ಜಪ್ತಿ: ದಿನಕ್ಕೆ 60 ಲಕ್ಷ ಲೀಟರ್ ನೀರು ಸರಬರಾಜು!
ಪಂಪಿಂಗ್ ಸ್ಟೇಷನ್‌ನಲ್ಲಿ ಜನರೇಟರ್ ಇಲ್ಲ ; ಶುದ್ಧೀಕರಣ ಘಟಕ ಇನ್ನೂ ದುರಸ್ತಿಯಾಗಿಲ್ಲ
Team Udayavani, May 20, 2019, 6:00 AM IST
ಕುಂದಾಪುರ: ಜಪ್ತಿಯಲ್ಲಿರುವ ಜಲಶುದ್ಧೀಕರಣ ಘಟಕದಿಂದ ಕುಂದಾಪುರ ಪುರಸಭೆ ಹಾಗೂ ಸುತ್ತಲಿನ ಐದು ಪಂಚಾಯತ್‌ಗಳಿಗೆ ಪ್ರತಿದಿನ 60 ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ನೀರು ಸಾಕಷ್ಟಿದೆ.
ಶುದ್ಧೀಕರಣ ಘಟಕದಲ್ಲಿ ಜನರೇಟರ್ ಇಲ್ಲ. ಇದರಿಂದಾಗಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಅಂತೆಯೇ ಶುದ್ಧೀಕರಣ ಘಟಕವೇ ಹಾಳಾಗಿದೆ. ಆದ್ದರಿಂದ ನದಿಯ ನೀರನ್ನು ನೇರ ಸರಬರಾಜು ಮಾಡಲಾಗುತ್ತಿದೆ. ನದಿ ನೀರು ಬರಿದಾಗುತ್ತಿದೆ ಎಂಬ ಆತಂಕದ ವದಂತಿಗಳು ಹರಿದಾಡುತ್ತಿದ್ದವು. ಈ ನಿಟ್ಟಿನಲ್ಲಿ ‘ಉದಯವಾಣಿ’ ರವಿವಾರ ಶುದ್ಧೀಕರಣ ಘಟಕದಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ ವಾಸ್ತವಾಂಶ ಗಮನಕ್ಕೆ ಬಂತು.
ಪಂಪ್ ಹೌಸ್
ಮೊದಲು ಜಂಬೂ ನದಿ ಬಳಿ ಇರುವ ಪಂಪ್‌ಹೌಸ್‌ಗೆ ಭೇಟಿ ನೀಡಲಾಯಿತು. ಅಲ್ಲಿ ನೀರೆತ್ತುವ ಕಾರ್ಯ ನಡೆಯುತ್ತಿತ್ತು. ಅಲ್ಲಿನ ಸಿಬಂದಿ ಪೂರಕ ಮಾಹಿತಿ ನೀಡಿ, ಸಾಕಷ್ಟು ನೀರು ಸಂಗ್ರಹ ಇರುವುದನ್ನು ಖಚಿತ ಪಡಿಸಿದರು. 10 ವರ್ಷಗಳ ಹಿಂದೆ ಘಟಕದಲ್ಲಿ ಕೇವಲ ಐದಾರು ತಾಸು ಮಾತ್ರ ನೀರು ಮೇಲೆತ್ತಲಾಗುತ್ತಿತ್ತು. ಆದರೆ ಈಗ ನಿರಂತರ 24 ತಾಸು ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಹೊಳೆಯಲ್ಲಿ ಸಾಕಷ್ಟು ನೀರು ಇರುವುದು ಕಂಡು ಬಂತು. ಗುಲ್ವಾಡಿ ಅಣೆಕಟ್ಟಿನಿಂದಾಗಿ ಇಲ್ಲಿಗೆ ಉಪ್ಪುನೀರಿನ ಹರಿವು ಕೂಡಾ ಇಲ್ಲ.
ಸಮಸ್ಯೆ
ಆದರೆ ಇಲ್ಲಿ ಎಷ್ಟು ನೀರಿದೆ ಎಂದು ಅಳೆಯಲು ಮಾಪನ ವ್ಯವಸ್ಥೆ ಇಲ್ಲ. 30 ಅಡಿ ಆಳದ ಬಾವಿಯನ್ನು ಹೊಳೆಯಲ್ಲಿ ತೋಡಲಾಗಿದ್ದು ಸಾಮಾನ್ಯವಾಗಿ ಇದೇ ಪ್ರಮಾಣದ ಆಳದಷ್ಟು ನೀರು ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ನದಿ ನೀರಿನ ಪ್ರಮಾಣ ಅಳೆಯುವ ಮಾಪಕಗಳಿದ್ದರೆ ಹೆಚ್ಚು ಅನುಕೂಲವಾಗಲಿದೆ. ಜತೆಗೆ ಈಗಾಗಲೇ ಅಳವಡಿಸಿದ ಪೈಪ್‌ನ ಗಾತ್ರ ಕಿರಿದಾಗಿದ್ದು ಹೆಚ್ಚುವರಿ ನೀರು ವಿತರಿಸುವಂತಿಲ್ಲ. ದೊಡ್ಡ ಪೈಪ್ ಅಳವಡಿಸಿದರೆ ಕಡಿಮೆ ಅವಧಿಯಲ್ಲಿ ಪಂಪ್ ಚಾಲೂ ಮಾಡಿದರೆ ಸಾಲುತ್ತದೆ.
ಶುದ್ಧೀಕರಣ ಘಟಕ
ಇಲ್ಲಿಂದ ಪಂಪ್ ಮಾಡಿದ ನೀರು ಶುದ್ಧೀಕರಣ ಘಟಕಕ್ಕೆ ಹೋಗುತ್ತದೆ. ಅಲ್ಲಿ ಶುದ್ಧೀಕರಣ ಘಟಕವೊಂದನ್ನು ಖಾಲಿ ಮಾಡಿ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಇದು ಕೆಲವೇ ದಿನದಲ್ಲಿ ಸಿದ್ಧವಾಗಲಿದೆ ಎಂದು ಅಲ್ಲಿನ ಸಿಬಂದಿ ಮಾಹಿತಿ ನೀಡಿದರು. ಹೊಳೆ ನೀರನ್ನು ನೇರ ಕಳುಹಿಸಲಾಗುತ್ತಿದೆಯೆ ಎಂದು ಪರಿಶೀಲಿಸಿದಾಗ ಸಾಧ್ಯತೆ ಇಲ್ಲ ಎನ್ನುವುದು ಖಚಿತವಾಗುತ್ತದೆ. ಏಕೆಂದರೆ ಪಂಪಿಂಗ್ ಸ್ಟೇಶನ್‌ನಿಂದ ಬಂದ ನೀರು ಶುದ್ಧೀಕರಣ ಘಟಕದ ನಂತರ ಫಿಲ್ಟರ್ ಕೇಂದ್ರಕ್ಕೆ ಹೋಗಿಯೇ ಟ್ಯಾಂಕಿಗೆ ಹೋಗುವುದು. ಆದ್ದರಿಂದ ಫಿಲ್ಟರ್ ಆಗಿ, ಕ್ಲೋರಿನೇಶನ್ ಆಗಿಯೇ ಟ್ಯಾಂಕಿ ತುಂಬುತ್ತದೆ. ಅಲ್ಲಿಂದ ವಿವಿಧೆಡೆಗೆ ವಿತರಣೆ ನಡೆಯುತ್ತದೆ. ಹತ್ತು ವರ್ಷಗಳ ಹಿಂದೆ ಇಲ್ಲಿಂದ 16 ಲಕ್ಷ ಲೀ. ನೀರು ಸರಬರಾಜಾಗುತ್ತಿದ್ದರೆ ಈಗ ದಿನಕ್ಕೆ 17 ಗಂಟೆ ನೀರು ಹರಿಸಲಾಗುತ್ತದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ಪ್ರತಿದಿನ 60 ಲಕ್ಷ ಲೀ. ನೀರು ವಿತರಿಸಲಾಗುತ್ತಿದೆ.
ಜಪ್ತಿಯ ಶುದ್ಧೀಕರಣ ಘಟಕದಿಂದ ಪುರಸಭೆಗೆ ನೀರು ಸರಬರಾಜು ಆಗುತ್ತದೆ. ಪುರಸಭೆಯ ಪೈಪ್‌ಲೈನ್ ಹಾದು ಬರುವ ಪಂಚಾಯತ್‌ಗಳಾದ ಬಸ್ರೂರು, ಕಂದಾವರ, ಕೋಣಿ, ಕೋಟೇಶ್ವರ, ಹಂಗಳೂರಿಗೆ ನೀರು ಕೊಡುತ್ತಿದ್ದಾರೆ. ಆದರೆ ಶುದ್ಧೀಕರಣ ಘಟಕದ ಪಕ್ಕದ ಗ್ರಾಮಗಳಾದ ಜಪ್ತಿ, ಯಡಾಡಿ ಮತ್ಯಾಡಿಗೆ ಮಾತ್ರ ಸಿಗುತ್ತಿಲ್ಲ. ಇಲ್ಲಿ ಪ್ರತ್ಯೇಕ ಪೈಪ್‌ಲೈನ್‌ಗೆ ಅನುದಾನ ಇಲ್ಲದ ಕಾರಣ ಈ ಪಂಚಾಯತ್ ವ್ಯಾಪ್ತಿಯವರು ಸದಾ ನೀರಿನ ಸಮಸ್ಯೆಯಲ್ಲಿದ್ದಾರೆ. ಈ ಭಾಗದ ಜನರ ಪ್ರಮುಖ ಬೇಡಿಕೆಯೇ ಇಲ್ಲಿನ ನೀರು ನಮಗೂ ಕೊಡಿ ಎನ್ನುವುದು.
ಈ ಕೇಂದ್ರದಿಂದ ದಿನಕ್ಕೆ 17 ತಾಸು ನೀರು ವಿತರಿಸಲಾಗುತ್ತಿದೆಯಾದರೂ ಇಲ್ಲಿ ಜನರೇಟರ್ ವ್ಯವಸ್ಥೆ ಇಲ್ಲ. ಮಂಜೂರಾಗಿದ್ದರೂ ಅಳವಡಿಕೆ ಕಾರ್ಯ ನಡೆದಿಲ್ಲ. 220 ಕಂಬಗಳನ್ನು ಹಾಕಿ ಪ್ರತ್ಯೇಕ ಎಕ್ಸ್ ಪ್ರಸ್ ಲೈನ್ ಎಳೆದ ಕಾರಣ ವಿದ್ಯುತ್ ಸಂಪರ್ಕ ಕಡಿಯುವ ಸಂದರ್ಭ ಕಡಿಮೆ. ಹಾಗೊಂದು ವೇಳೆ ದುರಸ್ತಿ ನೆಪದಲ್ಲಿ ತೆಗೆದರೆ ರಾತ್ರಿ ವೇಳೆ ಪಂಪಿಂಗ್ ಮಾಡಲಾಗುತ್ತದೆ ಎನ್ನುತ್ತಾರೆ ಸಿಬಂದಿ. ಕುಡಿಯಲು ಕಳುಹಿಸುವ ನೀರನ್ನು ಪ್ರತಿದಿನ ಇಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.