ಕೈಕೊಟ್ಟ ಪೂರ್ವ ಮುಂಗಾರು: ಎಲ್ಲೆಲ್ಲೂ ಜಲಸಂಕಷ್ಟ
ಕಳೆದ ವರ್ಷ ಆಶಾದಾಯಕವಾಗಿದ್ದ ಪೂರ್ವ ಮುಂಗಾರು • ನೀರಿಲ್ಲದೆ ಬತ್ತಿಹೋಗಿರುವ ಕೆರೆಗಳು, ಹೆಚ್ಚುತ್ತಿದೆ ಬವಣೆ
Team Udayavani, May 8, 2019, 3:37 PM IST
ಮಂಡ್ಯ: ಕಳೆದ ವರ್ಷ ಆಶಾದಾಯಕವಾಗಿದ್ದ ಪೂರ್ವ ಮುಂಗಾರು ಮಳೆ ಈ ವರ್ಷ ಕೈಕೊಟ್ಟಿದೆ. ಮೂರು ತಿಂಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ತಾಪಮಾನ ಹೆಚ್ಚಳದಿಂದ ಕೆರೆ-ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ. ಅಂತರ್ಜಲ ಮಟ್ಟ ಕುಸಿದು ಪಾತಾಳ ಸೇರಿಹೋಗಿದೆ. ದಿನೇದಿನೆ ನೀರಿಗೆ ಬವಣೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಎಲ್ಲೆಲ್ಲೂ ಜಲಸಂಕಷ್ಟ ಸೃಷ್ಟಿಯಾಗಿದೆ.
ಜಿಲ್ಲೆಯ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಟ್ಟು 209 ಕೆರೆಗಳಿವೆ. ಅಚ್ಚುಕಟ್ಟು ವ್ಯಾಪ್ತಿಯ ಹೊರಗೆ 42 ಕೆರೆಗಳಿವೆ. ಈ ಕೆರೆಗಳಲ್ಲಿ ಶೇ.90ರಷ್ಟು ಖಾಲಿಯಾಗಿವೆ. ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ. ನಿರೀಕ್ಷೆಯಂತೆ ಮುಂಗಾರು ಪೂರ್ವ ಮಳೆಯಾಗಿದ್ದರೆ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಕೊಂಡು ಕುಡಿಯುವ ನೀರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು.
ವಾಡಿಕೆಗಿಂತ ಹೆಚ್ಚು: ಕಳೆದ ವರ್ಷ ಫೆಬ್ರವರಿಯಲ್ಲಿ ಪೂರ್ವ ಮುಂಗಾರಿನ ವಾಡಿಕೆ 4.6 ಮಿ.ಮೀ. ಇದ್ದು 4.80 ಮಿ.ಮೀ. ಮಳೆಯಾಗಿತ್ತು. ಮಾರ್ಚ್‌ನಲ್ಲಿ 8.8 ಮಿ.ಮೀ. ವಾಡಿಕೆ ಮಳೆಗೆ 27.3 ಮಿ.ಮೀ., ಏಪ್ರಿಲ್ನಲ್ಲಿ 49.5 ಮಿ.ಮೀ. ಮಳೆಗೆ 40.1 ಮಿ.ಮೀ., ಮೇ ತಿಂಗಳಲ್ಲಿ 118.7 ಮಿ.ಮೀ. ಮಳೆಗೆ 223.3 ಮಿ.ಮೀ., ಜೂನ್ ತಿಂಗಳಲ್ಲಿ 54.1 ಮಿ.ಮೀ. ವಾಡಿಕೆ ಮಳೆಗೆ 71.8 ಮಿ.ಮೀ. ಮಳೆಯಾಗಿತ್ತು.
ರೈತರಿಗೆ ನೆಮ್ಮದಿ ತಂದ ಮುಂಗಾರು ಪೂರ್ವ ಮಳೆಯಿಂದಾಗಿ ಕಳೆದ ವರ್ಷ ಮುಂಗಾರು ಆರಂಭಕ್ಕೆ ಮುನ್ನವೇ ಕೃಷಿ ಚಟುವಟಿಕೆಗಳು ಗರಿಗೆದರಿದ್ದವು. ಬಿತ್ತನೆ ಬೀಜ, ರಸಗೊಬ್ಬರವನ್ನು ಖರೀದಿಸಿಟ್ಟುಕೊಂಡು ಮುಂಗಾರು ಹಂಗಾಮಿಗೆ ಬಿರುಸಿನ ಸಿದ್ಧತೆ ನಡೆಸಿದ್ದರು.
ಪೂರ್ವ ಮುಂಗಾರು ಮಳೆಯಿಂದಾಗಿ ಹಲವಾರು ಕೆರೆಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ನೀರಿನ ಬವಣೆ ಹೆಚ್ಚಾಗಿರಲಿಲ್ಲ. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆ ಮೂರು ತಿಂಗಳಿಂದ ಸಮರ್ಪಕವಾಗಿ ಸುರಿದಿಲ್ಲ. ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ತೃಪ್ತಿದಾಯಕವಾಗಿದ್ದರೂ ಕೆರೆಗಳಲ್ಲಿ ಮಾತ್ರ ನೀರಿಲ್ಲ.
ವ್ಯರ್ಥವಾಗಿ ಹರಿದ 200 ಟಿಎಂಸಿ ನೀರು: ಕಳೆದ ವರ್ಷ ಆಶಾದಾಯಕವಾಗಿ ಬಿದ್ದ ಪೂರ್ವ ಮುಂಗಾರು ಮಳೆ ಹಾಗೂ ಮುಂಗಾರು ಮಳೆಯಿಂದ ಕೃಷ್ಣರಾಜಸಾಗರ ಜಲಾಶಯ ಜುಲೈ ಮಧ್ಯಭಾಗದಲ್ಲೇ ಭರ್ತಿಯಾಗಿ ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿತ್ತು. ಕೇರಳ ಹಾಗೂ ಕೊಡಗಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಕೆಆರ್‌ಎಸ್‌ಗೆ ಅತ್ಯಧಿಕ ಪ್ರಮಾಣದ ನೀರು ಹರಿದುಬಂದಿತು. ನಿಗದಿತ ಅವಧಿಗೆ ಮುನ್ನವೇ ಅಣೆಕಟ್ಟು ತುಂಬಿಕೊಂಡಿತು. ಇದೇ ವೇಳೆ ಜಿಲ್ಲೆಯೊಳಗೆ ಮಾತ್ರ ಮುಂಗಾರು ಮಳೆ ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ.
ಕೇರಳ, ಕೊಡಗಿನಲ್ಲಿ ಬಿದ್ದ ಭಾರೀ ಮಳೆಯಿಂದ 200 ಟಿಎಂಸಿಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಯಿತು. ಆದರೆ, ಜಲಾಶಯಕ್ಕೆ ಹರಿದು ಬಂದ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟು ಕೊಳ್ಳು ವುದಕ್ಕೆ ನಮ್ಮೊಳಗೆ ಯಾವುದೇ ಪೂರಕ ವ್ಯವಸ್ಥೆಗಳೂ ಇರಲಿಲ್ಲ. ನಾಲೆಗಳಿಂದ ಕೆರೆಗಳಿಗೆ ನೀರು ತುಂಬಿಸುವ ಸಂಪರ್ಕಜಾಲ ಇಲ್ಲದಿದ್ದರಿಂದ ನೀರು ವ್ಯರ್ಥವಾಗಿ ಹರಿದುಹೋಯಿತು. ನಂತರ ವಾದರೂ ಎಚ್ಚೆತ್ತು ಹೆಚ್ಚುವರಿ ನೀರು ಸಂಗ್ರಹಿಸಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದಿತ್ತು. ಆದರೆ, ಆಳುವ ಸರ್ಕಾರಗಳಿಗೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಆ ಬಗ್ಗೆ ಆಸಕ್ತಿಯೂ ಇಲ್ಲ, ಬದ್ಧತೆಯೂ ಇಲ್ಲ.
ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ: 2018ರಲ್ಲಿ ಮುಂಗಾರು ಮಳೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 54.1 ಮಿ.ಮೀ.ಗೆ 71.8 ಮಿ.ಮೀ. ಮಳೆಯಾಗಿತ್ತು. ಇದನ್ನು ಹೊರತುಪಡಿಸಿ ಜುಲೈನಲ್ಲಿ 52.9 ಮಿ.ಮೀ.ಗೆ 31.5 ಮಿ.ಮೀ., ಆಗಸ್ಟ್‌ನಲ್ಲಿ 62.8 ಮಿ.ಮೀ. ವಾಡಿಕೆ ಮಳೆಗೆ 37.4 ಮಿ.ಮೀ. ಮಳೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 133.8 ಮಿ.ಮೀ.ಗೆ 167.4 ಮಿ.ಮೀ. ಮಳೆಯಾಗಿದ್ದರೆ, ಹಿಂಗಾರು ಮಳೆ ಕೂಡ ರೈತರ ಕೈ ಹಿಡಿಯಲಿಲ್ಲ.ಅಕ್ಟೋಬರ್‌ನಲ್ಲಿ 165.1 ಮಿ.ಮೀ.ಗೆ 128.2 ಮಿ.ಮೀ. ಹಾಗೂ ನವೆಂಬರ್‌ನಲ್ಲಿ 51.2ಮಿ.ಮೀ. ವಾಡಿಕೆ ಮಳೆಗೆ 12.9 ಮಿ.ಮೀ. ಮಳೆಯಾಗಿತ್ತು.
ಹೆಚ್ಚುತ್ತಿರುವ ತಾಪಮಾನ: ಜಿಲ್ಲೆಯಲ್ಲಿ ತಾಪಮಾನದ ಪ್ರಮಾಣ 38 ಡಿಗ್ರಿಯಿಂದ 40 ಡಿಗ್ರಿಗೆ ಏರಿಕೆಯಾಗಿದೆ. ಭೂಮಿಯೊಳಗೆ ತೇವಾಂಶದ ಪ್ರಮಾಣವಿಲ್ಲದೆ ನೀರು ಆದಷ್ಟು ಬೇಗ ಬತ್ತಿಹೋಗುತ್ತಿದೆ. ಇದರಿಂದ ಕೆರೆಗಳು ಬರಿದಾಗುತ್ತಿವೆ. ಕೆರೆಗಳ ಸಂರಕ್ಷಣೆ, ಅಭಿವೃದ್ಧಿ, ಹೂಳು ತೆಗೆಯುವುದು, ನೀರಿನ ಸಂಗ್ರಹ ಹೆಚ್ಚಿಸುವುದು, ಒತ್ತುವರಿ ತೆರವು ಕೆಲಸಗಳೆಲ್ಲವೂ ಇಂದಿಗೂ ಕನಸಿನ ಮಾತಾಗಿಯೇ ಉಳಿದುಕೊಂಡಿವೆ.
ಜಿಲ್ಲೆಯೊಳಗೆ ಜಲಸಂಕಷ್ಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಕೆರೆಗಳ ಪುನಶ್ಚೇತನ ಯಾರಿಗೂ ಬೇಡವಾಗಿದೆ. ಜಿಲ್ಲೆಯೊಳಗಿರುವ ಎಲ್ಲಾ ಕೆರೆಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂರಕ್ಷಣೆ ಮಾಡಿದ್ದೇ ಆದಲ್ಲಿ ಕನಿಷ್ಠ 21 ಟಿಎಂಸಿ ಅಡಿಯಷ್ಟು ನೀರನ್ನು ಶೇಖರಣೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಅಂತರ್ಜಲ ಹೆಚ್ಚಳ, ಕೊಳವೆ ಬಾವಿಗಳಿಗೆ ಮರು ಜೀವ ನೀಡಲು ಸಾಧ್ಯವಿದೆ. ಈ ವಿಷಯವಾಗಿ ಯಾರೂ ಸಹ ಗಮನಹರಿಸುತ್ತಿಲ್ಲ.
● ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.