ಕೆಜಿಐಡಿ ಇಲಾಖೆ ಗಣಕೀಕೃತಗೊಳಿಸಲು ಒತ್ತಾಯ
Team Udayavani, May 16, 2019, 3:43 PM IST
ಬ್ಯಾಡಗಿ: ಅವಶ್ಯವಿರುವ ಮಾಹಿತಿ ಸಿಗದೇ ಅವ್ಯವಸ್ಥೆಯ ಆಗರವಾಗಿರುವ ರಾಜ್ಯ ಸರ್ಕಾರಿ ನೌಕರರ ವಿಮಾ ಇಲಾಖೆ (ಕೆಜಿಐಡಿ)ಯನ್ನು ಗಣಕೀಕೃತಗೊಳಿಸುವುದು, ವಿಮೆ ಮೇಲಿನ ಬಡ್ಡಿದರ ಪರಿಷ್ಕರಣೆ ಸೇರಿದಂತೆ ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಸದಸ್ಯರು ಬುಧವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಕೆ.ಪಿ.ಬ್ಯಾಡಗಿ ಮಾತನಾಡಿ, ರಾಜ್ಯದ ಬಹುತೇಕ ಇಲಾಖೆಗಳು ಕಂಪ್ಯೂಟರೈಸ್ಡ್ ಆಗಿದ್ದು ಎಲ್ಲ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಸಿಗುತ್ತಿವೆ. ಆದರೆ ಕೆಜಿಐಡಿ (ವಿಮೆ) ಇಲಾಖೆ ಮಾತ್ರ ಇಂದಿಗೂ ಕೈಬರದಲ್ಲೇ ಉಳಿದುಕೊಂಡಿದ್ದು ಸುಮಾರು 4.5 ಲಕ್ಷ ನೌಕರರು ಪ್ರತಿ ತಿಂಗಳು ತುಂಬಿದ ಹಣಕ್ಕೆ, ಲೆಕ್ಕಪತ್ರಗಳು ಸಿಗುತ್ತಿಲ್ಲ ಮತ್ತು ಅದರ ಸ್ಪಷ್ಟವಾದ ಮಾಹಿತಿ ಕೂಡ ನಮಗೆ ಸಿಗುತ್ತಿಲ್ಲ ಎಂದರು.
ಸುರೇಶ ಪೂಜಾರ ಮಾತನಾಡಿ, ಸರ್ಕಾರಿ ನೌಕರರು ತುಂಬಿದ ಹಣಕ್ಕೆ ಕೆಜಿಐಡಿ ಕೇವಲ ಶೇ. 6ರಷ್ಟು ಬಡ್ಡಿ ಹಣದ ಸಮೇತ ಮರಳಿಸುತ್ತಿದೆ. ಇದನ್ನೇ ಖಾಸಗಿ ವಲಯದ ಎಲ್ಐಸಿಗಳಲ್ಲಿ ಹಣ ತುಂಬಿದರೇ ಶೇ. 8.5ಕ್ಕೂ ಮೇಲ್ಪಟ್ಟು ಹಣ ಸಿಗುತ್ತದೆ. ಇದರಿಂದ ಪ್ರತಿಯೊಬ್ಬ ನೌಕರರಿಗೂ ಅನ್ಯಾಯವಾಗುತ್ತಿದ್ದು ಕೂಡಲೇ ಸರ್ಕಾರ ಕೆಜಿಐಡಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿ ಶೇ. 9ರಷ್ಟು ಬಡ್ಡಿ ಹಣದೊಂದಿಗೆ ಮರುಪಾವತಿ ಮಾಡುವಂತೆ ಆಗ್ರಹಿಸಿದರು.
ಮಹೇಶ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರು ಸರ್ಕಾರದಿಂದ ಬರಬಹುದಾದ ಎಲ್ಲ ಬಾಬತ್ತುಗಳನ್ನು ನಿವೃತ್ತಿ ದಿನದಂದೇ ಪಡೆದುಕೊಳ್ಳುವ ವ್ಯವಸ್ಥೆ ಇದೆ. ಆದರೆ ರಾಜ್ಯ ಸರ್ಕಾರದ ನೌಕರರು ನಿವೃತ್ತಿಯಾದ ಬಳಿಕ ಬರಬೇಕಾದ ಹಣವನ್ನು ಪಡೆಯಲು ಕನಿಷ್ಟ ಒಂದು ವರ್ಷವಾದರೂ ಕಾಯಬೇಕಾದ ಸ್ಥಿತಿ ಎದುರಾಗಿದೆ. ದೂರದ ಬೆಂಗಳೂರಿಗೆ ತೆರಳಿ ಅಪಗ್ರೇಡ್ ಆಗದಿರುವ ಕೆಜಿಐಡಿ ಇಲಾಖೆಯ ಬಾಗಿಲು ತಟ್ಟದೇ ತಮ್ಮ ನಿವೃತ್ತಿ ವೇತನ ಸೇರಿದಂತೆ ಇನ್ನಿತರ ಬಾಬತ್ತುಗಳು ಲಭ್ಯವಾಗುವುದಿಲ್ಲ, ಅವರಿಗೇಕೆ ಅಲೆದಾಡುವ ಶಿಕ್ಷೆ ಹಾಗಿದ್ದರೇ ನೌಕರರು ಹಣ ಕಟ್ಟಿದ್ದೇ ತಪ್ಪಾಯಿತೇ ಎಂದು ಪ್ರಶ್ನಿಸಿದರು.
ಪ್ರವೀಣ ಕನ್ನಮ್ಮನವರ ಮಾತನಾಡಿ, ಕೆಜಿಐಡಿ ವಿಮೆ ಮೇಲೆ ಸಾಲ ಪಡೆದವರದ್ದಷ್ಟೇ ಮಾಹಿತಿ ಇಲಾಖೆಯಲ್ಲಿ ಲಭ್ಯವಾಗುತ್ತಿದೆಯೇ ಹೊರತು, ಇನ್ನುಳಿದ ನೌಕರರು ತುಂಬಿದ ಹಣಕ್ಕೆ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಬೇಡವಾಗಿದ್ದರೂ ಕೆಜಿಐಡಿ ಮೇಲೆ ಅನಿವಾರ್ಯವಾಗಿ ನೌಕರರು ಸಾಲ ಮಾಡುವಂಥ ಸ್ಥಿತಿಯನ್ನು ಪ್ರತಿಯೊಬ್ಬ ನೌಕರರು ಎದುರಿಸುತ್ತಿದ್ದಾರೆ. ಆ ಕಾರಣಕ್ಕೆ ಕೂಡಲೇ ಇಲಾಖೆಯಲ್ಲಿನ ಎಲ್ಲ ಖಾತೆಗಳನ್ನು ಗಣಕೀಕೃತಗೊಳಿಸುವ ಕಾರ್ಯಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡುವಂತೆ ಮನವಿ ಮಾಡಿದರು.
ಪ್ರಭಾವತಿ ಬಡಿಗೇರ ಮಾತನಾಡಿ, ಕೇಂದ್ರ ಸರ್ಕಾರ ಜಿಎಸ್‌ಟಿ ಕಾನೂನು ಜಾರಿಗೊಳಿಸಿದ ಬಳಿಕ ಸಣ್ಣ ಚಹದ (ಡಬ್ಟಾ) ಹೋಟೆಲ್ಗಳಲ್ಲಿ ಕಂಪ್ಯೂಟರ್ ಬಿಲ್ಗಳನ್ನು ನೀಡುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ. ಆದರೆ ನೂರಾರು ಕೋಟಿ ವ್ಯವಹಾರ ನಡೆಸುತ್ತಿರುವ ಕೆಜಿಐಡಿ ಇಲಾಖೆ ಮಾತ್ರ ಇಂದಿಗೂ ಕಂಪ್ಯೂಟರೈಸ್ಡ್ ಆಗದಿರುವುದು ದುರದೃಷ್ಟಕರ. ಹೀಗಾಗಿ ನೌಕರರು ತುಂಬಿದ ಹಣವೆಷ್ಟು ಎಂಬುದೇ ಯಾರೊಬ್ಬರಿಗೂ ಅರ್ಥವಾಗದೇ ಇಡೀ ಇಲಾಖೆಯನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ನೌಕರರ ಸಂಘದ ಎಂ.ಐ.ಮಲ್ಲೂರ, ಸುಧಾ, ಹಾಲಮ್ಮನವರ, ರಾಧಾ ಹಣಗಿ, ಚಪ್ಪರದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.