ಮನೆ ಬಿಟ್ಟು ನೋಡು!
ಮನೆ ಬಿಡೋದಂದ್ರೆ ಅಷ್ಟು ಸುಲಭಾನ?
Team Udayavani, May 22, 2019, 6:00 AM IST
ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್ ಮಾಡೋದು ಒಂದೆಡೆಯಾದರೆ, ಹಾಲಿನವರಿಗೆ, ಪೇಪರ್‌ನವರಿಗೆ, ಕೆಲಸದವರಿಗೆ ಮುಂಚೆಯೇ ತಿಳಿಸೋದು, ಪ್ರಯಾಣದ ನಡುವೆ ಬಾಯಾಡಿಸಲು ಕುರುಕಲು ಕಟ್ಕೊಂಡು, ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು… ಅಬ್ಟಾ!
ಮನೆ ಬಿಡೋದು ಅಷ್ಟು ಸುಲಭ ಅಲ್ಲ! ಅಯ್ಯೋ, ಮನೆ ಬಿಟ್ಟು ದೇಶಾಂತರ ಓಡಿ ಹೋಗುವುದರ ಬಗ್ಗೆ ನಾನಿಲ್ಲಿ ಹೇಳ್ತಿಲ್ಲಾರೀ. ನಮಗೆ, ಅಂದರೆ ಗೃಹಿಣಿಯರಿಗೆ ಅಷ್ಟು ಸುಲಭವಾಗಿ ಮನೆ ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲ ಅಂತ ಹೇಳಿದ್ದು. ಉದಾಹರಣೆಗೆ, ಮುಂಜಾನೆಯ ವಾಕಿಂಗ್ ಅನ್ನೇ ತೆಗೆದುಕೊಳ್ಳಿ- ಗಂಡಸರಿಗಾದರೆ ಎದ್ದು, ಹಲ್ಲುಜ್ಜಿ, ಮುಖ ತೊಳೆದು, ಒಂದು ನೈಟ್‌ಪ್ಯಾಂಟು ಟಿ- ಶರ್ಟ್ ಏರಿಸಿಕೊಂಡು, ಮೊಬೈಲು ಜೇಬಿಗಿಳಿಸಿ ಹೊರಟರೆ ಮುಗಿಯಿತು. ಎಷ್ಟೊತ್ತಿಗೆ ವಾಪಸಾದರೂ ಯಾರು ಕೇಳುವವರಿದ್ದಾರೆ?
ಆದರೆ, ನಾವು? ಹೋಗೋಕೆ ಮುಂಚೆ, ಶಾಲೆ, ಕಾಲೇಜು, ಆಫೀಸಿಗೆ ಹೋಗುವ ಮನೆ ಮಂದಿಯ ಬೆಳಗ್ಗಿನ ತಿಂಡಿಗೆ ತಯಾರಿ ನಡೆಸಬೇಕು. ಚಪಾತಿ ಹಿಟ್ಟು ಕಲಸಿಡುವುದು, ಪಲ್ಯಕ್ಕೆ ತರಕಾರಿ ಹೆಚ್ಚಿಡುವುದು, ಒಗ್ಗರಣೆ ತಯಾರಿಸುವುದು, ಅಕ್ಕಿ ತೊಳೆದಿಡುವುದು, ಫಿಲ್ಟರ್ ಹಾಕಿ ಹಾಲು ಕಾಯಿಸಿಡುವುದು, ಹೀಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮುಗಿಸಿಯೇ ವಾಕಿಂಗ್‌ಗೆ ಹೊರಡಬೇಕಾಗುತ್ತೆ. ಅದಕ್ಕೋಸ್ಕರ ಮುಂಜಾನೆ ಇನ್ನೂ ಸ್ವಲ್ಪ ಬೇಗ ಏಳಬೇಕು. ವಾಕಿಂಗ್ ಹೋಗುವಾಗಲೂ, ಮಕ್ಕಳು ಎದ್ದಿದ್ದಾರೋ ಇಲ್ಲವೋ ಅಂತ ಮೊಬೈಲ್ ಕಾಲ್ ಮಾಡಿ ಅವರನ್ನು ಎಚ್ಚರಿಸಬೇಕು. ತಾಪತ್ರಯಗಳು ಒಂದೇ ಎರಡೇ?
ಮುಂಜಾನೆ ಸ್ವಲ್ಪ ಮಾರ್ಕೆಟ್ ಕಡೆಗೆ ಹೋಗಬೇಕೆಂದರೂ ಅಷ್ಟರೊಳಗೆ ಬೆಳಗ್ಗೆ ಟಿಫಿನ್, ಮಧ್ಯಾಹ್ನದ ಅಡುಗೆ ಕೆಲಸಗಳನ್ನೆಲ್ಲಾ ಚಕಚಕ ಅಂತ ಉಸಿರು ಬಿಗಿಹಿಡಿದು ಮುಗಿಸಬೇಕು. ಕೆಲಸದವಳಿಗೆ ಬರಲು ಹೇಳಬೇಕು, ಅಕಸ್ಮಾತ್ ಗ್ಯಾಸ್ ಬಿಲ್ ಮೆಸೇಜ್ ಬಂದಿದ್ದರೆ, ಎಷ್ಟು ಹೊತ್ತಿಗೆ ಬರುತ್ತಾನೋ ಎಂದು ಅವನಿಗೆ ಕಾಯಬೇಕು, ಕುಡಿವ ನೀರು ಬಿಟ್ಟರೆ ಏನು ಮಾಡುವುದು? ನಲ್ಲಿಗಳನ್ನೆಲ್ಲ ಆಫ್ ಆಗಿವೆಯಾ, ಗ್ಯಾಸ್ ಬಂದ್ ಮಾಡಿದ್ದೇನಾ, ಹಾಲು ಕಾಯಿಸಿದೆಯಾ?- ಹೀಗೆ ಎಷ್ಟೆಲ್ಲ ಕಡೆ ಕಣ್ಣು ಹಾಯಿಸಬೇಕು. ಪಕ್ಕದ ಮನೆಯವರಿಗೆ ಮರೆಯದೆ ಮನೆಯ ಕೀ ಕೊಟ್ಟು, “ನಮ್ಮ ಮನೆಯವರು ಬಂದಾಗ ಕೊಡಿ’ ಎಂದು ಹೇಳಿ ಬರುವುದು ಇದ್ದಿದ್ದೇ.
ಇನ್ನು ಕೆಲವೊಮ್ಮೆ, ಹೊರಗೆ ಹೊರಟ ಸಮಯಕ್ಕೆ ಸರಿಯಾಗಿ ಅತಿಥಿಗಳು ಹಾಜರ್! ಅದೂ ಬಲು ಹತ್ತಿರದವರು, ಮುಖ್ಯವಾದವರೇ ಬಂದಿರುತ್ತಾರೆ. ಏನೂ ಹೇಳುವ ಹಾಗಿಲ್ಲ, ಬಿಡುವ ಹಾಗಿಲ್ಲ ಎಂಬ ಪರಿಸ್ಥಿತಿ. ಅವರ ಅತಿಥಿ ಸತ್ಕಾರ ಮುಗಿಸಿ ಕಳಿಸುವ ಹೊತ್ತಿಗೆ ಹೊರಗೆ ಹೋಗುವ ನಮ್ಮ ಕಾರ್ಯಕ್ರಮ ಒಂದೋ ಕ್ಯಾನ್ಸಲ್ ಆಗಿರುತ್ತದೆ, ಇಲ್ಲಾ ಏರುಪೇರಾಗಿರುತ್ತದೆ.
ಖುಷಿಯ ನಡುವಿನ ಧಾವಂತ
ಕೆಲವೊಮ್ಮೆ ಯಜಮಾನರು ಇದ್ದಕ್ಕಿದ್ದಂತೆ ಸಂಜೆ ಬೇಗ ಬಂದು, ಬೇಗ ರೆಡಿಯಾಗಿ, ಎಲ್ಲರೂ ಸಿನಿಮಾಕ್ಕೋ, ಹೋಟೆಲ್‌ಗೋ ಹೋಗೋಣ ಎಂದಾಗ, ಖುಷಿ ಪಡುವುದಕ್ಕಿಂತ ಮೊದಲು ನೆನಪಾಗುವುದು ಹೋಟೆಲ್ ಊಟ ಒಲ್ಲದ, ಸಿನಿಮಾಕ್ಕೆ ಬರಲೊಪ್ಪದ ಅತ್ತೆ ಮಾವನಿಗೆ ಅಡುಗೆ ಏನು ಮಾಡುವುದು ಅಂತ. ಅವರಿಗೆ ಎಲ್ಲ ರೆಡಿ ಮಾಡಿ, ಮನೆ ಬಾಗಿಲುಗಳನ್ನೆಲ್ಲಾ ಹಾಕಿ, ಮಕ್ಕಳಿಗೆ ಬೇಕಾದ ಸಾಮಾನು ತೆಗೆದುಕೊಂಡು, ಒಂದು ಸಿಕ್ಕರೆ ಮತ್ತೂಂದು ಸಿಗದಂತೆ ಕಳೆದು ಹೋಗಿರುವ ರಾಶಿ ಬಟ್ಟೆಗಳ ನಡುವೆ, ನಮ್ಮ ಬಟ್ಟೆಗಳನ್ನು ಹುಡುಕಾಡಿ ಹಾಕಿಕೊಂಡು ಹೊರಡುವ ಹೊತ್ತಿಗೆ ಯಜಮಾನರು, “ಏನ್ ಹೆಂಗಸ್ರೋ? ರೆಡಿಯಾಗೋಕೆ ಎಷ್ಟು ಟೈಮ್ ತೆಗೆದುಕೊಳ್ತಾರೆ’ ಎಂದು ಸಿಡಿಸಿಡಿ ಎನ್ನುತ್ತಿರುತ್ತಾರೆ.
ಒಬ್ಬರೇ ಹೋಗಲಾದೀತೇ?
ಗಂಡ ಮಕ್ಕಳನ್ನು ಬಿಟ್ಟು ನಾವೊಬ್ಬರೇ ಎಲ್ಲಿಗಾದರೂ ದೂರ ಹೊರಡುವಾಗಿನ ಗಡಿಬಿಡಿ ಮತ್ತೂಂದು ರೀತಿಯದು. ಮೂರು ದಿನಕ್ಕಾಗುವಷ್ಟು ದೋಸೆ ಹಿಟ್ಟು ರುಬ್ಬಿಟ್ಟು, ಎರಡು ದಿನಕ್ಕಾಗುವಷ್ಟು ತಿಳಿಸಾರು ಮಾಡಿ, ಅನ್ನಕ್ಕೆ, ಚಪಾತಿಗೆ ಕಲಸಿಕೊಳ್ಳಲು ಎರಡು ಮೂರು ರೀತಿಯ ಚಟ್ನಿಪುಡಿ ಮಾಡಿಟ್ಟು, ಅವುಗಳನ್ನು ಇಟ್ಟಿರುವ ಜಾಗವನ್ನು ಯಜಮಾನರಿಗೆ ಪರಿಚಯ ಮಾಡಿಯೇ ಹೊರಡಬೇಕು. ಇಲ್ಲದಿದ್ದರೆ ಊರಿನಲ್ಲಿ ನೆಮ್ಮದಿಯಾಗಿ ಅಮ್ಮ, ಅಕ್ಕ ತಂಗಿಯರ ಜೊತೆಗೆ ಹರಟಲೂ ಬಿಡದೆ, ಅದೆಲ್ಲಿ, ಇದೆಲ್ಲಿ ಅಂತಾ ಇಪ್ಪತ್ತು ಸಲ ಫೋನು ಮಾಡಿ ತಲೆ ತಿಂದು ಬಿಡುತ್ತಾರೆ. ಅದೇ ಅವರು ಊರಿಗೆ ಹೋದಾಗ ನಾವೇನಾದರೂ ಅಪ್ಪಿ ತಪ್ಪಿ ಫೋನು ಮಾಡಿದರೆ, “ಸಮಯ, ಸಂದರ್ಭ ಗೊತ್ತಾಗೋದಿಲ್ವಾ?’ ಅಂತ ಪಟ್ ಅಂತ ಗದರಿಬಿಡುತ್ತಾರೆ.
ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್ ಮಾಡುವುದು ಒಂದೆಡೆಯಾದರೆ, ಹಾಲಿನವರಿಗೆ, ಪೇಪರ್‌ನವರಿಗೆ, ಕೆಲಸದವರಿಗೆ ಮುಂಚೆಯೇ ತಿಳಿಸುವುದು, ಫ್ರಿಡ್ಜ್ನಲ್ಲಿರುವ ತರಕಾರಿ, ಹಾಲು, ಮೊಸರನ್ನು ಖಾಲಿ ಮಾಡುವುದು, ಪ್ರಯಾಣದ ನಡುವೆ ಬಾಯಾಡಿಸಲು ಕುರುಕಲು, ತಿಂಡಿ, ಊಟ ಕಟ್ಟಿಕೊಂಡು, ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು… ಅಬ್ಟಾ! ಉಸ್ಸಪ್ಪಾ ಎನಿಸಿಬಿಡುತ್ತದೆ. ಹೋಗೋಕೆ ಹಿಂದಿನ ಎರಡು ದಿನ, ಬಂದ ನಂತರದ ಎರಡು ದಿನ ಕೆಲಸಗಳ ರಾಶಿಯೇ ಬಿದ್ದಿರುತ್ತದೆ. ಒಮ್ಮೊಮ್ಮೆ ಊರೂ ಬೇಡಾ, ಕೇರೀನೂ ಬೇಡಾ, ತಣ್ಣಗೆ ಮನೆಯಲ್ಲಿದ್ದು ಬಿಡೋಣ ಎನಿಸುವುದುಂಟು. ಮನೆಯನ್ನು ನಾವು ಬಿಟ್ಟರೂ, ಮನೆ ನಮ್ಮನ್ನು ಬಿಡುವುದಿಲ್ಲ. ಅದಕ್ಕೇ ಹೇಳಿದ್ದು- ಹೆಂಗಸರಿಗೆ ಮನೆ ಬಿಟ್ಟು ಹೊರಡುವುದೆಂದರೆ ಸುಲಭವಲ್ಲ ಅಂತ… ನಿಮಗೇನನ್ನಿಸುತ್ತದೆ?
– ನಳಿನಿ ಟಿ. ಭೀಮಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.