ದುರ್ಯೋಧನನಿಗೆ ಮೋದಿ ಹೋಲಿಕೆ
ನಿಮ್ಮ ಹೇಳಿಕೆ ಜನರ ಮನಸ್ಸು ಬದಲಿಸಲ್ಲ ಎಂದ ಶಾ
Team Udayavani, May 8, 2019, 5:54 AM IST
ಪರಶುರಾಮ ಜಯಂತಿಯ ಹಿನ್ನೆಲೆಯಲ್ಲಿ ಮಂಗಳವಾರ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಪರಶುರಾಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಪ್ರಧಾನಿ ಮೋದಿ ಅವರು ಆಡಿರುವ ಮಾತುಗಳಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಮಂಗಳವಾರ ಮೋದಿಯವರನ್ನು ಮಹಾಭಾರತದ ದುರ್ಯೋಧನನ ಪಾತ್ರಕ್ಕೆ ಹೋಲಿಸಿದ್ದಾರೆ.
ಹರ್ಯಾಣದ ಅಂಬಾಲಾದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು, ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂ.1 ಎಂದು ಕರೆದ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಲ್ಲದೆ, ‘ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸುವ ಬದಲು, ಧೈರ್ಯವಿದ್ದರೆ ಅಭಿವೃದ್ಧಿಯ ವಿಚಾರವನ್ನಿಟ್ಟುಕೊಂಡು ಚುನಾವಣೆಯನ್ನು ಎದುರಿಸಿ’ ಎಂದು ಸವಾಲನ್ನೂ ಹಾಕಿದ್ದಾರೆ.
‘ನಮ್ಮ ದೇಶವು ಅಹಂಕಾರ ಮತ್ತು ದರ್ಪವನ್ನು ಯಾವತ್ತೂ ಕ್ಷಮಿಸಿಲ್ಲ. ಇದಕ್ಕೆ ಇತಿಹಾಸವೇ ಸಾಕ್ಷಿ. ಮಹಾಭಾರತವೂ ಸಾಕ್ಷಿ. ಪ್ರಧಾನಿ ಮೋದಿಯವರಂತೆ ದುರ್ಯೋಧನನಿಗೂ ಅಹಂಕಾರವಿತ್ತು. ಅದನ್ನು ಅರ್ಥ ಮಾಡಿಸಿಕೊಡಲು ಭಗವಾನ್ ಶ್ರೀಕೃಷ್ಣ ಮುಂದಾದಾಗ, ಕೃಷ್ಣನನ್ನೇ ಧುರ್ಯೋಧನ ಒತ್ತೆಯಲ್ಲಿಟ್ಟಿದ್ದ. ಕೊನೆಗೆ ತನ್ನ ಅಹಂಕಾರದಿಂದಲೇ ದುರ್ಯೋಧನ ಸೋಲುಂಡ’ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.
ಬಿಜೆಪಿ ನಾಯಕರು ಪ್ರಚಾರ ನಡೆಸುವಾಗಲೆಲ್ಲ, ಅವರು ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ. ತಾವು ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿಲ್ಲವೇಕೆ ಎಂಬ ಬಗ್ಗೆ ತುಟಿಬಿಚ್ಚುವುದಿಲ್ಲ. ಅದರ ಬದಲಿಗೆ, 70 ವರ್ಷಗಳ ಕಾಲ ಆನೆ ಮಲಗಿತ್ತು ಎಂದೋ, ಹುತಾತ್ಮರ ಹೆಸರಲ್ಲಿ ಮತ ಹಾಕಿ ಎಂದೋ ಕೇಳುತ್ತಾರೆ ಅಥವಾ ನಮ್ಮ ಕುಟುಂಬದಲ್ಲಿ ಪ್ರಾಣತ್ಯಾಗ ಮಾಡಿದವರಿಗೆ ಅವಮಾನ ಮಾಡುತ್ತಾರೆ. ನಿಮ್ಮ(ಜನರ) ಅಗತ್ಯಗಳು, ಸಮಸ್ಯೆಗಳ ಪರಿಹಾರ ಅವರಿಗೆ ಬೇಕಿಲ್ಲ. ಈ ಚುನಾವಣೆಯು ಒಂದು ಕುಟುಂಬಕ್ಕೆ ಸಂಬಂಧಿಸಿದ್ದಲ್ಲ, ಇದು ಕೋಟಿಗಟ್ಟಲೆ ಕುಟುಂಬಕ್ಕೆ ಸಂಬಂಧಿಸಿದ್ದು. ಮೋದಿಯವರಿಗೆ ಸ್ವಲ್ಪವಾದರೂ ಧೈರ್ಯವಿದ್ದರೆ, ಅವರು ಅಭಿವೃದ್ಧಿ, ಉದ್ಯೋಗ, ರೈತರು, ಮಹಿಳೆಯರ ಹೆಸರಲ್ಲಿ ಚುನಾವಣೆ ಎದುರಿಸಲಿ ಎಂದಿದ್ದಾರೆ ಪ್ರಿಯಾಂಕಾ.
ಹತಾಶೆಯ ಪ್ರತೀಕ: ಮೋದಿಯವರನ್ನು ದುರ್ಯೋಧನನಿಗೆ ಹೋಲಿಸಿದ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ. ಪಶ್ಚಿಮ ಬಂಗಾಳದ ಬಿಷ್ಣಾಪುರದಲ್ಲಿ ಪ್ರಿಯಾಂಕಾಗೆ ತಿರುಗೇಟು ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ‘ಪ್ರಿಯಾಂಕಾಜೀ, ಇದು ಪ್ರಜಾಪ್ರಭುತ್ವ. ಇಲ್ಲಿ ಯಾರೂ ದುರ್ಯೋಧನರಲ್ಲ. ನೀವು ಹೇಳಿದೊಡನೆ ಯಾರೂ ದುರ್ಯೋಧನರಾಗುವುದೂ ಇಲ್ಲ. ಮೇ 23ರ ಫಲಿತಾಂಶವು ಪ್ರಿಯಾಂಕಾರಿಗೆ ತಕ್ಕ ಪಾಠ ಕಲಿಸಲಿದೆ. ಅವರ ಹೇಳಿಕೆಯೇ ಅವರ ಹತಾಶೆಯನ್ನು ಬಿಂಬಿಸುತ್ತಿದೆ. ಕಾಂಗ್ರೆಸ್‌ನವರು ಎಷ್ಟೇ ಅವಮಾನ ಮಾಡಿದರೂ, ಭಾರತೀಯ ಮತದಾರರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಚಿತ್ರದುರ್ಗದ ಭಾಷಣ: ಪ್ರಧಾನಿ ಮೋದಿಗೆ ಕ್ಲೀನ್‌ಚಿಟ್
ಅಹಮದಾಬಾದ್‌ನ ರೋಡ್‌ಶೋ ಹಾಗೂ ಕರ್ನಾಟಕದ ಚಿತ್ರ ದುರ್ಗದಲ್ಲಿನ ಭಾಷಣಕ್ಕೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲೂ ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್‌ಚಿಟ್ ನೀಡಿದೆ. ಈ ಮೂಲಕ ಮೋದಿಗೆ ಒಟ್ಟಾರೆ 8 ಕ್ಲೀನ್‌ಚಿಟ್ ಸಿಕ್ಕಿದಂತಾಗಿದೆ. ಚಿತ್ರದುರ್ಗದಲ್ಲಿ ಎ.9ರಂದು ಚುನಾವಣಾ ಪ್ರಚಾರ ನಡೆಸಿದ್ದ ಮೋದಿ, ‘ನಿಮ್ಮ ಮತಗಳನ್ನು ಬಾಲಕೋಟ್ ವೈಮಾನಿಕ ದಾಳಿಯ ಹೀರೋ ಗಳಿಗೆ ನೀಡಿ’ ಎಂದು ಮೊದಲ ಬಾರಿಯ ಮತದಾರರಿಗೆ ಕರೆ ನೀಡಿದ್ದರು. ಮತ್ತೂಂದು ಪ್ರಕರಣದಲ್ಲಿ, ಎ.23ರಂದು ಅಹಮದಾಬಾದ್‌ನಲ್ಲಿ ಹಕ್ಕು ಚಲಾಯಿಸಿದ ಬಳಿಕ ರೋಡ್‌ಶೋ ನಡೆಸಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳಲ್ಲೂ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಆಯೋಗ ಹೇಳಿದೆ.
ಹೋಟೆಲ್ನಲ್ಲಿ 6 ಇವಿಎಂ!
ಬಿಹಾರದಲ್ಲಿ ಸೋಮವಾರ 5ನೇ ಹಂತದ ಮತದಾನ ನಡೆಯುತ್ತಿದ್ದರೆ ಹೋಟೆಲ್ ಕೊಠಡಿಯೊಂದರಲ್ಲಿ 6 ಇವಿಎಂಗಳು ಪತ್ತೆಯಾಗಿವೆ. ವಲಯ ಮ್ಯಾಜಿಸ್ಟ್ರೇಟ್ ಅವಧೇಶ್ ಕುಮಾರ್ ಹೋಟೆಲ್ ಕೊಠಡಿಯೊಳಕ್ಕೆ ಚುನಾವಣಾ ಸಲಕರಣೆಗಳನ್ನು ಕೊಂಡೊಯ್ಯುತ್ತಿದ್ದುದನ್ನು ಗಮನಿಸಿದ ವಿಪಕ್ಷಗಳ ನಾಯಕರು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಯಾವುದೇ ಯಂತ್ರಗಳ ಸೀಲ್ ಒಡೆದಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷಗಳ ಮೌನವೇಕೆ?: ಬಿಜೆಪಿ
ಬಿಎಸ್‌ಎಫ್ನಿಂದ ವಜಾಗೊಂಡ ಯೋಧ ತೇಜ್ ಬಹಾದೂರ್ ಯಾದವ್ ಅವರು ಪ್ರಧಾನಿ ಮೋದಿಯನ್ನು ಹತ್ಯೆಗೈಯ್ಯುವು ದಾಗಿ ಹೇಳಿದ್ದಾರೆ ಎನ್ನಲಾದ ವೀಡಿಯೋಗೆ ಸಂಬಂಧಿಸಿ ಪ್ರತಿಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿಯನ್ನು ಕೊಲ್ಲುವ ಬಗ್ಗೆ ಮಾತನಾಡುವ ವ್ಯಕ್ತಿಗೆ ಎಸ್‌ಪಿ ವಾರಾಣಸಿಯ ಟಿಕೆಟ್ ಕೊಟ್ಟಿತ್ತಲ್ಲವೇ? ಈ ವಿಚಾರದಲ್ಲಿ ಪ್ರತಿಪಕ್ಷಗಳು ಮೌನಕ್ಕೆ ಶರಣಾಗಿರುವುದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಇದೊಂದು ಗಂಭೀರ ವಿಚಾರವಲ್ಲವೇ ಎಂದೂ ಕೇಳಿದೆ.
ವಾಯುಪಡೆ ನಿವೃತ್ತ ಯೋಧ ಕಾಂಗ್ರೆಸ್‌ಗೆ
ವಾಯುಪಡೆಯ ನಿವೃತ್ತ ಯೋಧ, ಗುಜರಾತ್‌ನ ಅನಿಲ್ ಕುಮಾರ್ ಕೌಶಿಕ್ ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. 17 ವರ್ಷಗಳ ಕಾಲ ಫ್ಲೈಟ್ ಎಂಜಿನಿಯರ್ ಆಗಿ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಕೌಶಿಕ್ 1990ರಲ್ಲಿ ನಿವೃತ್ತರಾಗಿದ್ದಾರೆ. ಸಶಸ್ತ್ರ ಪಡೆಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ಬಗ್ಗೆ ನನಗೆ ಬಹಳ ಬೇಸರ ಮೂಡಿದೆ ಎಂದು ಕೌಶಿಕ್ ಹೇಳಿದ್ದಾರೆ.
ಜೈ ಶ್ರೀರಾಂ ಎಂದು ಘೋಷಣೆ ಕೂಗಿದ ಮೂವರು ಯುವಕರನ್ನು ಪಶ್ಚಿಮ ಬಂಗಾಳದ ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧದ ವಾಗ್ಧಾಳಿಯನ್ನು ಬಿಜೆಪಿ ಮುಂದುವರಿಸಿದೆ. ದೀದಿ ಬಗ್ಗೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ ಮಾರನೇ ದಿನವೇ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಮತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೈ ಶ್ರೀರಾಂ ಎಂದು ಭಾರತದಲ್ಲಿ ಹೇಳದೇ, ಪಾಕಿಸ್ಥಾನದಲ್ಲಿ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಬಂಗಾಳದಲ್ಲಿ
ವಸೂಲಿ ದಂಧೆ: ನಿರ್ಮಲಾ: ಪಶ್ಚಿಮ ಬಂಗಾಳದ ಪ್ರತಿಯೊಂದು ವಲಯದಲ್ಲೂ ತೃಣಮೂಲ ಕಾಂಗ್ರೆಸ್ ವಸೂಲಿ ದಂಧೆ ನಡೆಸುತ್ತಿದ್ದು, ಇಲ್ಲಿನ ಜನರಿಗೆ ಉತ್ತಮ ಬದುಕು ಕಲ್ಪಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಮಂಗಳವಾರ ಪ್ರಚಾರ ನಡೆಸಿದ ಅವರು, ಟಿ ಎಂಸಿಯ ವಸೂಲಿ ದಂಧೆ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಕುಟುಂಬ ವನ್ನೂ ಬಿಟ್ಟಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇತ್ತೀಚೆಗೆ ಶುರುವಾಗಿದ್ದ ‘ಸರ್ಜಿಕಲ್ ಸ್ಟ್ರೈಕ್’ ವಾಕ್ಸಮರಕ್ಕೆ ಮತ್ತೂಂದು ತಿರುವು ಸಿಕ್ಕಿದೆ. ಕೇಂದ್ರದಲ್ಲಿ ಯುಪಿಎ ಆಡಳಿತವಿದ್ದಾಗ ಉಗ್ರರ ನೆಲೆಗಳ ಮೇಲೆ ಯಾವುದೇ ‘ಸರ್ಜಿಕಲ್ ಸ್ಟ್ರೈಕ್’ ಆಗಿರುವ ಬಗ್ಗೆ ತನ್ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಜಮ್ಮು ಮೂಲದ ರೋಹಿತ್ ಚೌಧರಿ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಸಚಿವಾಲಯ ಈ ವಿಚಾರ ತಿಳಿಸಿದೆ.
ಇದರಿಂದ, ಯುಪಿಎ ಅವಧಿಯಲ್ಲಿ 4 ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತೆಂದು ಹೇಳಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. 2004ರಿಂದ 2014ರವರೆಗೆ ಭಾರತೀಯ ಸೇನೆ ನಡೆಸಿರುವ ‘ಸರ್ಜಿಕಲ್ ಸ್ಟ್ರೈಕ್’ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಸಚಿವಾಲಯ 2016ಕ್ಕಿಂತ ಮುನ್ನ ಯಾವುದೇ ಸರ್ಜಿಕಲ್ ದಾಳಿಯಾಗಿರುವುದರ ಬಗ್ಗೆ ದಾಖಲೆಗಳಿಲ್ಲ. 2016ರಲ್ಲಿ ಉರಿ ದಾಳಿ ನಡೆದ ಮೇಲೆ ಸೆ. 29ರಂದು ಭಾರತೀಯ ಸೇನೆ ನಡೆಸಿದ್ದ ದಾಳಿ, ಭಾರತವು ಉಗ್ರರ ವಿರುದ್ಧ ನಡೆಸಿದ ಮೊಟ್ಟಮೊದಲ ‘ಸರ್ಜಿಕಲ್ ಸ್ಟ್ರೈಕ್’ ಎಂದಿರುವುದಾಗಿ ಇಂಡಿಯಾ ಟುಡೇ ಟಿವಿ ಹೇಳಿದೆ.
ಪ್ರಚಾರದ ವೇಳೆ ಧರ್ಮವನ್ನು ಎಳೆದುತಂದು ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಬಿಹಾರದ ಬೇಗುಸರಾಯ್‌ನ ಕೋರ್ಟ್‌ಗೆ ಶರಣಾಗಿದ್ದಾರೆ. ಅನಂತರ ಅವರಿಗೆ ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೀಟ್ ಠಾಕೂರ್ ಅಮನ್ ಕುಮಾರ್, ಜಾಮೀನು ಮಂಜೂರು ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜತೆ ಚುನಾ ವಣ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ. ಬುಧವಾರ ಬೆಳಗ್ಗೆಯೇ ಬಂಗಾಳ ತಲುಪಲಿರುವ ನಾಯ್ಡು, 2 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ಹೋಲುವ ಸೂರತ್‌ನ ಪ್ರಶಾಂತ್ ಸೇಥಿ ಎಂಬುವರೊಬ್ಬರು ಬೇಸತ್ತು ತಮ್ಮ ಗೆಟಪ್ ಅನ್ನೇ ಬದಲಾಯಿಸಿಕೊಂಡಿದ್ದಾರೆ! ಸೂರತ್‌ನ ಕಪಾಡಿಯಾ ಕ್ಲಬ್ ಬಳಿ ಚಿಕನ್ ಹೊಟೇಲನ್ನು ನಡೆಸುತ್ತಿರುವ ಇವರು, 2014ರ ಚುನಾವಣಾ ಸಂದರ್ಭದಲ್ಲಿ ಪ್ರಸಿದ್ಧಿಗೆ ಬಂದಿದ್ದರು. ಅದಾಗಿ, ಐದು ವರ್ಷ ಕಳೆದ ಬಳಿಕ ಈಗ ಸೇಥಿ ತಮ್ಮ ರಾಹುಲ್ ಗಾಂಧಿ ಛಾಯೆಯಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ. ತಮ್ಮ ತೂಕವನ್ನು 20 ಕೆ.ಜಿ.ಯಷ್ಟು ಇಳಿಸಿಕೊಂಡು, ಗಡ್ಡ ಬಿಟ್ಟು, ತಮ್ಮ ಹೇರ್‌ಸ್ಟೈಲನ್ನೂ ಬದಲಾಯಿಸಿಕೊಂಡಿದ್ದಾರೆ. ಇತ್ತೀಚೆಗೆ, ಬಿಡುಗಡೆಗೊಂಡಿದ್ದ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲಿ ರಾಹುಲ್ ಗಾಂಧಿಯವರ ಪಾತ್ರ ಮಾಡಲೂ ಬಂದಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರಂತೆ. ಯಾಕಿಷ್ಟು ವ್ಯಸನ ಎಂದು ಕೇಳಿದ ಮಾಧ್ಯಮಗಳಿಗೆ ಉತ್ತರಿಸಿರುವ ಸೇಥಿ, ‘ನನಗೆ ರಾಹುಲ್ ಬಗ್ಗೆ ಗೌರವವಿದೆ. ಆದರೆ, ಅವರಂತೆ ಕಾಣಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ.
ದಿಗ್ವಿಜಯ್ ಗೆಲುವಿಗಾಗಿ ಮಹಾಯಜ್ಞ
ಭೋಪಾಲ್ನ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ಮಹಾಯಜ್ಞವನ್ನು ಕೈಗೊಂಡಿದ್ದಾರೆ. ನಾಮ್‌ದೇವ್ ತ್ಯಾಗಿ ಅಲಿಯಾಸ್ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಸಾವಿರಾರು ಸಾಧು-ಸಂತರು ಮಂಗಳವಾರ ಹಠಯೋಗದಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ರೋಡ್ ಶೋ ಕೂಡ ನಡೆಸಿ ಪ್ರಚಾರ ನಡೆಸಿದ್ದಾರೆ. ಕಂಪ್ಯೂಟರ್ ಬಾಬಾ ಮಧ್ಯಪ್ರದೇಶದ ಬಿಜೆಪಿ ಸರಕಾರದ ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದರು. ಬಳಿಕ ರಾಜೀನಾಮೆ ನೀಡಿದ್ದರು. ರೋಡ್‌ಶೋ ವೇಳೆ ಸಾಧುಗಳೆಲ್ಲ ‘ರಾಮ್ ನಾಮ್ ಅಬ್‌ಕೀ ಬಾರ್, ಬದಲ್ ಕೆ ರಖ್ ದೋ ಚೌಕಿದಾರ್’ ಎಂದು ಘೋಷಣೆ ಕೂಗಿದ್ದಾರೆ. 5 ವರ್ಷದಲ್ಲಿ ರಾಮಮಂದಿರ ನಿರ್ಮಿಸದ ಪ್ರಧಾನಿ ಮೋದಿ ನಮಗೆ ಬೇಡ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.