ನಗರದಲ್ಲಿ ಬಿಗಡಾಯಿಸುತ್ತಿದೆ ನೀರಿನ ಸಮಸ್ಯೆ
ಬೇಡಿಕೆ ಹೆಚ್ಚಳ: ಖಾಸಗಿ ಟ್ಯಾಂಕರ್‌ಗಳಿಗೂ ನೀರಿನ ಬರ !
Team Udayavani, May 17, 2019, 6:00 AM IST
ವಿಶೇಷ ವರದಿ-ಮಹಾನಗರ: ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಖಾಸಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದೆ; ಆದರೆ ಈಗ ಟ್ಯಾಂಕರ್‌ಗಳಿಗೂ ಬೇಕಾದಷ್ಟು ನೀರು ಲಭಿಸುತ್ತಿಲ್ಲ.
ಮಹಾನಗರ ಪಾಲಿಕೆಯಿಂದ ನೀರು ಪೂರೈಕೆಯ ರೇಷನಿಂಗ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಆಗದಿರುವುದರಿಂದ ಈ ಪ್ರದೇಶಗಳ ಜನರು ಟ್ಯಾಂಕರ್ ನೀರನ್ನು ಅವಲಂಬಿಸುವುದು ಅನಿವಾರ್ಯ. ಖಾಸಗಿ ಟ್ಯಾಂಕರ್ ನೀರು ದುಬಾರಿ ಆಗಿರುವುದರಿಂದ ಎಲ್ಲರಿಗೂ ಖರೀದಿಸಲು ಸಾಧ್ಯವಾಗುವುದಿಲ್ಲ.
ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದ್ದರೂ ತನ್ನ ವ್ಯಾಪ್ತಿಯ ಎಲ್ಲ ಜನರ ನೀರಿನ ಬೇಡಿಕೆ ಈಡೆರಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಟ್ಯಾಂಕರ್ ಸಂಚರಿಸಲು ಸಾಧ್ಯವಾಗದ ಪ್ರದೇಶಗಳು ನಗರದಲ್ಲಿ ಬಹಳಷ್ಟಿವೆ.
ಖಾಸಗಿ ಟ್ಯಾಂಕರ್‌ಗಳಿಗೆ ಕದ್ರಿ ಕಂಬಳದಲ್ಲಿರುವ ಬಾವಿಯ ಜಲ ಮೂಲವೇ ಪ್ರಧಾನವಾಗಿದೆ. ಆದರೆ ಈಗ ಅಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಒಂದು ಕಾಲದಲ್ಲಿ ಅಲ್ಲಿಂದ ನಿರಂತರವಾಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ; ದಿನಕ್ಕೆ 20-25 ಟ್ಯಾಂಕರ್ ನೀರು ಪೂರೈಕೆ ಆಗುತ್ತಿದ್ದ ಕಡೆ ಈಗ 4-5 ಟ್ಯಾಂಕರ್ ನೀರು ಮಾತ್ರ ಲಭಿಸುತ್ತದೆ. ಟ್ಯಾಂಕರ್‌ಗಳು ಕ್ಯೂ ನಿಂತು ಬಾವಿಯಲ್ಲಿ ನೀರು ಸಂಗ್ರಹವಾಗುವ ತನಕ ಕಾದು ಬಳಿಕ ತುಂಬಿಸಿಕೊಳ್ಳಬೇಕಾದ ಸ್ಥಿತಿಯದೆ. ನೀರಿನ ಕೊರತೆಯಿಂದಾಗಿ ಖಾಸಗಿಯವರು ಟ್ಯಾಂಕರ್ ನೀರಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಈ ಹಿಂದೆ 6,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗೆ 1,200 ರೂ. ಇತ್ತು. ಈಗ ಅದು 1,500 ರೂಪಾಯಿಗೆ ಏರಿದೆ.
ಪಾಲಿಕೆಯಿಂದ
ಟ್ಯಾಂಕರ್ ವ್ಯವಸ್ಥೆ
ನಳ್ಳಿ ಮೂಲಕ ನೀರು ಸರಬರಾಜು ಆಗದ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಪಾಲಿಕೆಯು ಟ್ಯಾಂಕರ್ ವ್ಯವಸ್ಥೆ ಮಾಡಿದೆ. ಪ್ರಸ್ತುತ ಪಾಲಿಕೆಯ ಬಳಿ ತಲಾ 6,000 ಲೀಟರ್‌ನ 3 ಮತ್ತು ತಲಾ 3,000 ಲೀಟರ್‌ನ 3 ಟ್ಯಾಂಕರ್, 8 ಪಿಕಪ್ ವಾಹನಗಳಿವೆ. ಟ್ಯಾಂಕರ್ ವಾಹನಗಳು ಹೋಗದ ಕಡೆ ಪಿಕಪ್ ವಾಹನದಲ್ಲಿ ಟ್ಯಾಂಕ್ ಇರಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ಗಳಿಗೆ ನೀರು ತುಂಬಿಸಲು ಆಯ್ದ ವಾರ್ಡ್‌ಗಳಲ್ಲಿ ಉತ್ತಮ ನೀರಿನ ಮೂಲ ಇರುವ ತೆರೆದ ಬಾವಿ ಮತ್ತು ಕೊಳವೆ ಬಾವಿಗಳನ್ನು ಪಾಲಿಕೆ ಗುರುತಿಸಿದೆ.
ನೀರು ಪೂರೈಸುವ ಪಿಕಪ್ ವಾಹನಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಪಾಲಿಕೆಯು ಪಿಕಪ್ / 407 ವಾಹನಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಪಡೆದು ನೀರು ಪೂರೈಕೆ ಮಾಡುತ್ತಿದೆ. 3,000 ಲೀ. ನೀರು ಸಾಗಿಸುವ ವಾಹನಕ್ಕೆ ಒಂದು ಟ್ರಿಪ್‌ಗೆ 500 ರೂ. ಮತ್ತು 2,000 ಮೀ. ನೀರು ಸಾಗಿಸುವ ವಾಹನಕ್ಕೆ 400 ರೂ. ನೀಡುತ್ತಿದೆ. ಇಂತಹ ವಾಹನಗಳನ್ನು ಹೊಂದಿದ್ದು, ನೀರು ಸರಬರಾಜಿಗೆ ಒದಗಿಸಲು ಆಸಕ್ತಿ ಇದ್ದವರು ಪಾಲಿಕೆಯನ್ನು ಸಂಪರ್ಕಿಸ ಬಹುದು ಎಂದು ಪಾಲಿಕೆಯ ಓರ್ವ ಅಧಿಕಾರಿ ತಿಳಿಸಿದ್ದಾರೆ.
ಟೀಂ ಗರೋಡಿಯಿಂದ ನಗರದಲ್ಲಿ ಉಚಿತ ನೀರು ಸರಬರಾಜು
ನಗರದಲ್ಲಿ ನೀರಿನ ಹಾಹಾಕಾರವಿದ್ದು, ನೀರು ಅಭಾವವಿರುವ ಮನೆಗಳಿಗೆ ಟೀಂ ಗರೋಡಿ ತಂಡವು ಉಚಿತ ನೀರು ಸರಬರಾಜು ಮಾಡುತ್ತಿದೆ.
ಎರಡು ವರ್ಷಗಳ ಹಿಂದೆ ನಗರದಲ್ಲಿ ನೀರಿನ ಕೊರತೆ ಉಂಟಾದ ವೇಳೆ ಇದೇ ತಂಡ ಉಚಿತ ನೀರು ಸರಬರಾಜು ಮಾಡಿತ್ತು. ಇದೀಗ ಮತ್ತೆ ಗುರುವಾರದಿಂದ ಉಚಿತ ನೀರು ಸರಬರಾಜು ವ್ಯವಸ್ಥೆ ಕೈಗೊಂಡಿದೆ.
ಅಗತ್ಯವಿರುವ ಮನೆಗಳಿಗೆ 3,000 ಲೀ. ಸಾಮರ್ಥ್ಯದ ಟ್ಯಾಂಕ್‌ನೊಂದಿಗೆ ಪಿಕ್ಕಪ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಒಂದು ಟಿಪ್ಪರ್ ಮತ್ತು ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಯೋಚನೆಯಲ್ಲಿದೆ ಈ ತಂಡ.
ಟೀಂ ಗರೋಡಿ ತಂಡದಲ್ಲಿ ಸುಮಾರು 80ಕ್ಕೂ ಮಿಕ್ಕಿ ಸದಸ್ಯರಿದ್ದು, ಈ ಕಾರ್ಯಕ್ಕೆಂದು ಸದಸ್ಯರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನೀರಿನ ಅತ್ಯಂತ ಅಭಾವವಿರುವ ಮಂದಿ ಮೊಬೈಲ್ ಸಂಖ್ಯೆ 7026099909 ಕ್ಕೆ ಕರೆಮಾಡಿದರೆ ಉಚಿತ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕದ್ರಿ ಕಂಬಳದಲ್ಲೂ ನೀರಿನ ಪ್ರಮಾಣ ಕುಸಿತ
ಕದ್ರಿ ಕಂಬಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಹಲವು ಕಾರಣಗಳಿವೆ. ಅಲ್ಲಿದ್ದ ಕಂಬಳದ ಗದ್ದೆ ಈಗ ಮಾಯವಾಗಿದೆ; ಸುತ್ತ ಮುತ್ತ ಅನೇಕ ಮನೆಗಳು, ಅಪಾರ್ಟ್ ಮೆಂಟ್‌ಗಳು ಆಗಿದ್ದು, ಬಹುತೇಕ ಎಲ್ಲ ಮನೆ/ ಕಟ್ಟಡಗಳು ಕೊಳವೆ ಬಾವಿಯನ್ನು ಹೊಂದಿವೆ. ಮಳೆಗಾಲದಲ್ಲಿ ನೀರು ಇಂಗಲು ಜಾಗವಿಲ್ಲ; ತಾರಸಿಯ ನೀರು ಚರಂಡಿ ಮೂಲಕ ತೋಡು ಸೇರುತ್ತದೆ ಎನ್ನುತ್ತಾರೆ ಮಾಜಿ ಕಾರ್ಪೊರೇಟರ್ ಡಿ.ಕೆ. ಅಶೋಕ್ ಕುಮಾರ್.
ಹೊಟೇಲ್‌ಗಳಲ್ಲಿ ಪೇಪರ್ ಪ್ಲೇಟ್
ನಗರದ ಹೊಟೇಲ್‌ಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ನಗರದ ಕೆಲವೊಂದು ಹೊಟೇಲ್‌ಗಳಲ್ಲಿ ನೀರಿನ ಕೊರತೆ ಇರುವ ಕಾರಣದಿಂದಾಗಿ ತಿಂಡಿಯನ್ನು ಪೇಪರ್ ಪ್ಲೇಟ್ ಮತ್ತು ಕಾಫಿಯನ್ನು ಪ್ಲಾಸ್ಟಿಕ್ ಗ್ಲಾಸ್ ನೀಡುತ್ತಿದ್ದಾರೆ. ಟ್ಯಾಪ್‌ನಲ್ಲಿ ನೀರು ಬರದ ಕಾರಣ ನೀರಿನ ಬಕೆಟ್ ಇಡಲಾಗಿದೆ. ನಾಲ್ಕು ದಿನಗಳಿಂದ ಹೊಟೇಲ್‌ಗೆ ಕಾರ್ಪೊರೇಷನ್ ನೀರು ಬಂದಿಲ್ಲ. ಟ್ಯಾಂಕರ್ ನೀರು ಸಮರ್ಪಕವಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಹೊಟೇಲ್ ಮಂದಿ.
ದರ ಏರಿಕೆ ಅನಿವಾರ್ಯ
ಟ್ಯಾಂಕರ್ ಮೂಲಕ ಪೂರೈಕೆ ಮಾಡಲು ಬೇಕಾದಷ್ಟು ಪ್ರಮಾಣದ ನೀರು ನಮಗೆ ಲಭಿಸುತ್ತಿಲ್ಲ. ಹಾಗಾಗಿ ನೀರಿನ ವ್ಯವಹಾರವನ್ನೇ ಅವಲಂಬಿಸಿರುವ ನಮಗೆ ಟ್ಯಾಂಕರ್ ನೀರಿನ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡುವುದು ಅನಿವಾರ್ಯ.
– ವಿಜಯೇಂದ್ರ,
ನೀರಿನ ಟ್ಯಾಂಕರ್ ಮಾಲಕ
ನೀರಿನ ಕೊರತೆ ಇಲ್ಲ
ಮಹಾನಗರ ಪಾಲಿಕೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನೀರಿನ ಕೊರತೆ ಇಲ್ಲ. ಪಾಲಿಕೆಗೆ ಅದರದೇ ಆದ ನೀರಿನ ಮೂಲಗಳಿವೆ. ಪಾಲಿಕೆಯ ರೀಫಿಲಿಂಗ್ ಸೆಂಟರ್ (ಟ್ಯಾಂಕ್)ಗಳು ಇವೆ; ಮಾತ್ರವಲ್ಲದೆ ಆಯ್ದ ವಾರ್ಡ್‌ಗಳಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ.
– ನಾರಾಯಣಪ್ಪ,
ಮನಪಾ ಆಯುಕ್ತರು
ಲಾಂಡ್ರಿಗಳಲ್ಲೂ ನೀರಿನ ಕೊರತೆ
ಶುಭ ಸಮಾರಂಭಕ್ಕೆ ಧರಿಸುವ ಬಟ್ಟೆಗಳನ್ನು ತೊಳೆದು ಕೊಡಲು ಲಾಂಡ್ರಿಗಳಿಗೆ ನೀಡಿದರೆ, ಸದ್ಯ ಮಂಗಳೂರಿನಲ್ಲಿ ನಿಗದಿತ ದಿನಾಂಕಕ್ಕೆ ಬಟ್ಟೆ ವಾಪಾಸ್ ಸಿಗುತ್ತಿಲ್ಲ. ಕಾರಣವೆಂದರೆ, ಕಾಡುತ್ತಿರುವ ನೀರಿನ ಕೊರತೆ!
ನಗರದಲ್ಲಿ ನೀರಿನ ರೇಷನಿಂಗ್ ಜಾರಿಯಾದ ಬಳಿಕ ಬೇರೆ ಬೇರೆ ಉದ್ಯಮಕ್ಕೆ ನೀರಿನ ಹೊಡೆತ ಎದುರಾಗಿದೆ. ಅದರಂತೆ ಬಟ್ಟೆ ತೊಳೆದು ನೀಡುವ ಲಾಂಡ್ರಿ ಉದ್ಯಮದವರಿಗೂ ನೀರಿನ ಕೊರತೆ ಬಹುದೊಡ್ಡ ಪರಿಣಾಮ ಬೀರಿದೆ.
ನಗರದಲ್ಲಿ ಸದ್ಯ ಸುಮಾರು 150ಕ್ಕೂ ಅಧಿಕ ಲಾಂಡ್ರಿ ಉದ್ಯಮಗಳಿವೆ. ನೂರಾರು ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಪದವಿನಂಗಡಿ, ಯೆಯ್ನಾಡಿ, ಬೈಕಂಪಾಡಿ ಸಹಿತ ಬೇರೆ ಬೇರೆ ಭಾಗಗಳಲ್ಲಿ “ವಾಷಿಂಗ್ ಫ್ಯಾಕ್ಟರಿ’ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯೂ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ.
ಕೆಲವು ಲಾಂಡ್ರಿ, ವಾಷಿಂಗ್ ಫ್ಯಾಕ್ಟರಿಯವರಿಗೆ ಬಾವಿ ಅಥವಾ ಬೋರ್‌ವೆಲ್ ಸೌಕರ್ಯ ಇದ್ದರೆ, ಇನ್ನುಳಿದವರು ಪಾಲಿಕೆ ನೀರನ್ನೇ ಆಶ್ರಯಿಸಿದ್ದಾರೆ. ಪಾಲಿಕೆ ನೀರಿಗೆ ಮೂರು ದಿನಗಳವರೆಗೆ ಕಾಯಬೇಕಾದ ಹಿನ್ನೆಲೆಯಲ್ಲಿ ಗ್ರಾಹಕರು ಬಟ್ಟೆಗಳನ್ನು ವಾಪಾಸ್ ಪಡೆಯಲು 2-3 ದಿನ ಕಾಯಬೇಕಾಗಿದೆ. ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಲ್ಲಿರುವ ಎಲ್ಲ ಬಟ್ಟೆಗಳನ್ನು ಖಾಸಗಿಯಾಗಿ ತೊಳೆದು ನೀಡಲಾಗುತ್ತಿದೆಯಾದರೂ, ಸರಕಾರಿ ಆಸ್ಪತ್ರೆಯ ಬಟ್ಟೆಗಳು ಕೆಲವು ಲಾಂಡ್ರಿಗಳಲ್ಲಿ ನಿರ್ವಹಿಸಲಾಗುತ್ತಿದೆ. ಜತೆಗೆ ರೈಲ್ವೇ ಪ್ರಯಾಣಿಕರ ಬಟ್ಟೆಗಳನ್ನು ಕೂಡ ಖಾಸಗಿಯಾಗಿ ಲಾಂಡ್ರಿ ಮಾಡಿ ನೀಡಲಾಗುತ್ತಿದೆ. ಸದ್ಯ ಇಲ್ಲಿಯೂ ಸಮಸ್ಯೆ ಉಂಟಾಗಿದೆ. ಆದರೆ, ಟ್ಯಾಂಕರ್ ನೀರು ಲಭ್ಯವಾಗುವ ಹಿನ್ನೆಲೆಯಲ್ಲಿ ದೊಡ್ಡ ತಾಪತ್ರಯ ಇಲ್ಲ ಎಂದೇ ಹೇಳಬಹುದು.
ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿಲ್ಲ
ನೀರಿನ ಕೊರತೆಯ ಹಿನ್ನೆಲೆಯಲ್ಲಿ ಲಾಂಡ್ರಿಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಬಟ್ಟೆ ತೊಳೆದು ನೀಡಲು ಸಾಧ್ಯವಾಗುತ್ತಿಲ್ಲ. ನಗರದ ಬಹುತೇಕ ಲಾಂಡ್ರಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಣ್ಣಗುಡ್ಡ ಡ್ರೈ ಕ್ಲೀನರ್ನ ಸುಧೀರ್ ಸಾಲ್ಯಾನ್ ತಿಳಿಸಿದ್ದಾರೆ.
ನೀರು ಸಹಾಯವಾಣಿ
ರೇಷನಿಂಗ್ ವ್ಯವಸ್ಥೆಯ ಪ್ರಸ್ತುತ ಸಂದರ್ಭದಲ್ಲಿ ಪಾಲಿಕೆಯ ನೀರು ಬಿಡುವಾಗ ನಳ್ಳಿ ನೀರು ಪೂರೈಕೆ ಆಗದಿದ್ದರೆ ಈ ಕೆಳಗಿನ ಸಹಾಯವಾಣಿಗೆ ಫೋನ್ ಮಾಡಿ: ನಂ. 0824-2220303/ 2220362
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.