ಅಸಾಧ್ಯವಾದುದನ್ನು ಸಾಧಿಸಲು ಭಗೀರಥ ಸ್ಫೂರ್ತಿ
Team Udayavani, May 12, 2019, 3:00 AM IST
ಮೈಸೂರು: ಗುರಿ ಮುಟ್ಟುವ ವರೆಗೂ ಬಿಡುವುದೇ ಇಲ್ಲ ಎನ್ನುವಂತೆ ಮನಸ್ಸು ಮಾಡಿದರೆ, ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು ಎಂಬ ಸಂದೇಶವನ್ನು ಭಗೀರಥ ಮಹರ್ಷಿಗಳು ಸಮಾಜಕ್ಕೆ ಸಾರುವ ಮೂಲಕ ಸಾಧಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿಯಲ್ಲಿ ಅವರು ಮಾತನಾಡಿದರು.
ಭಗೀರಥರು ತಪಸ್ಸು ಮಾಡಿದ್ದು ಒಂದು ಸಾವಿರ ವರ್ಷಗಳು ಎಂಬ ಪ್ರತೀತಿ ಇದೆ. ಸಾವಿರ ವರ್ಷ ಒಂದೇ ಒಂದು ಕಾರ್ಯ ಸಾಧನೆಗಾಗಿ ನಿರಂತರವಾಗಿ ಊಟ-ನಿದ್ದೆ ಎಲ್ಲವನ್ನು ಬಿಟ್ಟು ಮಾಡುವ ಪ್ರಯತ್ನ ಮನುಷ್ಯನ ಸಾಧನೆಗೆ ರೂಪಕವಾಗಿ ಪರಿಣಮಿಸಿದೆ. ಸಮಾಜಮುಖೀಯಾಗಿ ಕೆಲಸ ಮಾಡಲು, ಅಂದು ಕೊಂಡಿದ್ದನ್ನು ಸಾಧಿಸಲು ಯುವಕರಿಗೆ ಭಗೀರಥನ ಪ್ರಯತ್ನ ಪ್ರೇರಣೆಯಾಗಬೇಕು ಎಂದರು.
ಸರ್ಕಾರದ ವತಿಯಿಂದ ಇಂತಹ ಮಹಾಪುರುಷರ ಜಯಂತಿಗಳು ಆಚರಣೆಯಾಗುತ್ತಿರಬೇಕು. ಇಲ್ಲವಾದಲ್ಲಿ ಮಹಾಪುರುಷರನ್ನು ಮರೆತು ಬಿಡುತ್ತೇವೆ. ಇಲ್ಲವೇ ಅವರು ನೆನಪಿನಿಂದ ಹಿಂದೆ ಸರಿದುಬಿಡುತ್ತಾರೆ. ಇತ್ತೀಚಿಗೆ ಓದಿನ ಹವ್ಯಾಸಗಳು ನಮಗೆ ಕಡಿಮೆಯಾಗಿಬಿಟ್ಟಿದೆ. ಜಯಂತಿಗಳು ಆಗುತ್ತಿದ್ದರೆ ಅವರ ಸ್ಮರಣೆ ಸಾಧ್ಯವಾಗುತ್ತದೆ ಎಂದರು.
ಸಂದೇಶ: ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ ಎನ್ನುವ ಈ ಸಂದರ್ಭದಲ್ಲಿ ಇಂತಹ ಮಹನೀಯರ ಸಂದೇಶಗಳನ್ನು ಕೇಳಿದಾಗ ನಮಗೆ ಹೊಸ ಚೈತನ್ಯ ಬಂದಂತೆ ಆಗುತ್ತದೆ. ಹೊಸ ಸಾಧನೆಗಳನ್ನು ಮಾಡಲು ಭರವಸೆ ಮತ್ತು ಧೈರ್ಯ ಬರುತ್ತದೆ. ಇಂತಹವರ ಸಂದೇಶಗಳನ್ನು ಹಂಚಿಕೊಳ್ಳುವಾಗ ಸಮಾಜದಲ್ಲಿ ಧನಾತ್ಮಕ ಶಕ್ತಿ ಸಂಚಲನಗೊಳ್ಳುತ್ತದೆ ಎಂದು ಹೇಳಿದರು.
ಭಗೀರಥ ಮಹರ್ಷಿಗಳು ಮಾಡಿದ ಸಾಧನೆ ಒಂದು ಸಮಾಜಕ್ಕೆ ಸೀಮಿತವಲ್ಲ. ಇಡೀ ಮನುಷ್ಯ ಕುಲಕ್ಕೆ ಅದು ಸಲ್ಲುವಂತದ್ದು. ಪುರುಷರು-ಮಹಿಳೆಯರು ಯಾರೇ ಸಾಧನೆ ಮಾಡಲಿ, ಸಮಾಜದ ಒಳಿತಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಸಾಧನೆ ಮಾಡಬೇಕು. ಸಮಾಜಮುಖೀಯಾದ ಹಾಗೂ ಒಳ್ಳೆಯತನದ ಪ್ರಯತ್ನ ಯಾವತ್ತೂ ಸೋಲುವುದಿಲ್ಲ ಎಂಬುದನ್ನು ಹಲವು ನಿದರ್ಶನಗಳಲ್ಲಿ ನೋಡಿದ್ದೇವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಉಪಸ್ಥಿತರಿದ್ದರು.
ಭಗೀರಥ ಪ್ರಯತ್ನ: ಯಾರದರೂ ಬಲವಾದ ಪ್ರಯತ್ನ ಮಾಡುತ್ತಿದ್ದರೆ ಅದನ್ನು ಭಗೀರಥ ಪ್ರಯತ್ನ ಎನ್ನುತ್ತಾರೆ. ಎಲ್ಲರಿಗೂ ಭಗೀರಥ ಪ್ರಯತ್ನ ಸ್ಫೂರ್ತಿಯಾಗಿದೆ. ನಾವು ಏನಾದರೂ ಸಾಧಿಸುವ ಪ್ರಯತ್ನ ಮಾಡಿದರೆ ಭಗೀರಥರನ್ನು ಮಾದರಿಯಾಗಿಟ್ಟುಕೊಂಡು ಪ್ರಯತ್ನ ಮುಂದುವರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ ತಿಳಿಸಿದರು. ಕಪಿಲ ಮಹರ್ಷಿಗಳ ಶಾಪದಿಂದ ತಮ್ಮವರನ್ನು ವಿಮೋಚನೆಗೊಳಿಸಲು ಭಗೀರಥರು ಗಂಗೆಯನ್ನು ಭೂಲೋಕಕ್ಕೆ ತರುವ ಪ್ರಯತ್ನ ಬಹಳ ಕಠಿಣವಾದದ್ದು, ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಮಹಾನ್ ವ್ಯಕ್ತಿಯಾಗುತ್ತಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.