ಶಿಬಿರದಲ್ಲಿ ಮಕ್ಕಳಿಗೆ ಹಾವಿನ ಅರಿವು ಮೂಡಿಸಿದ ತಜ್ಞರು
ಹಾವುಗಳು ಮನುಷ್ಯನಿಗೆ ಎಂದಿಗೂ ಅಪಾಯವಲ್ಲ: ತುಮಕೂರಿನ ಉರಗತಜ್ಞ ಮುರಳಿಧರ ಅಭಿಪ್ರಾಯ
Team Udayavani, May 12, 2019, 3:42 PM IST
ಕುದೂರು ಹೋಬಳಿಯ ಆಲದಕಟ್ಟೆ ಬಳಿಯಿರುವ ಸೋಹಂ ಯೋಗ ಮತ್ತು ಆಯುರ್ವೇದ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿದರಲ್ಲಿ ಮಕ್ಕಳು ಹಾವುಗಳ ಜೊತೆ ಆಟವಾಡಿದರು.
ಕುದೂರು: ಬೇಸಿಗೆ ಚಿಣ್ಣರ ಶಿಬಿರದಲ್ಲಿ ಮಕ್ಕಳಿಗೆ ನೃತ್ಯ, ಈಜು, ಹಾಡು, ಚಿತ್ರಕಲೆ, ಆಟೋಟ ಹೀಗೆ ಅನೇಕ ವಿಚಾರಗಳನ್ನು ಕಲಿಸುವುದು ಸಾಮಾನ್ಯ ಸಂಗತಿ. ಆದರೆ, ಕುದೂರು ಹೋಬಳಿಯ ಆಲದಕಟ್ಟೆ ಬಳಿಯಿರುವ ಸುಹಂ ಯೋಗ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿದರಲ್ಲಿ ಮಕ್ಕಳಿಗೆ ಹಾವುಗಳನ್ನು ಆಡಿಸುವ ಮತ್ತು ಆಡುವ ಕಲೆಯನ್ನು ಹೇಳಿಕೊಡುವ ಮೂಲಕ ವಿನೂತನ ಪ್ರಯತ್ನ ಮಾಡಲಾಗಿದೆ.
ಆತ್ಮ ರಕ್ಷಣೆಗಾಗಿ ಕಚ್ಚುತ್ತವೆ ಹಾವು: ಬೇಸಿಗೆ ಚಿಣ್ಣರ ಶಿಬಿರಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ತುಮಕೂರಿನ ಉರಗತಜ್ಞ ಮುರಳಿಧರ ಮಾತನಾಡಿ, ಹಾವಿನ ಕುರಿತ ತಪ್ಪು ಗ್ರಹಿಕೆಗಳನ್ನು ಮಕ್ಕಳ ಮನಸ್ಸಿನಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹಾವುಗಳು ಮನುಷ್ಯನಿಗೆ ಎಂದಿಗೂ ಅಪಾಯ ಮಾಡುವುದಿಲ್ಲ. ನಾವು ಹೇಗೆ ನಮ್ಮ ರಕ್ಷಣೆಗೆ ಪ್ರಯತ್ನಿಸುತ್ತೇವೋ ಹಾಗೆ ಹಾವುಗಳು ಕೂಡ ಆತ್ಮ ರಕ್ಷಣೆಗಾಗಿ ಕಚ್ಚುತ್ತವೆ. ಅಲ್ಲದೆ, ನಾವು ಅವುಗಳನ್ನು ಕೆಣಕಿದರೆ ಮಾತ್ರ ಅವು ಕಚ್ಚಲು ಬರುತ್ತವೆ. ಅವುಗಳಿಗೆ ನಮ್ಮ ಸ್ಪರ್ಷ ಸುರಕ್ಷಿತ ಎಂಬ ಭಾವನೆ ಮೂಡಿದರೆ ದಿನಪೂರ್ತಿ ನಮ್ಮ ಜತೆಯಲ್ಲೇ ಇದ್ದರೂ ನಮ್ಮನ್ನು ಕಚ್ಚುವುದಿಲ್ಲ. ಅವುಗಳಿಂದ ನಮಗೆ ಅಪಾಯವಿಲ್ಲ ಎಂದು ವಿವರಣೆ ನೀಡಿದರು.
ಕೆಲ ಹಾವುಗಳು ರೈತನ ಮಿತ್ರ: ಕೆಲವು ಹಾವುಗಳು ರೈತನ ಮಿತ್ರವಾಗಿವೆ. ಅವುಗಳನ್ನು ಕೊಲ್ಲುವುದರಿಂದ ರೈತರ ಸಮಸ್ಯೆಗಳು ಹೆಚ್ಚಾಗುತ್ತವೆ. ಇಲಿಗಳ ಸಂತಾನದಲ್ಲಿ ವೇಗ ಹೆಚ್ಚಿ, ನೂರಾರು ಇಲಿಮರಿಗಳಿಗೆ ಜನ್ಮ ತಾಳುತ್ತವೆ. ಇದರಿಂದಾಗಿ ರೈತನ ಬೆಳೆಗಳು ಇಲಿಗಳ ಪಾಲಾಗಿ, ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಹಾಗಾಗಿ ಹಾವುಗಳನ್ನು ಕೊಲ್ಲುವುದು ತರವಲ್ಲ ಎಂದು ಸಲಹೆ ನೀಡಿದರು.
ಹಾವುಗಳಿಗೆ ನೆನಪಿನ ಶಕ್ತಿ ಕಡಿಮೆ: ಉರಗ ಪ್ರೇಮಿ ಸುಗ್ಗನಹಳ್ಳಿ ಅರುಣ್ ಮಾತನಾಡಿ, ಹಾವುಗಳನ್ನು ಕುರಿತು ಜನರಲ್ಲಿ ಬಹಳಷ್ಟು ತಪ್ಪು ಅಭಿಪ್ರಾಯಗಳಾಗಿವೆ. ಇದೇ ರೀತಿಯ ತಪ್ಪು ಗ್ರಹಿಕೆಗಳು ಮುಂದುವರಿದರೆ ಮುಂದೊಂದು ದಿನಗಳ ಹಾವುಗಳ ಸಂತತಿ ನಾಶವಾಗುತ್ತದೆ. ಅಲ್ಲದೆ, ಹಾವಿನ ದ್ವೇಷ ಹನ್ನೆರಡು ವರ್ಷ ಎಂಬುದೆಲ್ಲ ಸುಳ್ಳು. ಹಾವುಗಳಿಗೆ ನೆನಪಿನ ಶಕ್ತಿಯೇ ಇಲ್ಲ. ಹೀಗಾಗಿ ಹಾವುಗಳು ಯಾವುದೇ ರೀತಿಯ ದ್ವೇಷ ಕಟ್ಟುವುದಿಲ್ಲ. ದ್ವೇಷ ಕಟ್ಟಿಕೊಂಡು ಹೋಗಿ ಕಚ್ಚಿದ ಉದಾಹರಣೆಗಳೂ ಇಲ್ಲ. ಅಲ್ಲದೆ, ಹಾವು ಕಚ್ಚಿದಾಗ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಾವು ಸಂಭವಿಸುವುದಿಲ್ಲ ಎಂದು ಮನವರಿಕೆ ಮಾಡಿದರು.
ಸೋಹಂ ಗುರೂಜೀ ಮಾತನಾಡಿ, ನಮ್ಮ ಜನರಲ್ಲಿ ಹಾವು ಮತ್ತು ದೆವ್ವಗಳ ಕುರಿತು ಹುಟ್ಟಿರುವಷ್ಟು ದಂತ ಕತೆಗಳು ಬೇರೆ ಪ್ರಾಣಿಗಳ ಮೇಲೆ ಹುಟ್ಟಿಲ್ಲ. ಮಕ್ಕಳಿಗೆ ಚಿಕ್ಕಂದಿನಿಂದಲೇ ಹಾವುಗಳ ಅರಿವು ಮೂಡಿಸಿದರೆ ಕೊಲ್ಲುವ ಮತ್ತು ಭಯವನ್ನು ತೊರೆಯುವಂತೆ ಹಿರಿಯರು ಮಾಡಬೇಕಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.