ವೆಲ್ಲಾರ ಜಂಕ್ಷನ್ ಕಗ್ಗಂಟು; ಶಾಶ್ವತ ಸ್ವಾಧೀನಕ್ಕೂ ಚಿಂತನೆ
Team Udayavani, May 4, 2019, 3:09 AM IST
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಬರುವ ಸುರಂಗ ಮಾರ್ಗಕ್ಕೆ ಕಗ್ಗಂಟಾಗಿರುವ ವೆಲ್ಲಾರ ಜಂಕ್ಷನ್ ಬಳಿಯ ಚರ್ಚ್ ಜಾಗವನ್ನು ಅಗತ್ಯಬಿದ್ದರೆ, ಶಾಶ್ವತವಾಗಿ ಭೂಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಚಿಂತನೆ ನಡೆಸಿದೆ.
ಡೈರಿ ವೃತ್ತ-ನಾಗವಾರ ನಡುವಿನ ಮೆಟ್ರೋ ಸುರಂಗ ಮಾರ್ಗವು ವೆಲ್ಲಾರ ಜಂಕ್ಷನ್ ಮೂಲಕ ಹಾದುಹೋಗಲಿದ್ದು, ಜಂಕ್ಷನ್ ಬಳಿ ಒಂದು ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧದ ಕಾಮಗಾರಿಗೆ ಆಲ್ ಸೆಂಟ್ಸ್ ಚರ್ಚ್ ಆವರಣದ ಸುಮಾರು 4,500 ಚದರ ಮೀಟರ್‌ನಷ್ಟು ತಾತ್ಕಾಲಿಕ ಜಾಗದ ಅವಶ್ಯಕತೆ ಇದೆ.
ಇದಕ್ಕೆ ಸ್ಥಳೀಯವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ವಿರೋಧ ವ್ಯಕ್ತಪಡಿಸುತ್ತಿರುವ ಗುಂಪಿನೊಂದಿಗೆ ಈಗಾಗಲೇ ನಿಗಮವು ಹಲವು ಸುತ್ತಿನ ಮಾತುಕತೆ ನಡೆಸಿದೆ. ಮನವೊಲಿಕೆ ಯಶಸ್ವಿಯಾಗದೆ ಇದ್ದರೆ, ಅನಿವಾರ್ಯವಾಗಿ ಆ ಭೂಮಿಯನ್ನು ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ.
ಚರ್ಚ್‌ಗೆ ಸೇರಿದ ಒಟ್ಟಾರೆ 8,100 ಚದರ ಮೀಟರ್ ಜಾಗದಲ್ಲಿ ಒಂದು ಭಾಗವನ್ನು ಮೆಟ್ರೋ ನಿಲ್ದಾಣಕ್ಕಾಗಿ ಸುಮಾರು 3,600 ಚದರ ಮೀಟರ್ ಜಾಗವನ್ನು ಈಗಾಗಲೇ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅಂದಾಜು ನೂರು ಕೋಟಿ ರೂ. ಪರಿಹಾರವನ್ನೂ ನೀಡಲಾಗಿದೆ.
ಉಳಿದ 4,500 ಚದರ ಮೀಟರ್ ಜಾಗವನ್ನು ಲೀಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಕಾಮಗಾರಿ ನಡೆಸಲು ತಾತ್ಕಾಲಿಕವಾಗಿ ಪಡೆಯಲಾಗುತ್ತಿದೆ. ಆದರೆ, ಇದಕ್ಕಾಗಿ ಆವರಣದಲ್ಲಿರುವ ಹತ್ತಾರು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದ್ದರಿಂದ ಪರಿಸರವಾದಿಗಳು ಮತ್ತು ಸಮುದಾಯದ ಪ್ರತಿನಿಧಿಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಅಗತ್ಯಬಿದ್ದರೆ ಸ್ವಾಧೀನ – ಎಂಡಿ: “ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮನವರಿಕೆ ಮಾಡಲಾಗಿದೆ. ಜತೆಗೆ ಪರಿಸರವಾದಿಗಳು ಮತ್ತು ಚರ್ಚ್‌ನ ಸದಸ್ಯರನ್ನೂ ಕರೆದು ಮಾತುಕತೆ ನಡೆಸಲಾಗಿದ್ದು, ಹಲವು ಸಲಹೆಗಳನ್ನೂ ಸದಸ್ಯರು ನೀಡಿದ್ದಾರೆ.
ಅವುಗಳ ಸಾಧಕ-ಬಾಧಕಗಳ ಬಗ್ಗೆಯೂ ಪರಾಮರ್ಶೆ ಮಾಡಲಾಗುತ್ತಿದೆ. ನಮ್ಮ ಮೊದಲ ಆದ್ಯತೆ ಮನವೊಲಿಕೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಹಕಾರ ಅತ್ಯಗತ್ಯ. ಇದು ಸಾಧ್ಯವಾಗದಿದ್ದರೆ, ಅನಿವಾರ್ಯವಾಗಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ’ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ “ಉದಯವಾಣಿ’ಗೆ ತಿಳಿಸಿದರು.
ಒತ್ತಾಯ ಸರಿ ಅಲ್ಲ; ಚರ್ಚ್ ಸದಸ್ಯರು: “ಹೀಗೆ ಒತ್ತಾಯಪೂರ್ವಕವಾಗಿ ಭೂಮಿಯನ್ನು ಕಿತ್ತುಕೊಳ್ಳಲು ಬರುವುದಿಲ್ಲ. ಅಷ್ಟಕ್ಕೂ ಮೂಲ ಯೋಜನೆಯಲ್ಲಿ ವೆಲ್ಲಾರ ಜಂಕ್ಷನ್ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸುವ ಯೋಚನೆಯೂ ಇರಲಿಲ್ಲ. ನಂತರದಲ್ಲಿ ಅದನ್ನು ಸೇರ್ಪಡೆ ಮಾಡಲಾಗಿದೆ.
ಅದೇನೇ ಇರಲಿ, ಪರ್ಯಾಯಗಳಿದ್ದಾಗ್ಯೂ ಉದ್ದೇಶಿತ ಜಾಗದಲ್ಲೇ ಯೋಜನೆ ಕೈಗೆತ್ತಿಕೊಳ್ಳುವ ಹಠ ಯಾಕೆ?’ ಎಂದು ಆಲ್ ಸೆಂಟ್ಸ್ ಸದಸ್ಯ ಎಬೆನಿಜರ್ ಪ್ರೇಮ್‌ಕುಮಾರ್ ಕೇಳುತ್ತಾರೆ. “ಇನ್ನು ಈಗಾಗಲೇ ನಾವು ಮೆಟ್ರೋ ಯೋಜನೆಗೆ ಒಂದು ಭಾಗವನ್ನು ನೀಡಿದ್ದೇವೆ.
ಈ ಹಿಂದೆ ಜಲಮಂಡಳಿಗೂ ನೀರು ಪೂರೈಕೆಗೆ ಸಂಬಂಧಿಸಿದಂತೆ ಎರಡು ಎಕರೆ ಕೊಡಲಾಗಿದೆ. ಇದೆಲ್ಲವೂ ಸಾರ್ವಜನಿಕ ಹಿತಾಸಕ್ತಿಯೇ ಆಗಿದೆ. ಈಗ ಚರ್ಚ್ ಆವರಣದ ಜಾಗವನ್ನು ಬಿಎಂಆರ್‌ಸಿ ತಾತ್ಕಾಲಿಕವಾಗಿ ಕೇಳುತ್ತಿದೆ. ಇದಕ್ಕಾಗಿ 80ಕ್ಕೂ ಹೆಚ್ಚು ಮರಗಳು ಬಲಿ ಆಗುತ್ತವೆ.
ಎರಡು ಪ್ರವೇಶ ದ್ವಾರಗಳನ್ನು ಮುಚ್ಚಬೇಕಾಗುತ್ತದೆ. 800 ಜನ ಕುಳಿತುಕೊಳ್ಳಲು ಸಾಮರ್ಥ್ಯ ಇರುವ ಆವರಣ ಕೇವಲ 300 ಜನರಿಗೆ ಸೀಮಿತವಾಗುತ್ತದೆ. ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ಸುರಂಗ ಮಾರ್ಗವು ಭೂಮಿಯ ಮೇಲ್ಮೆ„ಯಿಂದ ಕೇವಲ ಮೂರು ಮೀಟರ್ ಆಳದಲ್ಲಿ ಹಾದುಹೋಗುತ್ತದೆ. ಭವಿಷ್ಯದಲ್ಲಿ ಆ ಭಾಗದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಆಗುವುದೇ ಇಲ್ಲ. ಅಂದರೆ ಶಾಶ್ವತವಾಗಿ ಆ ಜಾಗ ನಿರುಪಯುಕ್ತ ಆಗಲಿದೆ’ ಎಂದೂ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಏಕಾಏಕಿ ಆಕ್ಷೇಪ?: “ಅಷ್ಟಕ್ಕೂ ಈ ಹಿಂದೆ ಚರ್ಚ್‌ಗೆ ಸೇರಿದ ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳುವಾಗ ಕೇಳಿಬರದ ಆಕ್ಷೇಪಣೆಗಳು ಈಗ ಏಕಾಏಕಿ ಯಾಕೆ? ಯೋಜನೆಯ ಮಾರ್ಗವು ಈ ಹಿಂದೆಯೇ ನಿರ್ಧರಿತವಾಗಿತ್ತು. ವೆಲ್ಲಾರ ಜಂಕ್ಷನ್ ಬಳಿ ನಿಲ್ದಾಣ ಬರಲಿದೆ ಎಂಬ ಅರಿವೂ ಇತ್ತು. ಹಾಗಿದ್ದಾಗ, ಒಮ್ಮೆಲೆ ನಿಲ್ದಾಣವನ್ನು ಕೈಬಿಡುವ ಪ್ರಸ್ತಾಪ ಎಷ್ಟು ಸರಿ?’ ಎಂಬ ಪ್ರಶ್ನೆಗಳು ನಿಗಮದ ಅಧಿಕಾರಿಗಳಿಂದ ಕೇಳಿಬರುತ್ತಿವೆ.
ಬಿಎಂಆರ್‌ಸಿ ಮುಂದಿಟ್ಟ ಸಲಹೆಗಳು
* ಮೈಕೋ ಇಂಡಸ್ಟ್ರೀಸ್-ಲ್ಯಾಂಗ್‌ಫೋರ್ಡ್-ವೆಲ್ಲಾರ ಜಂಕ್ಷನ್ ನಡುವೆ ಮೂರು ನಿಲ್ದಾಣಗಳ ಬದಲಿಗೆ ಎರಡು ನಿಲ್ದಾಣಗಳನ್ನು ಮಾಡಬಹುದು. ಅಂದರೆ ವೆಲ್ಲಾರ ಜಂಕ್ಷನ್ ನಿಲ್ದಾಣವನ್ನು ಕೈಬಿಟ್ಟು, ಉಳಿದೆರಡನ್ನು ತುಸು ಹಿಂದೆ-ಮುಂದೆ ಮಾಡಬೇಕಾಗುತ್ತದೆ. ಆಗ 1.38 ಕಿ.ಮೀ.ಗೊಂದು ನಿಲ್ದಾಣ ಆಗುತ್ತದೆ. ಕೋಟ್ಯಂತರ ಹಣ ಕೂಡ ಉಳಿತಾಯ ಆಗುತ್ತದೆ.
* ಹೊಸೂರು ರಸ್ತೆಯ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಿ, ಅಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬಹುದು.
* ಚರ್ಚ್ ಆವರಣದೊಳಗೆ ಎರಡೂ ಪ್ರವೇಶ ದ್ವಾರ ಮುಚ್ಚದೆ, ಒಂದು ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ವಾಹನಗಳ ನಿಲುಗಡೆಗೆ ಅವಕಾಶ ನೀಡಬಹುದು.
* 80ಕ್ಕೂ ಹೆಚ್ಚು ನೂರಾರು ವರ್ಷದ ಮರಗಳು ಬಲಿ ಆಗಲಿವೆ.
ಬಿಎಂಆರ್‌ಸಿ ವಾದ
* ಕೆಲವೇ ಕೆಲವರ ಹಿತಕ್ಕಾಗಿ ಒಂದು ನಿಲ್ದಾಣವನ್ನೇ ಕೈಬಿಡಲಾಗುವುದಿಲ್ಲ. ಇದರಿಂದ ಸಾವಿರಾರು ಜನರಿಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆ. ಇದರ ಬದಲಿಗೆ ರಕ್ಷಣಾ ಇಲಾಖೆ ಜಾಗ ಪಡೆಯಬೇಕಾಗುತ್ತದೆ. ಇದಕ್ಕೆ ವರ್ಷಗಳೇ ಹಿಡಿಯುತ್ತದೆ. ಪರಿಣಾಮ ಯೋಜನೆ ವಿಳಂಬವಾಗುತ್ತದೆ.
* ನಗರದ ಅತಿ ಹೆಚ್ಚು ವಾಹನಗಳ ದಟ್ಟಣೆ ಇರುವ ರಸ್ತೆಗಳ ಪೈಕಿ ಹೊಸೂರು ರಸ್ತೆ ಕೂಡ ಒಂದು. ಅದನ್ನು ಸ್ಥಗಿತಗೊಳಿಸಿದರೆ, ಲಕ್ಷಾಂತರ ಜನ ನಾಲ್ಕೈದು ವರ್ಷ ತೊಂದರೆ ಅನುಭವಿಸಬೇಕಾಗುತ್ತದೆ.
* ಚರ್ಚ್ ಆವರಣದೊಳಗೆ ಕೇವಲ ಕಾಮಗಾರಿಗೆ ಜಾಗ ಪಡೆಯಲಾಗುತ್ತಿದೆ. ಅಲ್ಲಿ ಯಾವುದೇ ಡಂಪಿಂಗ್ ಯಾರ್ಡ್ (ಟಿಬಿಎಂ ಕೆಳಗೆ ಇಳಿಸುವ ಜಾಗ) ಬರುವುದಿಲ್ಲ.
* ಇಲ್ಲ ಒಟ್ಟಾರೆ 37 ಮರಗಳನ್ನು ತೆರವುಗೊಳಿಸಲಿದ್ದು, ಆ ಪೈಕಿ 15-20 ಮರಗಳನ್ನು ಸ್ಥಳಾಂತರಿಸಲಾಗುವುದು. ದೊಡ್ಡ ಗಾತ್ರದ ನೂರಾರು ವರ್ಷಗಳ ಮರಗಳ ಸ್ಥಳಾಂತರ ಮಾತ್ರ ಬಲಿ ಆಗಲಿವೆ.
* 8,100 ಚ.ಮೀ. ಚರ್ಚ್‌ಗೆ ಸೇರಿದ ಒಟ್ಟಾರೆ ಜಾಗದ ವಿಸ್ತೀರ್ಣ
* 3,600 ಚ.ಮೀ. ಈಗಾಗಲೇ ವಶಪಡಿಸಿಕೊಂಡ ಜಾಗ
* 4,500 ಚ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಚರ್ಚ್ ಆವರಣದಲ್ಲಿನ ಜಾಗ
ರಸ್ತೆ ವಿಸ್ತರಣೆಗೂ ಇದೇ ಜಾಗ?: ಮೆಟ್ರೋ ಯೋಜನೆ ಮಾತ್ರವಲ್ಲ; ಇದೇ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಕೂಡ ಆಗಲಿದೆ. ಅದಕ್ಕೂ ಚರ್ಚ್ ಭೂಮಿ ಹೋಗುವ ಸಾಧ್ಯತೆ ಇದೆ. ಹೌದು, ಲಸ್ಕರ್ ಹೊಸೂರು ರಸ್ತೆ ವಿಸ್ತರಣೆ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಿದೆ. ಅದು ಉದ್ದೇಶಿತ ವೆಲ್ಲಾರ ಜಂಕ್ಷನ್ ಮೂಲಕವೇ ಹಾದುಹೋಗುತ್ತದೆ. ಇದಕ್ಕಾಗಿ ಚರ್ಚ್ ತುಸು ಜಾಗ ವಶಪಡಿಸಿಕೊಳ್ಳಬೇಕಾಗುತ್ತದೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.