ಸೆಕೆ ಸೆಕೆ ತಾಳೆನು ಈ ಸೆಕೆಯಾ ಆಹಾ! ಓಹೋ!
Team Udayavani, May 12, 2019, 6:00 AM IST
ಬೇಸಿಗೆಯೆಂದರೆ ಬಾಯಾರಿಕೆ. ಏನಾದರೂ ದ್ರವ ಪದಾರ್ಥವನ್ನೋ ತಂಪು ಪಾನೀಯವನ್ನೋ, ಹಣ್ಣಿನ ರಸವನ್ನೋ ಪದೇ ಪದೇ ಕುಡಿಯಬೇಕು ಅಂತ ಅನ್ನಿಸುವ ಹೊತ್ತು. ಈಗಂತೂ ಬೇಕಾದಷ್ಟು ಬಾಯಾರಿಕೆ ತಣಿಸುವ ಪೇಯಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮನೆಯ ಫ್ರಿಡಿನೊಳಗೂ ಐಸ್‌ಕ್ರೀಮ್ ಆಗಲಿ, ಕ್ಯಾಂಡಿಯಾಗಿ ತಪ್ಪುವುದಿಲ್ಲ. ನಮಗೆಲ್ಲ ಒಂದಷ್ಟು ವರುಷಗಳ ಹಿಂದೆ ಇಂತಹ ಸೌಲಭ್ಯ ಇರಲಿಲ್ಲ. ವಾರದಲ್ಲಿ ಒಂದು ದಿನ ಐಸ್‌ಕ್ಯಾಂಡಿ ಮಾರುವವನು ಶಾಲೆ ಹತ್ತಿರ ಬರುತ್ತಿದ್ದನೆಂಬುದೇ ಪರಮ ಸಂತೋಷದ ವಿಚಾರ. ಅದಕ್ಕೆ ಬೇಕಾದ 35 ಪೈಸೆ ಹೊಂದಿಸುವುದೇ ಬಹಳ ದೊಡ್ಡ ಸಾಹಸವಾಗಿರುತ್ತಿತ್ತು. ವಾರ ವಾರ ಹೀಗೆ ಯಾರೂ ದೇಣಿಗೆ ಕೊಡುವವರಿರಲಿಲ್ಲ. ಯಾವುದಾದರೂ ಒಂದು ದಿನ ಐಸ್‌ಕ್ಯಾಂಡಿಯ ಮೊತ್ತ ಕೂಡುತ್ತ ಬಂತು ಎನ್ನುವಾಗ, ನಿದ್ದೆ ಬಲು ದೂರವಾಗುತ್ತದೆ. ಐಸ್‌ಕ್ಯಾಂಡಿಯವನ ಕನಸು ಬೀಳಲಾರಂಭಿಸುತ್ತದೆ. ಶಾಲಾ ಬೀದಿಯ ಬಳಿ ಅಲೌಕಿಕ ಪುರುಷನಂತೆ ಗೋಚರಿಸುವ ಶನಿವಾರದ ದಿನಕ್ಕಾಗಿ ಮನಸು “ಚಾತಕ ಪಕ್ಷಿ’ಯಂತೆ ಕಾಯುತ್ತಿರುತ್ತಿತ್ತು. ಒಂದು ಶುಭಗಳಿಗೆ. ಅತಿಥಿಗಳು ಮನೆಗೆ ಬಂದಿದ್ದರು. ಅವರ ಉದಾರ ಹಸ್ತದಿಂದ ನನಗೆ 30 ಪೈಸೆ ಕೂಡಿ ಬಂದಿತ್ತು. ಇನ್ನು ಉಳಿದ ಐದು ಪೈಸೆಯನ್ನು ಕೊಡುವ ನೆಂಟರು ಸದ್ಯಕ್ಕೆ ಯಾರೂ ಬರುವ ಸೂಚನೆ ಇರಲಿಲ್ಲ. ಆದರೇನು, ನಾಲಗೆ ಮುಟ್ಟಿದಾಕ್ಷಣ ಕರಗಿ ಹೋಗುವ ಕ್ಯಾಂಡಿಯ “ಕ್ಷಣಿಕ’ ಆಸೆಯನ್ನು ಹತ್ತಿಕ್ಕಲು ಸಾಧ್ಯವೆ? ಮನುಷ್ಯ ಮಾತ್ರಳಲ್ಲವೆ? ಭಂಡ ಧೈರ್ಯ ತಂದುಕೊಂಡು, ದೈನೇಸಿ ಸ್ಥಿತಿಯನ್ನು ಮುಖದಲ್ಲಿರಿಸಿಕೊಂಡು ಐಸ್‌ಕ್ಯಾಂಡಿ ಮಾರುವವನ ಮುಂದೆ ಮೂವತ್ತು ಪೈಸೆ ಒಡ್ಡಿದೆ. ಇನ್ನುಳಿದ ಐದು ಪೈಸೆ ನನ್ನಲ್ಲಿ ಇಲ್ಲ ಎಂಬುದು ನನ್ನ ಮುಖಭಾವದಿಂದಲೇ ಅವನಿಗೆ ಅರಿವಾಗುವಂತಿತ್ತು. ಆತ ಸಿಡಿಮಿಡಿಗೊಂಡವನಂತೆ ಮಾಡಿದರೂ, ಡಬ್ಬಿಯೊಳಗೆ ಕೈ ಹಾಕಿ ಐಸ್‌ನಿàರಿನಿಂದ ತೊಯ್ದಿರುವ ಐಸ್‌ಕ್ಯಾಂಡಿಯನ್ನು ಎತ್ತಿಕೊಂಡಿದ್ದ. ಅವನದಾದರೂ ತಪ್ಪೇನು, ಪ್ರತಿವಾರ ಹೀಗೆ 5 ಪೈಸೆಗೆ ಖೋತಾ ಆದರೆ ಅವನಿಗೆ ಎಷ್ಟು ನಷ್ಟವಾಗುತ್ತದೋ, ಕಷ್ಟ ಅವನಿಗೇ ಗೊತ್ತು. ಇರಲಿ, ಆದರೆ ಆ ಗಳಿಗೆಯಲ್ಲಿ ನನ್ನ ಮನಸು ಹಿಡಿಯಾಗಿದ್ದಂತೂ ನಿಜ. ಆದರೂ ಎಲ್ಲ ಮರೆತು ಕೊನೆಯ ತಂಪು ತುಣುಕು ಗಂಟಲಿನೊಳಗೆ ಇಳಿಯುವಲ್ಲಿಯವರೆಗೂ ಸ್ವರ್ಗ ಸುಖವನ್ನು ಅನುಭವಿಸಿದ್ದು ಸುಳ್ಳಲ್ಲ. ಬದುಕಿನಲ್ಲಿ ಯಾವುದು ಅತ್ಯಂತ ಖುಷಿಯ ಕ್ಷಣ ಅಂದರೆ, ಐಸ್‌ಕ್ಯಾಂಡಿ ಚೀಪುವ ಕ್ಷಣಗಳೇ. ಈ ಬೇಸಿಗೆಯ ಸುಡು ಮಧ್ಯಾಹ್ನದಲ್ಲಿಯೂ ಬಾಲ್ಯದ ಇಂತಹ ಕ್ಷಣಗಳ ನೆನಪೇ ನಮ್ಮನ್ನು ತಂಪಾಗಿರಿಸುವುದು.
ಬಾಲ್ಯದ ಮತ್ತೂಂದು ಸಂಗತಿ ಎಂದರೆ, ಆವಾಗಲೆಲ್ಲ ಬೇಸಿಗೆ ರಜೆಯೆಂದರೆ ಕಾಡುಮೇಡು ಅಲೆಯಲು ಮಾಡಿಕೊಟ್ಟ ಅವಕಾಶ ಎಂದೇ ನಮ್ಮ ತಿಳುವಳಿಕೆಯಾಗಿತ್ತು. ದಿನವಿಡೀ ತೋಟ, ಕಾಡು ಅಲೆಯುತ್ತ ನಮ್ಮ ಸಂಶೋಧನಾ ಕ್ಷೇತ್ರಕಾರ್ಯ ಆರಂಭಗೊಳ್ಳುತ್ತಿತ್ತು. ಚಕೋತ, ಕಿತ್ತಳೆಯಿಂದ ಹಿಡಿದು ಕರಮಂಜಿ, ಮಜ್ಜಿಗೆ ಹಣ್ಣು, ಕಕ್ಕಡೆ ಹಣ್ಣು, ಹೀಗೆ ಇನ್ನು ಹೆಸರೇ ತಿಳಿಯದ ಅನೇಕ ಹಣ್ಣುಗಳು ನಮಗೆಂದೇ ಕಾಯುತ್ತಿದ್ದವು. ಇನ್ನು ನಕ್ಷತ್ರ ಹಣ್ಣು ಮತ್ತು ಜಂಬುನೇರಳೆ ಹಣ್ಣುಗಳು ಬಾಯಾರಿಕೆಗೆ ಹೇಳಿ ಮಾಡಿಸಿದಂಥವು. ನಾವು ಮರ ಹತ್ತಿ ಕೊಂಬೆ ಕುಲುಕಿಯೋ, ಬಡಿಗೆ ಎಸೆದೋ, ಗಳೆ ಹಾಕಿ ಎಳೆದಾಡಿಯೋ- ಅಂತೂ ಹರಸಾಹಸ ಪಟ್ಟು ಹಣ್ಣು ಕೊಯ್ದು ಚೀಲದೊಳಗೆ ತುಂಬಿ ತರುತ್ತಿ¨ªೆವು. ನೇರಳೆ ಹಣ್ಣಂತೂ ನಮಗೆ ಆ ದಿನಗಳಲ್ಲಿ ಬಲು ಪ್ರಿಯವಾದ ಹಣ್ಣು. ಅದನ್ನು ತಿನ್ನುವ ಮಜಾವೇ ಬೇರೆ. ತಿಂದ ಬಾಯಿಯೆಲ್ಲ ನೇರಳೆ ನೇರಳೆ. ತಿಂದದ್ದನ್ನು ಅಡಗಿಸುವ ಹಾಗಿಲ್ಲ. ತುಂಬ ತಿಂದರೆ ಗಂಟಲೆಲ್ಲ ಒಂದು ರೀತಿಯ ಒಗರು ಒಗರು. ಗಂಟಲು ಕಟ್ಟುತ್ತದೆ. ಆದರೂ ನೇರಳೆ ಹಣ್ಣಿನ ಮೋಹ ಬಿಡುವುದೆ? ತಿನ್ನುವುದನ್ನು ನಿಲ್ಲಿಸುವುದಿಲ್ಲ. ಆಗೆಲ್ಲ ಬಿಸಿಲ ಬೇಗೆಯನ್ನು ತಣಿಸಲು ಒದಗಿ ಬರುತ್ತಿದ್ದುದು ಈ ಹಣ್ಣುಗಳೇ. ನನಗೆ ಬಲು ಪ್ರಿಯವಾದ ಹಣ್ಣುಗಳಲ್ಲಿ ಗೇರು ಹಣ್ಣು ಕೂಡ ಒಂದು. ಜೊತೆಗೆ ಮನೆಯಲ್ಲಿ ಮಣ್ಣಿನ ಮಡಕೆಯಲ್ಲಿ ಯಾವತ್ತೂ ತಪ್ಪದ ತಿಳಿ ನೀರ ಮಜ್ಜಿಗೆ ಪಾನಕವಿರುತ್ತಿತ್ತು. ಅದನ್ನ ಅಮೃತದಂತೆ ಸವಿಯುತ್ತಿದ್ದದ್ದು ಈಗ ಒಂದು ಸುಂದರ ನೆನಪು.
ಈಗ ಆ ದಿನಗಳಿಗಿಂತ ಹೆಚ್ಚೇ ಬಿಸಿಲು ಸುಡುತ್ತಿದೆ. ಕಾಂಕ್ರೀಟು ಕಾಡಿನ ನಡುವೆ ಇರುವ ಮಕ್ಕಳಿಗೆ ಹಣ್ಣಿನ ಮರ ಹುಡುಕುವುದು ತ್ರಾಸದಾಯಕ ಸಂಗತಿ. ದಾಹ ತಣಿಯಲು ಮಾಝಾ, ಕೋಕೋ ಕೋಲಾ ಪೇಯಗಳ ಮೊರೆ ಹೋಗುತ್ತಾರೆ. ಅದಕ್ಕೆ ಸರಿಯಾಗಿ ಜಾಹೀರಾತುಗಳು ಈ ಪೇಯವನ್ನು ಕುಡಿದರೆ ಶಾಶ್ವತ ದಾಹ ಪರಿಹಾರ
ಅನ್ನೋ ಭ್ರಮೆ ಹುಟ್ಟಿಸುತ್ತಾರೆ. ಅದು ಸುಳ್ಳೆಂದು ಗೊತ್ತಿದ್ದರೂ ಅದಕ್ಕೇ ಮಾರು ಹೋಗುತ್ತಿದ್ದೇವೆ. ಗೊತ್ತಿದ್ದೂ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಸುತ್ತಮುತ್ತ ಹಣ್ಣಿನ ಗಿಡಗಳು ಇಲ್ಲದಾಗ ಇದು ಅನಿವಾರ್ಯ ಕೂಡ. ಜೊತೆಗೆ ಕಾಸು ತೆತ್ತರೆ ಸುಲಭಕ್ಕೆ ಸಿಗುವಾಗ, ಗಿಡ ಬೆಳೆಸಿ ಹಣ್ಣು ಕೀಳುವಲ್ಲಿಯವರೆಗಿನ ತಾಳ್ಮೆ ಯಾರಿಗಿದೆ?
ಬೇಸಿಗೆ ಸಹಜವಾಗಿ ಬರುವಂಥಾದ್ದು. ಆದರೆ, ಅದನ್ನು ತಣಿಸಲು ಪ್ರಕೃತಿಯಲ್ಲಿಯೇ ಸಾಕಷ್ಟು ಆಯಾಯ ಕಾಲಕ್ಕೆ ಬಿಡುವ ಹಣ್ಣುಗಳು ಇವೆ. ಅವುಗಳಲ್ಲಿ ಬೇರೆ ಬೇರೆ ರೀತಿಯಾದ ವಿಟಮಿನ್‌ಗಳು ನಮ್ಮ ದೇಹದ ರಕ್ಷಣೆಗಾಗಿಯೇ ಇದೆ. ಪ್ರತಿಯೊಬ್ಬರೂ ಹಿತ್ತಲಿನಲ್ಲಿ ಈ ರೀತಿಯಾದಂತಹ ಒಂದೊಂದು ಹಣ್ಣಿನ ಗಿಡಗಳನ್ನಾದರು ಬೆಳೆಸಿದರೆ ಅದೆಷ್ಟು ಚೆನ್ನ ! ಆಧುನಿಕ ತಂಪು ಪಾನೀಯಗಳಿಗೆ ಒಗ್ಗಿ ಹೋದ ಮಕ್ಕಳನ್ನು ಬೇರೆ ಸ್ವಾದದ ಕಡೆಗೆ ಸೆಳೆಯಲು, ಅದರ ರಸವನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಫ್ರಿಡ್ಜ್ನೊಳಗಿಟ್ಟು ರುಚಿಕರವಾದ ಪೇಯವನ್ನು ಸಿದ್ಧಪಡಿಸಿ ಕೊಡಬಹುದು. ಪುನರ್ಪುಳಿ ಅನ್ನುವ ಹುಳಿಮಿಶ್ರಿತ ಹಣ್ಣು ಬೇಸಿಗೆಯಲ್ಲಿ ಯಥೇತ್ಛವಾಗಿ ಆಗುತ್ತದೆ. ತುಂಬಾ ಹುಳಿ ಇರುವ ಕಾರಣ ಅದನ್ನು ನೇರವಾಗಿ ತಿನ್ನಲು ಆಗುವುದಿಲ್ಲ. ಅದನ್ನು ಒಣಗಿಸಿ ಮತ್ತೆ ಅದನ್ನು ನೆನೆ ಹಾಕಿ ಶರಬತ್ತು ಮಾಡಿ ಕುಡಿಯುವುದು ಬೇಸಿಗೆಯ ಸುಲಭ ಮತ್ತು ಆರೋಗ್ಯಕರ ಪೇಯಗಳಲ್ಲಿ ಒಂದು. ಈ ಕಾಲದಲ್ಲಿ ದೊರಕುವ ಅನಾನಸಿನ ಕುರಿತು ಗೊತ್ತಿಲ್ಲದವರೇ ಇಲ್ಲ. ಅನಾನಸ್ ಜ್ಯೂಸ್ ಆರ್ಡರ್ ಮಾಡಿ ಕುಡಿದರೆ ಹೆಚ್ಚು ಸಂತೃಪ್ತಿ ಅನುಭವಿಸುವವರು ನಾವು. ಅದಕ್ಕೆ ಒಂದು ಗೋಣಿ ಚೀಲದಷ್ಟು ಪ್ರಮಾಣದ ಮಣ್ಣು ಇದ್ದರೆ ಸಾಕು, ವೆಚ್ಚವಿಲ್ಲದೆ ಬೆಳೆಯಬಹುದು ಎಂಬುದನ್ನು ನಾವು ಮರೆತೇ ಬಿಟ್ಟಿರುತ್ತೇವೆ.
ನಮ್ಮ ಮನೆಯ ಮುಂದೆ ಸಣ್ಣ ಹೂವಿನ ತೋಟವಿದೆ. ಅದರಲ್ಲಿ ಒಂದೊಂದು ಜಾತಿಯ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ. ಅದರಲ್ಲಿ ಹಸಿರು ಬಣ್ಣದ ನಕ್ಷತ್ರಹಣ್ಣಿನ ಗಿಡದಲ್ಲಿ ರಸಭರಿತ ಹಣ್ಣುಗಳು ತೂಗಿ ತೊನೆದುಕೊಂಡಿರುತ್ತವೆ. ದಾರಿಯಲ್ಲಿ ಪಯಣಿಸುವವರು ಆ ಮರದಲ್ಲಿನ ಗೊಂಚಲು ಗೊಂಚಲು ಹಣ್ಣು ನೋಡಿ, ಗೇಟು ದಾಟಿ ಆ ಗಿಡದ ಬುಡಕ್ಕೆ ಬಂದು ಸಾಕಷ್ಟು ಹಣ್ಣು ಕಿತ್ತು ರುಚಿ ನೋಡಿ, “ಎಷ್ಟು ಸುಲಭವಾಗಿ ಬಾಯಾರಿಕೆ ಇಂಗುತ್ತದಲ್ಲ’ ಅಂತ ತಾರೀಪು ಕೊಟ್ಟು ಬೀಜವನ್ನು ಅಲ್ಲೆ ಬಿಸುಟು ಹೋಗುತ್ತಾರೆ. ಹೆಚ್ಚಿನವರಿಗೆ ಬೀಜ ಅಥವಾ ಸಸಿಯನ್ನು ಒಯ್ದು ತಮ್ಮ ಮನೆಯ ಹಿತ್ತಲಿನಲ್ಲಿ ನೆಡುವ ಇರಾದೆಯೇ ಇರುವುದಿಲ್ಲ. ಈ ಬರುವ ಮಳೆಗಾಲದಲ್ಲಿ ಸಿಕ್ಕ ಜಾಗದಲ್ಲಿ, ಕುಂಡದಲ್ಲಿ ಇಂತಹ ಗಿಡಗಳನ್ನು ಬೆಳೆಸಿದರೆ ಬೇಸಿಗೆಯಲ್ಲಿ ಹಣ್ಣು ದೊರಕುತ್ತದೆ. ಹಕ್ಕಿಗಳ ಸಂತಾನವೂ ವೃದ್ಧಿಯಾಗುತ್ತದೆ. ನಮ್ಮ ಒಂದಷ್ಟು ಸಮಯದ ಶ್ರಮ ಮತ್ತು ಸಮಯದ ವಿನಿಯೋಗದಲ್ಲಿ ಎಲ್ಲವೂ ಹಸನಾಗಬಲ್ಲವು. ಆಗ ಬರುವ ಬೇಸಿಗೆ ಕಾಲವನ್ನು ಒಂದಷ್ಟು ಸಹ್ಯವಾಗಿಸಿಕೊಳ್ಳಬಹುದು.
ಸ್ಮಿತಾ ಅಮೃತರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.