ಧವಳವೇಣಿಯರು ಕೇಳಿ!
Team Udayavani, May 17, 2019, 6:00 AM IST
“ನೋಡಿ, ಈಗಿನ ಅನೇಕರು ಕೂದಲಿಗೆ ಬಣ್ಣ ಹಚ್ಚೋದಿಲ್ಲ. ಬಿಳಿ ಕೂದಲೇ ಇಂದಿನ ಫ್ಯಾಶನ್ ಅಂತ ಭಾವಿಸಿದ್ದಾರೆ. ನೀವ್ಯಾಕೆ ಕೂದಲ ಬಗ್ಗೆ ಚಿಂತೆ ಮಾಡುತ್ತೀರಾ? ಆರೋಗ್ಯದ ಬಗ್ಗೆ ಚಿಂತೆ ಮಾಡಿ” ಎಂದು ಸಲಹೆ ಕೊಟ್ಟ ವೈದ್ಯರ ತಲೆಯಲ್ಲಿ ಡೈ ಹಚ್ಚಿದ ಕೂದಲುಗಳು ಇಣುಕುತ್ತಿದ್ದವು.
ಆಗಿನ್ನೂ ನನಗೆ ಚಿಕ್ಕ ವಯಸ್ಸು. ಆದರೆ, ಕೂದಲು ಮಾತ್ರ ಅಲ್ಲೊಂದು ಇಲ್ಲೊಂದು ಬಿಳಿಯಾಗಿತ್ತು. ನಾನು ಕೂದಲಿಗೆ ಬಣ್ಣ ಹಚ್ಚುತ್ತಿರಲಿಲ್ಲ. ಏಕೆಂದರೆ, ನನ್ನ ತ್ವಚೆಗೆ ಯಾವ ಬಣ್ಣ ಹಚ್ಚಿದರೂ, ಅಲರ್ಜಿಯಾಗುತ್ತಿತ್ತು. ತಲೆ ಕೂದಲಿಗೆ ಬಣ್ಣದ ಗೊಡವೆ ಬೇಡವೆಂದು ಆರಾಮಾಗಿರುತ್ತಿದ್ದೆ.
ನಾನು ತುಂಬು ಗರ್ಭಿಣಿಯಾಗಿದ್ದ ದಿನಗಳ ಒಂದು ನೆನಪು. ಅಡುಗೆ ಮಾಡಲು ಒಬ್ಬರನ್ನು ನೇಮಿಸಿಕೊಂಡಿದ್ದೆ. ನನಗೆ ಆರು ತಿಂಗಳು ಇದ್ದಾಗಿನಿಂದಲೇ ಅವರು ಅಡುಗೆಗೆ ಬರುತ್ತಿದ್ದರು. ಆ ಹೆಂಗಸಿಗೆ ಅರವತ್ತರ ಪ್ರಾಯ. ತುಂಬಾ ಶೃಂಗಾರಪ್ರಿಯರು. ನಾನು ಅಷ್ಟೇ ಸರಳಜೀವಿ. ಅವರು ಯಾವಾಗಲೂ ನನಗೆ, “ಹಾಗೆ ಮೇಕಪ್ ಮಾಡಿಕೋ, ಹೀಗೆ ತಲೆ ಬಾಚಿಕೋ” ಅಂತೆಲ್ಲ ಹೇಳುತ್ತಿದ್ದರು. ಇದನ್ನು ಕೇಳಿ ನನಗೆ ಕಿರಿಕಿರಿಯಾಗುತ್ತಿತ್ತು.
ಇನ್ನೇನು ಡೆಲಿವರಿ ದಿನ ಹತ್ತಿರ ಬರುವಾಗ ಅವರು ನನ್ನಲ್ಲಿ, “ಮೇಡಂ, ನೀವು ನೋಡಲು ಎಷ್ಟೊಂದು ಚೆನ್ನಾಗಿದ್ದೀರಾ. ನಿಮ್ಮ ಬಿಳಿಕೂದಲಿಗೆ ಕಪ್ಪು ಬಣ್ಣ ಹಚ್ಚಿ ಕೊಂಡರೆ, ಇನ್ನಷ್ಟು ಚೆನ್ನಾಗಿ ಕಾಣಿರ’ ಎಂದು ತಮ್ಮ ಇಂಗಿತವನ್ನು ನನ್ನ ಮುಂದಿಟ್ಟರು. ಅದಕ್ಕೆ ನಾನು, “ಆಂಟಿ… ನನಗೆ ಹೇರ್ ಕಲರ್ ಹಚ್ಚಿದ್ರೆ, ಅಲರ್ಜಿ ಆಗುತ್ತೆ. ಅದಕ್ಕಾಗಿ ಹಚ್ಚಿಕೊಳ್ಳುವುದಿಲ್ಲ. ನನಗೆ ಅದು ಇಷ್ಟವೂ ಇಲ್ಲ, ಕಲರ್ ಹಚ್ಚುವುದರಿಂದ ಕೂದಲು ಉದುರುತ್ತೆ” ಅಂತ ವಾದ ಮಂಡಿಸಿದ್ದೆ.
ನಿಮಗೆ ಡೆಲಿವರಿಯಾದ ನಂತರ ನಿಮ್ಮನ್ನು , ಮಗುವನ್ನು ನೋಡಲು ಜನರು ಬರ್ತಾರೆ. ಆಗ ನಿಮಗೆ ಮುಜುಗರ ಆಗುವುದಿಲ್ಲವೇ?”, ಮತ್ತೆ ತಲೆಗೆ ಹುಳಬಿಟ್ಟರು. “ನನಗಿಂತ ನಿಮಗೇ ನನ್ನ ಕೂದಲ ಬಗ್ಗೆ ಕಾಳಜಿ ಇದೆಯಲ್ಲ” ಎಂದು ಅವರ ಮಾತಿಗೆ ಉತ್ತರಿಸದೆ, ಅಲ್ಲಿಂದ ಎದ್ದು ಆಚೆ ಹೋದೆ. ನಂತರ ಬಂದ ಇನ್ನೊಬ್ಬಳು ಕೆಲಸದವಳು, “ಅಕ್ಕಾ , ನೀನು ನನಗಿಂತ ಚಿಕ್ಕವಳು. ಕೂದಲಿಗೆ ಬಣ್ಣ ಹಾಕ್ಕೋ ಅಕ್ಕ” ಎಂದು ಟಿಪ್ಸ್ ನೀಡಿದ್ದಳು. ಅದಕ್ಕೂ ಗರಂ ಆಗಿದ್ದೆ.
ವರ್ಷಗಳು ಆಗಲೇ ಒಂದಾದ ಮೇಲೊಂದು ಕಳೆದುಹೋಗಿ, ಈಗ ನನಗಿಂತಲೂ 30-40 ವರ್ಷಗಳ ದೊಡ್ಡವರು ಕೂದಲಿಗೆ ಕಪ್ಪು ಹಚ್ಚಿಕೊಂಡು ಹುಡುಗಿಯರ ರೀತಿಯಲ್ಲಿ ಸ್ಟೈಲ್ ಮಾಡುವಾಗ, “ಬಣ್ಣದಿಂದ ವಯಸ್ಸನ್ನು ಮರೆಮಾಡಲು ಸಾಧ್ಯವೇ?” ಎಂದು ಅಂದುಕೊಳ್ಳುತ್ತೇನೆ. ಮತ್ತೂಮ್ಮೆ ಅವರ ಅಂದಚೆಂದ ನೋಡಿದಾಗ, ನನಗೂ ಕಪ್ಪು ಬಣ್ಣ ಕೂದಲಿಗೆ ಹಚ್ಚುವಂತಿದ್ದರೆ ಅನ್ನಿಸುವುದಿದೆ. ಆದರೆ, ಕೆಲವರು ಕಪ್ಪು ಬಣ್ಣ ಹಚ್ಚಿ ಹಚ್ಚಿ , ಅವರ ಕೂದಲು ಉದುರಿ, ತಲೆ ಬೋಳಾಗುವುದನ್ನು ಕಂಡು, ದೇವರು ನನಗೆ “ಅಲರ್ಜಿಯ ವರ’ವಿತ್ತಿದ್ದು ಒಳ್ಳೆಯದೇ ಆಯಿತು ಎಂದು ಭಾವಿಸುತ್ತೇನೆ. ಬೋಳು ತಲೆ ಆಗೋದು, ವಿಗ್ ಹಾಕೋದು, ಇವೆಲ್ಲ ಯಾರಿಗೆ ಬೇಕು?
ಒಮ್ಮೆ ಸಮಾರಂಭದಲ್ಲಿ ಅಜ್ಜಿಯರೆಲ್ಲ ಡೈ ಹಚ್ಚಿ ಮಿಂಚಿದಾಗ, ನನಗೂ ಹೊಟ್ಟೆಕಿಚ್ಚಾಗಿ, ವೈದ್ಯರ ಬಳಿ, “ಯಾವ ಬಣ್ಣ ಹಚ್ಚಿದರೆ ಅಲರ್ಜಿ ಆಗುವುದಿಲ್ಲ?” ಎಂದು ಕೇಳಿದ್ದೆ. ಅವರು ಒಂದಿಷ್ಟು ಉಪದೇಶ ಕೊಟ್ಟರು. “”ನೋಡಿ, ಈಗಿನ ಅನೇಕರು ಕೂದಲಿಗೆ ಬಣ್ಣ ಹಚ್ಚೋದಿಲ್ಲ. ಬಿಳಿ ಕೂದಲೇ ಇಂದಿನ ಫ್ಯಾಶನ್ ಅಂತ ಭಾವಿಸಿದ್ದಾರೆ. ನೀವ್ಯಾಕೆ ಕೂದಲ ಬಗ್ಗೆ ಚಿಂತೆ ಮಾಡುತ್ತೀರಾ? ಆರೋಗ್ಯದ ಬಗ್ಗೆ ಚಿಂತೆ ಮಾಡಿ” ಎಂದರು. ಆದರೆ, ಹೀಗೆಂದ ವೈದ್ಯರ ತಲೆಯಲ್ಲಿ ಡೈ ಹಚ್ಚಿದ ಕೂದಲುಗಳು ಇಣುಕುತ್ತಿದ್ದವು.
ಒಂದು ಗೃಹಪ್ರವೇಶಕ್ಕೆ ಹೋಗಿದ್ದೆ. ಅಲ್ಲಿ ನನ್ನನ್ನು ಕಂಡ ಆಂಟಿಯೊಬ್ಬರು, “”ಅಯ್ಯೋ, ಬಿಳಿ ಕೂದಲು ಕಾಣುತ್ತಿದೆಯಲ್ಲೆ…?” ಎಂದಾಗ ನನಗೆ ಅನ್ನಿಸಿತು ಹೌದಲ್ವಾ? ಈಗ ವಯಸ್ಸಾಗಿ ಎರಡು ಮಕ್ಕಳ ತಾಯಿಯಾಗಿ, ಸಂಸಾರದ ಜವಾಬ್ದಾರಿ ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದರಿಂದ ದೇಹದ ಸಕಲ ನರನಾಡಿಗಳು, ನನಗೆ ಎಚ್ಚರಿಕೆ ಗಂಟೆ ಬಾರಿಸಿ, “ನಿನಗೆ ವಯಸ್ಸಾಯಿತು. ಮುಂಚಿನಂತೆ ನಿನ್ನ ರೂಪ ಇಲ್ಲ ’ ಎನ್ನುತ್ತಿವೆ. ಕೂದಲ ಬಣ್ಣವೊಂದರಿಂದ ಇಡೀ ದೇಹದ ವಯಸ್ಸು ಮುಚ್ಚಿ ಡಲು ಸಾಧ್ಯವೇ ಅಂತನ್ನಿಸಿತು.
ಆಗೊಮ್ಮೆ ಈಗೊಮ್ಮೆ ಬ್ಯೂಟಿಪಾರ್ಲರಿಗೆ ಹೋದಾಗ, ಅಲ್ಲೂ ನನಗೆ ಪುಕ್ಕಟೆ ಸಲಹೆಗಳು ಕಿವಿಗೆ ಬೀಳುತ್ತವೆ. “ಮೇಡಂ, ಈ ಬ್ರಾಂಡ್ ಹೇರ್ ಕಲರ್ ಇದೆ. ಒಮ್ಮೆ ಟ್ರೈ ಮಾಡಿ” ಅಂತಾರೆ. “”ಈ ಬಣ್ಣ ಬಣ್ಣದ ಹೇರ್ ಕಲರ್ ಕಂಪೆನಿಗಳು ದಿನಕ್ಕೊಂದು ಹುಟ್ಟಿಕೊಳ್ಳದಿದ್ದರೆ, ನೀವೂ ನನ್ನಂತೆ ಇರುತ್ತಿದ್ದಿರಿ” ಎಂದು ಮನಸ್ಸಿನಲ್ಲೇ ಅಂದುಕೊಂಡು ಸುಮ್ಮನಾಗುವುದನ್ನು ಇತ್ತೀಚಿನ ದಿನಗಳಲ್ಲಿ ಕಲಿತಿದ್ದೇನೆ.
-ವೇದಾವತಿ ಎಚ್.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.