ಸಂಭಾವ್ಯ ಅಪಾಯ ತಪ್ಪಿಸಿದ ಅತ್ತೆ-ಅಳಿಯನ ಸಮಯಪ್ರಜ್ಞೆ
Team Udayavani, Apr 29, 2019, 1:29 PM IST
ಪುತ್ತೂರು: ರೈಲು ಪ್ರಯಾಣ ಮಾಡುತ್ತಿದ್ದ ಅತ್ತೆ- ಅಳಿಯನ ಸಮಯ ಪ್ರಜ್ಞೆಯ ಜತೆಗೆ ಕುಂದಾಪುರ ಬಿಜೂರು ಬಳಿಯ ರೈಲು ಹಳಿ ಹತ್ತಿರದಲ್ಲಿದ್ದ ಮನೆಯವರ ಸಹಕಾರದಿಂದ ಭಾರೀ ರೈಲು ಅವಘಡವೊಂದು ತಪ್ಪಿದಂತಾಗಿದೆ.
ಮುಂಬಯಿಯಿಂದ ಎರ್ನಾಕುಲಂಗೆ ಹೊರಟಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯಲ್ಲಿ ಬೆಂಕಿ ಕಂಡು ಕೂಡಲೇ ಎಲ್ಲರನ್ನೂ ಎಚ್ಚರಿಸಿ ಸಂಭವನೀಯ ಅವಘಡವನ್ನು ತಪ್ಪಸುವಲ್ಲಿ ಯಶಸ್ವಿಯಾದವರು ಪುತ್ತೂರು ತಾಲೂಕಿನ ತಿಂಗಳಾಡಿಯ ಜಲಜಾಕ್ಷಿ ಮನೋಹರ್ ರೈ ಮತ್ತು ಅವರ ಅಳಿಯ ನಿಶ್ಚಲ್ ಶೆಟ್ಟಿ ಅವರು. ಮೊಮ್ಮಗುವನ್ನು ನೋಡಿಕೊಳ್ಳಲೆಂದು ಫೆ. 27ರಂದು ಮುಂಬಯಿ ಇರೋಲ್‌ನಲ್ಲಿರುವ ಮಗಳ ಮನೆಗೆ ಜಲಜಾಕ್ಷಿ ತೆರಳಿದ್ದರು.
ಬಳಿಕ ಎ. 27ರಂದು ರಾತ್ರಿ ತಮ್ಮ ಮಗಳು ಅಕ್ಷತಾ, ಅಳಿಯ ನಿಶ್ಚಲ್ ಶೆಟ್ಟಿ ಹಾಗೂ 8 ತಿಂಗಳ ಮಗುವಿನೊಂದಿಗೆ ಪನ್ವೇಲ್ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಎಸಿ ಬೋಗಿಯ ಬಿ4ರಲ್ಲಿ ಅವರ ಆಸನಗಳನ್ನು ಕಾದಿರಿಸಲಾಗಿತ್ತು.
“ಶೌಚಾಲಯದ ಪಕ್ಕದಲ್ಲಿ ಮೇಲ್ಭಾಗದ ಸೀಟಿನಲ್ಲಿ ಮಲಗಿದ್ದ ನನಗೆ ನಿದ್ದೆ ಬಂದಿರಲಿಲ್ಲ. ತಡರಾತ್ರಿ ಶೌಚಾಲಯ ಭಾಗದಿಂದ ಹೊಗೆ ಕಾಣಿಸಿಕೊಂಡಿತು. ತತ್‌ಕ್ಷಣ ಕುಳಿತೆ. ಸುಟ್ಟ ವಾಸನೆಯೂ ಬರತೊಡಗಿತು. ಹತ್ತಿರ ಹೋಗಿ ನೋಡಿದೆ. ಗಾಬರಿಯಾಯಿತು, ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬಹಳ ಬಾರಿ ರೈಲಿನಲ್ಲಿ ಪ್ರಯಾಣಿಸಿದವಳಲ್ಲ ನಾನು. ಆದರೂ ಜೋರಾಗಿ ಬೊಬ್ಬೆ ಹಾಕುತ್ತ ಬಂದು ಮಗಳನ್ನು ಎಬ್ಬಿಸಿದೆ. ಅವಳೂ ಆತಂಕಗೊಂಡಳು. ಅಷ್ಟರಲ್ಲಿ ಬೋಗಿಯಲ್ಲಿದ್ದವರೆಲ್ಲ ಎಚ್ಚರಗೊಂಡರು. ಅಳಿಯ ಚೈನ್ ಎಳೆದು ರೈಲು ನಿಲ್ಲಿಸಿದರು. ರೈಲು ನಿಂತ ಕೂಡಲೇ ಕೆಳಗೆ ಹಾರಿಬಿಟ್ಟೆವು ಎನ್ನುತ್ತಾರೆ ಜಲಜಾಕ್ಷಿ.
ಮೇ 1ಕ್ಕೆ ರಜೆ ಇರುವುದರಿಂದ, ಎ. 29ಕ್ಕೆ ಮುಂಬಯಿಯಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ರಜೆ ಇದ್ದು ಸರಣಿ ರಜೆಯ ಕಾರಣ ಊರಿಗೆ ಹೊರಟಿದ್ದೆವು. ದಿಲ್ಲಿಯಿಂದ 3 ಗಂಟೆ ತಡವಾಗಿ ರೈಲು ಬಂದಿತ್ತು. 9.30ಕ್ಕೆ ಮುಂಬಯಿ ಯಿಂದ ಹೊರಡಬೇಕಿದ್ದ ರೈಲು 12ಕ್ಕೆ ಹೊರಟಿತು. ಮಂಗಳೂರು ತಲುಪುವಾಗ ಮುಂಜಾನೆ ಆಗಿತ್ತು. ನಮ್ಮಲ್ಲಿ 7 ಬ್ಯಾಗುಗಳಿದ್ದು, ಎಲ್ಲವೂ ಹೊಗೆಯಿಂದ ಕಪ್ಪಗಾಗಿವೆ. ಸಣ್ಣ ಮಗುವಿನೊಂದಿಗೆ ಹೊರಟಿದ್ದ ನಮ್ಮ ಪರಿಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಸ್ಥಳೀಯರ ನೆರವು
ಎಚ್ಚರಗೊಂಡು ನೋಡಿದಾಗ ರೈಲು ವೇಗವಾಗಿ ಸಾಗುತ್ತಿತ್ತು. ಬಿಜೂರು ನಿಲ್ದಾಣ ದಾಟಿ ಸುಮಾರು 2 ಕಿ.ಮೀ. ಸಾಗಿಯಾಗಿತ್ತು. ಪುಣ್ಯಕ್ಕೆ ರೈಲು ನಿಂತಲ್ಲಿ ಎರಡು ಮನೆಗಳಿದ್ದವು. ರೈಲು ನಿಂತ ಸದ್ದು ಮತ್ತು ಬೊಬ್ಬೆಯನ್ನು ಕೇಳಿ ಹತ್ತಿರದ ಮನೆಯವರು ಸಹಾಯಕ್ಕೆ ಓಡಿ ಬಂದರು. ಪೈಪ್ ಹಾಕಿ ಪಂಪ್‌ಚಾಲು ಮಾಡಿ ಬೆಂಕಿ ನಂದಿಸತೊಡಗಿದರು. ಅವರ ಸಹಾಯದಿಂದ ಭಾರೀ ಅವಘಡ ತಪ್ಪಿತು. ಸುಮಾರು 2 ಗಂಟೆಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು. ಬಳಿಕ ನಾವು ಮಂಗಳೂರಿನತ್ತ ಪ್ರಯಾಣಿಸಿದೆವು ಎಂದರು ನಿಶ್ಚಲ್.
ಬೋಗಿಯಲ್ಲಿ 72 ಜನ
ಬೋಗಿಯ ಎಲ್ಲ 72 ಆಸನಗಳೂ ಭರ್ತಿಯಾಗಿದ್ದವು. ಒಳ್ಳೆಯ ನಿದ್ದೆ ಬಂದಿದ್ದ ಸಮಯವದು. ಅತ್ತೆ ಬೊಬ್ಬೆ ಹಾಕಿಕೊಂಡು ಬಂದು ಎಬ್ಬಿಸಿದಾಗ ಏನೆಂದು ತತ್‌ಕ್ಷಣ ಗೊತ್ತಾಗಲಿಲ್ಲ. ಅತ್ತೆ ಫಯರ್, ಡೇಂಜರ್ ಎಂದು ಬೊಬ್ಬೆ ಹಾಕುತ್ತಿದ್ದರು. ಕೂಡಲೇ ಪರಿಸ್ಥಿತಿ ಅರ್ಥವಾಯಿತು. ತುರ್ತು ನಿಲುಗಡೆ ಚೈನ್ ಎಳೆದೆ. ಟಾಯ್ಲೆಟ್ ಭಾಗದಲ್ಲಿ ಇಳಿಯಲು ಸಾಧ್ಯವಿರದ ಕಾರಣ, ರೈಲು ನಿಂತ ಕೂಡಲೇ ವಿರುದ್ಧ ದಿಕ್ಕಿನಲ್ಲಿ ಎಲ್ಲರನ್ನೂ ಕರೆದುಕೊಂಡು ಓಡಿದೆವು. ಐದು ನಿಮಿಷ ವಿಳಂಬವಾಗಿದ್ದರೆ ಎಲ್ಲವೂ ಹೊತ್ತಿ ಉರಿದು ಭಾರೀ ಅವಘಡವೇ ಘಟಿಸುತ್ತಿತ್ತು ಎಂದು ವಿವರಿಸುತ್ತಾರೆ ನಿಶ್ಚಲ್ ಶೆಟ್ಟಿ.
ರೈಲು ಪ್ರಯಾಣದ ಅನುಭವ ಕಡಿಮೆ. ದಟ್ಟ ಹೊಗೆ ಕಂಡಾಗ ಜೀವವೇ ಬಾಯಿಗೆ ಬಂದಂತೆ ಆಯಿತು. ತತ್‌ಕ್ಷಣ ಸೀಟಿನಿಂದ ಇಳಿದು ಫಯರ್, ಡೇಂಜರ್ ಎಂದು ಬೊಬ್ಬೆ ಹಾಕಿದೆ. ಎಲ್ಲರೂ ಸುರಕ್ಷಿತವಾಗಿರುವುದಷ್ಟೇ ಖುಷಿ.
– ಜಲಜಾಕ್ಷಿ ಮನೋಹರ್ ರೈ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.