ನಾನು ಯಾರಿಗೂ ಕ್ಷಮೆ ಕೇಳುವ ಅಗತ್ಯವೇ ಇಲ್ಲ: ವೈ. ರಾಮಪ್ಪ
Team Udayavani, Apr 28, 2019, 3:43 PM IST
ದಾವಣಗೆರೆ: ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವೈ. ರಾಮಪ್ಪ, ಇತರರು ಭಾಗವಹಿಸಿರುವುದು.
ದಾವಣಗೆರೆ: ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೀರಶೈವ-ಲಿಂಗಾಯತ ಸಮಾಜದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಹಾಗಾಗಿ ನಾನು ಯಾರಿಗೂ ಕ್ಷಮೆ ಕೇಳುವ ಅಗತ್ಯವೇ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ, ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಈಶ್ವರ-ಶಿವನ ಬಗ್ಗೆ ನಮಗೆ ಅಪಾರ ಭಕ್ತಿ ಇದೆ. ನಮ್ಮ ಮನೆಯಲ್ಲಿ ನಿತ್ಯ ಎಲ್ಲಾ ದೇವರುಗಳನ್ನು ಪೂಜಿಸುತ್ತೇವೆ. ಈಶ್ವರ ಕೇವಲ ಒಂದು ಪಂಥಕ್ಕೆ ಸೇರಿದವನಲ್ಲ. ಸಕಲ ಜೀವರಾಶಿಗೂ ಆರಾಧ್ಯ ದೈವವಾಗಿದ್ದಾನೆ. ಹಾಗಾಗಿ ನಮಗೆ ಎಲ್ಲಾ ದೇವರ ಮೇಲೆ ನಂಬಿಕೆ ಇದೆ. ಅದನ್ನು ಅರ್ಥ ಮಾಡಿಕೊಳ್ಳದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ಆರೋಪ ಮಾಡುತ್ತಾ ಸಮಾಜದಲ್ಲಿ ಶಾಂತಿ ಕದಡುತ್ತಿರುವುದು ಸರಿಯಲ್ಲ ಎಂದರು.
ಈಚೆಗೆ ಪ್ರತಿಭಟನೆ ಮಾಡಿದವರು ತಮ್ಮ ಕೂಗು, ಧ್ವನಿ ಇಲ್ಲಿಗೆ ನಿಲ್ಲಿಸಿದರೆ ಒಳ್ಳೆಯದು. ಅದನ್ನು ಬಿಟ್ಟು ನನ್ನ ಕಡೀತೀನಿ, ಬಡಿತೀನಿ ಎನ್ನುವ ಧೋರಣೆ ಸರಿಯಲ್ಲ. ಒಂದು ವೇಳೆ ಇದೇ ರೀತಿ ನನ್ನ ವಿರುದ್ಧ ಧ್ವನಿ, ಕೂಗು ಮುಂದುವರೆದಲ್ಲಿ ನನ್ನಂತ ಸಾವಿರ ರಾಮಪ್ಪನ ಧ್ವನಿ ಮೊಳಗಲಿವೆ ಎಂದು ಎಚ್ಚರಿಸಿದರು.
ಇನ್ನು ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲದ ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್. ಬಸವಂತಪ್ಪ, ಕಾಂಗ್ರೆಸ್ ಪಕ್ಷದಿದ ನನ್ನನ್ನು ಉಚ್ಛಾಟಿಸಲಿ ಎಂಬುದಾಗಿ ಹೇಳಿರುವುದಲ್ಲದೆ, ನೇರ್ಲಿಗೆ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ವಿಷಯದಲ್ಲಿ ಪಕ್ಷದ ವಿಚಾರ ಪ್ರಸ್ತಾಪಿಸಿರುವುದು ಸರಿಯಲ್ಲ. ಅಪರೂಪಕ್ಕೆ ಇದೀಗ ಪಕ್ಷದಲ್ಲಿ ಕಾಣಿಸಿಕೊಂಡಿರುವ ಬಸವಂತಪ್ಪ ಯಾರ ಸಹಾಯದಿಂದ ಗೆದ್ದ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಿ ತಾಕೀತು ಮಾಡಿದರು.
ಪಕ್ಷದ ನಾಯಕರೇ ನಮ್ಮ ವಿಚಾರವನ್ನು ಪಕ್ಷದೊಳಗೆ ಎಳೆದು ತಂದಿಲ್ಲ. ಆದರೆ, ಕೆ.ಎಸ್.ಬಸವಂತಪ್ಪ ನಮ್ಮನ್ನು ಪಕ್ಷದಿಂದ ಉಚ್ಛಾಟಿಸಲಿ. ಕ್ಷಮೆ ಕೇಳಲಿ ಎಂದಿದ್ದಾನೆ. ಇಷ್ಟಕ್ಕೂ ನಾನೇಕೆ ಕ್ಷಮೆ ಕೇಳಬೇಕು, ಇವನ್ಯಾರು ನನ್ನ ಬಗ್ಗೆ ಮಾತನಾಡಲು ಎಂದು ಪ್ರಶ್ನಿಸಿದರಲ್ಲದೇ, ಅನಗತ್ಯವಾಗಿ ನೇರ್ಲಿಗೆ ಗ್ರಾಮ ಪಂಚಾಯತಿಯ ವಿಷಯವನ್ನು ರಾಜ್ಯಮಟ್ಟದವರೆಗೆ ಕೊಂಡೊಯ್ಯುವ ಅವಶ್ಯಕತೆ ಇರಲಿಲ್ಲ . ಇವನ ಕುಮ್ಮಕ್ಕೇ ವಿಡಿಯೋ ವೈರಲ್ ಆಗಲು ಕಾರಣ ಎಂದು ರಾಮಪ್ಪ ಆರೋಪಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ ಈ ರೀತಿ ಘಟನೆ ನಡೆಯುತ್ತಿರಲಿಲ್ಲ. ಅಷ್ಟಕ್ಕೂ ಯಾರು ಕೂಡ ಈ ರೀತಿ ಮಾತನಾಡುತ್ತಿರಲಿಲ್ಲ. ಆದರೆ, ಈಗ ಹಿಂದುಳಿದ ಅಭ್ಯರ್ಥಿ ನಿಂತಿರುವ ಕಾರಣಕ್ಕೆ ಇಷ್ಟೆಲ್ಲಾ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಡಿಗ್ರಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಡಬಲ್ ಡಿಗ್ರಿ ಡಾಕ್ಟರೇಟ್ ಪದವಿ ಪಡೆದ ರಾಮಪ್ಪ ಇನ್ನೊಬ್ಬರ ಜಾತಿಯ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾನು ಗಮನಿಸಿದ್ದೇನೆಂದು ಕೆ.ಎಸ್.ಬಸವರಾಜ್ ಹೇಳಿರುವುದು ಸರಿಯಲ್ಲ. ಡಬಲ್ ಡಿಗ್ರಿ ನನ್ನ ಆಳ ಅಧ್ಯಯನ, ಪರಿಶ್ರಮದ ಫಲವಾಗಿ ಮೈಸೂರು ವಿಶ್ವವಿದ್ಯಾಲಯದಿಂದ 1994ರಲ್ಲೇ ಸಿಕ್ಕಿದೆ. ನನ್ನ ಓದಿನ ಬಗ್ಗೆ ಕೇಳುವ ಅವನಿಗೆ ಯಾವ ನೈತಿಕತೆ ಇದೆ. ಇದರಿಂದ ಅವನಿಗೆ ದಲಿತನ ಬಗ್ಗೆ ಎಷ್ಟೊಂದು ಒಲವು, ಕಳಕಳಿ ಇದೆ ಎಂಬುದು ಗೊತ್ತಾಗುತ್ತೆ ಎಂದು ಏಕವಚನದಲ್ಲೇ ಟಾಂಗ್ ನೀಡಿದರು.
ಡಿಸಿಎಂ ಟೌನ್‌ಶಿಪ್ ಬಳಿ ನಮಗೆ ಸೇರಿದ ಮಂಜರಿ ಹನುಮಂತಪ್ಪ ಶಿಕ್ಷಣ ಮಹಾವಿದ್ಯಾಲಯಕ್ಕೆ ಶುಕ್ರವಾರ ರಾತ್ರಿ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಗ್ಲಾಸ್ ಸೇರಿದಂತೆ ಪೀಠೊಪಕರಣ ಹಾಳು ಮಾಡಿದ್ದಾರೆ. ಅದಲ್ಲದೇ ಬೆಳವನೂರು ಬಳಿ ಇರುವ ನಮ್ಮ ಶಾಲೆ ಬಳಿ ಸುಮಾರು 50 ಜನ ಎಲ್ಲಿ ರಾಮಪ್ಪ ಎಂದು ಕೇಳಿದ್ದಾರೆ. ಈ ಕೃತ್ಯದಲ್ಲಿ ಮೊನ್ನೆ ನಡೆದ ಪ್ರತಿಭಟನೆಯ ಕೆಲ ಕಾರ್ಯಕರ್ತರೇ ನೇರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಚನ್ನಬಸಪ್ಪ, ಬಸವರಾಜಪ್ಪ, ಕಲ್ಲೇಶಪ್ಪ, ಪ್ರಭುದೇವ್, ಶ್ರೀನಿವಾಸ್, ನಾಗರಾಜ್, ಬಸವಾಪಟ್ಟಣದ ಪಟೇಲ್ ಇತರರು ಪಾಲ್ಗೊಂಡಿದ್ದರು.
ಎಲ್ಲಾ ಬಣ್ಣದ ಬಟ್ಟೆಗಳಿವೆ
ನಾವು ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇನೆ ಎಂದು ಕೆಲವರು ಹೇಳಿದ್ದಾರೆ. ಅವರದು ಕಪ್ಪುಬಟ್ಟೆ ಇದ್ದರೆ ನಮ್ಮ ಬಳಿ ಕೆಂಪು, ಹಸಿರು, ಹಳದಿ ಸೇರಿದಂತೆ ಎಲ್ಲಾ ಬಣ್ಣದ ಬಟ್ಟೆ ಇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಯಾರದೋ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾತನಾಡಿದರೆ ಹೇಳಿರುವವರೇ ಕಪ್ಪಾಗುತ್ತಾರೆ ಎಂದು ವೈ. ರಾಮಪ್ಪ ಹೇಳಿದರು.
12 ಜನರ ವಿರುದ್ಧ ಕೇಸ್
ಈಚೆಗೆ ಲಿಂಗಾಯತ ವೀರಶೈವ ಸಮಾಜ ಮನಸ್ಕ ವೇದಿಕೆ ನೇತೃತ್ವದಲ್ಲಿ ಪ್ರತಿಭಟಿಸಿದಾಗ ಕೆಲವರು ನನ್ನ ಭಾವಚಿತ್ರಕ್ಕೆ ಚಪ್ಪಲಿ ತೋರಿಸಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತಿ ನಿಂದನೆ ಮತ್ತು ವ್ಯಕ್ತಿಯ ಘನತೆಗೆ ಧಕ್ಕೆ ಹಿನ್ನೆಲೆಯಲ್ಲಿ 12 ಜನರ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಎಲ್ಲದಕ್ಕೂ ನ್ಯಾಯಾಲಯದಲ್ಲಿಯೇ ಉತ್ತರ ಕೊಡುತ್ತೇನೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈ. ರಾಮಪ್ಪ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.