ಮಾಯೆಯೂ, ಐಪಿಎಲ್‌ ಪಂದ್ಯವೂ, ಚಿನ್ನ ಸ್ವಾಮಿ ಮೈದಾನವೂ

ಪಂದ್ಯದ ದಿನ ಮಯನಿರ್ಮಿತ ಅರಮನೆಯಾಗುವ ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನ

Team Udayavani, May 4, 2019, 6:00 AM IST

1-e-222

ಜಗತ್ತು ಒಂದು ಮಾಯೆ… ಹೀಗೆಂದು ಭಾರತೀಯ ತತ್ವಶಾಸ್ತ್ರಗಳು ಹೇಳುತ್ತವೆ. ಭಾರತದ ಆಧ್ಯಾತ್ಮಿಕ ಜಗತ್ತಿನ ಶಿಖರಗಳಲ್ಲಿ ಒಬ್ಬರಾದ ಶಂಕರಾಚಾರ್ಯರು ಇದನ್ನು ಬಹಳ ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ಅದ್ವೆ„ತ, ನಿರಾಕಾರದ ಪ್ರತಿಪಾದಕರಾದ ಅವರು ಹೇಳುವ ಪ್ರಕಾರ ಈ ಜಗತ್ತು ಮಿಥ್ಯೆ. ಅಂದರೆ ಜಗತ್ತು ಸುಳ್ಳು ಎಂದರ್ಥವಲ್ಲ, ಕ್ಷಣಿಕ, ಒಂದೇ ರೀತಿ ಇರುವುದಿಲ್ಲ, ನಿರಂತರವಾಗಿ ಬದಲಾಗುತ್ತದೆ ಎಂದರ್ಥ. ಜಗತ್ತಿನ ಸ್ವರೂಪ ಹೀಗೆಯೇ ಎಂದು ನಿರ್ಣಯಕ್ಕೆ ಬರಲಾಗದ ಒಂದು ಸ್ಥಿತಿಯಿದೆ. ಅದರಲ್ಲಿ ಯಾವುದನ್ನು ಸತ್ಯವೆಂದು ಹೇಳುವುದು? ಹೀಗೆ ನಿರಂತರವಾಗಿ ಬದಲಾಗುವ ಈ ಜಗತ್ತು ಶಂಕರಾಚಾರ್ಯರಿಗೆ ಮಾಯೆಯಂತೆ ಭಾಸವಾಯಿತು.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕುಳಿತು ಯಾವತ್ತೇ ಕ್ರಿಕೆಟ್‌ ಪಂದ್ಯಗಳನ್ನು ವರದಿ ಮಾಡಲು ಹೋದರೂ, ಈ ಮಾಯೆ ಎನ್ನುವ ಪದ ಬಹಳ ನೆನಪಾಗುತ್ತದೆ. ಪಂದ್ಯವನ್ನು ವರದಿ ಮಾಡಲು ಲ್ಯಾಪ್‌ಟಾಪ್‌ ಹಿಡಿದು ಮೆಟ್ರೊ ಹತ್ತುವಾಗಿಂದ ಹಿಡಿದು, ಅಂತಿಮ ವರದಿಯನ್ನು ಬರೆದು ಕಚೇರಿಗೆ ಕಳುಹಿಸಿ, ಮರಳಿ ಮನೆ ಬಾಗಿಲು ಬಡಿಯುವವರೆಗೂ ಮಾಯೆಯ ಗುಂಗು ಹಿಡಿದಿರುತ್ತದೆ. ಪಂದ್ಯದ ಅಷ್ಟೂ ಹೊತ್ತು ನಾನೊಂದು ಮಾಯಾನಗರಿಯಲ್ಲಿರುತ್ತೇನೆ. ಪಂದ್ಯದ ಹಿಂದಿನ ದಿನ ಚಿನ್ನಸ್ವಾಮಿ ಮೈದಾನ ಮತ್ತು ಅದರ ಆಸುಪಾಸು ನೋಡಿದರೆ ಕಾಣುವ ದೃಶ್ಯಗಳೇ ಬೇರೆ. ಪಂದ್ಯ ಇವತ್ತು ಶುರುವಾಗುತ್ತೆ ಎಂದುಕೊಂಡರೆ, ಹೆಚ್ಚು ಕಡಿಮೆ ಬೆಳಗ್ಗೆಯಿಂದಲೇ ಮೈದಾನದ ಸ್ವರೂಪ ಬದಲಾಗುತ್ತದೆ. ದಿಢೀರನೆ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಕಾಣಿಸಿಕೊಳ್ಳುತ್ತಾರೆ. ನಾಗರಿಕರಲ್ಲಿ ಸಣ್ಣಗೆ ಭೀತಿಯ ವಾತಾವರಣ ತುಂಬಿಕೊಳ್ಳುತ್ತದೆ. ಆ ಜಾಗದಲ್ಲಿ ಟ್ರಾಫಿಕ್‌ ದಟ್ಟವಾಗುತ್ತದೆ. ವಾಹನಗಳ ಕಾರಣಕ್ಕಲ್ಲ. ಅಲ್ಲಿ ನಡೆದಾಡುವವರ ಸಂಖ್ಯೆ ಒಂದೇ ಬಾರಿ ಸಾವಿರಾರು ಪಟ್ಟು ಏರುವ ಕಾರಣಕ್ಕೆ.

35 ಸಾವಿರ ಪ್ರೇಕ್ಷಕ ಸಾಮರ್ಥ್ಯವಿರುವ ಚಿನ್ನಸ್ವಾಮಿ ಮೈದಾನದಲ್ಲಿ, ಅಷ್ಟೂ ಸಂಖ್ಯೆಯಲ್ಲಿ ಪ್ರೇಕ್ಷಕರು ಬರತೊಡಗಿದಾಗ ಆಗುವ ಬದಲಾವಣೆ ಅದು. ಇಡೀ ಮೈದಾನದ ಆಸುಪಾಸು ಅಂದರೆ ಅನಿಲ್‌ ಕುಂಬ್ಳೆ ವೃತ್ತ, ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣ, ಎಂಜಿರಸ್ತೆ ಮೆಟ್ರೊ ನಿಲ್ದಾಣ ಇದರ ನಡುವೆ ದೊಡ್ಡದಾಗಿ ಹರಡಿಕೊಂಡಿರುವ ಚಿನ್ನಸ್ವಾಮಿ ಮೈದಾನದ ಸುತ್ತಲೂ ಕೆಂಪು ಟೀಶರ್ಟ್‌ ಧರಿಸಿರುವ ವ್ಯಕ್ತಿಗಳೇ ಕಾಣಿಸಿಕೊಳ್ಳುತ್ತಾರೆ. ಅವರ ಮುಖವನ್ನು ಆರ್‌ಸಿಬಿ ಎಂಬ ಬರಹ, ಚಿತ್ರಗಳು ತುಂಬಿಕೊಳ್ಳುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಆರ್‌ಸಿಬಿ ಭಾವುಟಗಳು ಕಾಣಿಸಿಕೊಳ್ಳುತ್ತವೆ.

ಇದ್ದಕ್ಕಿದ್ದಂತೆ ಆರ್‌ಸಿಬಿ, ಆರ್‌ಸಿಬಿ ಎಂದು ತಾರಕ ಸ್ವರದಲ್ಲಿ ಸತತವಾಗಿ ಕೂಗುವುದು ಕೇಳುತ್ತದೆ. ಕ್ರಿಕೆಟ್‌ ಪರಿಚಯವಿಲ್ಲದ ವ್ಯಕ್ತಿಗಳು ಇದನ್ನು ಮುಷ್ಕರದ ದನಿಯಂತೆ ಕೇಳಿಸಿಕೊಂಂಡು ತಬ್ಬಿಬ್ಟಾಗುವ ಸಾಧ್ಯತೆಯಿದೆ. ಆದರೆ ಇಲ್ಲಿ ಪ್ರತಿರೋಧವಿರುವುದಿಲ್ಲ, ತಮ್ಮ ಮೆಚ್ಚಿನ ತಂಡ ಸತತವಾಗಿ ದಯನೀಯ ಸೋಲು ಕಾಣುತ್ತಿದ್ದರೂ, ತಮ್ಮ ಅಭಿಮಾನದಲ್ಲಿ ಯಾವುದೇ ವ್ಯತ್ಯಾಸ ಮಾಡಿಕೊಳ್ಳದೇ ಕೂಗಿ ಕೂಗಿಯೇ ಅಭಿಮಾನವನ್ನು ವ್ಯಕ್ತಪಡಿಸುವ ಅಭಿಮಾನಿಗಳ ಅಭಿಮಾನವಿರುತ್ತದೆ. ಈ ಕೂಗನ್ನು ದಾಟಿ ಮುಂದಕ್ಕೆ ಹೋಗೋಣವೆಂದರೆ ಒಂದು ಹೆಜ್ಜೆ ಮುಂದಿಡಲೂ ಸಾಧ್ಯವಿಲ್ಲ. ಪಾದಾಚಾರಿಗಳ ಜಾಗದಲ್ಲಿ ಹಿಂದಿನಿಂದಲೂ, ಮುಂದಿನಿಂದಲೂ ಅಡ್ಡ ಬರುವ ಪಾದಾಚಾರಿಗಳು, ಅಲ್ಲೇ ಪಕ್ಕದಲ್ಲಿ ಬಂದೂಕಿನ ಸಮೇತ ಬೇಸತ್ತ ಮುಖದಲ್ಲಿ ಕೂತಿರುವ ಪೊಲೀಸರು, ಮತ್ತೂಂದು ಕಡೆ ಕಳ್ಳ ಟಿಕೆಟ್‌ಗಳನ್ನು ಮಾರುತ್ತಿರುವ ವ್ಯಕ್ತಿಗಳನ್ನು ಹಿಡಿದು, ಬೇರೆಯೇ ಲೆಕ್ಕಾಚಾರದಲ್ಲಿ ಮುಳುಗಿರುವ ಭದ್ರತಾ ಸಿಬ್ಬಂದಿ! ಥೂತ್ತೇರಿ ಎಂದು ತಲೆಕೆಟ್ಟು ಕೆಳಗಿಳಿದರೆ ಎಂದಿನಂತೆ ವಾಹನಗಳಿಂದ ತುಂಬಿಕೊಂಡಿರುವ ರಸ್ತೆ. ಯಾಕಪ್ಪಾ ಈ ಐಪಿಎಲ್‌ ಪಂದ್ಯ ಬಂತು, ಹೆಂಗಪ್ಪಾ ನಾವು ಅಂದರೆ ಮಾಧ್ಯಮದವರು ಒಳಪ್ರವೇಶಿಸುವ 10ನೇ ಸಂಖ್ಯೆಯ ಸ್ಟಾಂಡ್‌ ತಲುಪುವುದು ಎಂಬ ರೇಜಿಗೆ ಹತ್ತಿದ್ದಾಗಲೇ ಒಂದು ಸ್ವಲ್ಪ ಜಾಗ ಕಾಣುತ್ತದೆ. ಒಂದು ಹತ್ತು ಹೆಜ್ಜೆ ಸಲೀಸಾಗಿ ಮುಂದೆ ಹೋಗುತ್ತೇನೆ. ಅಷ್ಟರಲ್ಲಿ ಧುತ್ತನೆ ಎದುರಾಗುವ ದೊಡ್ಡ ಗುಂಪು. ನನ್ನ ಮುಖದಲ್ಲಿ ಮತ್ತೆ ಬೆವರು, ನಿಟ್ಟುಸಿರು, ಹತಾಶೆ. ಹಾಗೂ ಹೀಗೂ 4.30ಕ್ಕೆ ಶುರು ಮಾಡಿದ ನನ್ನ ಸಾಹಸವನ್ನು 5.30ಕ್ಕೆ ಮುಗಿಸುತ್ತೇನೆ. ಅಂದರೆ ಮಾಧ್ಯಮ ಮಂದಿಗೆಂದೇ ಇರುವ 10ನೇ ಸಂಖ್ಯೆಯ ಗೇಟನ್ನು ಪ್ರವೇಶಿಸುತ್ತೇನೆ. ಅಷ್ಟರಲ್ಲಿ ಒಂದು ಸತ್ಯ ಅರ್ಥವಾಗುತ್ತದೆ. ಛೇ ನಾನು ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದಲ್ಲಿ ಇಳಿಯುವ ಬದಲು, ಎಂಜಿ ರಸ್ತೆಯ ನಿಲ್ದಾಣದಲ್ಲಿಳಿದಿದ್ದರೆ ಇನ್ನೂ ಬೇಗ ಒಳ ನುಗ್ಗುತ್ತಿದ್ದೆ, ಎಂಥ ದರಿದ್ರ ಕೆಲಸ ಮಾಡಿಕೊಂಡೇ ಎಂದು ಬೇಸರಗೊಳ್ಳುತ್ತೇನೆ. ಈ ಬೇಸರದಲ್ಲೇ ಇದೇ 10ನೇ ಸಂಖ್ಯೆಯ ಸ್ಟಾಂಡ್‌ ತಲುಪಲು ಮಾಮೂಲಿ ದಿನ ಕೇವಲ 10 ನಿಮಿಷ ಸಾಕು ಎಂಬ ನೆನಪಾಗುತ್ತದೆ. ಸಿಟ್ಟು ಇನ್ನೂ ಏರುತ್ತದೆ.

ಅದರ ಮಧ್ಯೆಯೇ ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಜಾತ್ರೆ ನಡೆಯುತ್ತಿರುವ ಭಾವದಿಂದಲೇ ನನ್ನ ಮನಸ್ಸು ವಿಧವಿಧ ಕಲ್ಪನೆಗಳಿಗೆ ಜಾಗ ನೀಡುತ್ತದೆ. ಹಾದಿ ಮಧ್ಯೆ ಬಣ್ಣಬಣ್ಣದ ಬಲೂನು ಮಾರುವ, ಬಾಂಬೆ ಮಿಠಾಯಿ ಮಾರುವ ವ್ಯಕ್ತಿಗಳು ಕಾಣುತ್ತಾರೆ. ಇದು ಎಂದಿನಂತಲ್ಲ, ಅವರ ಸುತ್ತ ಚೌಕಾಶಿ ಮಾಡುವ ಒಂದಷ್ಟು ವ್ಯಕ್ತಿಗಳೂ ಕಾಣುತ್ತಾರೆ. ಮಹಾರಾಷ್ಟ್ರದ ಪಂಢರಾಪುರ ದೇವಸ್ಥಾನದಲ್ಲಿ ವಿಟuಲನ ಮುದ್ರೆಯನ್ನು ಮುಖ, ಎದೆ ಮೇಲೆ ಒತ್ತುವ ವ್ಯಕ್ತಿಗಳಂತೆ ನಿಮ್ಮ ಮೇಲೂ ಆರ್‌ಸಿಬಿ ಎಂಬ ಟಸ್ಸೆ ಹೊಡೆಯಲು ಜನ ಕಾಯುತ್ತಿರುತ್ತಾರೆ. ಒಂದಷ್ಟು ವ್ಯಕ್ತಿಗಳ ಇಡೀ ಮೈಯೇ ಬಣ್ಣದಿಂದ ತುಂಬಿ ಹೋಗಿದ್ದರೆ, ಇನ್ನು ಕೆಲವರ ಮುಖ ನಿಮ್ಮೆದುರೇ ಕ್ಷಣಕ್ಷಣಕ್ಕೂ ವಿಚಿತ್ರವಾಗಿ ಬದಲಾಗುತ್ತ ಹೋಗುವುದನ್ನು ನೀವು ಕಾಣುತ್ತೀರಿ. ಎಲ್ಲ ಆದಮೇಲೆ ಕೆಲವೊಮ್ಮೆ ಸಂಭ್ರಮ, ಇನ್ನು ಕೆಲವೊಮ್ಮೆ ಆಕ್ರೋಶ ಕಾಣುತ್ತದೆ. ಕೆಲವರು ಬೆಲೆ ಹೆಚ್ಚಾಯಿತೆಂದು ತಗಾದೆ ತೆಗೆಯುತ್ತಾರೆ.

ಆರ್‌ಸಿಬಿಯ ಟೀಶರ್ಟ್‌ಗಳನ್ನು ಬಡವರು, ಶ್ರೀಮಂತರು, ಮೇಲ್ವರ್ಗ, ಕೆಳವರ್ಗ, ವಿದ್ಯಾವಂತ, ದಡ್ಡ ಎಂಬ ಭೇದಭಾವಗಳಿಲ್ಲದೇ ಎಲ್ಲರೂ ಧರಿಸುವುದನ್ನು ನೀವು ನೋಡುತ್ತೀರಿ. ಅಷ್ಟರಲ್ಲಿ ಜನ ಮೈದಾನಕ್ಕೆ ತುಂಬಿಕೊಳ್ಳುತ್ತಾರೆ. ಅರ್ಧಗಂಟೆ ಹಿಂದೆ ಖಾಲಿಯಿದ್ದ ಮೈದಾನ, 7 ಗಂಟೆ ಆಗುತ್ತಲೇ ಭರ್ತಿ ಆಗಿರುವುದನ್ನು ಕಂಡು ನೀವು ತಬ್ಬಿಬ್ಟಾಗುತ್ತೀರಿ. ಈ ಜನ ಎಲ್ಲಿಂದ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಇಷ್ಟು ದಿನ ಎಲ್ಲಿದ್ದರು ಎಂಬ ಪ್ರಶ್ನೆ ತುಂಬಿಕೊಳ್ಳುತ್ತದೆ.

ಪಂದ್ಯ ಶುರುವಾಗುವುದು ರಾತ್ರಿ 8 ಗಂಟೆಗೆ. ಅಲ್ಲಿಯವರೆಗೆ ಮೈದಾನದ ಸ್ಥಿತಿಗತಿಯೇ ಬೇರೆ. ಅದೊಂದು ಯಕ್ಷ ಲೋಕ. 4 ದೊಡ್ಡ ದೊಡ್ಡ ಫ್ಲಡ್‌ಲೈಟ್‌ಗಳು ಹತ್ತಿಕೊಂಡು ಇಡೀ ಮೈದಾನವನ್ನು ಬೆಳಗಲು ಶುರು ಮಾಡುತ್ತವೆ. ಮೈದಾನದಲ್ಲಿ ಅಂಕಣವನ್ನು ಸರಿ ಮಾಡುವ ಸಿಬ್ಬಂದಿ ಏನೇನೋ ವ್ಯವಸ್ಥೆ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲವೊಂದು ಕಡೆ ಮೈದಾನದ ಸಣ್ಣಪುಟ್ಟ ಏರುಪೇರನ್ನೂ ಗಮನಿಸಿ ಸರಿ ಮಾಡುವ ಕೆಲಸ ನಡೆಯುತ್ತಿರುತ್ತದೆ. ಕೂಲಿಕಾರ್ಮಿಕರು, ಬಡವರು ಆ ಯಕ್ಷಲೋಕದೊಳಕ್ಕೆ ಸಲೀಸು ಪ್ರವೇಶ ಪಡೆದಿರುತ್ತಾರೆ. ವಿಶ್ವದ ಅತಿಶ್ರೇಷ್ಠ ಆಟಗಾರರು ಒಂದು ಅಭ್ಯಾಸ ನಡೆಸುತ್ತಿದ್ದರೆ, ಅದರ ಪರಿವೆಯೇ ಇಲ್ಲದೇ ನೌಕರರು ಮೈದಾನವನ್ನು ಸ್ವತ್ಛ ಮಾಡುವ, ಸಿದ್ಧ ಮಾಡುವ ಕಾರ್ಯಭಾರದಲ್ಲಿ ಮಗ್ನರಾಗಿರುತ್ತಾರೆ. ಆ ಆಟಗಾರರ ದರ್ಶನ ಮಾಡಲು ವರ್ಷಗಟ್ಟಲೆ ಕಷ್ಟಪಡುವ ಅಭಿಮಾನಿಗಳ ಮಧ್ಯೆ, ಈ ಕಾರ್ಮಿಕರು ಪಕ್ಕದಲ್ಲೇ ಓಡಾಡುತ್ತಾರೆ. ಅವರ್ಯಾರೂ ಆಟಗಾರರ ಹಸ್ತಾಕ್ಷರ ಕೇಳುವುದಿಲ್ಲ, ಅವರ ಕೈಕುಲುಕುವುದಿಲ್ಲ, ಪಕ್ಕದಲ್ಲಿರುವುದು ಕೋಟ್ಯಂತರ ಮಂದಿಯ ಆರಾಧ್ಯ ದೈವಗಳು ಎಂಬ ಅರಿವೂ ಇಲ್ಲದಂತೆ ತಮ್ಮ ಕೆಲಸದಲ್ಲಿ ತಾವು ನಿರತರಾಗಿರುತ್ತಾರೆ. ಆಗ ಭಗವದ್ಗೀತೆಯ ಕರ್ಮಣ್ಯೆ ವಾಧಿಕಾರಸ್ತೆ ಮಾಫ‌ಲೇಷು ಕದಾಚನ ನೆನಪಾಗುತ್ತದೆ.

ಅಷ್ಟರಲ್ಲಿ ರಾತ್ರಿ 7.30 ಗಂಟೆಯಾಗುತ್ತದೆ. ಟಾಸ್‌ ಹಾರಿಸಲು ಅಧಿಕಾರಿಗಳು ಆಗಮಿಸುತ್ತಾರೆ, ಎರಡೂ ತಂಡಗಳ ನಾಯಕರು ತಮ್ಮ ತಂಡಗಳ ಪಟ್ಟಿಯನ್ನು ಹಿಡಿದು ಹಾಜರಾಗುತ್ತಾರೆ. ಆಗ ಇಡೀ ಮೈದಾನದ ಸ್ವರೂಪ ಪಂಚತಾರಾ ಹೋಟೆಲ್‌ನಂತೆ ಬದಲಾಗುತ್ತದೆ. ಮೈದಾನದ ಹೊರಗೆ ಪೊಲೀಸರು ನಿಟ್ಟುಸಿರು ಬಿಡುತ್ತಾರೆ. ಇನ್ನು ಮೂರೂವರೆ ಗಂಟೆಕಾಲ ಅವರಿಗೆ ನೆಮ್ಮದಿ.

ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ ರಾತ್ರಿ 11.30ಕ್ಕೆ ಪಂದ್ಯ ಮುಗಿಯುತ್ತದೆ. ಆರ್‌ಸಿಬಿ ಗೆದ್ದಿದ್ದರೆ ಪ್ರೇಕ್ಷಕರ ಹಾವಭಾವ ಒಂದು ರೀತಿಯಿರುತ್ತದೆ, ಸೋತಿದ್ದರೆ ಇನ್ನೊಂದು ತೆರನಾಗಿ ಬದಲಾಗುತ್ತದೆ. ಆದರೂ ಆರ್‌ಸಿಬಿ ಎಂಬ ತಾರಕಸ್ವರದ ಕೂಗಿಗೆ ಬರವಿರುವುದಿಲ್ಲ. ಅಷ್ಟರಲ್ಲಿ ಪ್ರೇಕ್ಷಕರ ಅಭಿಮಾನದ ತೀವ್ರತೆ ಕಡಿಮೆಯಾಗಿರುತ್ತದೆ. ಎಲ್ಲರಿಗೂ ಮನೆಗೆ ಹೋಗುವ ತರಾತುರಿ. ಬಹುತೇಕರು ಮೆಟ್ರೊ ಹತ್ತಿಕೊಳ್ಳುವ ಹೋರಾಟದಲ್ಲಿರುತ್ತಾರೆ. ಮೆಟ್ರೊ ಸಿಬ್ಬಂದಿ ಎಂದಿನ ನಿಯಮವನ್ನು ತುಸು ಸಡಿಲಿಸಿ ಜನರನ್ನು ಬೇಗ ಬೇಗ ಒಳಬಿಡುತ್ತಾರೆ. ಟಿಕೆಟ್‌ಗಳ ಜಾಗದಲ್ಲಿ ಎಂದಿನಂತೆ ಬಿಲ್ಲೆ ಇರುವುದಿಲ್ಲ, ಬದಲಿಗೆ ಬಸ್‌ನಲ್ಲಿರುವ ಕಾಗದವಿರುತ್ತದೆ.

ಸ್ಮಶಾನ ಮೌನ: ಐಪಿಎಲ್‌ ಪಂದ್ಯ ಮುಗಿಯುತ್ತಿದ್ದಂತೆ, ಮೈದಾನದಲ್ಲಿ ಇದ್ದಕ್ಕಿದ್ದಂತೆ ಒಂದು ಸ್ಮಶಾನ ಮೌನ ಆವರಿಸಿಕೊಳ್ಳಲು ಶುರುವಾಗುತ್ತದೆ. ಅಲ್ಲಿಯವರೆಗೆ ತುಂಬಿತುಳುಕುತ್ತಿದ್ದ ಮೈದಾನ ಕೆಲವೇ ನಿಮಿಷದಲ್ಲಿ ಖಾಲಿಯಾಗಿರುತ್ತದೆ. ಕುರ್ಚಿಗಳು ಖಾಲಿಖಾಲಿ. ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಎಂಬ ಪ್ರಶ್ನೆ ಮತ್ತೆ ಹುಟ್ಟಿಕೊಳ್ಳುತ್ತದೆ. ಇಡೀ ವಾತಾವರಣದಲ್ಲಿ ನಿಶ್ಶಬ್ದ! ಕೆಲವೇ ನಿಮಿಷಗಳ ಹಿಂದಿದ್ದ ಚಿತ್ರ ಈಗ ಬದಲು, ಮತ್ತೆ ನಿಷ್ಕಾಮಕರ್ಮಿಗಳಂತೆ ಮೈದಾನ ಸಿಬ್ಬಂದಿ ಒಳ ಪ್ರವೇಶಿಸುತ್ತಾರೆ. ಮಳೆ ಬಂದರೆ ಇರಲಿ ಎಂದು ಪೆವಿಲಿಯನ್‌ನಲ್ಲಿ ಇಡಲಾಗಿದ್ದ ಬೃಹತ್‌ ಟಾರ್ಪಲ್‌ಗ‌ಳನ್ನು ಎತ್ತಿ ಸುರಕ್ಷಿತಗೊಳಿಸುವ, ಮೈದಾನದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವರು ಮಗ್ನರಾಗಿರುತ್ತಾರೆ. ಈ ಬಾರಿ ಅವರ ಸುತ್ತ, ವಿಶ್ವದ ಸರ್ವಶ್ರೇಷ್ಠ ಕ್ರಿಕೆಟಿಗರು ಇರುವುದಿಲ್ಲ. ಈಗಲೂ ಆ ಸಿಬ್ಬಂದಿ ಹಾವಭಾವದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಪತ್ರಕರ್ತರು ಮಾಧ್ಯಮಕೇಂದ್ರದಿಂದ ಹೊರಬರುತ್ತಿದ್ದಂತೆ, ಪರಿಸ್ಥಿತಿ ಸಂಪೂರ್ಣ ಬದಲು. ಚಿನ್ನಸ್ವಾಮಿ ಆವರಣ ಆಗ ಸಣ್ಣ ಕಸದ ತೊಟ್ಟಿಯಂತೆ ಕಾಣುತ್ತದೆ. ಊಟ ಮಾಡಿ ಬಿಟ್ಟ ಸಾವಿರಾರು ತಟ್ಟೆಗಳಲ್ಲಿ ಅನ್ನದ ಕಾಳುಗಳ ಬಿದ್ದು ಹೊರಳಾಡುತ್ತಿರುತ್ತವೆ. ಕೈಗೆ ಕಾಲಿಗೆ ದೊಡ್ಡ ದೊಡ್ಡ ಕಸದಬುಟ್ಟಿಗಳು ತಾಕುತ್ತವೆ. ಹೊರಬಂದರೆ ಈ ಕಸವನ್ನೆಲ್ಲ ಸಾಗಿಸಲು ಸಾಹಸ ಮಾಡುತ್ತಿರುವ ಸಿಬ್ಬಂದಿ ಕಾಣುತ್ತಾರೆ. ಅದಕ್ಕೂ ಕೆಲವೇಗಂಟೆಗಳ ಮುನ್ನ ಇದ್ದ ಮಾಯಾನಗರಿ ಈಗ ಮಾಯವಾಗಿ ಒಂದು ದೊಡ್ಡ ಕಸದ ತೊಟ್ಟಿಯಂತೆ ಮೈದಾನ ಭಾಸವಾಗುತ್ತದೆ. ಇಡೀ ಮೈದಾನವನ್ನು ತಮ್ಮ ಉಪಸ್ಥಿತಿಯಿಂದ ಬೆಳಗಿದ್ದ ಮಾಯಗಾರರಾದ ಆಟಗಾರರು ಅಲ್ಲಿಂದ ಬಸ್‌ನಲ್ಲಿ ಪೊಲೀಸರ ಸುರಕ್ಷತೆಯೊಂದಿಗೆ ತೆರಳುತ್ತಾರೆ. ದೇಶದ ಇನ್ನೊಂದು ಮೈದಾನ ಅವರ ಮಾಯದ ಸ್ಪರ್ಶಕ್ಕಾಗಿ ಕಾದಿರುತ್ತದೆ. ಇನ್ನೊಬ್ಬ ಯಾರೋ ಪತ್ರಕರ್ತ ಇಂತಹದ್ದೇ ಯೋಚನೆಗಳಲ್ಲಿ ಕಲ್ಪನೆಗಳಿಗೆ ಜೀವಕೊಡುತ್ತಾ ಮಾಧ್ಯಮ ಕೇಂದ್ರದಲ್ಲಿ ಕುಳಿತಿರುತ್ತಾನೆ…

-ನಿರೂಪ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.