ಅಬ್ಬಬ್ಟಾ ಎಂದರೆ 15 ದಿನಗಳಿಗಷ್ಟೆ ನೀರು
ಬಂಟ್ವಾಳಕ್ಕೂ ತಟ್ಟಿದ ನೀರಿನ ಬರ
Team Udayavani, May 23, 2019, 6:00 AM IST
ಬತ್ತಿ ಹೋಗಿರುವ ನೇತ್ರಾವತಿ ನದಿ.
ಬಂಟ್ವಾಳ: ತನ್ನ ವ್ಯಾಪ್ತಿಯ ಬಹುತೇಕ ಪ್ರದೇಶವನ್ನು ಜೀವನದಿ ನೇತ್ರಾವತಿಯ ಒಡಲಲ್ಲೇ ಇಟ್ಟುಕೊಂಡಿರುವ ಬಂಟ್ವಾಳ ಪುರಸಭೆಗೆ ಇದೇ ಮೊದಲ ಬಾರಿಗೆ ನೀರಿನ ಅಭಾವ ಎದುರಾಗಿದ್ದು, ಬಂಟ್ವಾಳದ ನೀರಿನ ಮೂಲವಾದ ನದಿ ಯಲ್ಲಿ ನೀರು ಬತ್ತಿ ಹೋಗಿದೆ. ಅಬ್ಬಬ್ಟಾ ಎಂದರೆ ಮುಂದೆ 15 ದಿನಗಳಿಗಾಗುಷ್ಟು ಮಾತ್ರ ನೀರು ಲಭ್ಯವಾಗಲಿದೆ.
ಇದೇ ಮೊದಲ ಬಾರಿ
ಸಾಮಾನ್ಯವಾಗಿ ನಗರ ಪ್ರದೇಶಗಳಿಗೆ ನದಿಯಿಂದ ನೀರು ಲಿಫ್ಟ್ ಮಾಡುವುದಾದರೆ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾ ಗುತ್ತಿದ್ದು, ಆದರೆ ಬಂಟ್ವಾಳಕ್ಕೆ ಕೇವಲ ಜಾಕ್‌ವೆಲ್ ಮೂಲಕವೇ ಬೇಕಾದಷ್ಟು ನೀರನ್ನು ಪಡೆಯಲಾಗುತ್ತಿತ್ತು. ಅಂದರೆ ನೀರಿನ ವಿಚಾರದಲ್ಲಿ ಬಂಟ್ವಾಳ ನಗರ ಯಾವುದೇ ತೊಂದರೆಗೆ ಒಳಗಾಗಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿ ಇಂತಹ ಸಮಸ್ಯೆ ಸೃಷ್ಟಿಯಾಗಿದೆ. ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಾಕ್‌ವೆಲ್ ಮೂಲಕ ನದಿಯಿಂದ ನೀರು ಲಿಫ್ಟ್ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಅಲ್ಲಿ ನೀರು ಪೂರ್ತಿ ಖಾಲಿಯಾಗಿದೆ.
ಹೀಗಾಗಿ ಅಲ್ಲಲ್ಲಿ ಹೊಂಡಗಳಲ್ಲಿ ಇರುವ ನೀರನ್ನು ಹಿಟಾಚಿ ಮೂಲಕ ಅಡೆತಡೆಗಳನ್ನು ತೆರವುಗೊಳಿಸಿ ಜಾಕ್‌ವೆಲ್‌ನ ಬಳಿಗೆ ಹರಿಸಲಾಗುತ್ತಿದೆ. ಡ್ರಜ್ಜಿಂಗ್ ಮೂಲಕವೂ ನೀರನ್ನು ಪಂಪ್ ಮಾಡಲಾಗುತ್ತಿದೆ. ಈ ರೀತಿಯಲ್ಲಿ ಪ್ರಯತ್ನ ಪಟ್ಟರೆ ಮುಂದೆ 15 ದಿನಗಳವರೆಗೆ ನೀರನ್ನು ಕೊಡಬಹುದಾಗಿದೆ. ನೀರು ಲಭ್ಯವಾಗುತ್ತಿದ್ದ ದಿನಗಳಲ್ಲಿ ನದಿಯಿಂದ ಸುಮಾರು 9 ಎಂಎಲ್‌ಡಿ ನೀರನ್ನು ಲಿಫ್ಟ್ ನಾಡಲಾಗುತ್ತಿದ್ದು, ಪ್ರಸ್ತುತ ಕೇವಲ 7 ಎಂಎಲ್‌ಡಿ ನೀರನ್ನು ಪಡೆಯುವುದಕ್ಕೆ ಮಾತ್ರ ಸಾಧ್ಯವಾಗುತ್ತಿದೆ.
ಹಳೆಯ ಜಾಕ್‌ವೆಲ್ ಕಾರ್ಯಾರಂಭ!
ಬಂಟ್ವಾಳ ನಗರಕ್ಕೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಬಾರಿ ಜಕ್ರಿಬೆಟ್ಟಿನಲ್ಲಿ ನೂತನ ಜಾಕ್‌ವೆಲ್ ನಿರ್ಮಿಸಲಾಗಿತ್ತು. ಹೀಗಾಗಿ ಬಡ್ಡಕಟ್ಟೆಯಲ್ಲಿರುವ ಹಳೆಯ ಜಾಕ್‌ವೆಲ್‌ನ ಕಾರ್ಯವನ್ನು ಸ್ಥಗಿತಗೊಳಿ ಸಲಾಗಿತ್ತು. ಆದರೆ ಪ್ರಸ್ತುತ ನೂತನ ಜಾಕ್‌ವೆಲ್‌ನ ಸುತ್ತಮುತ್ತ ನೀರಿನ ಅಭಾವ ಎದುರಾಗಿರುವುದರಿಂದ ಹಳೆಯ ಜಾಕ್‌ವೆಲ್ ಕೂಡ ಕಾರ್ಯಾರಂಭಗೊಂಡಿದೆ. ಮೆಸ್ಕಾಂ ಇದರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರೂ, ಪುರಸಭೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರನ್ನು ಲಿಫ್ಟ್ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ಗಂಟೆ ಮಾತ್ರ ಲಿಫ್ಟ್
ಹಿಂದೆ ನದಿಯಲ್ಲಿ ನೀರು ಹೇರಳವಾಗಿ ಲಭ್ಯವಾಗುತ್ತಿದ್ದ ಸಂದರ್ಭ ಪುರಸಭೆಯು ಪ್ರತಿದಿನ 15 ಗಂಟೆಗಳ ಕಾಲ ನದಿಯಿಂದ ನೀರನ್ನು ಲಿಫ್ಟ್ ಮಾಡುತ್ತಿದ್ದು, ಈಗ ಕೇವಲ 10 ಗಂಟೆಗಳ ಕಾಲ ಮಾತ್ರ ನೀರೆತ್ತಲು ಸಾಧ್ಯವಾಗುತ್ತಿದೆ. ಅಂದರೆ 9 ಎಂಎಲ್‌ಡಿಯ ಬದಲಾಗಿ 7 ಎಂಎಲ್‌ಡಿ ನೀರನ್ನು ಲಿಫ್ಟ್ ಮಾಡಲಾಗುತ್ತಿದ್ದು, ಪ್ರತಿಯೊಬ್ಬರಿಗೂ 135 ಲೀ. ನೀರು ನೀಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಹೂಳು ತೆಗೆಯದೆ ಸಮಸ್ಯೆ
ಬಂಟ್ವಾಳ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ನೇತ್ರಾವದಿ ನದಿ ಹರಿಯುತ್ತಿದೆ. ಆದರೆ ನದಿ ಕಿನಾರೆಯ ಪ್ರದೇಶಗಳಲ್ಲೇ ನೀರಿನ ಸಮಸ್ಯೆ ಎದುರಾಗುತ್ತಿದೆ. ಅಂದರೆ ನದಿಯಲ್ಲಿ ಪೂರ್ತಿ ಹೂಳು ತುಂಬಿದ್ದು, ಅದನ್ನು ತೆಗೆಯದೇ ಇರುವ ಕಾರಣದಿಂದ ನದಿ ಆಳವಿಲ್ಲದೆ ನೀರು ನೇರವಾಗಿ ಸಮುದ್ರಕ್ಕೆ ಹರಿಯುತ್ತಿದೆ ಎಂದು ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಆರೋಪಿಸುತ್ತಾರೆ.
ಕೆಲವು ವರ್ಷಗಳ ಹಿಂದೆ ನದಿಯಲ್ಲಿ ಅಣೆಕಟ್ಟು ಇಲ್ಲದೇ ಇರುವ ಸಂದರ್ಭ ಸರಕಾರದಿಂದಲೇ ನದಿಯ ಹೂಳು ತೆಗೆಯುವ ಕಾರ್ಯ ನಡೆಯುತ್ತಿತ್ತು. ಆದರೆ ಈಗ ಸರಕಾರವಾಗಲಿ, ಅಣೆಕಟ್ಟಿನವರಾಗಲಿ ಹೂಳು ತೆಗೆಯುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ನದಿ ಆಳವಿಲ್ಲದೆ ನೀರು ನದಿಯಲ್ಲಿ ನಿಲ್ಲುತ್ತಿಲ್ಲ ಎಂದು ತುಂಗಪ್ಪ ಬಂಗೇರ ಅವರು ಆರೋಪಿಸಿದ್ದಾರೆ.
ದುರ್ಬಳಕೆ ನಿಲ್ಲಲಿ
ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದ ಅಡೆತಡೆಗಳನ್ನು ತೆರವುಗೊಳಿಸಿ ನೀರನ್ನು ಹರಿಸಲಾಗುತ್ತಿದ್ದು, ಮುಂದೆ 15 ದಿನಗಳಿಗಾಗುವಷ್ಟು ನೀರು ನದಿಯಲ್ಲಿ ಲಭ್ಯವಿದೆ. ಪ್ರಸ್ತುತ 7 ಎಂಎಲ್‌ಡಿ ನೀರು ಲಿಫ್ಟ್ ಮಾಡಿ, ಪ್ರತಿಯೊಬ್ಬರಿಗೂ ದಿನಕ್ಕೆ 135 ಲೀ.ನಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಜನತೆ ನೀರಿನ ದುರ್ಬಳಕೆಯನ್ನು ನಿಲ್ಲಿಸಬೇಕಿದೆ.
– ಡೊಮಿನಿಕ್ ಡಿಮೊಲ್ಲೊ, ಎಂಜಿನಿಯರ್, ಬಂಟ್ವಾಳ ಪುರಸಭೆ
ಅಶುದ್ಧ: ಆರೋಪ
ಜಕ್ರಿಬೆಟ್ಟಿನಲ್ಲಿ ನದಿಯಿಂದ ಲಿಫ್ಟ್ ಮಾಡಿದ ನೀರನ್ನು ಶುದ್ಧೀಕರಿಸದೆ ಜನರಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಆದರೆ ಅದನ್ನು ಪುರಸಭೆಯ ಎಂಜಿನಿಯರ್‌ಗಳು ಅಲ್ಲಗಳೆಯುತ್ತಿದ್ದಾರೆ. ನದಿಯಿಂದ ಲಿಫ್ಟ್ ಮಾಡಿದ ನೀರನ್ನು ಏರಿಯೇಟ್‌ಗೆ ಹಾಕಿ ಬಳಿಕ ಕ್ಲೆರಿಟ್ ಫ್ಲೊಕೇಟರ್ ಮೂಲಕ ರ್ಯಾಪಿಡ್ ಸ್ಯಾಂಡ್ ಫಿಲ್ಟರ್‌ಗೆ ಹಾಕಿ ಮುಂದೆ ಕ್ಲೊರಿನೇಶನ್ ಮಾಡಿ, ಬ್ಲೀಚಿಂಗ್ ಫೌಡರ್ ಹಾಗೂ ಪಿಎಸಿ ಹಾಕಲಾಗುತ್ತದೆ. ಆದರೆ ಕ್ಲೋರಿನ್ ಅಂಶ ಹೆಚ್ಚಾದರೂ ಸಮಸ್ಯೆಯಾಗುತ್ತಿದ್ದು, ನೀರಿನ ವಾಸನೆ ಬದಲಾಗುತ್ತದೆ ಎಂದು ಪುರಸಭಾ ಕಿರಿಯ ಎಂಜಿನಿಯರ್ ಡೊಮಿನಿಕ್ ಡಿಮೊಲ್ಲೊ ಅಭಿಪ್ರಾಯಿಸುತ್ತಾರೆ.
- ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.