದ ಮತ್ತೆ ವಿದ್ಯಾರ್ಥಿ ನಿಲಯವನ್ನು ಆರಂಭಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಸರಕಾರಿ ಕಟ್ಟಡವನ್ನು ಇತರ ಇಲಾಖೆಗಳಿಗೆ ಹಸ್ತಾಂತರಿಸಿ, ಯಾವುದಾದರೂ ಉದ್ದೇಶಕ್ಕೆ ಬಳಕೆಯಾದರೆ ಉತ್ತಮ ಎಂದು ಗ್ರಾಮಸ್ಥರು ಹೇಳುತ್ತಾರೆ.
ಬಾಡಿಗೆ ಕಟ್ಟಡದಲ್ಲಿ
ಬೆಳ್ತಂಗಡಿ ತಾ|ನಲ್ಲಿ ಒಟ್ಟು 16 ವಿದ್ಯಾರ್ಥಿ ನಿಲಯಗಳಿದ್ದು, 10 ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯ, 6 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿವೆ. ಬಂಗಾಡಿ ಯಿಂದ ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯವಾಗಿ ಮೇಲ್ದರ್ಜೆಗೇರಿ ಮಡಂತ್ಯಾರಿಗೆ ಸ್ಥಳಾಂತರಗೊಂಡ ವಿದ್ಯಾರ್ಥಿ ನಿಲಯ ಸಹಿತ ಒಟ್ಟು 7 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಇದ್ದ ಸ್ವಂತ ಕಟ್ಟಡ ಪಾಳು ಬಿದ್ದಿದ್ದು, ಬಾಡಿಗೆ ಕಟ್ಟಡಕ್ಕೆ ಲಕ್ಷಾಂತರ ರೂ. ವ್ಯಯಿಸುವ ಸ್ಥಿತಿ ನಿರ್ಮಾಣವಾಗಿದೆ.
ಕನಿಷ್ಠ 20 ಮಂದಿ ಬೇಕು
50 ವಿದ್ಯಾರ್ಥಿಗಳ ಸಾಮರ್ಥ್ಯದ ಬಂಗಾಡಿಯ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 20ಕ್ಕಿಂತಲೂ ಕಡಿಮೆಯಾದ ಪರಿಣಾಮ ಅದನ್ನು ಸ್ಥಳಾಂತರಿಸಲಾಗಿತ್ತು. ಅದನ್ನು ಉಪಯೋಗಿಸುವ ಕುರಿತು ಆದೇಶ ಬಂದಿಲ್ಲ. ಮುಂದೆ ತಾ.ಪಂ. ಸಭೆ ಯಲ್ಲಿ ನಿರ್ಣಯ ಮಾಡಿ ಇತರ ಉದ್ದೇಶಗಳಿಗೆ ಬಳಸುವ ಪ್ರಯತ್ನ ಮಾಡಬಹುದು.
– ಸುರೇಂದ್ರ, ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.
ಸಾಮಾನ್ಯ ಸಭೆಯಲ್ಲಿ ಚರ್ಚೆ
ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ದೊರೆತರೆ ಪಾಳು ಬಿದ್ದ ಕಟ್ಟಡವನ್ನು ಇತರ ಉದ್ದೇಶಗಳಿಗೆ ಬಳಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಬಹುದು. ಅಂತಹ ಪ್ರಸ್ತಾವಗಳು ಬಂದಿಲ್ಲ. ಇಲಾಖೆ ತಾ.ಪಂ.ಗೆ ಹಸ್ತಾಂತರಿಸಿದರೆ ಮುಂದಿನ ಬಳಕೆ ಕುರಿತು ಚಿಂತಿಸಬಹುದು.
– ಕುಸುಮಾಧರ್ ಬಿ., ಕಾರ್ಯ ನಿರ್ವಹಣಾಧಿಕಾರಿ, ತಾ.ಪಂ. ಬೆಳ್ತಂಗಡಿ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.