ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ವೈದ್ಯರ ಕೊರತೆ
ಹಡಗಲಿ-ಕೊಟ್ಟೂರು ರೋಗಿಗಳಿಗೂ ಮುಖ್ಯ ಕೇಂದ್ರ•ಗ್ರೂಪ್-ಡಿ ನೌಕರರು ಸೇರಿ 48 ಹುದ್ದೆ ಖಾಲಿ
Team Udayavani, May 3, 2019, 11:57 AM IST
ಹರಪನಹಳ್ಳಿ: ತಾಲೂಕು ಸರ್ಕಾರಿ ಆಸ್ಪತ್ರೆ
ಹರಪನಹಳ್ಳಿ: ಸುಸಜ್ಜಿತ ಕಟ್ಟಡ, ಕೊಠಡಿ, ಹಾಸಿಗೆ, ಅಗತ್ಯ ಔಷಧ, ಕಡಿಮೆ ದರದಲ್ಲಿ ಬಡವರಿಗೆ ಔಷಧಿ ದೊರೆಯುವ ಜನೌಷಧ ಕೇಂದ್ರ ಕೂಡ ಇಲ್ಲಿ ತೆರೆಯಲಾಗಿದೆ. ನಿತ್ಯ ನೂರಾರು ರೋಗಿಗಳ ಬರುತ್ತಾರೆ. ಅಪಘಾತ ಪ್ರಕರಣ ನಿತ್ಯ ದಾಖಲಾಗುತ್ತಲೇ ಇರುತ್ತದೆ. ಆದರೆ ಹಲವು ವರ್ಷಗಳಿಂದ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಪ್ರಸೂತಿ ವೈದ್ಯರ ಕೊರತೆಯಿಂದ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಬಳಲುತ್ತಿದ್ದರೂ ಸಹ ಕಾಯಂ ವೈದ್ಯರ ನೇಮಕಕ್ಕೆ ಸರ್ಕಾರ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ರೋಗಿಗಳಲ್ಲದೇ ಸುತ್ತಲಿನ ಹಡಗಲಿ, ಕೊಟ್ಟೂರು ತಾಲೂಕಿನ ಹಲವು ಗ್ರಾಮಗಳ ರೋಗಿಗಳಿಗೆ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆ ಮುಖ್ಯ ಕೇಂದ್ರವಾಗಿದೆ. ಈಗಾಗಲೇ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮಾಡಿ ಮೇಲ್ದರ್ಜೆಗೆ ಏರಿಸಲಾಗಿದೆ. ಚಿಕಿತ್ಸೆ, ಹೆರಿಗೆಗಾಗಿ ಬರುವವರೇ ಹೆಚ್ಚು. ಹೀಗಿರುವಾಗ ಸ್ತ್ರೀರೋಗ ತಜ್ಞರು ಮತ್ತು ಹಿರಿಯ ವೈದ್ಯರ ಕೊರತೆಯಿಂದ ಮಹಿಳೆಯರು, ರೋಗಿಗಳು ಪರದಾಡುವಂತಾಗಿದೆ.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪ್ರಸೂತಿ ತಜ್ಞರಿಲ್ಲದೆ ಗರ್ಭಿಣಿಯರು, ಬಾಣಂತಿಯರು ಪರದಾಟ ನಡೆಸುವಂತಾಗಿದೆ. ಆಸ್ಪತ್ರೆಯಲ್ಲಿ ಯಾವ ವೈದ್ಯರು ಕರ್ತವ್ಯದಲ್ಲಿರುತ್ತಾರೋ, ಅವರೇ ಹೆರಿಗೆ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ 6 ತಿಂಗಳ ಹಿಂದೆ ಈ ಆಸ್ಪತ್ರೆಗೆ ಮಂಡ್ಯದಿಂದ ಪ್ರಸೂತಿ ವೈದ್ಯರಾಗಿ ಡಾ| ಶಿಲ್ಪಶ್ರೀ ಆಗಮಿಸಿದ್ದರು. ಆದರೆ ಅವರು ಬಂದು ಕೆಲವು ದಿನಗಳಲ್ಲಿಯೇ ಹೆಚ್ಚುವರಿ ಹುದ್ದೆ ಮೇಲೆ ಮಂಡ್ಯಕ್ಕೆ ತೆರಳಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ವರ್ಗಾವಣೆಗೊಂಡು ಇಲ್ಲಿಂದ ತೆರಳಿದ್ದಾರೆ. ಹೀಗಾಗಿ ಪ್ರಸೂತಿ ತಜ್ಞ ವೈದ್ಯರಿಲ್ಲದೆ ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿಯುವಂತಾಗಿದೆ.
ತಿಂಗಳಿಂದ ಕನಿಷ್ಠ 80 ರಿಂದ 90 ಹೆರಿಗೆ ಆಗುತ್ತಿವೆ. ಆದರೆ ತಜ್ಞ ವೈದ್ಯರಿಲ್ಲದಿಂದ ಸಿಜರಿನ್ ಮೂಲಕ ಹೆರಿಗೆ ಮಾಡಿಸಬೇಕಾದಂತಹ ಗರ್ಭಿಣಿಯರ ಸ್ಥಿತಿ ದೇವರಿಗೆ ಪ್ರೀತಿ ಎಂಬುವಂತಾಗಿದೆ. ಇಲ್ಲಿ ಸಹಜವಾಗಿ ಹೆರಿಗೆ ಆಗುವುದಿಲ್ಲ ಎಂದು ಗೊತ್ತಾದ ತಕ್ಷಣವೇ ವೈದ್ಯರು ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಹರಪನಹಳ್ಳಿಯಿಂದ 40 ಕಿ.ಮೀ. ದೂರದ ದಾವಣಗೆರೆ ಆಸ್ಪತ್ರೆಗೆ ತೆರಳಬೇಕು. ಇಲ್ಲವೇ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅನಾವಶ್ಯಕವಾಗಿ ಹಣ ಖರ್ಚು ಮಾಡಬೇಕಾದಂತಹ ಪರಿಸ್ಥಿತಿಯಿದೆ. ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿಯೇ ಒಬ್ಬ ಹೆರಿಗೆ ವೈದ್ಯರೂ ಇಲ್ಲದಂತಾಗಿದೆ. ಇನ್ನೂ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಹೇಳ ತೀರದಾಗಿದೆ.
ಸಿಜರಿನ್ ಮೂಲಕ ಹೆರಿಗೆ ಮಾಡಿಸಬೇಕಂದರೆ ಇಲ್ಲಿ ಅರಿವಳಿಕೆ ತಜ್ಞ ಹುದ್ದೆ ಖಾಲಿಯಿದೆ. ಹರಿಹರ ಆಸ್ಪತ್ರೆಯಿಂದ ಅರಿವಳಿಕೆ ತಜ್ಞರನ್ನು ಹೆಚ್ಚುವರಿಯಾಗಿ ಹರಪನಹಳ್ಳಿ ಆಸ್ಪತ್ರೆಗೆ ನಿಯೋಜಿಸಿದ್ದು, ವಾರದಲ್ಲಿ 3 ದಿನ ಮಾತ್ರ ಆಗಮಿಸುತ್ತಾರೆ. ಅವರು ಬಂದ ದಿನ ಮಾತ್ರವೇ ಆಪರೇಷನ್‌ಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ತಜ್ಞ ವೈದ್ಯರಿಲ್ಲದೆ ಕರ್ತವ್ಯ ನಿರತ ವೈದ್ಯರು ಮತ್ತು ಹಿರಿಯ ನರ್ಸ್‌ಗಳ ಜ್ಞಾನದ ಸಾಮರ್ಥ್ಯದ ಮೇಲೆಯೇ ಹೆರಿಗೆಗಳಾಗುತ್ತಿವೆ. ಆದರೆ ತಾಯಿ ಮತ್ತು ಮಗು ಎರಡು ಜೀವಗಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಕೂಡ ಕಾಡುತ್ತದೆ.
ಆಸ್ಪತ್ರೆ ಎದುರು ಧರಣಿ-ಎಚ್ಚರಿಕೆ
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಈಗಾಗಲೇ ಪ್ರತಿಭಟಿಸಿದ್ದೇವೆ. ಹೆರಿಗೆಗೆ ಬಂದ ಸಂಬಂಧಿಕರಿಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಸಿಬ್ಬಂದಿಗಳು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹಿರಿಯ ಮತ್ತು ಪ್ರಸೂತಿ ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡದಿರುವುದು ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆಯ ಜನಪರ ಕಾಳಜಿ ತೋರಿಸುತ್ತದೆ. ಶೀಘ್ರದಲ್ಲೇ ಪ್ರಸೂತಿ ತಜ್ಞ ವೈದ್ಯರ ನೇಮಕಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಆಸ್ಪತ್ರೆ ಎದುರು ಧರಣಿ ನಡೆಸಲಾಗುವುದು. •ಹುಲಿಯಪ್ಪರ್ ಬಸವರಾಜ್,
ಕರವೇ ತಾಲೂಕಾಧ್ಯಕ್ಷ
ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ
ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಚಿಕಿತ್ಸೆಗೆ ಬರುವವರಿಗೆ ತೊಂದರೆಯಾದಂತೆ ನೋಡಿಕೊಳ್ಳಲಾಗುತ್ತಿದೆ. ಸಹಜ ಹೆರಿಗೆ ಆಗುವಂತಹವರಿಗೆ ನಮ್ಮಲ್ಲಿಯೇ ವೈದ್ಯರು ಹೆರಿಗೆ ಮಾಡಿಸಲಾಗುತ್ತಿದೆ. ಇನ್ನೂ ಕಠಿಣ ಪರಿಸ್ಥಿತಿಯಿದ್ದು, ಸಿಜರಿನ್ ಮಾಡಬೇಕಾದಂತಹ ಅನಿವಾರ್ಯತೆ ಇರುವ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ.
•ಡಾ| ಶಂಕರನಾಯ್ಕ,
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಆಸ್ಪತ್ರೆಗೆ ಸಿಬ್ಬಂದಿ ಕೊರತೆ
ಆಸ್ಪತ್ರೆಯಲ್ಲಿ ಕೀಲು-ಮೂಳೆ, ನೇತ್ರಾ, ಫಿಜಿಷಿಯನ್, ಕಿವಿ-ಮೂಗು-ಗಂಟಲು, ಶಸ್ತ್ರ ಚಿಕಿತ್ಸಕರು, ಮಕ್ಕಳು, ಚರ್ಮ ರೋಗ, ದಂತ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಆಸ್ಪತ್ರೆಗೆ ಒಟ್ಟು 82 ಹುದ್ದೆಗಳು ಮಂಜೂರಾಗಿದ್ದು, ಕೇವಲ 34 ಹುದ್ದೆಗಳಿಗೆ ಕಾರ್ಯನಿರ್ವಹಿಸುತ್ತಿದ್ದು, 48 ಸ್ಥಾನಗಳು ಖಾಲಿಯಿವೆ. ಮುಖ್ಯ ವೈದ್ಯಾಧಿಕಾರಿ-1, ಪ್ರಸೂತಿ ವೈದ್ಯಾಧಿಕಾರಿ-1, ಶುಶ್ರೂಷಕರು ದರ್ಜೆ-2 ಹುದ್ದೆ-1, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು-1, ಶುಶ್ರೂಷಕರು-9, ಪ್ರಥಮ ದರ್ಜೆ ಸಹಾಯಕರು-1, ದ್ವಿತೀಯ ದರ್ಜೆ ಸಹಾಯಕರು-3, ಅಡುಗೆಯವರು-1, ಗ್ರೂಪ್-ಡಿ 30 ನೌಕರರ ಕೊರತೆಯಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬಡವರ ಕಷ್ಟ ಅರಿತು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಬೇಕಿದೆ.
ಎಸ್.ಎನ್.ಕುಮಾರ್ ಪುಣಬಗಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.