ಭಾವವರಿತ ಭಾಗವತ
ನೆಬ್ಬೂರು ನಾರಾಯಣ ಭಾಗವತರ ನೆನಪು
Team Udayavani, May 19, 2019, 6:00 AM IST
ಯಕ್ಷಗಾನ ಪ್ರಿಯರ ನೆನಪಿನಲ್ಲಿ ಜೀವಂತರಾಗಿರುವ ನೆಬ್ಬೂರು ನಾರಾಯಣ ಭಾಗವತರು
ತಮ್ಮ ಕಂಠಸಿರಿಯ ಮೂಲಕ ಬಡಗುತಿಟ್ಟು ಯಕ್ಷಗಾನದ ಕೀರ್ತಿಯನ್ನು ಜಗದಗಲ ಪಸರಿಸಿದ ನೆಬ್ಬೂರು ನಾರಾಯಣ ಭಾಗವತರು ನಾದೈಕ್ಯರಾಗಿದ್ದಾರೆ. ಅವರ ದನಿಯನ್ನು ಆಲಿಸಿದ ಕೂಡಲೇ ಆಯಾಚಿತವಾಗಿ ಕೆರೆಮನೆ ಶಂಭು ಹೆಗಡೆಯವರ ವೇಷ ಕಣ್ಣೆದುರು ಬರುತ್ತದೆ. ಹೂವು ಮತ್ತು ಗಂಧದ ನಡುವಿನ ನಂಟಿನಂತೆ ನೆಬ್ಬೂರು ನಾರಾಯಣ ಭಾಗವತರ ಹಾಡು ಮತ್ತು ಶಂಭು ಹೆಗಡೆಯವರ ಪಾತ್ರ ರಂಗದಲ್ಲಿ ಮೆರೆದ ದಿನಗಳನ್ನು ಮರೆಯುವುದಾದರೂ ಹೇಗೆ !
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೆಬ್ಬೂರು ಹಣಗಾರಿನಿಂದ 4 ಕಿ.ಮೀ. ದೂರವಿದೆ. ಹಣಗಾರಿನಲ್ಲಿ ಬಂದು ನೆಲೆಸಿದ ನೆಬ್ಬೂರು ನಾರಾಯಣ ಭಾಗವತರು ಧನಸಂಪತ್ತಿಗಿಂತ ಸ್ವರ ಸಂಪತ್ತು ಅಮೂಲ್ಯ ಎಂದು ಜಗತ್ತಿಗೆ ಜಾಹೀರುಪಡಿಸಿದವರು. ಪ್ರಾಥಮಿಕ ಶಾಲೆಯನ್ನು ಪೂರ್ತಿ ಬಳಸಿಕೊಳ್ಳದಿದ್ದರೂ ಆಕರ್ಷಕ ಕಂಠ ಮಾಧುರ್ಯದಿಂದ ಹಲವು ಹಗಲುಗಳನ್ನು ಮರೆಸಿದವರು.
ಹುಟ್ಟಿದವರಿಗೆ ಮರಣ ಕಟ್ಟಿಟ್ಟದ್ದು ಎಂಬುದು ಎಲ್ಲರಿಗೂ ಗೊತ್ತು. ಮರೆವು ಮರ್ತ್ಯರ ಗುಣವೂ ಹೌದು. ಆದರೆ, ಸ್ಮರಿಸಬೇಕಾದ ಸಂಗತಿಗಳನ್ನು ಮರೆವಿನ ಹೊಂಡದಲ್ಲಿ ಹೂಳಬಾರದು. ಇಡಗುಂಜಿ ಮೇಳದ ಆರಂಭದಲ್ಲಿ ಕೆರೆಮನೆ ಶಿವರಾಮ ಹೆಗಡೆಯವರ ಸಾರಥ್ಯಕ್ಕೆ ಗಣೇಶ ಯಾಜಿ ಭಾಗವತರ ವಾಣಿ ಹೊಂದಿಕೊಂಡ ಹಾಗೆ ಶಂಭು ಹೆಗಡೆಯವರ ಧುರೀಣತ್ವಕ್ಕೆ ಭುಜ ಒಡ್ಡಿದವರು ನೆಬ್ಬೂರು ನಾರಾಯಣ ಭಾಗವತರು. ನಾರಾಯಣ ಭಾಗವತರಿಲ್ಲದೆ ಶಂಭು ಹೆಗಡೆಯವರ ಆಟ ನಡೆಯುವಂತಿಲ್ಲ ಎಂಬುದು ಜನಜನಿತ ಮಾತು. ಯಾಜಿ ಭಾಗವತರಿಗೆ ಸ್ವರ ಇಂಪಾಗಿರಲಿಲ್ಲ. ಅನುಭವ ಊರುಗೋಲಾಗಿತ್ತು. ನೆಬ್ಬೂರು ನಾರಾಯಣ ಭಾಗವತರಿಗೆ ಕಂಠ ಸಿರಿಯ ಬಳುವಳಿಯಿತ್ತು. ವ್ಯವಸಾಯದುದ್ದಕ್ಕೂ ಅದು ಪೂರಕವಾಗಿಯೇ ಸಾಗಿತು. ಆಯಾಸ-ಆರೋಗ್ಯಗಳ ಗಮನ ಕೊಡದೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ನೆಬ್ಬೂರರ ನಿಷ್ಠೆಗೆ ಪ್ರದರ್ಶನ ನಿದರ್ಶನವಾಗುತ್ತಿತ್ತು.
\
ಕೆರೆಮನೆ ಶಂಭು ಹೆಗ್ಡೆ-ನೆಬ್ಬೂರು ನಾರಾಯಣ ಭಾಗವತರ ಜೋಡಿ ಕೆರೆಮನೆ ಶಂಭು ಹೆಗ್ಡೆ-ನೆಬ್ಬೂರು ನಾರಾಯಣ ಭಾಗವತರ ಜೋಡಿ ಕೆಲವು ಪುರಾಣಕತೆಗಳಿಗೆ ಹೊಸ ಆಯಾಮಗಳನ್ನೊದಗಿಸಿದೆ. ಪರಂಪರೆಯ ನಡೆಗೆ ಹೊಸ ತಿರುವು ನೀಡಿದೆ.
ಯಕ್ಷಗಾನ ಹಾಡುಗಾರಿಕೆಯ ಕ್ರಮ ವಿಶಿಷ್ಟ. ಪದ್ಯದ ಮಟ್ಟುಗಳನ್ನು ಹಾಡುವ ರೀತಿಯನ್ನು “ಧಾಟಿ’ ಎನ್ನುತ್ತಾರೆ. ಭಾಗವತರೇ ಮುಖ್ಯಪಾತ್ರ ಎಂಬ ಭಾವದಲ್ಲಿ ಆಯಾ ಸೀಮೆಯ ಪ್ರಸಿದ್ಧ ಭಾಗವತರ ಹಾಡಿನ “ಧಾಟಿ’ಗಳೇ ರಂಗರೂಢಿಯಾದವು. ಕ್ರಮೇಣ ನಾಟಕಗಳ ಪ್ರಭಾವ ಆಗತೊಡಗಿ ವೇಷಧಾರಿಗಳು ಪಾತ್ರಭಾವದಿಂದ ನರ್ತಿಸತೊಡಗಿದ ಮೇಲೆ ಅವರದೇ ಆದ ನಟನೆ- ಅಭಿನಯಗಳಿಗೆ ಆದ್ಯತೆ ದೊರೆತು ಪ್ರಾದೇಶಿಕವಾಗಿ ರಂಗತಂತ್ರಗಳು ಬದಲಾಗತೊಡಗಿದವು. ಕೆರೆಮನೆ ರಂಗ ಪದ್ಧತಿಯಲ್ಲಿ ಹೊಸತನ ಕಂಡುಬಂತು.
ಪೂರ್ವರಂಗದಲ್ಲಿ ಗೋಪಾಲರ ವೇಷ ಕೈಬಿಟ್ಟ ಕಾಲದಲ್ಲಿ ಸಭಾಲಕ್ಷಣದ ಪದ್ಯಗಳ ಪ್ರಸ್ತುತಿಗೆ ಎಡೆ ಸಿಗಲಿಲ್ಲ. ಆ ವೇಳೆಯಲ್ಲಿ ನೆಬ್ಬೂರರ ಸಂಗೀತ ಸೇವೆ ಮೊದಲಾಯಿತು. ನೆಬ್ಬೂರರ ಏರು ಪ್ರಾಯದಲ್ಲಿ ಸ್ವರಮಾಧುರ್ಯದಿಂದ ಪೂರ್ವರಂಗಕ್ಕೆ ಕಳೆ ಚಿಮ್ಮಿತು. ನಂತರ ಅವರ ಭಾಗವತಿಕೆ ಕೆರೆಮನೆ ಘರಾಣೆಯದು ಎಂದೇ ಪರಿಗಣಿಸಲ್ಪಟ್ಟಿತು. ಇಡಗುಂಜಿ ಮೇಳ ಘಟ್ಟದ ಮೇಲ್ಭಾಗದಲ್ಲಿ ಪ್ರಸಿದ್ಧವಾ ಯಿತು. ಟೆಂಟಿನ ಆಕರ್ಷಣೆಯಲ್ಲಿ ಕಡತೋಕ ಮಂಜುನಾಥ ಭಾಗವತರು ತೆಂಕುತಿಟ್ಟು ಯಕ್ಷಗಾನದತ್ತ ವಾಲಿದರು. ಸಭಾಹಿತ ಕ್ರಮದ ಸೆಳವಿನಲ್ಲಿ ಹೊಸ ಹೊಳೆ ಯೊಂದು ಹರಿದು ನೆಬ್ಬೂರು ನಾರಾಯಣ ಭಾಗವತರು ಹಾಡುಗಾರಿಕೆಯಲ್ಲಿ ವಿಜೃಂಭಿಸಿದರು. ಹಾಡುಗಾರಿಕೆಗೆ ಉತ್ತರಾದಿ ಸಂಗೀತದ ಪ್ರಭಾವ ದೊರೆತದ್ದು ಮಹಾಬಲ ಹೆಗಡೆಯವರಿಂದ ಎಂಬುದು ಹಿರಿಯರ ಅಂಬೋಣ.
ಪಾತ್ರದ ಭಾವವರಿತವರು
ಪಾತ್ರಗಳ ಮಂಡನೆಯಲ್ಲಿ ಭಾವಕ್ಕೇ ಮುಖ್ಯ ಎಂದು ಅನುಸರಣೆ, ಅನುಕರಣೆಗಳಿಗೇ ಪ್ರಾಶಸ್ತ್ಯ ನೀಡಿದರು. ಯಕ್ಷಗಾನ ಶೈಲಿಯಲ್ಲಿ ಸಂಗೀತ ಬೆರೆಸಿ ಹಾಡಿನ ಮಟ್ಟನ್ನು ಕೆಡಿಸದೆ ಯಕ್ಷಗಾನ ಶೈಲಿಗೊಂದು ಹೊಸ ಮಾರ್ಗವನ್ನು ರೂಪಿಸಿದರು. ನೆಬ್ಬೂರು ನಾರಾಯಣ ಭಾಗವತರು, ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಮಹಾಬಲ ಹೆಗಡೆಯವರಿಂದ ದೊರೆತ ಅನುಭವವನ್ನು ಕೆರೆಮನೆ ಶಂಭು ಹೆಗಡೆಯವರ ಕಲ್ಪನೆಗೆ ಹೊಂದಿಸುವ ಶ್ರಮದಲ್ಲಿ ಸ್ವರಸಾಧನೆಗಿಂತ ಸ್ವರಮಾಧುರ್ಯಕ್ಕೇ ಹೆಚ್ಚು ಪ್ರಾಶಸ್ತ್ಯ ದೊರೆಯಿತು.
ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಾಲದಲ್ಲಿ ಅವರ ಕಸುಬುಗಾರಿಕೆಯ ಕುರಿತ ನೆನಪು ಹಚ್ಚ ಹಸುರಾಗಿದೆ. ನೆಬ್ಬೂರು ನಿನಾದವೆಂಬ ಅವರ ಆತ್ಮಕಥನ ಹೊತ್ತಿಗೆಯೂ ಹೊರಬಂದಿದೆ. ಅವರ ಹಾಡಿನ ಧ್ವನಿ ಸುರುಳಿಗಳು ಲಭ್ಯವಿವೆ. ಆರೂವರೆ ದಶಕಗಳಿಗೆ ಮಿಕ್ಕಿದ ಸೇವೆಯಲ್ಲಿ ಸಾಕಷ್ಟು ಸನ್ಮಾನಗಳು ಲಭಿಸಿವೆ. ಕೃಷ್ಣ ಸಂಧಾನ, ಕರ್ಣಪರ್ವ, ಹರಿಶ್ಚಂದ್ರ ಮುಂತಾದ ಪ್ರಸಂಗಗಳಲ್ಲಿ ಅವರ ಧ್ವನಿಯ ಅಲೆ ಹರಿದಿದೆ- ಹರಡಿದೆ. ಅವರ ಇನಿದನಿ ಶ್ರೀರಾಮ ನಿರ್ಯಾಣವನ್ನು ತಾಳಮದ್ದಳೆ ರಂಗದಲ್ಲಿ ಚಿರಸ್ಥಾಯಿಯಾಗಿಸಿದೆ.
ರಾಮಾಯಣ, ಮಹಾಭಾರತ, ಭಾಗವತ, ದಶಾವತಾರ ಸೇರಿದ ಕಥಾನಕಗಳ ಏಳು, ಹದಿನೆಂಟು ರಾತ್ರಿಗಳ ಪ್ರದರ್ಶನಗಳನ್ನು ಸಿಂಗನಹಳ್ಳಿ-ಕೋಳೀವಾಡ ಊರುಗಳಲ್ಲಿ ಪ್ರದರ್ಶಿಸುವ ಪ್ರಯತ್ನ ನಡೆಸಿದಾಗ ಅದರಲ್ಲಿ ಮನಃಪೂರ್ವಕ ಪಾಲುಗೊಂಡು ನನ್ನನ್ನು ಬೆಂಬಲಿಸಿದವರು ನೆಬ್ಬೂರು ನಾರಾಯಣ ಭಾಗವತರು. ಕಂಠಶ್ರೀಯೊಂದಿಗೆ ಹೃದಯವೈಶಾಲ್ಯವುಳ್ಳ ಅವರ ಅಗಲಿಕೆ ಅಪಾರ ವ್ಯಥೆಗೆ ಕಾರಣವಾಗಿದೆ. ಅವರಿಗೆ ರಾಜ್ಯ ಪ್ರಶಸ್ತಿ ಬಂದಾಗ ನಾನು ಪ್ರತ್ಯಕ್ಷ ಅಭಿನಂದನೆ ತಿಳಿಸಿದೆ. “ನಾರಾಯಣ ಭಾವ’ ಎಂದು ನಾನು, “ಮಂಜುನಾಥಣ್ಣ’ ಎಂದು ಅವರು ಸಂಬೋಧಿಸುವುದು ನಮ್ಮ ಸಲುಗೆಯ ದ್ಯೋತಕ. ಆಗ ಅವರೇ ಹೇಳಿದ ಮಾತು, “ನನಗೂ ಪ್ರಶಸ್ತಿ ಬಂದಿದೆ. ಪಂಡರೀನಾಥಾಚಾರ್ಯ ಗಲಗಲಿ ಅವರಿಗೂ ಬಂದಿದೆ. ಅವರೆಲ್ಲಿ ನಾನೆಲ್ಲಿ ! ಅವರು ಮಹಾವಿದ್ವಾಂಸರು’ ಈ ವಿನೀತ ಭಾವ ಇನ್ಯಾರಿಗಿದೆ!
ಕಳೆದ ಎಪ್ರಿಲ್ 13ರಂದು ಹಾಳಣಿಗೆ ಗೌರವ ಸ್ವೀಕರಿಸಲು ಹೋದಾಗ ಅವರ ಅನಾರೋಗ್ಯದ ಕುರಿತು ವಿಚಾರಿಸಲು ಹೋಗಿದ್ದೆ. ಒಂದು ವಾರದೊಳಗೆ ವೀರಾಂಜನೇಯ ವೈಭವ ಹನುಮಂತನ ಒಡಿಯೂರು ಸಂಸ್ಥಾನದಲ್ಲಿ ಬಿಡುಗಡೆಗೆ ಅಣಿಯಾಗಿತ್ತು. “ಅದರ ಒಂದು ಪ್ರತಿಯನ್ನು ಮೇ ಹತ್ತರ ನಂತರ ನಿಮಗೆ ಕೊಡುತ್ತೇನೆ’ ಎಂದು ಹೇಳಿಬಂದಿದ್ದೆ. ಆ ಕುರಿತು ಅಣಿಯಾಗಿದ್ದೆ. ಈಗ ಆದು ನೆರವೇರಲಿಲ್ಲ. ನಾನು ಸುಳ್ಳುಗಾರನಾಗಲು ಕಾರಣ ನಾನೋ, ನನ್ನನ್ನು ನಿರಾಸೆಗೆ ದೂಡಿದ ವಿಧಿಯೋ, ತಿಳಿಯುತ್ತಿಲ್ಲ !
ಹೊಸ್ತೋಟ ಮಂಜುನಾಥ ಭಾಗವತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.