‘ನಗರದ ಪ್ರಮುಖ ರಸ್ತೆ, ಕಮರ್ಶಿಯಲ್ ಕಾಂಪ್ಲೆಕ್ಸ್‌ಗಳಲ್ಲಿ ಸಿಸಿ ಕೆಮರಾ ಕಡ್ಡಾಯ’
Team Udayavani, May 18, 2019, 5:50 AM IST
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಯಿತು.
ಮಹಾನಗರ: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳಲ್ಲಿ ಮತ್ತು ವ್ಯಾಪಾರ ವ್ಯವಹಾರ ಸಂಬಂಧಿತ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದರು.
ಕಮಿಷನರೆಟ್ ವ್ಯಾಪ್ತಿಯಲ್ಲಿ ಈಗ ಪೊಲೀಸ್ ಇಲಾಖೆಯ ವತಿಯಿಂದ ಅಳವಡಿಸಿದ 200, ಖಾಸಗಿಯವರು ಅಳವಡಿಸಿದ 950 ಸಿಸಿ ಕೆಮರಾಗಳಿವೆ. ಇವು ಏನೇನೂ ಸಾಕಾಗದು. ನಗರಕ್ಕೆ ಕನಿಷ್ಠ 2,000- 3,000 ಸಿಸಿ ಕೆಮರಾಗಳ ಆವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ರಸ್ತೆಗಳು ಮತ್ತು ಈ ರಸ್ತೆಗಳ ಬದಿ ಇರುವ ವಾಣಿಜ್ಯ- ವ್ಯವಹಾರ ಕಟ್ಟಡಗಳಲ್ಲಿ ಸಿಸಿ ಕೆಮರಾಗಳು ಇವೆಯೇ ಇಲ್ಲವೇ ಎನ್ನುವ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಸಂಬಂಧಪಟ್ಟ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಈ ಜವಾಬ್ದಾರಿ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸಮೀಕ್ಷೆಯ ಬಳಿಕ ಸಿಸಿ ಕೆಮರಾ ಇಲ್ಲದ ಎಲ್ಲ ಕಟ್ಟಡಗಳ ಮಾಲಕ/ ವ್ಯವಸ್ಥಾಪಕರಿಗೆ ಸಿಸಿ ಕೆಮರಾ ಹಾಕುವಂತೆ ಸೂಚನೆ ಕೊಡಲಾಗುವುದು. ನೋಟಿಸ್ ನೀಡಿದ ಬಳಿಕವೂ ಸಿಸಿ ಕೆಮರಾ ಅಳವಡಿಸದಿದ್ದರೆ 5,000 ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ತಿಳಿಸಿದರು. ಇದಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸಿಸಿ ಕೆಮರಾ ಅಳವಡಿಸು ವಂತೆ ಪೊಲೀಸ್ ಇಲಾಖೆ ವತಿಯಿಂದಲೂ ಈಗಾ ಗಲೇ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಕರ್ನಾಟಕ ಸಾರ್ವಜನಿಕ ಸುರಕ್ಷಾ ಕಾಯ್ದೆಯ ಪ್ರಕಾರ ದಿನಕ್ಕೆ 500ಕ್ಕೂ ಅಧಿಕ ಜನರು ಬಂದು ಹೋಗುವ ಕಟ್ಟಡಗಳಲ್ಲಿ ಕನಿಷ್ಠ 2 ಸಿಸಿ ಕೆಮರಾ ಮತ್ತು ಮುಖ್ಯ ದ್ವಾರಗಳಿಗೆ ಲೋಹ ಶೋಧಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಇದಲ್ಲದೆ ವೈಯಕ್ತಿಕವಾಗಿಯೂ ಸಿಸಿ ಕೆಮರಾ ಅಳವಡಿಕೆಗೆ ಅಭ್ಯಂತರ ಇಲ್ಲ. ಇತ್ತೀಚೆಗೆ ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಸೇರುವ ಜಾಗ, ಕಟ್ಟಡಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕುರಿತಂತೆ ಸಭೆಯನ್ನು ನಡೆಸಲಾಗಿತ್ತು ಎಂದು ಆಯುಕ್ತರು ವಿವರಿಸಿದರು.
ವಂಚನೆ ದೂರು
ವ್ಯಕ್ತಿಯೊಬ್ಬರು 80,000 ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಫಳ್ನೀರ್‌ನ ನಾಗರಿಕರೊಬ್ಬರು ದೂರು ನೀಡಿದರು. ಮೀನು ಸಾಗಿಸುವ ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ಸಮಸ್ಯೆ ಶೇ. 50ರಷ್ಟು ಬಗೆ ಹರಿದಿದೆ. ಉಳಿದಿರುವ ಶೇ. 50 ಸಮಸ್ಯೆಯನ್ನು ಕೂಡ ಪರಿಹರಿಸಬೇಕು ಎಂದು ಜಪ್ಪು ಪ್ರದೇಶದ ನಾಗರಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಮೀನು ಸಾಗಿಸುವ ವಾಹನಗಳು ನಗರದ ಬಂದರು ಪ್ರದೇಶದ ಗೂಡ್ಸ್ ಶೆಡ್ ರಸ್ತೆಯಲ್ಲಿ ಮಾತ್ರ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು. ಈಗ ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಪೂರ್ತಿಗೊಂಡ ಬಳಿಕ ಮೀನು ಸಾಗಾಟದ ಎಲ್ಲ ವಾಹನಗಳು ಇಲ್ಲೇ ಈ ರಸ್ತೆಯಲ್ಲಿ ಮಾತ್ರ ಸಂಚರಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಕೊಣಾಜೆ ಕಡೆಗೆ ಸಂಚರಿಸುವ ಎಲ್ಲ ಸಿಟಿ ಬಸ್‌ಗಳು ಕೊಣಾಜೆ ಪಂ. ಕಚೇರಿ ತನಕ ಹೋಗುವಂತಾಗಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಬಸ್ ಮಾಲಕರ ಸಂಘ ಮತ್ತು ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬಿಜೈ ಕಾವೂರು ಕ್ರಾಸ್ ಬಳಿ ಫುಟ್ಪಾತ್ ಮತ್ತು ರಸ್ತೆ ಬದಿಯಲ್ಲಿ ಫಾಸ್ಟ್ ಫುಡ್ ಅಂಗಡಿಗಳವರು ಗಲೀಜು ಮಾಡುತ್ತಾರೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ಫಾಸ್ಟ್ ಫುಡ್‌ನವರಿಗೆ ವ್ಯವಹಾರ ನಡೆಸಲು ಪ್ರತ್ಯೇಕ ಸ್ಥಳಾವಕಾಶವನ್ನು ಗುರುತಿಸಲು ಸಾಧ್ಯವೇ ಎಂದು ಪಾಲಿಕೆಯ ಜತೆ ಚರ್ಚಿಸಲಾಗುವುದು ಎಂದರು.
ಶಾಲೆ, ಕಾಲೇಜು ಹತ್ತಿರದ ಅಂಗಡಿಗಳಲ್ಲಿ ಬೀಡಿ, ಸಿಗರೇಟು ಮಾರಾಟ ಮಾಡಲಾಗುತ್ತಿದೆ ಎಂದ ನಾಗರಿಕರೊಬ್ಬರ ದೂರಿಗೆ ಸ್ಪಂದಿಸಿದ ಆಯುಕ್ತರು ಕೋಟ್ಪಾ ಕಾಯ್ದೆಯಡಿ ಹೆಚ್ಚು ಹೆಚ್ಚು ಕೇಸುಗಳನ್ನು ಹಾಕಲು ಸೂಚಿಸಲಾಗುವುದು ಎಂದರು.
ಬರ್ಕೆ, ಕದ್ರಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿದ ವಾಹನಗಳನ್ನು ರಸ್ತೆ ಬದಿ ರಾಶಿ ಹಾಕಿದು ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದವು. ನ್ಯಾಯಾಲಯದ ಆದೇಶ ಬಂದ ಬಳಿಕವೇ ಅವುಗಳನ್ನು ವಿಲೆವಾರಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ಪಾಸ್ಟಿಕ್ ಬದಲು ಲೋಟ ಬಳಕೆ
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಯುವ ವಿವಿಧ ಸಭೆ, ಫೋನ್ ಇನ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ನೀರು ಮತ್ತು ಇತರ ಪಾನೀಯಗಳ ವಿತರಣೆಗೆ ಪ್ಲಾಸ್ಟಿಕ್ ಲೋಟದ ಬದಲು ಸ್ಟೀಲ್/ಪಿಂಗಾಣಿ/ ಗಾಜಿನ ಲೋಟವನ್ನು ಬಳಸಲಾಗುವುದು ಎಂದು ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.
ಪೊಲೀಸ್ ಸಿಬಂದಿ ವಿರುದ್ಧ ದೂರು
ಬಲ್ಮಠದಿಂದ ಕರೆ ಮಾಡಿದ ಮಹಿಳೆಯೊಬ್ಬರು, ತನ್ನನ್ನು ಚುಡಾಯಿಸಿದ್ದಾನೆ ಎಂದು ಪೊಲೀಸ್ ಸಿಬಂದಿಯೊಬ್ಬರ ವಿರುದ್ಧವೇ ದೂರು ನೀಡಿದರು. ‘ಕಳೆದ ಸೋಮವಾರ ನಾನು ಬಲ್ಮಠದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಏನು ದಪ್ಪಗಿದ್ದೀಯಾ ಎಂದು ಚುಡಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಆ ವ್ಯಕ್ತಿ ಪಾಂಡೇಶ್ವರ ಠಾಣೆಯ ಸಿಬಂದಿ ಎಂದು ಗೊತ್ತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಕೆ ಆಗ್ರಹಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಇದು 113ನೇ ಫೋನ್ ಇನ್ ಕಾರ್ಯಕ್ರಮ ವಾಗಿದ್ದು, ಒಟ್ಟು 23 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಸಿ.ಎನ್. ದಿವಾಕರ್, ಹರೀಶ್ ಕೆ. ಪಟೇಲ್, ಅಶೋಕ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ಇತರ ಪ್ರಮುಖ ದೂರು
•ಕೂಳೂರು ಸಫಾ ನಗರದಲ್ಲಿ ಕೆಲವರು ಗಾಂಜಾ ಸೇವಿಸಿ, ಟ್ಯಾಬ್‌ನಲ್ಲಿ ಗೇಮ್ಸ್ ಆಡುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ.
•ಜೋಕಟ್ಟೆ ರೈಲ್ವೇ ಗೇಟ್ ಬಳಿ ಲಾರಿ, ಟಿಪ್ಪರ್‌ಗಳಿಂದ ಇತರ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ.
•ಉಳ್ಳಾಲದ ಕೆಲವು ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ.
•ಕೊಟ್ಟಾರ ಚೌಕಿಯಲ್ಲಿ ಫ್ಲೈಓವರ್ ಬಳಿ ಪಾದಚಾರಿಗಳಿಗೆ ರಸ್ತೆ ದಾಟಲು ವ್ಯವಸ್ಥೆ ಬೇಕು.
• ಹಳೆಯಂಗಡಿಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ನಿಲುಗಡೆ ಬೇಕು.
• ಕಾಟಿಪಳ್ಳದಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ.
•ಗೂಡ್ಸ್ ವಾಹನಗಳಲ್ಲಿ ಮತ್ತು ಕಸ ಸಾಗಿಸುವ ವಾಹನಗಳಲ್ಲಿ ಜನರು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಾರೆ.
•ಪೊಲೀಸರ ಪಿಸಿಆರ್ ವಾಹನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
• ಯೆಯ್ನಾಡಿಯಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಪರಿಹರಿಸಬೇಕು.
•ಚೊಕ್ಕಬೆಟ್ಟು- ಸುರತ್ಕಲ್ ರಸ್ತೆಯಲ್ಲಿ ಇರುವ ಹಂಪ್‌ಗ್ಳಿಗೆ ಬಳಿ ಬಣ್ಣ ಬಳಿಯ ಬೇಕು, ರಸ್ತೆಯುದ್ದಕ್ಕೂ ಅಲ್ಲಲ್ಲಿ ರಾಶಿ ಹಾಕಿರುವ ಕೇಬಲ್ ವೈರ್‌ಗಳನ್ನು ವಿಲೆವಾರಿ ಮಾಡಬೇಕು.
•ಮೂಡುಬಿದಿರೆಯಲ್ಲಿ ಸಂಚಾರ ಸಮಸ್ಯೆ ಇದ್ದು, ಬಗೆ ಹರಿಸಿ.
• ಜಪ್ಪಿನಮೊಗರು- ಎಕ್ಕೂರು ನಡುವಣ ಫಿಶರೀಸ್ ಕಾಲೇಜಿನ ಮೈದಾನ್ ಪಕ್ಕದಲ್ಲಿ ಹಾದು ಹೋಗುವ ಸೂಟರ್‌ಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಗಾಂಜಾ ಮಾರಾಟ ವ್ಯವಹಾರ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.