••ಒಂದು ವೇಳೆ ಅತಂತ್ರ ಲೋಕಸಭೆ ನಿರ್ಮಾಣ ವಾದರೆ, ಡಿಎಂಕೆ ಬಿಜೆಪಿಗೆ ಬೆಂಬಲ ನೀಡ ಲಿದೆಯೇ? ಒಂದು ವೇಳೆ ಮೋದಿಯವರು ಪ್ರಧಾನ ಭೂಮಿಕೆ ವಹಿಸದೇ ಇದ್ದರೂ…
– ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಧಾನ ಪಾತ್ರ ವಹಿಸಲಿವೆ. ಕೇಂದ್ರ ಸರ್ಕಾರದಿಂದ ನೋವು ಅನುಭವಿಸಿದ್ದರಿಂದ ಎಲ್ಲಾ ರಾಜ್ಯಗಳ ಜನರು ಮೋದಿಯವರನ್ನು ಸೋಲಿಸಬೇಕು ಎಂದು ಉತ್ಸುಕರಾಗಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ, ಬಿಜೆಪಿಯನ್ನು ಹೊರಗಿಡುವ ಪ್ರಯತ್ನ ಮಾಡುತ್ತೇವೆ. ನಾವೇ ಜಾತ್ಯತೀತ ಸರ್ಕಾರ ರಚಿಸುತ್ತೇವೆ.
••ಎಸ್‌ಪಿ, ಬಿಎಸ್‌ಪಿ, ಟಿಆರ್‌ಎಸ್ ಮತ್ತು ಎಸ್‌ಆರ್‌ಸಿ ಸೇರಿಕೊಂಡು ತೃತೀಯ ರಂಗ ರಚನೆ ಮಾಡಿಕೊಂಡರೆ ಡಿಎಂಕೆ ನಿಲುವು ಏನಾಗಲಿದೆ?
ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ರಚಿಸುವುದೇ ನಮ್ಮ ಉದ್ದೇಶ. ಅತಂತ್ರ ಫಲಿತಾಂಶ ಪ್ರಕಟವಾದರೆ ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ಪಕ್ಷಗಳ ನಾಯಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.
••ಒಂದು ವೇಳೆ ಉಪ-ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಸಿಕ್ಕಿದರೆ, ಇತರ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸುತ್ತೀರಾ ಅಥವಾ ವಿಧಾನಸಭೆ ವಿಸರ್ಜಿಸಲು ಶಿಫಾರಸು ಮಾಡುತ್ತೀರಾ?
ನಮ್ಮ ಜತೆ ಮೈತ್ರಿ ಮಾಡಿಕೊಂಡಿರುವ ಇತರ ಪಕ್ಷಗಳ ನಾಯಕರ ಜತೆಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಜನರ ಆಶಯವನ್ನು ಜಾರಿಗೊಳಿಸುತ್ತೇವೆ. ಕಾದು ನೋಡಿ.
••ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಿಮ್ಮ ತಂದೆಯವರು ಇಲ್ಲ ಎಂಬ ಭಾವನೆ ಕಾಡುತ್ತಿದೆಯೇ?
ನಿಜಕ್ಕೂ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ತಂದೆಯ ಸ್ಥಾನಕ್ಕಿಂತ ಅತ್ಯುನ್ನತ ನಾಯಕ ಎಂಬ ನೆಲೆಯಲ್ಲಿ ಕರುಣಾನಿಧಿಯವರನ್ನು ಕಂಡಿದ್ದೇನೆ. ಪಕ್ಷ, ಕಾರ್ಯಕರ್ತರು ಕೂಡ ಅವರಂಥ ದೊಡ್ಡ ವ್ಯಕ್ತಿಯನ್ನು ಜ್ಞಾಪಿಸುತ್ತಿದ್ದಾರೆ. ಅವರು ಹೊಂದಿದ್ದ ಧ್ವನಿಯ ಮೂಲಕ ‘ನನ್ನ ಸಹೋದರ, ಸಹೋದರಿಯರೇ’ ಎಂದು ಭಾಷಣ ಆರಂಭಿಸಿದಾಗ 60 ವರ್ಷಗಳಿಂದ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂಬುದು ನೆನಪಿದೆ. ನಾವು ಈಗ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇವೆ. ರಾಜಕೀಯದ ಪ್ರತಿಯೊಂದು ಹೆಜ್ಜೆಯನ್ನೂ ಅವರಿಂದ ಕಲಿತಿದ್ದೇನೆ. ಅವರು ನಮ್ಮೊಂದಿಗೆ ಇದ್ದಿದ್ದರೆ, ನಮಗೆ ಮಾರ್ಗದರ್ಶನ ಮಾಡುತ್ತಿದ್ದರು.
••ಹಲವಾರು ಸಾಲ ಮನ್ನಾ ಯೋಜನೆಗಳನ್ನು ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖೀಸಿದ್ದೀರಿ. ತಮಿಳುನಾಡಿನಲ್ಲಿರುವ ಹಣಕಾಸಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೂಲಕ ಅದನ್ನು ಜಾರಿಗೊಳಿಸಲು ಸಾಧ್ಯವಿದೆಯೇ?
ಖಂಡಿತವಾಗಿಯೂ ಸಾಧ್ಯವಿದೆ. 2006ರಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಬೊಕ್ಕಸ ಬರಿದಾಗಿತ್ತು. ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಕೂಡಲೇ 7 ಸಾವಿರ ಕೋಟಿ ರೂ. ಮೌಲ್ಯದ ಕೃಷಿ ಸಾಲವನ್ನು ಮನ್ನಾ ಮಾಡಿದ್ದರು. ವಿವಿಧ ರೀತಿಯ ಕೈಗಾರಿಕೆಗಳನ್ನು ಆಹ್ವಾನಿಸಿ ಬಂಡವಾಳ ಹೂಡುವಂತೆ ಅವರು ಮಾಡಿದ್ದರು. ಈ ಮೂಲಕ ಆ ಕೊರತೆಯನ್ನು ತಗ್ಗಿಸಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವಾರು ನೀತಿಗಳು ಕೇವಲ ಆಯ್ದ ಉದ್ಯಮಪತಿಗಳಿಗೆ, ಅಮಿತ್ ಶಾ ಪುತ್ರನಿಗೆ ಮಾತ್ರ ಲಾಭವಾಗಿದೆ.
••ಈ ಚುನಾವಣೆ ನಿಮಗೆ ಮಾಡು ಇಲ್ಲವೇ ಮಡಿ ಎಂಬ ಸೂಚನೆಯೇ?
ಹಾಗೇನೂ ಇಲ್ಲ. ನಮಗೆ ನಮ್ಮ ಪಕ್ಷದ ಕಾರ್ಯಕರ್ತರಿಂದ ಸರಿಯಾದ ರೀತಿಯ ಬೆಂಬಲ ಇದೆ. ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಹಲವು ಚುನಾವಣೆಗಳಲ್ಲಿ ತಂದೆಯವರ ಜತೆ ಜತೆಯಾಗಿಯೇ ಪ್ರಚಾರ, ನೇತೃತ್ವ ವಹಿಸಿದ್ದೇನೆ. ಹಲವು ಬಾರಿ ಸೋತಿದ್ದೇವೆ ಮತ್ತು ಗೆದ್ದಿದ್ದೇವೆ. ನಮ್ಮ ಮೂಲ ಉದ್ದೇಶವೇನೆಂದರೆ ಬಿಜೆಪಿಯನ್ನು ಸೋಲಿಸುವುದು. ನಮ್ಮ ಮೈತ್ರಿಕೂಟವೇ ಈ ಬಾರಿ ಜಯ ಸಾಧಿಸಲಿದೆ.
••ಟಿಟಿವಿ ದಿನಕರನ್ ಮತ್ತು ಅವರ ಪಕ್ಷದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಪಕ್ಷಗಳು ರಚನೆಯಾಗುತ್ತವೆ ಮತ್ತೆ ಕೆಲವು ಮಾಯವಾಗುತ್ತವೆ. ಸದ್ಯದ ಪರಿಸ್ಥಿತಿ ಏನಾಗಿದೆ ಎಂದರೆ ಮಿತ್ರ ಪಕ್ಷಗಳ ನಡುವೆಯೇ ಹೋರಾಟ. ಅಧಿಕಾರ ಇರುವವರ ಮತ್ತು ಅದನ್ನು ಕಳೆದುಕೊಂಡವರ ನಡುವೆಯೂ ಗುದ್ದಾಟವಿದೆ. ಜನರು ಹೇಗೆ ನಿರ್ಧರಿಸುತ್ತಾರೆ ಎನ್ನುವುದು ಮೇ 23ಕ್ಕೆ ಗೊತ್ತಾಗಲಿದೆ.
ಚುನಾವಣೆಯಲ್ಲಿ ಸೋಲು-ಗೆಲುವಿನ ಪ್ರಶ್ನೆ ಇಲ್ಲ. ಬಹಳ ಹಿಂದಿನಿಂದಲೂ ನಾವು ಎರಡನ್ನೂ ನೋಡುತ್ತಾ ಬಂದಿದ್ದೇವೆ. ತಮಿಳುನಾಡಿನಲ್ಲಿ ಏನು ಬದಲಾವಣೆ ಆಗಲಿದೆ ಎನ್ನುವುದನ್ನು ಕಾಲವೇ ಹೇಳಲಿದೆ. ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ಸ್ಥಾಪನೆಯೇ ನಮ್ಮ ಆದ್ಯತೆ.