ಮ್ಯಾಂಗೊ ಮೂಡ್
Team Udayavani, May 22, 2019, 6:00 AM IST
ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ ಸವಿದು ಸಂಭ್ರಮಿಸಬಹುದು. ಜೊತೆಗೆ ಜ್ಯೂಸು, ಹಲ್ವ, ರಸಾಯನ ಮುಂತಾದ ಸಿಹಿ ಪದಾರ್ಥಗಳನ್ನೂ ಮಾಡಬಹುದು. ಇನ್ನು ಕಾಯಿಯಿಂದಲೂ ಅಷ್ಟೇ ವಿಧಧ ವ್ಯಂಜನಗಳನ್ನು ತಯಾರಿಸಲು ಸಾಧ್ಯವಿದೆ.
1.ಮಾವಿನಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಸಿಪ್ಪೆ, ಓಟೆ ತೆಗೆದ ಮಾವಿನಕಾಯಿ, ಅಚ್ಚ ಖಾರದ ಪುಡಿ, ಅರಿಶಿನ, ಚಿಟಿಕೆ ಇಂಗು, ಒಂದು ಚಮಚ ಹೆರೆದ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಮಾವಿನ ತಿರುಳನ್ನು ತುಸು ನೀರು ಹಾಕಿ ಕುಕ್ಕರ್‌ನಲ್ಲಿ, ಒಂದು ವಿಸಿಲ… ಕೂಗಿಸಿ ಬೇಯಿಸಿಕೊಳ್ಳಿ. ಬೆಂದ ತಿರುಳನ್ನು ಚೆನ್ನಾಗಿ ಕಿವುಚಿ. ನಂತರ, ಸಾಸಿವೆ ಸಿಡಿಸಿ, ಅರಿಶಿನ ಪುಡಿ, ಇಂಗು ಹಾಕಿ ಒಗ್ಗರಣೆ ಸಿಡಿಸಿ. ಅದಕ್ಕೆ ಮಾವಿನ ತಿರುಳು, ಅಚ್ಚ ಖಾರದ ಪುಡಿ, ಉಪ್ಪುಹಾಕಿ ಚೆನ್ನಾಗಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಯಲು ಬಿಡಿ. ಖಾರದ ಘಾಟು ಹೋಗುತ್ತಿದ್ದಂತೆಯೇ, ಬೆಲ್ಲದ ಪುಡಿ ಬೆರೆಸಿ, ಮತ್ತೂಂದು ಸುತ್ತು ಕೈಯಾಡಿಸಿ, ಬಾಣಲಿ ಮುಚ್ಚಿ, ಉರಿ ನಂದಿಸಿ. ಹದವಾದ ಗೊಜ್ಜನ್ನು ಅನ್ನ, ದೋಸೆ, ಚಪಾತಿ ಜೊತೆಗೆ ಸವಿಯಬಹುದು.
2. ಮಾವಿನಕಾಯಿ ತೊವ್ವೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಮಾವಿನಕಾಯಿ, ಹೆಸರುಬೇಳೆ- ಕಾಲು ಕಪ್, ತೊಗರಿಬೇಳೆ- ಕಾಲು ಕಪ್, ಸಣ್ಣಗೆ ಹೆಚ್ಚಿದ ಟೊಮೇಟೊ-ಕಾಲು ಕಪ್, ಹಸಿ ಮೆಣಸು- 4, ಅರಿಶಿನಪುಡಿ, ಚಿಟಿಕಿ ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ : ಕುಕ್ಕರ್ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ ಸಿಡಿಸಿ, ಅರಿಶಿನ, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು, ಮಾವಿನಕಾಯಿ, ಟೊಮೇಟೊ, ಹಸಿಮೆಣಸು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಹೆಸರು ಮತ್ತು ತೊಗರಿ ಬೇಳೆಗಳನ್ನು ನೀರಿನಲ್ಲಿ ತೊಳೆದು ಕುಕ್ಕರ್‌ಗೆ ಹಾಕಿ, ಉಪ್ಪು ಸೇರಿಸಿ ಮೂರು ಕಪ್ ನೀರುಹಾಕಿ ಚೆನ್ನಾಗಿ ಬೆರೆಸಿ, ಕುಕ್ಕರ್ ಮುಚ್ಚಿ, ಮಧ್ಯ ಉರಿಯಲ್ಲಿ ಮೂರು ವಿಷಿಲ್ ಕೂಗಿಸಿ.
3.ಮಾವು-ಸಿಹಿಕುಂಬಳ ಹಸಿಕೂಟು
ಬೇಕಾಗುವ ಸಾಮಗ್ರಿ: ಮಾವಿನ ಹೋಳು- 1 ಕಪ್, ಸಿಹಿ ಕುಂಬಳಕಾಯಿ ಹೋಳು- 1 ಕಪ್, ಹೆಸರು ಕಾಳು- 1 ಕಪ್, ತೆಂಗಿನ ತುರಿ- ಕಪ್, ಕಾಳುಮೆಣಸು- 1/2 ಚಮಚ, ಜೀರಿಗೆ- 1ಚಮಚ, ಉಪ್ಪು.
ಮಾಡುವ ವಿಧಾನ: ಕುಕ್ಕರ್‌ನಲ್ಲಿ ಮಾವು, ಕುಂಬಳಕಾಯಿ, ಹೆಸರುಕಾಳು ಹಾಕಿ, ಐದು ಲೋಟ ನೀರು ಹಾಕಿ ಬೇಯಿಸಿ. ತೆಂಗಿನತುರಿ ಯೊಂದಿಗೆ ಮೆಣಸು, ಜೀರಿಗೆ ಸೇರಿಸಿ ರುಬ್ಬಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬೆಂದ ಪದಾರ್ಥಕ್ಕೆ ಅರೆದ ಹಸಿಖಾರವನ್ನು ಸೇರಿಸಿ ಮಧ್ಯ ಉರಿಯಲ್ಲಿ ಹತ್ತು ನಿಮಿಷ ಕುದಿಸಿ, ಉರಿ ನಂದಿಸಿ. ನಂತರ ಅದಕ್ಕೆ ಕೊತ್ತಬರಿಸೊಪ್ಪು ಹಾಕಿ.
4. ಮಾವಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ : ತುರಿದ ಮಾವಿನಕಾಯಿ- ಕಾಲು ಕಪ್, ಕಡಲೆಬೇಳೆ- ಅರ್ಧ ಕಪ್, ಒಣಮೆಣಸು- 8, ಉಪ್ಪು.
ಮಾಡುವ ವಿಧಾನ: ಬಾಣಲಿಗೆ ಎಣ್ಣೆ ಹಾಕದೆ, ಕಡಲೆಬೇಳೆ, ಒಣಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಂದು ತಟ್ಟೆಯಲ್ಲಿ ಆರಲು ಬಿಡಿ. ಅದೇ ಬಾಣಲೆಯ ಬಿಸಿಯಲ್ಲೇ ತುರಿದ ಮಾವಿನಕಾಯಿ ಹಾಕಿ ಬಾಡಿಸಿ, ಬೇಳೆಯ ಮಿಶ್ರಣಕ್ಕೆ ಸೇರಿಸಿ. ತಣಿದ ನಂತರ ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಅರೆದರೆ ಮಾವಿನ ಕಾಯಿ ಚಟ್ನಿ ರೆಡಿ. ಇದಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆ.
5. ದಿಢೀರ್ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ- 1 ಕಪ್, ಎರಡು ಚಮಚ ಅಚ್ಚ ಖಾರದ ಪುಡಿ, ಪುಡಿ ಉಪ್ಪು, ಸಾಸಿವೆ, ಎಣ್ಣೆ, ಇಂಗು.
ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಮಾವಿನಕಾಯಿಯನ್ನು ಪಿಂಗಾಣಿ ಪಾತ್ರೆಗೆ ಹಾಕಿಡಿ. ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ. ನಂತರ ಒಂದು ಸೌಟು ಅಡುಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಒಂದು ಚಮಚ ಇಂಗು ಸೇರಿಸಿ, ಈ ಒಗ್ಗರಣೆಯನ್ನು ಖಾರದ ಪುಡಿಯ ಮೇಲೆ ಹಾಕಿ, ತೇವಾಂಶವಿರದ ಚಮಚದಿಂದ ಉಪ್ಪು, ಖಾರ, ಮಾವಿನ ಹೋಳುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ, ಅರ್ಧ ಗಂಟೆ ಮುಚ್ಚಿಟ್ಟು ಬಿಡಿ. ಉಪ್ಪಿನಕಾಯಿ ವಾರಗಳ ಕಾಲ ಉಳಿಯುತ್ತದೆ.
-ಕೆ.ವಿ.ರಾಜಲಕ್ಷ್ಮೀ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.