ಬಾಳೆ ಬೆಳೆಯಲ್ಲಿ ಉತ್ತಮ ಉತ್ಪಾದನೆ ಸಾಧ್ಯ
ಅಂಗಾಂಶ ಕೃಷಿ ಬಾಳೆ ಬೇಸಾಯ ಹೆಚ್ಚು ಲಾಭದಾಯಕ ತೋಟದ ಸುತ್ತಲು ಅಗಸೆ ಸಸಿ ಒತ್ತಾಗಿ ಬೆಳಸಲು ವೈದ್ಯರ ಸಲಹೆ
Team Udayavani, Apr 30, 2019, 2:27 PM IST
ಕೋಲಾರ: ಬಾಳೆ, ಅತ್ಯುತ್ತಮ ಪೌಷ್ಠಿಕಾಂಶಯುಕ್ತವಾದ ಒಂದು ಹಣ್ಣು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮವಾದ ಬೇಡಿಕೆಯಿದೆ.
ಸಾಂಪ್ರದಾಯಿಕವಾಗಿ ಬೆಳೆದ ಬಾಳೆಗಿಂತ ಅಂಗಾಂಶ ಕೃಷಿ ಬಾಳೆ ಬೇಸಾಯ ಹೆಚ್ಚು ಲಾಭದಾಯಕವೆಂಬುದು ಈಗಾಗಲೇ ರುಜುವಾತಾಗಿದೆ.
ಬೆಳೆ ಮಾಹಿತಿ: ಉತ್ತಮ ಗುಣಮಟ್ಟದ ಬಾಳೆಯ ಉತ್ಪಾದನೆಗಾಗಿ 6 – 6 ಅಡಿ ಅಂತರದಲ್ಲಿ ನಾಟಿ ಮಾಡುವುದು. ಈ ಪದ್ಧತಿಯಲ್ಲಿ ಪ್ರತಿ ಎಕರೆಗೆ 1200 ಸಸಿಗಳು ಬೇಕಾಗುತ್ತವೆ. ಸರಬರಾಜು ಮಾಡಿದ ಸಸಿಗಳನ್ನು ಮರದ ಅಡಿಯಲ್ಲಿ ಅಥವಾ ಚಪ್ಪರದ ನೆರಳಿನಲ್ಲಿ ಶೇಖರಿಸಿ ಪ್ರತಿ ದಿನಕ್ಕೆ ಎರಡು ಬಾರಿ ನೀರು ಕೊಡುವುದು ಮತ್ತು 8-10 ದಿನಗಳ ಒಳಗಾಗಿ ನಾಟಿ ಮಾಡುವುದು. ಮೇಲ್ಕಂಡ ಗೊಬ್ಬರ ಶಿಫಾರಸುಗಳು ಸಾಮಾನ್ಯ ಮಣ್ಣಿನ ಗುಣಕ್ಕೆ ಅನುಗುಣವಾಗಿರುತ್ತದೆ.
ರೈತರು ತಮ್ಮ ಮಣ್ಣು ಮತ್ತು ಹವಾಗುಣಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳತಕ್ಕದ್ದು. ಗಾಳಿಯಿಂದಾಗುವ ಹಾನಿಯನ್ನು ತಡೆಗಟ್ಟಲು ರೈತರು ತಮ್ಮ ತೋಟದ ಸುತ್ತಲು ಅಗಸೆ ಸಸಿಗಳನ್ನು ಒತ್ತಾಗಿ ಬೆಳೆಸುವುದರಿಂದ ತಡೆಗಟ್ಟಬಹುದು.
ತಾಯಿ ಬಾಳೆ ಗಿಡದ ಪಕ್ಕದಲ್ಲಿ ಬರುವ ಮರಿ ಕಂದುಗಳನ್ನು ಸಕಾಲದಲ್ಲಿ ಹರಿತವಾದ ಉಪಕರಣದಿಂದ ಕತ್ತರಿಸಿ ತೆಗೆಯ ತಕ್ಕದ್ದು. ಇದರಿಂದ ಪೋಷಕಾಂಶಗಳು ಪೋಲಾಗುವುದನ್ನು ತಡೆಗಟ್ಟಬಹುದು.
ಕಳೆ ನಿಯಂತ್ರಣ: ಬಾಳೆ ಬೆಳೆಯಲ್ಲಿ ಕಳೆಯ ನಿಯಂತ್ರಣ ಬಹು ಮುಖ್ಯ ಅಂಶವಾಗಿದ್ದು, ಕಳೆಯ ನಿಯಂತ್ರಣವಿಲ್ಲದಿದ್ದರೆ ಸಸಿಗಳ ಬೆಳವಣಿಗೆ ಕುಂಠಿತವಾಗುವುದಲ್ಲದೇ, ರೋಗ ಹರಡುವ ಸಂಭವ ಹೆಚ್ಚಿರುತ್ತದೆ. ಬಾಳೆ ಬೆಳೆಯ ಇಳುವರಿಯು ಸಸಿಯ ಗುಣಮಟ್ಟದೊಂದಿಗೆ, ಮಣ್ಣು ಹಾಗೂ ನೀರಿನ ಗುಣಮಟ್ಟ, ಪೋಷಕಾಂಶಗಳ ನಿರ್ವಹಣೆ, ಕಳೆ ನಿರ್ವಹಣೆ, ರೋಗಗಳ ನಿರ್ವಹಣೆ ಮತ್ತು ಅನುಕೂಲಕರ ವಾತಾವರಣವನ್ನು ಅವಲಂಬಿಸಿರುತ್ತದೆ.
ನೀರಿನ ಬಳಕೆ: ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವುದರಿಂದ ಗಿಡಗಳಿಗೆ ಸಮಾನವಾಗಿ ನೀರು ಹಾಯಿಸಬಹುದಲ್ಲದೇ, ಗಿಡದ ಅವಶ್ಯಕತೆಗನುಗುಣವಾಗಿ ನೀರು ಕೊಡಬಹುದು. ಇದರಿಂದ ನೀರಿನ ಉಳಿತಾಯವಾಗುವುದಲ್ಲದೇ, ಕಳೆಗಳ ಬೆಳವಣಿಗೆ ಕಡಿಮೆಯಿರುತ್ತದೆ. ಸಾಮಾನ್ಯವಾಗಿ ಮಣ್ಣಿನ ಗುಣ, ಗಿಡದ ವಯಸ್ಸು, ಹವಾಮಾನಗಳಿಗನುಸಾರವಾಗಿ ಪ್ರತಿ ಗಿಡಕ್ಕೆ, ದಿನವೊಂದಕ್ಕೆ 10 ಲೀ.ನಿಂದ (ಆರಂಭದಲ್ಲಿ)-30 ಲೀ(ಹೂ ಬಿಡುವ ಸಮಯದಲ್ಲಿ) ನೀರು ಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರು ಕೊಡುವುದರಿಂದ ಸಸಿಗಳು ಸಾಯುವ ಸಂಭವ ಹೆಚ್ಚಿರುತ್ತದೆ. ಸಸಿಗಳು ಹೂ ಬಿಟ್ಟ ನಂತರ ಕೊನೆಯಲ್ಲಿ ಬರುವ ಗಂಡು ಹೂಗಳನ್ನು ಮುರಿದು ತೆಗೆದು ಆಧಾರಕ್ಕಾಗಿ ಕೋಲುಗಳನ್ನು ನೀಡುವುದು. 4 ತಿಂಗಳ ನಂತರ ಗಳೆ ಅಥವಾ ಕುಂಟೆ ಹೊಡೆಯುವುದರಿಂದ ಬೇರುಗಳಿಗೆ ಹಾನಿಯಾಗುವ ಸಂಭವವಿರುವುದರಿಂದ ಇದನ್ನು 4 ತಿಂಗಳ ನಂತರ ನಿಲ್ಲಿಸುವುದು ಸೂಕ್ತ. ಬಾಳೆ ಮಧ್ಯೆ ಅಂತರ ಬೆಳೆಗಳಿಂದ ಬಾಳೆಯ ಇಳುವರಿ ಕುಂಠಿತವಾಗುವುದಲ್ಲದೇ, ಬಾಳೆ ಬೆಳೆಯು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಾಹಿತಿಗೆ 7829512236 ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್ ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.