ಬತ್ತಿದ ಕೆರೆ; ಕುಡಿಯುವ ನೀರಿಗೆ ಹಾಹಾಕಾರ
ನೀರಿಗಾಗಿ ಗ್ರಾಮ-ತಾಂಡಾ-ದೊಡ್ಡಿಗಳ ಜನ ಅಲೆದಾಟ • ಜಾನುವಾರುಗಳಿಗೆ ಮೇವಿನ ಅಭಾವ • ಕೆರೆ ಅಭಿವೃದ್ಧಿಗೆ ನಿರ್ಲಕ್ಷ್ಯ
Team Udayavani, May 15, 2019, 11:08 AM IST
ದೇವದುರ್ಗ: ಸಮೀಪದ ಪರಾಪುರ ಕೆರೆ ಬತ್ತಿ ಕ್ರೀಡಾ ಮೈದಾನಂತಾಗಿದೆ.
ದೇವದುರ್ಗ: ಭೀಕರ ಬರದಿಂದ ತತ್ತರಿಸಿದ ರೈತರು, ಬತ್ತಿದ ಕೆರೆಗಳು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ, ಕೊಡ ನೀರಿಗಾಗಿ ಅಲೆದಾಡುತ್ತಿರುವ ಗ್ರಾಮೀಣ ಜನತೆ, ಜಾನುವಾರುಗಳಿಗೆ ಮೇವು ಸಿಗದೇ ಚಿಂತಿತರಾದ ರೈತರು, ಬರದ ಭೀಕರತೆಗೆ ಗುಳೆ ಹೋಗುತ್ತಿರುವ ಕಾರ್ಮಿಕರು ಇದು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಚಿತ್ರಣ.
ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಸತತ ಎರಡ್ಮೂರು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್ಗಳು ಬಿಕ್ಕುತ್ತಿವೆ. ತೆರೆದಬಾವಿಗಳಲ್ಲೂ ನೀರಿಲ್ಲದಾಗಿದೆ. ಗ್ರಾಮೀಣ ಜನ, ಜಾನುವಾರುಗಳ ಜಲ ಮೂಲವಾಗಿದ್ದ ಕೆರೆಗಳು ಬತ್ತಿ ಬರಿದಾಗಿವೆ. ಹಳ್ಳಿ ದೊಡ್ಡಿ, ತಾಂಡಾಗಳ ಜನತೆ ಕೊಡ ಹಿಡಿದುಕೊಂಡು ನೀರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಆದರೂ ತಾಲೂಕು ಆಡಳಿತ ಬರ ನಿರ್ವಹಣೆಗೆ ಸಮರ್ಪಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
ಬತ್ತಿದ ಕೆರೆಗಳು: ತಾಲೂಕು ಭೀಕರ ಬರದಿಂದ ತತ್ತರಿಸಿದೆ. ತಾಲೂಕಿನ ಪರಾಪುರು, ಜೆ.ಜಾಗೀರದಿನ್ನಿ ಸೇರಿ ಇತರೆ ಗ್ರಾಮಗಳಲ್ಲಿನ ಕೆರೆಗಳು ಬತ್ತಿವೆ. ಹೀಗಾಗಿ ಪರಾಪುರು, ಗಾಜಲದಿನ್ನಿ, ಬಸಾಪುರು, ಮುಕ್ಕನಾಳ, ಕಮ್ಮಲದಿನ್ನಿ, ಕಕ್ಕಲದೊಡ್ಡಿ, ಅಮರಾಪುರು, ಮುಂಡರಗಿ ಸೇರಿ ವಿವಿಧ ತಾಂಡಾ, ದೊಡ್ಡಿಗಳಲ್ಲಿ ಕುಡಿಯುವ ನೀರಿನ ಬವಣೆ ಶುರುವಾಗಿದೆ.
ಬತ್ತಿದ ಜೆ.ಜಾಡಲದಿನ್ನಿ ಕೆರೆ: ಜೆ.ಜಾಡಲದಿನ್ನಿ ಕೆರೆ ಸಂಪೂರ್ಣ ಬತ್ತಿ ಕ್ರೀಡಾ ಮೈದಾನದಂತಾಗಿದೆ. ಈ ಭಾಗದಲ್ಲಿ ತಿಂಗಳಿನಿಂದ ಕುಡಿಯುವ ನೀರಿನ ಅಭಾವ ಶುರುವಾಗಿದೆ. ರೇಕಲಮರಡಿ, ಅಗ್ರಹಾರ, ಜಾಡಲದಿನ್ನಿ, ಯಾಟಗಲ್, ಮರಕಮದಿನ್ನಿ ಸೇರಿ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಬೇಸಿಗೆ ಬಿಸಿಲು ದಿನೇದಿನೇ ಹೆಚ್ಚಾಗುತ್ತಿದೆ. ಮನೆ ಬಿಟ್ಟು ಹೊರಗಡೆ ಬರಲಾದಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ರಣ ಬಿಸಿಲಿನಲ್ಲಿ ಕೊಡ ಹಿಡಿದುಕೊಂಡು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣ ಸೇರಿ ತಾಲೂಕಿನಾದ್ಯಂತ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದರೆ ಈ ಕೆರೆಗಳಲ್ಲಿನ ಹೂಳೆತ್ತಿ ಅಭಿವೃದ್ಧಿಗೊಳಿಸಲು, ನೀರು ಸಂಗ್ರಹಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕೆರೆಗಳು ಬತ್ತಲು ಕಾರಣ ಎನ್ನಲಾಗುತ್ತಿದೆ. ಇನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಸಭೆಗೆ ಬಾರದ್ದರಿಂದ ಸಭೆಯಲ್ಲಿ ಒಮ್ಮೆಯೂ ಕೆರೆ ಅಭಿವೃದ್ಧಿ ವಿಷಯ ಚರ್ಚೆಗೆ ಬಂದಿಲ್ಲ ಎನ್ನಲಾಗುತ್ತಿದೆ.
ಹೂಳು ಎತ್ತಲು ಆಗ್ರಹ: ತಾಲೂಕಿನಾದ್ಯಂತ 25ಕ್ಕೂ ಹೆಚ್ಚು ಕೆರೆಗಳಿವೆ. ಕೆರೆಗಳಲ್ಲಿ ಹೂಳು ತುಂಬಿದ್ದು, ನೀರು ಸಂಗ್ರಹ ಸಾಮರ್ಥಯ ಕುಸಿದಿದೆ. ಸುಮಾರು ವರ್ಷಗಳಿಂದ ವಿವಿಧ ಸಂಘಟನೆಗಳ ಸದಸ್ಯರು ಕೆರೆಗಳ ಹೂಳೆತ್ತಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವುದಾಗಿ ಅಧಿಕಾರಿಗಳು ಹುಸಿ ಭರವಸೆ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಬೆಲೆ: ತಾಲೂಕಿನ ಬಹುತೇಕ ಗ್ರಾಮಗಳು, ತಾಂಡಾ, ದೊಡ್ಡಿಗಳಲ್ಲಿ ಕುಡಿಯುವ ನೀರಿನ ಬವಣೆ ಶುರುವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗ್ರಾಪಂ 14ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಗ್ರಾಪಂ ಅಧಿಕಾರಿಗಳು ಈ ಅನುದಾನ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕರಿಗುಡ್ಡ, ಅಮರಾಪುರು ಈ ಎರಡೂ ಗ್ರಾಮ ಪಂಚಾಯಿತಿಗಳ ಉಸ್ತುವಾರಿ ವಹಿಸಿಕೊಂಡ ಅಧಿಕಾರಿ ಜನರ ಕೈಗೂ ಸಿಗುತ್ತಿಲ್ಲ, ಕಚೇರಿಗೆ ಬರುತ್ತಿಲ್ಲ. ಹೀಗಾಗಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ಗ್ರಾಪಂ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಹನುಮಗೌಡ, ರಂಗಪ್ಪ ಆಗ್ರಹಿಸಿದ್ದಾರೆ.
ಕಸಾಯಿಖಾನೆಗೆ ಜಾನುವಾರು: ಹೊಲಗದ್ದೆಗಳು ಬರಡು ಭೂಮಿಯಂತೆ ಕಾಣುತ್ತಿವೆ. ತಾಲೂಕಿನಾದ್ಯಂತ ಮೇವಿನ ಅಭಾವ ಉಲ್ಬಣಗೊಂಡಿದೆ. ಮೇವು ಬ್ಯಾಂಕ್ ಸ್ಥಾಪನೆ ಮಾಡುವಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಮೇವು ಸಿಗದೇ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಸ್ಥಿತಿ ತಲೆದೋರಿದೆ. ಕೂಡಲೇ ತಾಲೂಕು ಆಡಳಿತ ಗ್ರಾಮೀನ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕೆಂದು ಜೈ ಕರವೇ ಅಧ್ಯಕ್ಷ ಖಾದರ ಪಾಷಾ ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಂದ ಮೇವಿನ ಬೇಡಿಕೆ ಬಂದಿಲ್ಲ. ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
••ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್, ದೇವದುರ್ಗ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.