ಲಂಚ ಪಡೆದು ಮೊಬೈಲ್ ವಾಪಸ್ ಕೊಟ್ಟ ಪೊಲೀಸ್?
Team Udayavani, Apr 29, 2019, 3:55 AM IST
ಬೆಂಗಳೂರು: “ಕಳೆದು ಹೋಗಿದ್ದ ಸ್ನೇಹಿತರೊಬ್ಬರ ಮೊಬೈಲ್ ವಾಪಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಪೊಲೀಸರು 2500 ರೂ. ಹಣ ಪಡೆದು ಕೊಂಡಿದ್ದಾರೆ’ ಎಂದು ಆರೋಪಿಸಿರುವ ಯುವತಿಯೊಬ್ಬರು, ಬೆಂಗಳೂರು ಪೊಲೀಸರೇ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ರಿತು ರಾವತ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಏ.23ರಂದು ಪ್ರಕಟಗೊಂಡ ಪೋಸ್ಟ್, ಬೆಂಗಳೂರು ನಗರ ಪೊಲೀಸ್ ಪೇಜ್‌ಗೆ ಟ್ಯಾಗ್ ಆಗಿದೆ. ರಿತು ರಾವತ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ, ಪೊಲೀಸರು, ನಿಮ್ಮ ದೂರನ್ನು ಬೆಳ್ಳಂದೂರು ಠಾಣೆಯ ಹಿರಿಯ ಅಧಿಕಾರಿ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯುವತಿ ಆರೋಪ ಏನು?: “ನನ್ನ ಫ್ರೆಂಡ್, ತಾನು ಪ್ರಯಾಣಿಸಿದ್ದ ಕ್ಯಾಬ್‌ನಲ್ಲಿ ಮೊಬೈಲ್ ಬಿಟ್ಟು ಬಂದಿದ್ದರು. ಕ್ಯಾಬ್ ಚಾಲಕ ಅದನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ತಿಳಿದಿತ್ತು. ಹೀಗಾಗಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದೆವು. ಕೂಡಲೇ ಪೊಲೀಸರು ಕ್ಯಾಬ್ ಚಾಲಕನಿಗೆ ಕರೆ ಮಾಡಿ ಮಾತನಾಡಿದರು. ಮಾರನೇ ದಿನ ಠಾಣೆಗೆ ಬಂದು ಮೊಬೈಲ್ ಕೊಟ್ಟಿರುವ ಚಾಲಕ, ಪ್ರಯಾಣಿಕರು ಅದನ್ನು ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದಾಗಿ ತಿಳಿಸಿದ್ದಾನೆ.
ಹೀಗಾಗಿ ಮೊಬೈಲ್ ತೆಗೆದುಕೊಂಡು ಬರಲು ಠಾಣೆಗೆ ತೆರಳಿದ್ದೆವು. ಈ ವೇಳೆ ಪೊಲೀಸರು, ಮೊಬೈಲ್ ಹಿಂತಿರುಗಿಸಲು ಮೊಬೈಲ್ ಮೌಲ್ಯದ ಅರ್ಧ ಹಣವನ್ನು (7000) ರೂ.ಗಳನ್ನು ನೀಡಬೇಕು ಎಂದರು. ಇದಕ್ಕೆ ನಾನು ನಿಮ್ಮ ಹಿರಿಯ ಅಧಿಕಾರಿ ಜತೆ ಮಾತನಾಡುತ್ತೇನೆ ಎಂದು ತಿಳಿಸಿದೆ. ಅದಕ್ಕೆ, ನಮ್ಮ ಸಾಹೇಬರು ನಿಮ್ಮ ಬಳಿ ಮತ್ತಷ್ಟು ಹಣ ಕೇಳುತ್ತಾರೆ ಎಂದರು. ಹೀಗಾಗಿ ಬೇರೆ ದಾರಿಕಾಣದೆ 2500 ರೂ. ಕೊಟ್ಟು ಫೋನ್ ತೆಗೆದುಕೊಂಡು ಬಂದೆವು ಎಂದು ಆರೋಪಿಸಿದ್ದಾರೆ.
ಆ ನಂತರ ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿರುವ ಅವರು, “ಜನ ಎಲ್ಲಿ ದೂರು ನೀಡಬೇಕು? ಯಾರು ನಿಮ್ಮ ದೂರನ್ನು ಆಲಿಸಬೇಕು? ಇದು ನನ್ನ ಮೊದಲ ಅನುಭವ ಹಾಗೂ ಕೊನೆಯ ಅನುಭವ ಆಗಲಿ ಎಂದು ಬಯಸುತ್ತೇನೆ. ಇದೊಂದು ನಾಚಿಕೆಗೇಡಿನ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, “ಬೆಂಗಳೂರು ಪೊಲೀಸರ ಬಗ್ಗೆ ಸಾಕಷ್ಟು ನಂಬಿಕೆ ಇದೆ. ಕನಿಷ್ಠ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ’ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಈ ಆರೋಪವಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪೊಲೀಸರು, “ನಿಮ್ಮ ದೂರನ್ನು ಬೆಳ್ಳಂದೂರು ಠಾಣೆಯ ಹಿರಿಯ ಅಧಿಕಾರಿಗೆ ವರ್ಗಾಯಿಸಲಾಗಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ನೀವು ಬೆಳ್ಳಂದೂರು ಠಾಣೆ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿ’ ಎಂದಿದ್ದಾರೆ. ಜತೆಗೆ, ದೂರವಾಣಿ ಸಂಖ್ಯೆ ನೀಡುವಂತೆ ಯುವತಿಯನ್ನು ಕೋರಿದ್ದಾರೆ.
ಆದರೆ, ದೂರವಾಣಿ ಸಂಖ್ಯೆ ನೀಡಲು ನಿರಾಕರಿಸಿರುವ ಯುವತಿ, “ಫೇಸ್‌ಬುಕ್‌ನಲ್ಲಿ ನನ್ನ ಮೊಬೈಲ್ ಸಂಖ್ಯೆ ನೀಡಲು ಆಗುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನೇರವಾಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡುತ್ತೇನೆ,’ ಎಂದು ಹೇಳಿದ್ದಾರೆ.
ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ: ಯುವತಿ ಫೇಸ್‌ಬುಕ್‌ನಲ್ಲಿ ಮಾಡಿರುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ. ಠಾಣೆಗೆ ಬಂದ ದೂರುಗಳ ಅನ್ವಯ ಕಳೆದ ಎರಡು ವಾರಗಳಲ್ಲಿ ಮೊಬೈಲ್ ವಾಪಸ್ ಪಡೆದುಕೊಂಡ ವ್ಯಕ್ತಿಗಳನ್ನು ಸಂಪರ್ಕಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ, “ನಮಗೆ ಯಾವುದೇ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ.
ಫೇಸ್‌ಬುಕ್‌ನಲ್ಲಿ ಆರೋಪ ಮಾಡಿರುವ ಯುವತಿ ಯಾರೆಂದು ನಮಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಆದರೆ, ಯುವತಿ ಇದುವರೆಗೂ ಠಾಣೆಗೆ ಬಂದು ದೂರು ನೀಡಿಲ್ಲ. ಅಲ್ಲದೆ, ಮೊಬೈಲ್ ಪಡೆದುಕೊಳ್ಳಲು ಅವರು ಯಾರ ಜತೆ ಠಾಣೆಗೆ ಆಗಮಿಸಿದ್ದರು ಎಂಬುದೂ ಖಚಿತವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.