ಗಣಿತವೇ ಯಕ್ಷಗಾನವಾದಾಗ…
Team Udayavani, May 3, 2019, 6:00 AM IST
ಯಕ್ಷಗಾನದ ಪಾತ್ರಗಳಾಗಿ ರೂಪುತಳೆದಿದ್ದ ಸಂಖ್ಯೆಗಳು. ಗಣಿತೀಯವಾಗಿ ನಿರ್ಮಾಣಗೊಂಡ ವೇದಿಕೆಯಲ್ಲಿ ಈ ಪಾತ್ರಗಳ ಮೂಲಕ ತಾವು ಕಲಿತ ಗಣಿತದ ಸಾರವನ್ನು ಯಕ್ಷಗಾನ ರೂಪದಲ್ಲಿ ಪ್ರದರ್ಶಿಸಲು ಕಾತರಿಸುತ್ತಿದ್ದ ವಿದ್ಯಾರ್ಥಿಗಳು. ಯಕ್ಷಗಾನದ ಮೂಲಕ ಗಣಿತ ಕಲಿಕೆ ಸಾಧುವೇ ಎಂಬ ಜಿಜ್ಞಾಸೆಯ ನೋಟಗಳು. ಏನಿದು ಗಣಿತ ಯಕ್ಷಗಾನ ಎಂಬ ಕುತೂಹಲದೊಂದಿಗೆ ಸೇರಿದ ಆಸಕ್ತರು. ಇಂತಹ ಪರಿಸರದಲ್ಲಿ ಪ್ರದರ್ಶಿಸಲ್ಪಟ್ಟ “ಸಂಖ್ಯಾ ಸಾಮರಸ್ಯ’ ಎಂಬ ಪ್ರಥಮ ಗಣಿತ ಯಕ್ಷಗಾನ ಬಯಲಾಟ ಶಿಕ್ಷಣ ಹಾಗೂ ಯಕ್ಷಗಾನ ರಂಗದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿತು.
ಪುತ್ತೂರು ತಾಲೂಕಿನ ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಇಲ್ಲಿನ ಗಣಿತ ಶಿಕ್ಷಕರಾದ ಪ್ರಕಾಶ ಮೂಡಿತ್ತಾಯ “ಕಲಿ – ಕಲಿಸು’ ಯೋಜನೆಯಡಿಯಲ್ಲಿ “ಗಣಿತದಲ್ಲಿ ರಂಗಕಲೆ’ ಎಂಬ ಗಣಿತ ಶಿಕ್ಷಕರ ಕಾರ್ಯಾಗಾರ ಇತ್ತೀಚೆಗೆ ಆಯೋಜಿಸಿದ್ದು, ಅದರ ಅಂಗವಾಗಿ ಈ ಗಣಿತ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು. ಕಾರ್ಯಾಗಾರದಲ್ಲಿ ಗಣಿತ ವಿಷಯದಲ್ಲಿ ಅಭಿನಯನ ಗೀತೆ, ಜನಪದ ನೃತ್ಯ, ಮೂಕಾಭಿನಯ, ನಾಟಕ ಇತ್ಯಾದಿಗಳಿದ್ದರೂ ಕೊನೆಯಲ್ಲಿ ಮೇಳೈಸಿದ್ದು ಗಣಿತ ಯಕ್ಷಗಾನ . 9ನೇ ತರಗತಿಯ ಸಂಖ್ಯಾಪದ್ಧತಿ ಎಂಬ ಪಾಠದ ಆಧಾರದಲ್ಲಿ ರಚನೆಯಾದ ಈ ಪ್ರಸಂಗ ಕೇವಲ ಎಣಿಕಾ ಸಂಖ್ಯೆಗಳಿಂದ ಆರಂಭವಾದ ನಮ್ಮ ಸಂಖ್ಯಾಪದ್ಧತಿ, ಅನಂತರ ಪೂರ್ಣಾಂಕಗಳು, ಭಾಗಲಬ್ಧ ಸಂಖ್ಯೆಗಳು, ಅಭಾಗಲಬ್ಧ ಸಂಖ್ಯೆಗಳ ಸೇರ್ಪಡೆಯಿಂದ ವಾಸ್ತವ ಸಂಖ್ಯಾ ಗಣವಾಗಿ ಸಮೃದ್ಧವಾಗುತ್ತದೆ ಎಂಬುದನ್ನು ತಾರ್ಕಿಕ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿತು. ಯಕ್ಷಗಾನದ ಚೌಕಟ್ಟಿಗೆ ಕುಂದು ಬರದಂತೆ ಕಥೆ ಹಾಗೂ ಸನ್ನಿವೇಷಗಳನ್ನು ಹೆಣೆದವರು ಯಕ್ಷಗಾನ ಕಲಾವಿದರೂ ಆಗಿರುವ ಮೂಡಿತ್ತಾಯರು. ಅದಕ್ಕನುಗುಣವಾಗಿ ಪದ್ಯ ರಚಿಸಿದವರು ಅರ್ಥದಾರಿಗಳಾದ ವೆಂಕಟ್ರಾಮ ಭಟ್ .
ಪ್ರಸಂಗವು ಧನಸಂಖ್ಯಾದೀಶನ ಒಡ್ಡೋಲಗದಿಂದ ಆರಂಭಗೊಂಡಿತು. ಸಂಖ್ಯಾ ಪದ್ಧತಿಯ ಉಗಮ, ಸಂಖ್ಯಾ ಪದ್ಧತಿಯಲ್ಲಿ ಸಮ, ಬೆಸ, ಅವಿಭಾಜ್ಯ ಇತ್ಯಾದಿ ಉಪಗಣಗಳ ವಿವರಣೆಯಿಂದ ಆರಂಭಿಸಿ ಒಂದರಿಂದ ಹತ್ತರ ವರೆಗಿನ ಪ್ರತಿಯೊಂದು ಸಂಖ್ಯೆಗಳ ಔಚಿತ್ಯ ಮತ್ತು ವಿಶೇಷತೆಗಳ ಪ್ರಸ್ತುತಿ ಹಾಗೂ ಈ ಸಂಖ್ಯೆಗಳು ಪಾಲಿಸುವ ಆವೃತ್ತ ಸಹವರ್ತ ಇತ್ಯಾದಿ ನಿಯಮಗಳ ವಿವರಣೆ ಗಮನಸೆಳೆದರೆ; ಹತ್ತು, ನೂರು, ಸಾವಿರ, ಲಕ್ಷ, ಕೋಟಿ, ಅಬುìದ, ನ್ಯಬುìದ, ಖರ್ವ, ಪದ್ಮ, ಕ್ಷೊಣಿ, ಶಂಖ, ಕ್ಷಿತಿ, ಕ್ಷೊàಭ, ನಿಧಿ, ಪರ್ವ, ಪರಾರ್ಥ, ಅನಂತ, ಸಾಗರ, ಅವ್ಯಯ, ಅಚಿಂತ್ಯ, ಅಮೇಯ, ಭೂರಿ ಎಂದು ಒಂದರ ಮುಂದೆ 36 ಸೊನ್ನೆಗಳನ್ನು ಹಾಕಿದಾಗ ಸಿಗುವ ಮಹಾಭೂರಿ ವರೆಗಿನ ಭಾರತೀಯ ಸಂಖ್ಯಾಪದ್ಧತಿಯ ಶ್ರೀಮಂತಿಕೆಯನ್ನು ನಿರರ್ಗಳವಾಗಿ ಹೇಳಿದ ಧನಸಂಖ್ಯಾದೀಶ ಪಾತ್ರದ ಹರ್ಷಿತಾ ಮಂತ್ರಮುಗ್ಧರನ್ನಾಗಿ ಮಾಡಿದರು. ಅವಿಭಾಜ್ಯ ಸಂಖ್ಯೆ ಪಾತ್ರದ ಹೇಮಸ್ವಾತಿ ಪ್ರಬುದ್ಧ ನಾಟ್ಯ ಹಾಗೂ ಅಭಿನಯದಿಂದ ಗಮನ ಸೆಳೆದರು.
ಅನಂತರ ಋಣ ವಿಷಮನ ( ವಿಕ್ರಂ ಚಂದ್ರ ) ಜೊತೆ ರಂಗ ಪ್ರವೇಶಿಸಿದ ಋಣಾಸುರನು (ಶ್ರೀನಿಧಿ) ಸಂಖ್ಯೆ, ಗುಣ ಎಲ್ಲದರಲ್ಲೂ ಧನಕ್ಕೆ ಸಮನಾಗಿದ್ದರೂ ತಾನು ಋಣ ಎಂದು ತಿರಸ್ಕೃತನಾದುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ವೈಜ್ಞಾನಿಕ ಕ್ಷೇತ್ರದಲ್ಲಿ ತಾನು ಅನಿವಾರ್ಯ ಎಂಬುದನ್ನು ಪ್ರತಿಪಾದಿಸುತ್ತಾ ಸಂಖ್ಯಾಲೋಕದ ಒಡೆತನ ತನಗೆ ಸೇರಬೇಕೆಂದು ಧನಸಂಖ್ಯಾಧೀಶನ ಮೇಲೆ ಯುದ್ಧ ಸಾರುತ್ತಾನೆ. ಸ್ಪಷ್ಟ ಮಾತು ಹಾಗೂ ಸೂಕ್ತ ನಿಲುವುಗಳಿಂದ ಈ ದೃಶ್ಯ ಗಮನ ಸೆಳೆಯಿತು.
ಧನಸಂಖ್ಯಾಧೀಶ ಹಾಗೂ ಋಣಾಸುರರ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದವರು ಶೂನ್ಯ ಪಾತ್ರಧಾರಿ ತೇಜಶ್ರೀ. ಪ್ರಾಜ್ಞರಿಗೆ ತಾನು ಪೂರ್ಣ ಹಾಗೂ ಸಾಮಾನ್ಯರಿಗೆ ತಾನು ಶೂನ್ಯ ಎಂಬ ಸ್ವಗತದ ಮಾತಿನಿಂದ ಆರಂಭಿಸಿ ಪ್ರತಿ ಸಂಖ್ಯೆಗಳಿಗೂ ಅದರದೇ ಆದ ಬೆಲೆ, ಸ್ಥಾನಮಾನವಿದೆ. ಆದುದರಿಂದ ತಮ್ಮೊಳಗಿನ ಅಹಂಭಾವ ಮರೆತು ಸಮ ಮನಸ್ಸಿನಿಂದ ಇರಬೇಕೆಂಬುದನ್ನು ಗಣಿತದ ತಳಹದಿಯಲ್ಲಿ ಸೋದಾರಣವಾಗಿ ವಿವರಿಸಿದ್ದು ಆಕರ್ಷಣೀಯವಾಗಿತ್ತು. ಯಾವಾಗಲೂ ದೊಡ್ಡದನ್ನೇ ಬಯಸುವ ಜನರು ಮದುವೆಯಾಗುವ ಹುಡುಗಿಯ ಪ್ರಾಯ ಚಿಕ್ಕದಿರಬೇಕೆಂದು ಬಯಸುತ್ತಾರೆ; ಕಡಿಮೆ ಸಾಲ ಮಾಡಿದವನು ಹೆಚ್ಚು ಸಾಲ ಮಾಡಿದವನಿಗಿಂತ ಕಡಿಮೆ ಋಣಕ್ಕೆ ಒಳಗಾದವನಾದರೂ ಹೆಚ್ಚು ಸಾಲ ಮಾಡಿದವರೇ ಶ್ರೀಮಂತರು, ಪ್ರಸಿದ್ಧರು ಎಂಬ ಉದಾಹರಣೆಗಳೊಂದಿಗೆ ವಾಸ್ತವ ಅಂಶಗಳನ್ನು ಬಿಂಬಿಸಿದರು.
ಧನ ಋಣರ ಮನವೊಲಿಕೆಯ ಬಳಿಕ ಶೂನ್ಯದೊಂದಿಗೆ ಸಮುದ್ರ ಮಥನದಂತೆ ಅವರು ಸಂಖ್ಯಾ ರೇಖೆಯನ್ನು ರಚಿಸಿ ಗಣಿತ ಮಥನ ಆರಂಭಿಸುತ್ತಾರೆ. ಇನ್ನೇನು ಪ್ರಸಂಗ ಮುಗಿಯಿತು ಎನ್ನುವಾಗ ಭಾಗಲಬ್ಧ ಹಾಗೂ ಅಭಾಗಲಬ್ಧ ಸಂಖ್ಯೆಗಳ ಪ್ರತಿನಿಧಿಯಾದ ಸ್ತ್ರೀ ಪಾತ್ರ ವಾಸ್ತವಿಯ ಪ್ರವೇಶವಾಗುತ್ತದೆ. ಲಾಲಿತ್ಯ, ಭಾವಪೂರ್ಣ ಮಾತಿನ ಮೂಲಕ ವಾಸ್ತವಿ (ಧನ್ಯಶ್ರೀ) ಸಂಖ್ಯಾರೇಖೆಯಲ್ಲಿ ತನಗೂ ಸ್ಥಾನ ಕಲ್ಪಿಸುವಂತೆ ಆಗ್ರಹಿಸುತ್ತಾಳೆ. ಉಳಿದ ಪೂರ್ಣಾಂಕಗಳೆಲ್ಲ ತನ್ನ ಪರಿವರ್ತಿತ ರೂಪ ಎಂಬುದನ್ನು ಸ್ಪಷ್ಟೀಕರಿಸಿದ ಬಳಿಕ ಆಕೆಯ ಸೇರ್ಪಡೆಯಿಂದ ವಾಸ್ತವ ಸಂಖ್ಯಾಗಣವು ನಿರ್ಮಾಣವಾಗಿ ಹೆಚ್ಚು ಸಮೃದ್ಧವಾಗುತ್ತದೆ ಎಂಬಲ್ಲಿಗೆ ಕಥೆಗೆ ಮಂಗಲವಾಗುತ್ತದೆ.
ಕು|ಅಮೃತಾ ಅಡಿಗ, ಸತ್ಯನಾರಾಯಣ ಅಡಿಗ, ಕೌಶಿಕ್ ರಾವ್ ಇವರ ಹಿಮ್ಮೇಳ ಪ್ರಸಂಗವನ್ನು ಜ್ಞಾನದ ಜೊತೆ ಭಾವಪೂರ್ಣವಾಗಿರಿಸಿತು. ವಾಸುದೇವ ರೈ ನೃತ್ಯ ನಿರ್ದೇಶನದ ಗಟ್ಟಿತನ ಪ್ರತಿ ಪಾತ್ರದಲ್ಲಿ ಎದ್ದು ಕಾಣಿತ್ತಿತ್ತು.
-ಸವಿತಾ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.