ರನ್ ರನ್ ಗೋ ಅವೇ
ಅವರ್ಯಾರೋ ಸೋತಿದ್ದಕ್ಕೆ ಇದ್ಯಾಕೆ ಹಿಂಗಾಡುತ್ತೆ!
Team Udayavani, May 21, 2019, 6:00 AM IST
90ರ ದಶಕದಲ್ಲಿ ಹುಟ್ಟಿ, ಈಗ ವೃತ್ತಿಯ ಕ್ರೀಸ್‌ನಲ್ಲಿ ನಿಂತ ಪ್ರತಿಯೊಬ್ಬರನ್ನೂ ವಿಶ್ವಕಪ್ ಕ್ರಿಕೆಟ್ ಚೆನ್ನಾಗಿ ಆಡಿಸಿಬಿಟ್ಟಿದೆ. ನಾಲ್ಕು ವರುಷಕ್ಕೊಮ್ಮೆ ಠಾಕುಠೀಕು ಹೆಜ್ಜೆಯಿಟ್ಟು ಅದು ಬಂದಾಗಲೆಲ್ಲ ಆ ಮಕ್ಕಳಿಗೆ ಪರೀಕ್ಷೆ! ಅದ್ಯಾವ ಪಂಚಾಂಗ ನೋಡಿ ಬರುತ್ತಿತ್ತೋ, ಮಾರ್ಚ್- ಏಪ್ರಿಲ್- ಮೇನಲ್ಲೇ ಅದಕ್ಕೆ ಮುಹೂರ್ತ. ಬರೆದ ಲೆಕ್ಕಗಳೆಲ್ಲ ಸ್ಕೋರ್ ಬೋರ್ಡಿನಂತೆ, ವೃತ್ತ- ತ್ರಿಜ್ಯಗಳೆಲ್ಲ ಕ್ರಿಕೆಟ್ ಮೈದಾನದಂತೆ ಕಂಗೊಳಿಸಿದ್ದೂ ಇದೆ. ಇನ್ನೇನು ಮೇ 30ರಿಂದ ವಿಶ್ವಕಪ್ ಕ್ರಿಕೆಟ್ ಆರಂಭವಾಗುತ್ತಿರುವ ಈ ಹೊತ್ತಿನಲ್ಲಿ, ಪೆವಿಲಿಯನ್ನಿನಲ್ಲಿ ಕುಳಿತ ಹಳೇ ನೆನಪುಗಳೆಲ್ಲ ಯಾಕೋ ಚಪ್ಪಾಳೆ ಹೊಡೆದಂತೆ ಅನ್ನಿಸುತಿದೆ…
ಇಲ್ಲಿ ಎಲ್ಲವೂ ಒಂದಕ್ಕೊಂದು ಅದೃಶ್ಯತಂತುವಿನಿಂದ ಹೆಣೆದುಕೊಂಡಿದೆ. ವಸಂತಮಾಸದಲ್ಲಿ ಮಾವು ಚಿಗುರಿದಾಗಲೇ ಕೋಗಿಲೆಯ ಇಂಪಾದ ಹಾಡು ಎಲ್ಲರಿಗೂ ಕೇಳುತ್ತದೆ. ಬಿರುಬೇಸಿಗೆಯಲ್ಲಿ ಮಾವು ಚಿಗುರಿದಾಗ, ಹಾಡಿ ಸ್ವಾಗತಿಸಬೇಕಾದ ಕೋಗಿಲೆ, ಬಿಸಿಲಿಗೆ ಬದಿಯಲ್ಲೆಲೋ ಮಲಗಿರುತ್ತದೆ. ಮಳೆ ಮುಗಿದು ಚಳಿ ಹಿಡಿಯುವ ಸಮಯಕ್ಕೆ ಕೋಗಿಲೆ ಗಂಟಲು ಸರಿ ಮಾಡಿಕೊಂಡು ಆಲಾಪಗೈದರೆ ಇತ್ತ ಮಾವಿನ ಮರ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿರುತ್ತದೆ. ಹೋಟ್ಲು ಪಕ್ಕದಲ್ಲೇ ಪಾನ್ ಅಂಗಡಿಯವನ ಪುಟ್ಟ ಗೂಡು. ಇಡ್ಲಿ-ವಡೆಗೆ ಚಟ್ನಿ-ಸಾಂಬಾರೇ ಚೆಂದ. ಆಲೂಗಡ್ಡೆ ಪಲ್ಯದ ಜೊತೆಗೋ, ಮಾವಿನಕಾಯಿ ಸೀಕರಣೆಯ ಜೊತೆಗೋ ತಿಂದರೆ ಅಸಂಬದ್ಧ… ಹೀಗೇ ಕೆಲವು ವಿಷಯಗಳು ಜೊತೆಯಾಗಿದ್ದಾಗಲೇ, ಜಂಟಿಯಾಗಿ ಬಂದಾಗಲೇ ಅವುಗಳ ಅಸ್ತಿತ್ವಕ್ಕೊಂದು ಬೆಲೆ, ಮರ್ಯಾದೆ, ಸಾರ್ಥಕತೆ. ಅಂಥದ್ದೇ ಮತ್ತೂಂದು ಅನೂಹ್ಯ, ನಿಕಟವಾದ ಜೋಡಿಯೆಂದರೆ ಮಕ್ಕಳ ಪರೀಕ್ಷೆ ಮತ್ತು ವಿಶ್ವಕಪ್ ಕ್ರಿಕೆಟ್!
ಅವರೂ ಮುಂದೆ ಹಾಕುವುದಿಲ್ಲ, ಇವರೂ ಹಿಂದೆ ಸರಿಯುವುದಿಲ್ಲ. “ಪರದೇಶಿ ಮುಂಡೇದೇ, ಓದಿ ಉದ್ಧಾರ ಆಗು ಅಂತ ಎಲ್ಲಾ
ವ್ಯವಸ್ಥೆ ಮಾಡಿಕೊಟ್ರೆ, ಸುಡುಗಾಡು ಕ್ರಿಕೆಟ್ಟು ನೋಡಿ ಸಾಯ್ತಿಯಾ? ಗತಿಗೆಟ್ಟೋವು ಪರೀಕ್ಷೆ ಟೈಮಲ್ಲೇ ಹಾಕಿ ಸಾಯ್ತಾವೆ’ ಎಂದು ತಂದೆ- ತಾಯಿಯರು, ಬಡಪಾಯಿ ಮಕ್ಕಳಿಗೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಬಯ್ಯುವುದು ತಪ್ಪುವುದಿಲ್ಲ.
ಅಲ್ಲಿ ಆಡುವುದು ಕೊಹ್ಲಿ, ರೋಹಿತ್ ಅಲ್ಲ, ಧೋನಿಯೂ ಅಲ್ಲ. ಅದು ನಾವೇ ಅಂದುಕೊಳ್ಳುವ ಹೊತ್ತಿನಲ್ಲಿ, ಸಂಧಿ- ಸಮಾಸ, ಸ್ವಾತಂತ್ರ್ಯ ಸಂಗ್ರಾಮ, ದ್ಯುತಿಸಂಶ್ಲೇಷಣೆ, ಬೀಜಗಣಿತದಂಥ ವಿಷಯಗಳನ್ನು ಓದಬೇಕಾಗಿಬಂದರೆ ಎಳೆಯ ಮನಸ್ಸುಗಳ ಪರಿಸ್ಥಿತಿಯನ್ನೊಮ್ಮೆ ಯೋಚಿಸಿ? ಅದರಲ್ಲೂ ಪರೀಕ್ಷೆಗಿಂತ ತಿಂಗಳುಗಟ್ಟಲೆ ಮುಂಚೆಯೇ ಓದಿ ಮುಗಿಸುವ ಅಭ್ಯಾಸವಿಲ್ಲದ, ಪರೀಕ್ಷೆಯ ಹಿಂದಿನ ದಿನವೇ ಬುಡದಿಂದ ತುದಿಯವರೆಗೆ ಓದಿ ಮುಗಿಸಬೇಕಾದ ಅನಿವಾರ್ಯಕ್ಕೆ ಸಿಲುಕುವ ನನ್ನಂಥವರಿಗೆ, ಅದೇ ದಿನ ಭಾರತ- ಪಾಕಿಸ್ತಾನ ಪಂದ್ಯ ಬಂದರೆ ಹೇಗಾಗಬೇಡ? ಈ ಉಭಯಸಂಕಟದ ಮಧ್ಯೆ ಹೆತ್ತವರ ಬೈಗುಳವೂ ಸೇರಿಕೊಂಡು ಆ ಒತ್ತಡದಲ್ಲಿ ಜ್ಞಾನೋದಯವಾಗಿದ್ದೂ ಇದೆ. ಕ್ರಿಕೆಟ್ಟನ್ನು ನೇಪಥ್ಯಕ್ಕೆ ಸರಿಸಿ, ಹಾಕಿಯನ್ನೋ, ಫುಟ್‌ಬಾಲನ್ನೋ, ನೂರು ಮೀಟರ್ ರೇಸನ್ನೋ ನಮ್ಮ ದೇಶದಲ್ಲಿ ಎಲ್ಲರೂ ಆರಾಧಿಸುವಂತಿದ್ದಿದ್ದರೆ ನನಗೂ ಅವುಗಳ ಬಗ್ಗೆಯಷ್ಟೇ ಆಸಕ್ತಿ ಬೆಳೆದು, ಪರೀಕ್ಷೆಯ ಸಮಯದಲ್ಲಿ ಪಂದ್ಯಗಳಿದ್ದರೂ ಒಂದೆರಡು ಗಂಟೆಗಳಲ್ಲಿ ಪುಸಕ್ಕಂತ ನೋಡಿ ಮುಗಿಸಿ, ಓದಿಕೊಳ್ಳಬಹುದಿತ್ತು. ಏಳೆಂಟು ಗಂಟೆ ಪುಸ್ತಕ ಮತ್ತು ಟಿ.ವಿ.ಯ ಮಧ್ಯೆ ಓಡಾಡೀ ಓಡಾಡೀ ಕಣ್ಣುಗಳು ಬಸವಳಿಯುತ್ತಿರಲಿಲ್ಲವೇನೋ!
ನನಗೆ ಕ್ರಿಕೆಟ್ ಅನ್ನೋದು ಆಟ ಅಂತ ಗೊತ್ತಾಗಿ, ಅದರ ಹುಚ್ಚು ಬೆಳೆಸಿಕೊಂಡು, ನಮ್ಮ ಮನೆಯಲ್ಲಿ ಟಿ.ವಿ. ತಂದು, ನಾನು ಮೊದಲ ಬಾರಿಗೆ ಪರೀಕ್ಷೆಯ ಹಿಂದಿನ ದಿನ ವಿಶ್ವಕಪ್ ನೋಡುವ ಹೊತ್ತಿಗೆ 2003ನೇ ಇಸವಿ. ಭಾರತ ತಂಡ ಕಳಪೆ ಪ್ರದರ್ಶನ ನೀಡಿ, ಆಟಗಾರರ ಮನೆಗೆ ಕಲ್ಲುಗಳು ಬಿದ್ದು, ರೋಷದಿಂದ ಫೀನಿಕ ಹಕ್ಕಿಯಂತೆ ಮತ್ತೆ ಎದ್ದು ಬಂದು ಫೈನಲ್ ತಲುಪಿದಾಗ ನಾನು ನಾಲ್ಕನೇ ತರಗತಿ ಪರೀಕ್ಷೆ ಬರೆಯುತ್ತಿದ್ದೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರೀಕ್ಷೆಯಾದ್ದರಿಂದ ಕ್ರಿಕೆಟ್ ನೋಡಿದ್ದಕ್ಕೆ ಬೈಸಿಕೊಳ್ಳದಿದ್ದರೂ, ಆಸ್ಟ್ರೇಲಿಯಾದ ವಿರುದ್ಧ ಭಾರತ ಫೈನಲ್‌ನಲ್ಲಿ ಸೋತಾಗ ಒಂದಿಡೀ ದಿನ ಮಂಕಾಗಿ ಕುಳಿತು, “ಅವ್ರು ಯಾರೋ ಸೋತಿದ್ದಕ್ಕೆ ಇದು ಯಾಕೆ ಹಿಂಗಾಡುತ್ತೆ?’ ಎಂದು ಅಮ್ಮ, ಅಪ್ಪನ ಬಳಿ ಕೇಳಿದ್ದು ನೆನಪಿದೆ.
ಅದಾದಮೇಲೆ 2007ರಲ್ಲಿ ಎಂಟನೇ ತರಗತಿಯಲ್ಲಿದ್ದಾಗ ಮತ್ತೆ ವಿಶ್ವಕಪ್, ಪರೀಕ್ಷೆಯ ಸಮಯಕ್ಕೇ ಅಟಕಾಯಿಸಿಕೊಂಡಿತು. ಹೈಸ್ಕೂಲಿನ ಅಂಕಗಳು ಸಾರ್ವಜನಿಕವಾಗಿ ಚರ್ಚೆಯಾಗುವ ಸಾಧ್ಯತೆ ಇದ್ದಿದ್ದರಿಂದ ಈ ಬಾರಿ ಪರೀಕ್ಷೆಗೆ ಮಹತ್ವ ಜಾಸ್ತಿಯಿತ್ತು. ಅನಾಹುತದ ಮುನ್ಸೂಚನೆ ದೊರೆತವಳಂತೆ ಅಮ್ಮ, “ಕೇಬಲ್ ತೆಗೆಸೋಣ’ ಎಂದರೆ ಸ್ವತಃ ಕ್ರಿಕೆಟ್‌ಪ್ರೇಮಿ ಆಗಿದ್ದ ಅಪ್ಪ ತೆಗೆಸಲೂ ಆಗದೇ, ಅಮ್ಮನ ಮಾತನ್ನು ತೆಗೆದುಹಾಕಲೂ ಆಗದೇ, “ಪೂರ್ತಿ ಓದಿ ಮುಗ್ಸಿದ್ಮೇಲೇನೇ ಅವ್ನಿಗೆ ಸ್ಕೋರ್ ತೋಸೋìದು ನಾನು’ ಎಂದು ಅಮ್ಮನನ್ನು ಸಂಭಾಳಿಸಿದರು. ನಾನೂ ಸೆಮಿಫೈನಲ್ ಫೈನಲ್ ಯಾವತ್ತು ಬಂದಿದೆ ಎಂದು ನೋಡಿಟ್ಟುಕೊಂಡು, ಆ ದಿನದ ಪರೀಕ್ಷೆಗಾದರೂ ಮುಂಚೆಯೇ ಓದಬೇಕೆಂದು ನಿರ್ಧರಿಸಿದೆ. ಪ್ರೌಢಶಾಲೆಯಾಗಿದ್ದಿದ್ದರಿಂದ ಪರಿಸ್ಥಿತಿಯನ್ನು ಪ್ರೌಢವಾಗಿಯೇ ನಿಭಾಯಿಸಲು ಸಿದ್ಧನಾಗಿದ್ದೆ. ಆದರೆ, ನಮ್ಮ ತಂಡ ನನ್ನ ಸಿದ್ಧತೆಗೆ ಒಂದು ಬಕೆಟ್ ತಣ್ಣೀರೆರಚಿ ಸೆಮಿಫೈನಲ್ ಇರಲಿ, ಸೂಪರ್ ಎಂಟರ ಹಂತವನ್ನೂ ತಲುಪದೇ ಲೀಗ್ ಹಂತದಲ್ಲಿಯೇ ಮಕಾಡೆ ಮಲಗಿಕೊಂಡಿತು. ನನ್ನ ನೆಚ್ಚಿನ ಆಟಗಾರ ರಾಹುಲ್ ದ್ರಾವಿಡ್ ವಿಫಲ ಕಪ್ತಾನನಾಗಿದ್ದು ನನ್ನ ಮನಸ್ಸಿಗೆ ಸಂಪೂರ್ಣವಾಗಿ ಘಾಸಿ ಮಾಡಿತ್ತು. “ಹೆಂಗೆ ಸೋತೇಬಿಟ್ರಲ್ಲ ನಿಮ್ಮೊàರು, ಇನ್ನಾದ್ರೂ ಓದೊ’ ಎಂದು ಅಮ್ಮ ನಗೆಯಾಡಿದ್ದಕ್ಕೆ ನಾನು ರೊಚ್ಚಿಗೆದ್ದು ಕಿರುಚಾಡಿ ಕಣ್ಣಲ್ಲಿ ನೀರು ತುಂಬಿಕೊಂಡು ಟಿ.ವಿ. ಒಡೆದುಹಾಕುವ ಬಗ್ಗೆ ಯೋಚಿಸಿದ್ದೆ.
1993-94ರಲ್ಲಿ ಹುಟ್ಟಿದ ನನ್ನ ಸಮಕಾಲೀನ ಹುಡುಗರೆಲ್ಲಾ
2011ರ ಆ ಅಮಾನವೀಯ ತಿಂಗಳುಗಳನ್ನು ಅನುಭವಿಸಿರುತ್ತಾರೆ. ಅತ್ತ ಭಾರತದಲ್ಲಿಯೇ ವಿಶ್ವಕಪ್ಪು, ಇತ್ತ ಇಡೀ ನಭೋಮಂಡಲವೇ ನಮ್ಮತ್ತ ತಿರುಗಿ ನೋಡುವ ದ್ವಿತೀಯ ಪಿಯುಸಿ ಪರೀಕ್ಷೆ! ಹೇಗೆ ಸ್ವಾಮಿ ತಡ್ಕೊಳ್ಳುತ್ತೆ ಜೀವ? ಆ ದಿನಗಳ ಕ್ರೂರತೆ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದರೂ ಒಂದು ಘಟನೆ ಮಾತ್ರ ಇಂದಿಗೂ ನನ್ನ ಬಗ್ಗೆ ನನಗೇ ಅಚ್ಚರಿ ಮೂಡಿಸುತ್ತದೆ. ಕೀನ್ಯಾ- ಜಿಂಬಾಬ್ವೆ ಪಂದ್ಯವನ್ನೂ ಕೂತು ನೋಡುವ ಹುಚ್ಚು ಕ್ರಿಕೆಟ್ ಪ್ರೇಮಿಯಾದ ನಾನು ಅಂದು ಇಕ್ಕಟ್ಟಿನಲ್ಲಿ ಸಿಲುಕಿದ್ದೆ. ಸರಿಯಾಗಿ ಓದಿಕೊಂಡಿರದ ಬಯಾಲಜಿ ಪರೀಕ್ಷೆ ಹಿಂದಿನ ದಿನವೇ ಭಾರತ- ಆಸ್ಟ್ರೇಲಿಯಾ ಕ್ವಾರ್ಟರ್ ಫೈನಲ್ ಪಂದ್ಯ! ಬಯಾಲಜಿಯ ಒಂದೊಂದೇ ಪುಟವನ್ನು ತಿರುವುತ್ತಾ ಹೋದಂತೆ ಅದರ ಅಗಾಧತೆಯು ಅರಿವಾಗಿ ಮೈ ನಡುಗಲು ಶುರುವಾಯಿತು. ಕಾಶಿಗೆ ಹೋದವರು ತಮ್ಮಿಷ್ಟದ ವಸ್ತುವನ್ನು ಬಿಟ್ಟು ಬರುತ್ತಾರೆ, ಅದರಿಂದ ಮನದ ಆಸೆಗಳು ಈಡೇರುತ್ತವೆ ಅಂತ ಯಾರೋ ಹೇಳಿದ್ದು ನೆನಪಾಯಿತು. ಆ ಕ್ಷಣಕ್ಕೆ ಅದೇನನ್ನಿಸಿತೋ ಏನೋ, “ಇವತ್ತಿನ ಮ್ಯಾಚು ಒಂದು ಬಾಲ… ಕೂಡಾ ನೋಡೋದಿಲ್ಲ, ಸ್ಕೋರ್ ಕೂಡಾ ಹೇಳಬೇಡಿ. ಮ್ಯಾಚ್ ನೋಡದಿದ್ರೆ ಮಾತ್ರ ಬಯಾಲಜಿ ಪರೀಕ್ಷೆ ಚೆನ್ನಾಗಾಗೋದು’ ಎಂದು ಅಪ್ಪ-ಅಮ್ಮನೆದುರು ಘೋಷಿಸಿಬಿಟ್ಟಿದ್ದೆ. ಇನ್ನೇನು ರಿಮೋಟು ಹಿಡಿದು ಕೂರುತ್ತಾನೆ, ಬಯ್ಯೋಣ ಎಂದು ತಯಾರಾಗಿದ್ದವರಿಗೆ ದಿಗ್ಭ್ರಮೆಯಾಗಿರಬೇಕು. ಒಟ್ಟಿನಲ್ಲಿ ಬಯಾಲಜಿಯ ಬ್ರಹ್ಮಾಂಡಸ್ವರೂಪಿ ಸಿಲೆಬಸ್ಸು ನೋಡಿ ಜಂಘಾಬಲವನ್ನೇ ಉಡುಗಿಸಿಕೊಂಡಿದ್ದ ನನಗೆ ಅತಿ ಇಷ್ಟದ ಕ್ರಿಕೆಟ್ಟನ್ನು ತ್ಯಾಗ ಮಾಡಿದರೆ ಪರೀಕ್ಷೆ ಚೆನ್ನಾಗಾಗುತ್ತದೆ ಎಂಬ ಮೂಢನಂಬಿಕೆ ಬಂದುಬಿಟ್ಟಿತ್ತು. ಮೈಯ ನರನಾಡಿಗಳೂ ಭಾರತ ಗೆದ್ದಿತೋ ಇಲ್ಲವೋ ಎಂಬುದನ್ನು ತಿಳಿಯಲು ಚಡಪಡಿಸುತ್ತಿದ್ದರೆ, ನಾನು ಮಾತ್ರ ಅವುಡುಗಚ್ಚಿ ಕಿವಿ-ಕಣ್ಣು ಮುಚ್ಚಿಕೊಂಡು ರಾತ್ರಿ ಕಳೆದು, ಬೆಳಗ್ಗೆ ಪೇಪರನ್ನೂ ಓದದೇ, ಕಾಲೇಜಿನಲ್ಲಿ ಯಾರ ಬಳಿಯೂ ಮಾತಾಡದಂತೆ ದೂರ ನಿಂತು, ಪರೀಕ್ಷೆ ಮುಗಿಸಿ, ಯಾರ ಬಳಿಯೂ ಚರ್ಚಿಸದೇ ಮನೆಗೆ ಬಂದು ಪೇಪರ್ ತಿರುವಿದರೆ ಭಾರತ, ಪಾಕಿಸ್ತಾನದ ವಿರುದ್ಧ ಸೆಮಿಫೈನಲ್
ಆಡಲು ಸಿದ್ಧವಾಗುತ್ತಿತ್ತು.
2015ರ ವಿಶ್ವಕಪ್ ಹೊತ್ತಿಗೆ ಎಂಜಿನಿಯಿರಿಂಗ್ ಕೊನೇ ಸೆಮಿಸ್ಟರ್‌ನಲ್ಲಿದ್ದೆ. ಏಳು ಸೆಮಿಸ್ಟರ್‌ಗಳನ್ನು ಸವೆಸಿ ಬಂದಿದ್ದರಿಂದ ಪರೀಕ್ಷೆಗಳ ಭಯ ಕಿಂಚಿತ್ತೂ ಇರಲಿಲ್ಲ. ಅಲ್ಲಿಯವರೆಗೆ ಒಬ್ಬಂಟಿಯಾಗಿಯೋ, ಅಪ್ಪನ ಜೊತೆಯೋ ಕುಳಿತು ಕ್ರಿಕೆಟ್ ನೋಡಿದವನಿಗೆ ಹಾಸ್ಟೆಲ್‌ನಲ್ಲಿ ಇಪ್ಪತ್ತು ಮೂವತ್ತು ಜನ ಒಂದೇ ಕೋಣೆಯಲ್ಲಿ ಕುಳಿತು ಪ್ರತೀ ಬೌಂಡರಿಗೂ ಕಿರುಚಾಡುತ್ತಾ, ಪ್ರತೀ ವಿಕೆಟ್ಟಿಗೂ ಡ್ಯಾ… ಮಾಡುತ್ತಾ ರಸಾಸ್ವಾದ ಮಾಡಿದ್ದು ಕಂಡು ಕ್ರಿಕೆಟ್ ಖಂಡಿತವಾಗಿಯೂ ಒಂದು ಧರ್ಮವೇ ಎಂದೆನ್ನಿಸಿತ್ತು.
ಇನ್ನೇನು ಒಂದು ವಾರದಲ್ಲಿ ಅಲ್ಲೆಲ್ಲೋ ದಾಂಡಿಗ, ಬ್ಯಾಟ್ ಕುಟ್ಟುವ ಸದ್ದು ಕಿವಿಗೆ ಬೀಳಬಹುದು. ಕಣ್ಣುಗಳೆಲ್ಲ ಆ ಮೈದಾನದಲ್ಲೇ ಅತ್ತಿತ್ತ ಅಲೆದಾಡಬಹುದು. ಟವಿ ಮುಂದೆ ಕುಳಿತ ಪುಟಾಣಿಗೆ, ಅಲುಗಾಡದೇ ಕುಳಿತರೆ, “ಹೋಗೋ, ಓದೊಳ್ಳೋ’ ಎಂಬ ಉಪದೇಶ ಕಿವಿಗೆ ಬೀಳದಿದ್ದರೆ ಸಾಕು ತಂದೆ…
– ಸಂಪತ್ ಸಿರಿಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.