ಉಡುಪಿ: ಎತ್ತರದ ಪ್ರದೇಶಗಳಿಗೆ ಇನ್ನೂ ತಲುಪದ ನೀರು
ನೀರಿನ ಸಮಸ್ಯೆ ತುಸು ಸುಧಾರಣೆ
Team Udayavani, May 12, 2019, 10:59 AM IST
ಉಡುಪಿ: ನಗರದಲ್ಲಿ ಹತ್ತು ದಿನಗಳಿಂದ ಉಲ್ಬಣಿಸಿರುವ ನೀರಿನ ಸಮಸ್ಯೆ ಸದ್ಯ ಸುಧಾರಣೆ ಕಾಣುತ್ತಿದೆ. ಆದರೆ ಎತ್ತರದ ಮತ್ತು ಬಾವಿಗಳೇ ಇಲ್ಲದ ಪ್ರದೇಶಗಳಲ್ಲಿ ಸಮಸ್ಯೆ ಯಥಾಸ್ಥಿತಿಯಲ್ಲಿದೆ. 8 ದಿನಗಳಿಂದ ನೀರು ದೊರೆಯದೆ ಇರುವ ಪ್ರದೇಶಗಳು ಇನ್ನೂ ಅನೇಕ ಇವೆ.
ಬಜೆ ಡ್ಯಾಂ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮತ್ತು ಹಳ್ಳಗಳಿಂದ ಪಂಪ್ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಪೌರಾಯುಕ್ತ ನೇತೃತ್ವದ ನಗರ ಸಭೆ ಅಧಿಕಾರಿಗಳ ತಂಡ ಆ ಪ್ರದೇಶದಲ್ಲಿ ಬೀಡುಬಿಟ್ಟಿದೆ. ನಗರವನ್ನು 6 ವಿಭಾಗಗಳನ್ನಾಗಿ ವಿಭಾಗಿಸಿ 2ರಿಂದ 3 ವಿಭಾಗಗಳಿಗೆ ನೀರು ಪೂರೈಕೆಯಾಗಿದೆ. ಶನಿವಾರ ಸುಮಾರು 9 ಎಂಎಲ್‌ಡಿ ನೀರು ಪಂಪ್ ಮಾಡಲಾಯಿತು.
ಟ್ಯಾಂಕರ್ ಹೆಚ್ಚಳ
ಟ್ಯಾಂಕರ್ ಕೊರತೆಯ ನಡುವೆಯೂ ನಗರಸಭೆಯಿಂದ ಶನಿವಾರ ಸುಮಾರು 10 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಯಿತು. ಕೊಡವೂರಿನಲ್ಲಿ ಸಂಘ - ಸಂಸ್ಥೆಗಳು ನೀರು ಪೂರೈಕೆಗೆ ಕೈಜೋಡಿಸಿವೆ. ಕೆಲವು ವಾರ್ಡ್ ಗಳಲ್ಲಿ ನಗರಸಭಾ ಸದಸ್ಯರ ಜತೆಗೆ ಪರಾಜಿತ ಅಭ್ಯರ್ಥಿಗಳೂ ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ. ಇನ್ನು ಕೆಲವು ಹಣಕಾಸಿನ ಸಹಾಯ ಮಾಡಿದ್ದಾರೆ.
ಶ್ರಮದಾನ ವಿಸ್ತರಣೆ
ಬಜೆ ಡ್ಯಾಂ ಪರಿಸರದಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಶ್ರಮದಾನ ಶನಿವಾರವೂ ಮುಂದು ವರಿಯಿತು. ಕಾಪು ಶಾಸಕ ಲಾಲಾಜಿ ಮೆಂಡನ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು. ರವಿವಾರ ಕೂಡ ಶ್ರಮದಾನ ನಡೆಯಲಿದ್ದು, ನದಿಯಲ್ಲಿ ನೀರಿನ ಹರಿವಿಗೆ ಇರುವ ತಡೆಗಳನ್ನು ಹಿಟಾಚಿ ಮೂಲಕವೂ ತೆರವುಗೊಳಿಸಲಾಗುತ್ತಿದೆ.
22 ಕಡೆ ತೀವ್ರ ಸಮಸ್ಯೆ
ನಗರಸಭೆ ವ್ಯಾಪ್ತಿಯ 22 ಸ್ಥಳಗಳಲ್ಲಿ ನೀರಿನ ತೀವ್ರ ಸಮಸ್ಯೆ ಇರುವುದನ್ನು ಈಗಾಗಲೇ ಗುರುತಿಸಿ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಖಾಲಿಯಾಗಿದ್ದ ಡ್ಯಾಂಗೆ ಡ್ರಜ್ಜಿಂಗ್, ಪಂಪಿಂಗ್ ಮೂಲಕ ನೀರು ಹಾಯಿಸುವ ಪ್ರಕ್ರಿಯೆ ಮುಂದುವರಿದಿದೆ. ರೇಷನಿಂಗ್ ಕೂಡ ಇರುತ್ತದೆ. ಮಳೆ ಬಂದರೆ ಮಾತ್ರವೇ ಪರಿಸ್ಥಿತಿ ಪೂರ್ಣ ಸುಧಾರಿಸಲು ಸಾಧ್ಯ.
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ.
ಮಂಗಳೂರು ಮೇ 13ರ ವರೆಗೆ ನೀರು
ಮಂಗಳೂರು: ಕುಡಿಯುವ ನೀರು ರೇಷನಿಂಗ್ ವ್ಯವಸ್ಥೆಯಡಿ ನಗರಕ್ಕೆ ಮೇ 13ರ ಬೆಳಗ್ಗೆ 6 ಗಂಟೆಯ ವರೆಗೆ ನೀರು ಸರಬರಾಜಾಗಲಿದ್ದು, ರವಿವಾರವೂ ನೀರು ಲಭ್ಯವಾಗಲಿದೆ. ಆದರೆ ನೀರಿನ ರೇಷನಿಂಗ್ ಪ್ರಕ್ರಿಯೆ ಪರಿಷ್ಕರಣೆ ಬಗ್ಗೆ ರವಿವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.