ಘಟಿಕೋತ್ಸವಕ್ಕೆ ಹಾಡಿನ ಮೆರುಗು
Team Udayavani, May 3, 2019, 6:00 AM IST
ಮಂಗಳೂರು ವಿಶ್ವವಿದ್ಯಾನಿಲಯದ 37ನೇ ಘಟಿಕೋತ್ಸವ. ಸಾಂಪ್ರದಾಯಿಕ ಪದವಿ ಪ್ರದಾನದ ಬಳಿಕ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದ್ದು ಕನ್ನಡದ ಹಾಡುಗಳು. ವಚನ, ತತ್ವಪದ, ಕೀರ್ತನೆ, ಜಾನಪದ ಹಾಡುಗಳ ಸಾಹಿತ್ಯವನ್ನು ಮನಮುಟ್ಟುವಂತೆ ಅರಳಿಸಿ ಹಾಡಿ ಮುದಗೊಳಿಸಿದವರು ಬೆಂಗಳೂರಿನ ಸವಿತಕ್ಕ ಮತ್ತು ಬಳಗ. ಈಗಾಗಲೇ ಸವಿತಕ್ಕನ ಅಳ್ಳಿಬ್ಯಾಂಡ್ ಎಂಬ ತಂಡದೊಂದಿಗೆ ಸವಿತಕ್ಕ ಜನಪದವನ್ನೂ ಒಳಗೊಂಡ ಹಾಗೆ ಕನ್ನಡ ಹಾಡುಗಳನ್ನು ತಮ್ಮ ಏರು ಧ್ವನಿಯ ಮಧುರಕಂಠದಿಂದ ಹಾಡಿ ಜನಪ್ರಿಯರಾದವರು. ಮಂಗಳಗಂಗೋತ್ರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ರಂಜನೆ ಮತ್ತು ಚಿಂತನೆಗಳ ಸಂಯೋಜಿತ ಗುತ್ಛವಾಗಿ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.
ಬಂದೇವು ನಾವು ನಿಮ್ಮ ಚರಣಕ… ಎಂಬ ಗೀಗೀಪದದ ಸಮೂಹ ಗಾಯನದ ಮೂಲಕ ಆರಂಭಗೊಂಡ ಈ ನಾದ ನಿನಾದ ಕಾರ್ಯಕ್ರಮ ಮುಂದೆ ವಚನಗಳ ಕಡೆಗೆ ಹರಿಯಿತು. ದೇವರು ನಾದಪ್ರಿಯ, ವೇದಪ್ರಿಯ ಎಂದೆಲ್ಲಾ ಹೇಳುತ್ತಾರೆ ಆದರೆ ದೇವರು ನಿಜವಾಗಿ ಭಕ್ತಪ್ರಿಯ ಎಂಬ ಸಂದೇಶವನ್ನು ಸಾರುವ ಬಸವಣ್ಣನ ವಚನದ ಪ್ರಸ್ತುತಿ ಗಮನಸೆಳೆಯಿತು. ಮುಂದೆ ಸವಿತಕ್ಕ ಸವದತ್ತಿ ಎಲ್ಲಮ್ಮನ ಕುರಿತ ಜನಪದ ಗೀತೆಯನ್ನು ಹಾಡತೊಡಗಿದಾಗ ಅವರ ಕಂಠದ ಝೇಂಕಾರ ಮಾಧುರ್ಯ ಬಿ.ಜಯಶ್ರೀಯವರನ್ನು ನೆನಪಿಸಿತು.
ಹಾಡಿಗೆ ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದ ಸಭಾಂಗಣ ಮೌನಕ್ಕೆ ಜಾರಿದ್ದು ಒಳಿತು ಮಾಡು ಮನುಸ ನೀ ಇರೊದು ಮೂರು ದಿವಸ… ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ… ಎಂಬ ಭಾವಪೂರ್ಣ ಗಾಯನಕ್ಕೆ. ಸಂಬಂಧ, ಸಂಪತ್ತು, ಆಕರ್ಷಣೆ ಎಲ್ಲವೂ ಕ್ಷಣಿಕ. ಅಣ್ಣ ಅಮ್ಮ ಅಕ್ಕ ತಂಗಿ ಎಲ್ಲ ಎಲ್ಲಿ ತನಕ ಮಣ್ಣು ಮುಚ್ಚೋ ತನಕ ಎಂಬ ಬದುಕಿನ ಕಠೊರ ಸತ್ಯವನ್ನು ಒಂದೊಂದೇ ಬಿಚ್ಚಿಡುತ್ತಾ ಸವಿತಕ್ಕ ಮೌನಕ್ಕೆ ಜಾರಿದ ಸಹೃದಯ ಮನಸಿನಲಿ ತಳಮಳದ ತರಂಗ ಸೃಷ್ಟಿಸಿ ಬದುಕಿನಲಿ ದ್ವೇಷ ಸುಟ್ಟು ಹಾಕಬೇಕಾ … ಪ್ರೀತಿ ಹಣತೆ ಹಚ್ಚಬೇಕಾ… ಎಂದು ತಿಳಿಹೇಳಿದರು. ಬಳಿಕ ಜನಪದ ಹಾಡುಗಳ ಗುಂಗಿನಿಂದ ಶರೀಫರ ತತ್ವಪದಗಳ ಲೋಕಕ್ಕೆ ನಾದಯಾನ ಸಾಗಿತು. ಕೋಡಗನ ಕೋಳಿ ನುಂಗಿತ್ತಾ… ಹಾಡು ಉತ್ಸಾಹದ ಮಳೆಗರೆಯಿತು. ನಿಂಬಿಯಾ ಬನಾದ ಮ್ಯಾಲೆ… ಹಾಡಿಗಂತೂ ಇಡೀ ಸಭೆ ಪ್ರತಿಸ್ಪಂದನ ನೀಡಿ ಸಹೃದಯ ಬಳಗ ತಮ್ಮ ಸಂಗೀತ ಜ್ಞಾನ ಮತ್ತು ಪ್ರೀತಿಯನ್ನು ಹಂಚಿ ಗಾಯಕರ ಮೆಚ್ಚುಗೆಗೆ ಪಾತ್ರವಾಯಿತು. ಸಾವಿರದ ಶರಣವ್ವ ಕರಿಮಾಯಿ ತಾಯಿ … ಎಂಬ ರಂಗಗೀತೆಯ ಪ್ರಸ್ತುತಿ ಚಪ್ಪಾಳೆಯ ಪ್ರಶಂಸೆ ಪಡೆಯಿತು.
ಸಹಗಾಯಕರಾಗಿ ದಿವ್ಯಾ, ನಿರ್ಮಲಾ ಡಿ. ಆರ್., ರಾಜೀವ್ ಅಗಲಿ, ಬಸಂತ್ ಜಿ. ಪ್ರಸಾದ್, ಶಂಕರ್ ದಾವಣಗೆರೆ (ರಿದಂ), ವಿ|ಪುಟ್ಟರಾಜು ಗೋನಾಳ್(ತಬಲಾ), ಪುಣ್ಯೇಷ್ ಕುಮಾರ್ (ಕೀಬೋರ್ಡ್), ಲೋಕೇಶ್ (ಕೊಳಲು) ಉತ್ತಮ ನಿರ್ವಹಣೆಯನ್ನು ತೋರಿದರು. ಹಾಡಿನ ನಡುವೆ ಯುವ ಸಮುದಾಯವನ್ನು ರಂಜಿಸಲೋಸುಗ ಎದ್ದು ಕುಣಿಯುವಂತೆ, ಕೇಕೆ ಹಾಕುವಂತೆ ಉತ್ತೇಜಿಸಿದ್ದು ಹಾಡಿನ ಆಸ್ವಾದನೆಗೆ ತೊಂದರೆಕೊಟ್ಟದ್ದು ಹೊರತು ಪಡಿಸಿದರೆ ಸದಭಿರುಚಿಯ ಉತ್ತಮ ಕಾರ್ಯಕ್ರಮ.
ವಚನ, ತತ್ವಪದ, ಕೀರ್ತನೆ, ಜಾನಪದ ಹಾಡುಗಳ ಸಾಹಿತ್ಯವನ್ನು ಮನಮುಟ್ಟುವಂತೆ ಅರಳಿಸಿ ಹಾಡಿ ಮುದಗೊಳಿಸಿದವರು ಸವಿತಕ್ಕ ಮತ್ತು ಬಳಗ. ಸವಿತಕ್ಕನ ಅಳ್ಳಿಬ್ಯಾಂಡ್ ತಂಡದೊಂದಿಗೆ ಜನಪದವನ್ನೂ ಒಳಗೊಂಡ ಹಾಗೆ ಹಾಡುಗಳನ್ನು ಏರು ಧ್ವನಿಯ ಹಾಡಿ ಜನಪ್ರಿಯರಾದವರು.
-ಡಾ.ಧನಂಜಯ ಕುಂಬ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.