ಗದ್ದಿಗೌಡ್ರು-ವೀಣಾ; ಇಬ್ಬರಲ್ಲಿ ಯಾರ್ ಗೆಲ್ತಾರಿ!
ಕುಂತಲ್ಲಿ-ನಿಂತಲ್ಲಿ ಫಲಿತಾಂಶದ ಬಗ್ಗೆಯೇ ಚರ್ಚೆ•ಅಭ್ಯರ್ಥಿಗಳಿಗೆ ಪ್ರತಿ ದಿನ ಕಳೆಯುವುದೂ ಕಷ್ಟ
Team Udayavani, May 11, 2019, 10:49 AM IST
ಬಾಗಲಕೋಟೆ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಫಲಿತಾಂಶ ಈ ಬಾರಿ ಬಹಳ್ ಲೇಟ್ ಆಯ್ತುರೀ. ಯಾರು ಎಷ್ಟು ಲೀಡ್ ಒಳಗ್ ಗೆಲ್ಲಬಹುದು. ಯಾವ ಊರಾಗ್, ಯಾರಿಗಿ ಹೆಚ್ಚು ಮತ ಬಂದಿರಬಹುದು…
ಲೋಕಸಭೆ ಚುನಾವಣೆಯ ಕುರಿತು ಜಿಲ್ಲೆಯಲ್ಲಿ ನಿತ್ಯವೂ ಇಂತಹ ಚರ್ಚೆ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಸಧ್ಯ ಮದುವೆ, ಸೀಮಂತ, ಜಾತ್ರೆ ಮುಂತಾದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಸೇರುವ ಜನರು, ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆಯೇ ಚರ್ಚೆಯಲ್ಲಿ ತೊಡಗುತ್ತಿರುವುದು ಸಾಮಾನ್ಯವಾಗಿದೆ.
ಫಲಿತಾಂಶ ಬಹಳ್ ಲೇಟ್: ಕಳೆದ ಬಾರಿ ಮತದಾನವಾದ 15 ದಿನಗಳಲ್ಲಿ ಫಲಿತಾಂಶ ಬಂದಿತ್ತು. ಈ ಬಾರಿ ಬಹಳ ಲೇಟ್ ಆಯ್ತು ಎಂಬ ಬೇಸರದ ಮಾತುಗಳನ್ನು ಬಹುತೇಕರು ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಫಲಿತಾಂಶದ ಕುರಿತು ತಮ್ಮದೇ ಆದ ಲೆಕ್ಕಾಚಾರಗಳನ್ನೂ ಬಿಚ್ಚಿಟ್ಟು, ಇವರೇ ಗೆಲ್ಲುತ್ತಾರೆ ಎಂಬ ವಾದ ಮಂಡಿಸುವ ಪ್ರಸಂಗಗಳೂ ನಡೆಯುತ್ತಿದೆ.
ಬೆಟ್ಟಿಂಗ್ ಕೂಡ ಜೋರು : ಈ ಬಾರಿ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಅವರೇ ಗೆಲ್ಲುತ್ತಾರೆ ಎಂದು ಗೆಲುವು ಅತಿಯಾದ ವಿಶ್ವಾಸದಿಂದ ಬೆಟ್ಟಿಂಗ್‌ಗೆ ಇಳಿದರೆ, ಮೋದಿ ಅಲೆ, ಸಂಭಾವಿತ ನಡವಳಿಕೆ ಇರುವುದರಿಂದ ಬಿಜೆಪಿಯ ಗದ್ದಿಗೌಡರು ಗೆಲ್ಲುತ್ತಾರೆ ಎಂದು ಮತ್ತೆ ಕೆಲವರು ವಾದಿಸುತ್ತಾರೆ. ಈ ಕುತೂಹಲಭರಿತ ವಾದಗಳು, ಬೆಟ್ಟಿಂಗ್ ಹಚ್ಚಲೂ ಕಾರಣವಾಗುತ್ತಿವೆ. ಸಾಮಾನ್ಯರೂ ಸಹಿತ 1ರಿಂದ 5 ಸಾವಿರ ವರೆಗೆ ಬೆಟ್ಟಿಂಗ್ ಕಟ್ಟಿದರೆ, ಹಣವಂತರು, 50 ಸಾವಿರದಿಂದ 1 ಲಕ್ಷ ವರೆಗೂ ಬೆಟ್ಟಿಂಗ್ ಕಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಯಾರ ಪಾಲಿಗೆ ಗುರು ಬಲ!: ಲೋಕಸಭೆ ಚುನಾವಣೆಯ ಫಲಿತಾಂಶ ಬಹಿರಂಗಗೊಳ್ಳಲು ಇನ್ನೂ 12 ದಿನ ಬಾಕಿ ಇವೆ. ಈ ಬಾರಿ ಮತ ಏಣಿಕೆ ನಡೆಯುವ ಮೇ 23 ಗುರುವಾರ ಇದ್ದು, ಯಾವ ಅಭ್ಯರ್ಥಿಗೆ ಗುರುವಾರದ ಗುರು ಬಲ ಇರಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ.
ಮತದಾನದ ಬಳಿಕ ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆ ಎಂದು, ಕೆಲವರು ಅಭ್ಯರ್ಥಿಗಳು ಜೋತಿಷ್ಯಿಗಳ ಮೋರೆ ಕೂಡಾ ಹೋಗಿದ್ದಾರೆ. ನಾನು ಗೆಲ್ಲುತ್ತೇನಾ- ಇಲ್ಲವಾ, ಗೆದ್ದರೆ ಎಷ್ಟು ಮತಗಳ ಅಂತರ ಇರಬಹುದು. ಮತಗಳ ಅಂತರ ಎಷ್ಟೇ ಇರಲಿ. ಇದೊಂದು ಬಾರಿ ಗೆಲ್ಲಬಹುದಾ ಎಂಬ ಪ್ರಶ್ನೆಗಳನ್ನು ಜೋತಿಷ್ಯಿಗಳ ಮುಂದಿಟ್ಟು, ಮೇ 23ರ ಭವಿಷ್ಯವನ್ನು ಈಗಲೇ ಕೇಳಿದವರೂ ಇದ್ದಾರೆ. ಜೋತಿಷ್ಯಿಗಳೂ, ಮತದಾನ ನಡೆದ ಏಪ್ರಿಲ್ 23ರ ದಿನ ಅಭ್ಯರ್ಥಿಗಳ ರಾಶಿ ಭವಿಷ್ಯ, ಮತ ಏಣಿಕೆ ನಡೆಯುವ ಮೇ 23ರ ದಿನದ ಕುರಿತು ಲೆಕ್ಕಾಚಾರ ಹಾಕಿ, ನೀವು ಗೆಲ್ತೀರಿ, ಗೆದ್ದರೂ ಅಂತರ ಬಹಳ ಕಡಿಮೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೋಡಿಹಳ್ಳಿ ಶ್ರೀ ಭವಿಷ್ಯದ ಕುರಿತೂ ಚರ್ಚೆ: ಮತದಾನದ ಮುಂಚೆ ಕೋಡಿಹಳ್ಳಿ ಶ್ರೀಗಳು ನುಡಿದ್ದ ಭವಿಷ್ಯವಾಣಿ ಕುರಿತೂ ಜಿಲ್ಲೆಯಲ್ಲಿ ತೀವ್ರ ಕುತೂಹಲದೊಂದಿಗೆ ಚರ್ಚೆ ನಡೆಯುತ್ತಿದೆ. ಸೆರೆಗೊಡ್ಡಿ ಬೇಡಿದವರ ಗೆಲುವು ಎಂದು ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದ್ದರು. ಇದು ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಭವಿಷ್ಯ ಎಂದು ಕೆಲವರು ಹೇಳಿದರೆ, ಬಾಗಲಕೋಟೆ ಕ್ಷೇತ್ರಕ್ಕೂ ಇದು ಸಂಬಂಧಿಸಿದ್ದಾಗಿದೆ. ಪ್ರಚಾರದ ವೇಳೆ, ನಿಮ್ಮ ಮನೆ ಮಗಳು, ಸೆರಗೊಡ್ಡಿ ಬೇಡಿವೆ. ನನ್ನ ಉಡಿಗೆ ನಿಮ್ಮ ಮತ ಹಾಕಿ ಎಂದು ಕೇಳಿಕೊಂಡಿದ್ದ ವೀಣಾ ಕಾಶಪ್ಪನವರ ಕುರಿತೇ, ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ.
ಒಟ್ಟಾರೆ, ಜಿಲ್ಲೆಯಲ್ಲಿ ಲೋಕಸಭೆ ಫಲಿತಾಂಶದ ಕುರಿತು ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ. ಇನ್ನೂ ಎಷ್ಟು ದಿನ ಉಳಿತು ಎಂದು ನಿತ್ಯವೂ ಕೇಳುವ ಪ್ರಸಂಗ ನಡೆಯುತ್ತಿವೆ. ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿತ್ತು. ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ, ಸತತ 4ನೇ ಬಾರಿ ಗೆಲುವು ಸಾಧಿಸಬೇಕೆಂಬ ತವಕದಲ್ಲಿರುವ ಬಿಜೆಪಿ ಗದ್ದಿಗೌಡರ ಅವರ ಈ ಬಾರಿಯ ಗೆಲುವು-ಸೋಲಿನ ಫಲಿತಾಂಶ ತಿಳಿಯಲು ಇನ್ನೂ 12 ದಿನ ಕಾಯಲೇಬೇಕು.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.