ನಂದಿಬೆಟ್ಟದಲ್ಲಿ ಪ್ರವಾಸಿಗರಿಗೆ ಮಾವಿನ ಘಮಲು
Team Udayavani, May 26, 2019, 3:00 AM IST
ಚಿಕ್ಕಬಳ್ಳಾಪುರ: ಬನ್ನಿ ಸರ್ ಬನ್ನಿ..ಬಾದಾಮಿ ಬೇಕಾ..ಮಲ್ಲಿಕಾ ಬೇಕಾ? ತೋತಾಪುರಿ ಒಮ್ಮೆ ರುಚಿ ನೋಡಿ ಸಾರ್..ಕೈಗೆಟುಕುವ ಬೆಲೆಗೆ ಮಾವಿನ ಹಣ್ಣು ಸಿಗುತ್ತೆ. ಮಲಗೋವಾ ಕೊಡೋಣ..ಇಲ್ಲ ಸಿಂಧೂರ, ರಸಪೂರ ಮನೆಗೆ ತಗೊಳ್ಳಿ ಸರ್..
ಹೌದು, ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾಡಳಿ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ತಾಲೂಕಿನ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಆಯೋಜಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟದ ವೇಳೆ ಬೆಟ್ಟಕ್ಕೆ ಹೆಜ್ಜೆ ಹಾಕಿದ್ದ ಪ್ರವಾಸಿಗರಿಗೆ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳ ರಾಜ ಮಾವಿನ ತರಹೇವಾರಿ ಘಮಲು ಘಮಘಮಿಸಿ ಮೂಗಿಗೆ ಬಡಿಯುತ್ತಿತ್ತು.
ಮಾವು ಮಾರಾಟ ಮತ್ತು ಪ್ರದರ್ಶನಕ್ಕೆ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂತರ್ಜಲ ಬತ್ತಿದ್ದರೂ ಬರದ ನಾಡಲ್ಲಿ ರೈತರು ಬೆಳೆಯುವ ಸ್ವಾದಿಷ್ಟ ಹಣ್ಣುಗಳಾದ ಮಲಗೋವಾ, ದೇಶರಿ, ಬೆಂಗಳೂರ್, ಮಲ್ಲಿಕಾ, ತೋತಾಪುರ, ನಿಲಂ, ಬಾದಾಮಿ, ಸಿಂಧೂರ, ರಸಪೂರಿ ಮತ್ತಿತರ ತರಹೇವಾರಿ ಮಾವಿನ ಹಣ್ಣುಗಳು ಗ್ರಾಹಕರನ್ನು ಕೈ ಬೀಸಿ ಕರೆದವು.
ಗಮನ ಸೆಳೆದ ಮಾವು ಮೇಳ: ಏಷ್ಯಾಖಂಡದಲ್ಲಿಯೇ ಮಾವು ಬೆಳೆ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿದ್ದು, ಜಿಲ್ಲೆಯ ಮಾವು ಬೆಳೆಗಾರರಿಗೆ ಮಾವು ಮಾರಾಟಕ್ಕಾಗಿ ನೇರ ಮಾರುಕಟ್ಟೆ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ನೇರವಾಗಿ ಗ್ರಾಹಕರಿಗೆ ಹಣ್ಣು ಮಾರಾಟ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಎರಡು ದಿನಗಳ ಕಾಲ ಮಾವು ಮೇಳ ಆಯೋಜಿಸಿ ಮಾವು ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ರಜೆಯಾಗಿರುವ ಶನಿವಾರ, ಭಾನುವಾರ ಮಾವು ಮೇಳ ಏರ್ಪಡಿಸಿರುವುದರಿಂದ ಖರೀದಿ ಭರಾಟೆ ಜೋರಾಗಿದೆ.
ಮೇಳದಲ್ಲಿ 15 ಮಳಿಗೆಗಳು: ನಂದಿಬೆಟ್ಟದಲ್ಲಿ ಒಟ್ಟು 7 ಮಳಿಗೆಗಳು ಹಾಗೂ ನಗರದ ಹೊರ ವಲಯದ ಚದಲುಪುರ ಕ್ರಾಸ್‌ನಲ್ಲಿ ಒಟ್ಟು 8 ಮಳಿಗೆ ಸೇರಿ 15 ಮಳಿಗೆಗಳನ್ನು ಮೇಳದಲ್ಲಿ ಸ್ಥಾಪಿಸಲಾಗಿದ್ದು, ರೈತರೇ ಮುಂದೆ ನಿಂತು ಮೇಳದಲ್ಲಿ ಆಗಷ್ಟೇ ಕೊಯ್ಲು ಮಾಡಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.
ವಿಶೇಷ ಎಂದರೆ ಯಾವುದೇ ರಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಇಲ್ಲಿ ಪ್ರವೇಶ ಇಲ್ಲ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಮತ್ರ ತಂದು ಜಿಲ್ಲೆಯ ಮಾವು ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.
ನೇರವಾಗಿ ಮಾರಾಟ ವ್ಯವಸ್ಥೆ: ಮಾವು ಮೇಳದಲ್ಲಿ ಇಷ್ಟೇ ಮಾವು ಮಾರಾಟ ಮಾಡಬೇಕೆಂಬ ಗುರಿ ಹೊಂದಿಲ್ಲ. ರೈತರಿಗೆ ನೇರವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಬೆಲೆಯು ಕೈಗೆಟುಕಬೇಕೆಂಬ ಉದ್ದೇಶದಿಂದ ಈ ಮೇಳ ಪ್ರಾಯೋಗಿಕವಾಗಿ ಆಯೋಜಿಸಲಾಗಿದೆ. ಗ್ರಾಹಕರ ಸ್ಪಂದನೆ ನೋಡಿ ಪ್ರತಿ ವರ್ಷ ಆಯೋಜಿಸುವ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಮಾವು ಮೇಳದಲ್ಲಿ ಉದಯವಾಣಿಗೆ ತಿಳಿಸಿದರು.
ಮಾವು ಸಸಿಗಳ ವಿತರಣೆ, ಬೇಸಾಯ ಬಗ್ಗೆ ಪಾಠ: ಮಾವು ಮೇಳ ಕೇವಲ ಮಾವು ಮಾರಾಟಕ್ಕೆ ಸೀಮಿತವಾಗಿಲ್ಲ. ಮಾವು ಬೇಸಾಯದ ಬಗ್ಗೆ ಕುತೂಹಲ ಇರುವವರಿಗೆ ಅಥವಾ ಮಾವು ಬೆಳೆಯುವ ಆಸಕ್ತ ರೈತರಿಗೂ ಹಾಗೂ ಸಾರ್ವಜನಿಕರಿಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ.
ಮಾವಿನ ಸಸಿಗಳ ಖರೀದಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ತೊಟಗಾರಿಕಾ ಇಲಾಖೆ ಅದಕ್ಕಾಗಿಯೇ ಮಳಿಗೆಯೊಂದನ್ನು ಸ್ಥಾಪಿಸಿ ಗ್ರಾಹಕರಿಗೆ ಬೇಕಾದ ತರಹೇವಾರಿ ಮಾವಿನ ಸಸಿಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು, ಮೇಳದಲ್ಲಿ ಮಾವು ಬೆಳೆಯುವುದು ಹೇಗೆ, ಅದರ ಕೊಯ್ಲು, ಮಾರುಕಟ್ಟೆ ವ್ಯವಸ್ಥೆ ಮತ್ತಿತರ ಸಮಗ್ರ ವಿಷಯಗಳ ಬಗ್ಗೆ ತಜ್ಞರಿಂದ ಅರಿವು ಮೂಡಿಸಲಾಗುತ್ತಿದೆ.
ಮೇಳದಲ್ಲಿ ಜಿಪಂ ಸಿಇಒ ಗುರುದತ್ ಹೆಗಡೆ, ಎಸ್ಪಿ ಕೆ.ಸಂತೋಷ್ ಬಾಬು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಸಹಾಯಕ ನಿರ್ದೇಶಕರಾದ ಅಂಜನ್, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಆನಂದ್, ಜೆ.ಎನ್ ರವಿಕುಮಾರ್, ಬಾಲಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾವು ಬೆಳೆಗಾರರಿಗೆ ಕೈ ತುಂಬ ಕಾಸು: ಮಾವು ಮೇಳದಲ್ಲಿ ಮಾವು ಮಾರಾಟಕ್ಕೆ ಆಗಮಿಸಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ರಸಪೂರಿ, ಮಲ್ಲಿಕಾ ಮಾವು ಕೆಜಿ 65 ರಿಂದ 70 ರೂ. ವರೆಗೂ ಮಾರಾಟಗೊಳ್ಳುತ್ತಿದ್ದರೆ ಮಲಗೋವಾ, ಬಾದಾಮಿ 70 ತಿಂದ 80 ರೂ.ಗೆ ಕೆಜಿ ಮಾರಾಟಗೊಳ್ಳುತ್ತಿವೆ. ಮಾವು ಮೇಳಕ್ಕೆ ಜಿಲ್ಲೆಯಿಂದ ರೈತರು ಆಗಮಿಸಿ ಮಾವು ಮಾರಾಟ ಮಾಡುತ್ತಿದ್ದಾರೆ.
ಇನ್ನೂ ಮಾವುನ್ನು ಬಳಸಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ತಯಾರಿಸಿರುವ ವಿವಿಧ ಉತ್ಪನ್ನಗಳ ಮಾರಾಟಕ್ಕೂ ಕೂಡ ಇಲ್ಲಿ ವಿಶೇಷವಾಗಿ ಮಳಿಗೆ ಸ್ಥಾಪಿಸಲಾಗಿದೆ. ಮಾವು ಮೇಳಕ್ಕೆ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವೀರಗಾಸೆ ನೃತ್ಯ ಆಯೋಜಿಸಲಾಗಿದೆ. ಮೊದಲ ದಿನ ಮಾವು ತಿನ್ನುವ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಮಾವು ಹಣ್ಣುಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ರಾಸಾಯನಿಕ ಮುಕ್ತ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಗೆ ನ್ಯಾಯ ಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಮಾವಿನ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಂದಿಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಮಾವು ಮಾರಾಟಕ್ಕೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿನ ರುಚಿಯನ್ನು ಗ್ರಾಹಕರಿಗೆ ಪರಿಚಯಿಸಿದಂತಾಗುತ್ತದೆ ಎಂದರು.
ಜಿಲ್ಲಾಡಳಿತ ಮಾವು ಮಾರಾಟ ಮೇಳ ಆಯೋಜಿಸಿರುವುದು ಸಂತಸ ತಂದಿದೆ. ಮೊದಲ ದಿನ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೇಳದಲ್ಲಿ ರೈತರೇ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಉತ್ತಮ ಬೆಲೆ ಕೈಗೆ ಸಿಗುತ್ತದೆ.
-ಮುನೀಂದ್ರರೆಡ್ಡಿ, ಮಂಡಿಕಲ್ಲು, ಮಾವು ಬೆಳೆಗಾರ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.