ಸಂಚಾರ ದಟ್ಟಣೆ ನಿವಾರಣೆಗೆ ಬೇಕಿದೆ ಸಮಗ್ರ ಯೋಜನೆ
ಉದಯವಾಣಿ ಸಂವಾದ
Team Udayavani, May 19, 2019, 3:10 AM IST
ಬೆಂಗಳೂರು: ಒಂದೂವರೆ ದಶಕದಿಂದ ನಗರದಲ್ಲಿ ಸಂಚಾರದಟ್ಟಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ, ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಮೂಲತಃ ವ್ಯವಸ್ಥಿತ ಯೋಜನೆಯೇ ಇಲ್ಲ. ಈಗ ಇದಕ್ಕಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವ ತುರ್ತು ಅವಶ್ಯಕತೆ ಇದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟರು.
“ಉದಯವಾಣಿ’ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರದ ಸಂಚಾರದಟ್ಟಣೆಗೆ ಸಂಬಂಧಿಸಿದ ಸಂವಾದದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಸೇರಿದಂತೆ ತಜ್ಞರಿಂದ ಈ ಅಭಿಪ್ರಾಯ ಕೇಳಿಬಂತು.
ರಸ್ತೆಗಳ ಸಾಮರ್ಥ್ಯ ಎಷ್ಟಿದೆ? ಅದರ ಮೇಲೆ ಓಡಾಡುವ ವಾಹನಗಳು ಎಷ್ಟಿರಬೇಕು? ಈ ವಾಹನಗಳು ನಗರದ ಹೃದಯಭಾಗಕ್ಕೆ ಬಂದರೆ ನಿಲುಗಡೆ ಎಲ್ಲಿ? ನಗರದ ಭೌಗೋಳಿಕ ವಿನ್ಯಾಸವೂ ಸಂಚಾರದಟ್ಟಣೆಯಲ್ಲ ಕೊಡುಗೆ ನೀಡುತ್ತಿದೆಯೇ?
ಇತ್ತೀಚೆಗಷ್ಟೇ ನಿರ್ಮಿಸಿರುವ “ನಮ್ಮ ಮೆಟ್ರೋ’ ನಿಲ್ದಾಣ ವ್ಯಾಪ್ತಿಯಲ್ಲೂ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಯಾಕೆ ಸಾಧ್ಯವಾಗಿಲ್ಲ? ಇದಾವುದರ ವ್ಯವಸ್ಥಿತ ಅಧ್ಯಯನ ಆಗಿಲ್ಲ. ಸಂಚಾರದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಮುನ್ನ ನಾವು ಈ ಸಮಸ್ಯೆಯ ಮೂಲಗಳನ್ನು ತಿಳಿಯುವ ಅವಶ್ಯಕತೆ ಇದೆ ಎಂದು ತಜ್ಞರು ಪ್ರತಿಪಾದಿಸಿದರು.
ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಸಾರಿಗೆ ಇಲಾಖೆ, ಬಿಎಂಟಿಸಿ ಒಟ್ಟಾಗಿ ಸಮಗ್ರ ಯೋಜನೆ ರೂಪಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ, ಮುಂದಿನ ಐದು ವರ್ಷಗಳಲ್ಲಿ ಸಂಚಾರದಟ್ಟಣೆಯು ದೊಡ್ಡ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿದರು.
ಸಂಚಾರದಟ್ಟಣೆ ನಿವಾರಣೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಎರಡು ರೀತಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅಲ್ಪಾವಧಿಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ತಂತ್ರಜ್ಞಾನಗಳ ನೆರವಿನಿಂದ ಬಸ್‌ಗಳ ಕಾರ್ಯಾಚರಣೆಯ ಕಾರ್ಯಕ್ಷಮತೆ ವೃದ್ಧಿಸಬೇಕು.
ಹೆಚ್ಚು ಬಸ್‌ಗಳನ್ನು ರಸ್ತೆಗಿಳಿಸಬೇಕು. ಲಾಸ್ಟ್ ಮೈಲ್ ಕನೆಕ್ಟಿವಿಟಿ ಹೆಚ್ಚಿಸಬೇಕು. ಇನ್ನು ದೀರ್ಘಾವಧಿಯಲ್ಲಿ ಮೆಟ್ರೋ, ಉಪನಗರ ರೈಲು ಯೋಜನೆಗಳ ಅನುಷ್ಠಾನ, ಬೈಸಿಕಲ್ ಪಥ ಮತ್ತಿತರ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆಗಳನ್ನು ಮುಂದಿಟ್ಟರು.
ಅಡಿಗೆ ಮಾಡಿದವರ್ಯಾರೋ; ಬಡಿಸ್ತಿರೋರ್ಯಾರೋ: ಸಂವಾದದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪಿ. ಹರಿಶೇಖರನ್, “ಅಡಿಗೆ ಮಾಡಿದವರು ಬೇರೆ; ನಾವು (ಸಂಚಾರ ಪೊಲೀಸರು) ಆ ಅಡಿಗೆ ಬಡಿಸುತ್ತಿದ್ದೇವಷ್ಟೇ. ಆದರೆ, ಇಲ್ಲಿ ಊಟ ಸರಿಯಾಗಿಲ್ಲ ಎಂದು ಬಡಿಸುವವನನ್ನು ದೂಷಿಸಲಾಗುತ್ತಿದೆ.
ಇದು ಸಂಚಾರದಟ್ಟಣೆಯ ವಸ್ತುಸ್ಥಿತಿ. ಹಾಗಂತ, ಪಲಾಯನ ಆಗುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಸಂಯೋಜಿತ ಪ್ರಯತ್ನದ ಅಗತ್ಯ ಇದೆ ಎಂಬುದು ನನ್ನ ವಾದ. ಎರಡು ಟಿಎಂಸಿ ಸಾಮರ್ಥ್ಯದಷ್ಟು ಕೆರೆ ನಿರ್ಮಿಸಿ, ಐದು ಟಿಎಂಸಿ ನೀರು ಹರಿಸಿದರೆ ಏನಾಗುತ್ತದೆ? ಅದೇ ಸ್ಥಿತಿ ಈಗ ನಗರದ ಸಂಚಾರ ವ್ಯವಸ್ಥೆಯಲ್ಲೂ ಆಗಿದೆ’ ಎಂದು ಸಮಸ್ಯೆಯ ತೀವ್ರತೆಯನ್ನು ತೆರೆದಿಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ )ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್ ವರ್ಮ ಮಾತನಾಡಿ, “ನಗರ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಸಾಕಷ್ಟು ಅಸಮತೋಲನ ಇದೆ.
ಇದಕ್ಕೆ ನಾವು ಬರೀ ಮೇಲ್ಸೇತುವೆಯಂತಹ ಅಲ್ಪಾವಧಿ ಪರಿಹಾರಗಳನ್ನು ಕಂಡುಕೊಳ್ಳುವುದರಿಂದ ಪರಿಹಾರ ಸಾದ್ಯವಿಲ್ಲ. ಸುಸ್ಥಿರ ಸಾರಿಗೆ ವ್ಯವಸ್ಥೆ ನಮ್ಮ ಆದ್ಯತೆ ಆಗಬೇಕು. ಇದಕ್ಕೆ ಉಳಿದೆಲ್ಲ ಸರ್ಕಾರಿ ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ನೆರವು: ಕ್ಲೀನ್ ಏರ್ ಪ್ಲಾಟ್‌ಫಾರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್, “ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು. ಅವುಗಳಿಗೆ ಸ್ಥಳೀಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು. ವಿದೇಶಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಸಂಚಾರ ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಆಯುಕ್ತ ಬೇಸರ: “ಎರಡು ಸಾವಿರ ಮದುವೆ ಹಾಲ್‌ಗಳಿವೆ. ಅಲ್ಲಿಗೆ ಬರುವ ವಾಹನಗಳ ವ್ಯವಸ್ಥೆ ಹೇಗೆ? ಅವುಗಳು ಸೃಷ್ಟಿಸುವ ಸಂಚಾರದಟ್ಟಣೆ ಎಷ್ಟು? ಈ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ’ ಎಂದು ಪಿ. ಹರಿಶೇಖರನ್ ಬೇಸರ ವ್ಯಕ್ತಪಡಿಸಿದರು.
ಬಹುತೇಕ ಮದುವೆ ಹಾಲ್‌ಗಳು ವಾಹನ ನಿಲುಗಡೆ ವ್ಯವಸ್ಥೆ ಹೊಂದಿರುವುದಿಲ್ಲ. ಸೀಜನ್‌ನಲ್ಲಿ ಸಾವಿರಾರು ವಾಹನಗಳು ಆ ಹಾಲ್‌ಗಳ ಸುತ್ತ ನಿಲುಗಡೆ ಆಗುತ್ತವೆ. ಇದಲ್ಲದೆ, ವಸತಿ ಪ್ರದೇಶಗಳಲ್ಲಿ ರಾತ್ರಿ ನಿಲುಗಡೆ ಆಗುವ ಸಾವಿರಾರು ವಾಹನಗಳಿರುತ್ತವೆ.
ಲಕ್ಷಾಂತರ ವಾಹನಗಳ ಮಾಲಿಕತ್ವ ಹೊಂದಿರುವ ಆ್ಯಪ್ ಆಧಾರಿತ ಸೇವೆ ನೀಡುತ್ತಿರುವ ಓಲಾ, ಉಬರ್ ಕಂಪನಿಗಳು ವಾಹನ ನಿಲುಗಡೆಗೆ ಎಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ? ಸಂಚಾರದಟ್ಟಣೆಗೆ ಇವುಗಳು ಕೂಡ ಕೊಡುಗೆ ನೀಡುತ್ತಿವೆ ಎಂದು ಅವರು ಗಮನಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.