ಮಳೆಗಾಲಕ್ಕೆ ಇನ್ನೂ ಸಿದ್ಧಗೊಂಡಿಲ್ಲ ಉಡುಪಿ ನಗರ
ನಿರ್ವಹಣೆ ಇಲ್ಲದೆ ಸೊರಗಿ ಹೋದ ಚರಂಡಿಗಳು
Team Udayavani, May 20, 2019, 6:00 AM IST
ಉಡುಪಿ: ಮುಂಗಾರು ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಳೆಗಾಲ ಎದುರಿಸಲು ನಗರ ಸಕಲ ರೀತಿಯಲ್ಲಿ ಸಜ್ಜಾಗಬೇಕಿದೆ. ಪ್ರಸ್ತುತ ಚರಂಡಿ, ನೀರಿನ ಪೈಪ್‌ಲೈನ್, ರಸ್ತೆ ರಿಪೇರಿ ಸಹಿತ ಪ್ರಮುಖ ಕಾಮಗಾರಿಗಳು ಅರ್ಧಾವಸ್ಥೆಯಲ್ಲಿದ್ದು, ನಿಧಾನಗತಿ ಯಲ್ಲಿ ಸಾಗುತ್ತಿದೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ
ಈ ಕ್ಷಣಕ್ಕೆ ಮಳೆ ಸುರಿದರೆ ಉಡುಪಿ-ಮಣಿಪಾಲ ರಸ್ತೆ ಕೆಸರುಮಯ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದೆಡೆ ಆಮೆಗತಿ ಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಮತ್ತೂಂದೆಡೆ ರಸ್ತೆಗಳ ಇಕ್ಕೆಲಗಳನ್ನು ಅಗೆದಿರುವುದರಿಂದ ವಾಹನ ಸವಾರರ ಸಹಿತ ಪಾದಚಾರಿಗಳು ಇಲ್ಲಿ ಸಂಚರಿಸುವಾಗ ಸಮಸ್ಯೆ ಉಂಟಾಗುವ ಸಾಧ್ಯತೆಯೇ ಹೆಚ್ಚು.
ವಾರ್ಡ್‌ಗಳಲ್ಲೂ ಸಮಸ್ಯೆ
ಅರೆಬರೆ ಕಾಮಗಾರಿ, ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪ್ರತೀ ವಾರ್ಡ್‌ಗಳಲ್ಲೂ ಚರಂಡಿ ಸಮಸ್ಯೆ ಎದ್ದು ಕಾಣುತ್ತಿದೆ. ಕಿನ್ನಿಮೂಲ್ಕಿ, ತೆಂಕಪೇಟೆ, ಸರಳೇಬೆಟ್ಟು, ಬನ್ನಂಜೆ, ಅಜ್ಜರಕಾಡು, ಮಣಿಪಾಲ, ಪರ್ಕಳ ಭಾಗಗಳಲ್ಲಿ ಚರಂಡಿಯಲ್ಲಿ ಕಸಕಡ್ಡಿ, ಪ್ಲಾಸ್ಟಿಕ್‌ಗಳು ತುಂಬಿಹೋಗಿದ್ದು, ನೀರು ಹರಿಯುವುದೇ ಅಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಪರ್ಕಳದಲ್ಲಿ ಚರಂಡಿಯೇ ಮಾಯ!
ಪರ್ಕಳ ವಾರ್ಡ್‌ನ ರಾ.ಹೆ.ಬದಿಯ ಚರಂಡಿ ಸಹಿತ ವಿವಿಧ ಕಡೆಗಳಲ್ಲಿರುವ ಚರಂಡಿ ಹೂಳು ತೆರವಾಗಿಲ್ಲ. ಕೆಳಪರ್ಕಳದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಬಳಿ ಮಳೆಗಾಲದಲ್ಲಿ ನೀರು ಹರಿಯುವ ದೊಡ್ಡ ತೋಡು ಇದೆ. ಇದರಲ್ಲಿ ರಾಶಿಗಟ್ಟಲೆ ಕಸ ತುಂಬಿದ್ದು, ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡಚಣೆಯಾಗಲಿದೆ.
ಹೆದ್ದಾರಿ ಕಾಮಗಾರಿ ಪ್ರಗತಿ ಯಲ್ಲಿರುವುದರಿಂದ ಪರ್ಕಳ ಗಾಂಧಿ ಮೈದಾನದಿಂದ ಕೆಳಗೆ ಚರಂಡಿಯೇ ಇಲ್ಲದಂತಾಗಿದೆ. ಪರ್ಕಳ ಪೇಟೆಯಲ್ಲಿರುವ ಕಿರುಚರಂಡಿಯಲ್ಲಿ ಹೂಳು, ಕಲ್ಲುಗಳು ತುಂಬಿ ಹೋಗಿದ್ದು, ತಡೆ ಉಂಟಾಗಿದೆ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದೆನಿಸುತ್ತದೆ.
ಲಕ್ಷ್ಮೀಂದ್ರ ನಗರದಲ್ಲಿ ಚರಂಡಿ ಅರ್ಧಕ್ಕೆ ಕಟ್
ಸಿಂಡಿಕೇಟ್ ಸರ್ಕಲ್‌ನಿಂದ ಮುಂದಕ್ಕೆ ಹಾದು ಹೋಗುವ ಚರಂಡಿಯು ಅರ್ಧಕ್ಕೆ ಮೊಟಕುಗೊಂಡಿದೆ. ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಚರಂಡಿಯನ್ನು ಅರ್ಧಕ್ಕೆ ನಿಲ್ಲಿಸಿ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ನೀರು ಹರಿಯಲು ಪೈಪ್‌ಲೈನ್ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ರಾ.ಹೆ. ನದಿಯಂತಾಗುವ ಸಾಧ್ಯತೆ ದೂರವಿಲ್ಲ.
ಚರಂಡಿಯಲ್ಲಿ ಬೆಳೆದುನಿಂತ ಗಿಡಗಂಟಿಗಳು
ತೆಂಕಪೇಟೆ ವಾರ್ಡ್‌ನಲ್ಲಿನ ಚರಂಡಿ ನಿರ್ವಹಣೆ ಇಲ್ಲದಂತಾಗಿದೆ. ಗಿಡಗಳು ಬೆಳೆದುನಿಂತಿದ್ದು, ಹೂಳು ತುಂಬಿಕೊಂಡಿವೆ. ಕಸಕಡ್ಡಿಗಳು, ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ನೀರು ಹರಿಯುವುದು ಕಷ್ಟ ಎಂಬಂತಿದೆ. ವಾರ್ಡ್ ನಿವಾಸಿಗಳು ಕೂಡ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಇದು ಕೂಡ ಸಮಸ್ಯೆಗೆ ಕಾರಣವಾಗಿದೆ.
ಗಮನಹರಿಸದೆ ಇರುವುದು ವಿಪರ್ಯಾಸ
ಈ ಹಿಂದೆ ನಗರಸಭೆಯ ವತಿಯಿಂದ ಚರಂಡಿಯ ಹುಲ್ಲು ತೆಗೆಯಲೆಂದು ವಾರದಲ್ಲಿ 2 ಬಾರಿ ಬರುತ್ತಿದ್ದರು. ಆದರೆ ಈಗ ಒಂದು ಬಾರಿ ಮಾತ್ರ ಬರುತ್ತಿದ್ದಾರೆ. ಅವರಿಂದಲೇ ಚರಂಡಿಯ ಹೂಳು ತೆಗೆಯುವ ಕೆಲಸ ಮಾಡಿಸುತ್ತಿದ್ದೇವೆ. ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆ ಈ ಬಗ್ಗೆ ಇನ್ನೂ ಗಮನಹರಿಸದಿರುವುದು ವಿಪರ್ಯಾಸ.
–ಗಿರೀಶ್ ಎಂ. ಅಂಚನ್,
ಕುಂಜಿಬೆಟ್ಟು ವಾರ್ಡ್ ಸದಸ್ಯರು
ಕೃತಕ ನೆರೆ ಭೀತಿ
ಚರಂಡಿಗಳಲ್ಲಿ ಹೂಳು ತುಂಬಿರುವ ಕಾರಣ ಕಳೆದ ವರ್ಷ ಮಳೆಗಾಲದ ಸಂದರ್ಭ ಕಲ್ಸಂಕ, ಬೈಲಕೆರೆ, ಬನ್ನಂಜೆ ಸಹಿತ ಹಲವಾರು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೃತಕ ನೆರೆ ಉಂಟಾಗಿತ್ತು. ಸಾರ್ವಜನಿಕರ ಸಹಿತ ವಾಹನ ಸವಾರರು ಹಲವು ರೀತಿಯ ತೊಂದರೆ ಎದುರಿಸಿದ್ದರು. ಅಪಾರ ನಷ್ಟವೂ ಉಂಟಾಗಿತ್ತು. ಸಮಸ್ಯೆ ಈ ಬಾರಿಯೂ ಹಾಗೆಯೇ ಇದೆ. ಆದರೆ ನಗರಸಭೆ ಮಾತ್ರ ಈ ಬಗ್ಗೆ ಇನ್ನೂ ಕ್ರಮಕೈಗೊಂಡಿಲ್ಲ.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.